ಬೆಂಗಳೂರು:ಕಿಸಾನ್ ಸಮ್ಮಾನ್ 2ನೇ ಹಂತದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ತುಮಕೂರಿಗೆ ಆಗಮಿಸುತ್ತಿರುವ ಸಂದರ್ಭದಲ್ಲೇ ಕಾಕತಾಳೀಯವೆಂಬಂತೆ ರಾಜ್ಯದಲ್ಲಿರುವ ತಮ್ಮದೇ ಪಕ್ಷದ ಸರ್ಕಾರದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿರುವ ಚರ್ಚೆ ಮುನ್ನೆಲೆಗೆ ಬಂದಿದೆ. ರಾಜ್ಯದಿಂದ ಬಿಜೆಪಿ 25 ಸಂಸದರನ್ನು ಆರಿಸಿ ಕಳಿಸಿದ್ದರೂ, ಅನುದಾನ ಹಂಚಿಕೆಯಲ್ಲಿ ಕಡೆಗಣನೆ, ರಾಜ್ಯದ ಅಹವಾಲುಗಳಿಗೆ ಮೂಕಸ್ಪಂದನೆ, ನೆರೆಪರಿಹಾರ ವಿಚಾರದಲ್ಲಿ ನಿಷ್ಕಾಳಜಿ, ಮಹದಾಯಿ ವಿವಾದದಲ್ಲಿ ಗೋವಾ, ಮಹಾರಾಷ್ಟ್ರ ಲಾಬಿಗೆ ಮಣಿದಿರುವುದೂ ಸೇರಿದಂತೆ ಅನೇಕ ವಿಚಾರಗಳು ಕನ್ನಡಿಗರ ಅಸಹನೆ, ಆಕ್ರೋಶದ ಕಟ್ಟೆ ಒಡೆಯಲು ಕಾರಣವಾಗಿವೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಅಭಿವೃದ್ಧಿಯ ಪ್ರವಾಹ ಆಗಲಿದೆ ಎಂಬುದು 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಮುಖವಾಗಿ ಚಲಾವಣೆಯಾದ ವಿಚಾರವಾಗಿತ್ತು. ಏಕೆಂದರೆ, ಕಳೆದ ಮೂರೂವರೆ ದಶಕದಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬಂದಿರಲಿಲ್ಲ. ಇದೇ ಕಾರಣಕ್ಕೆ ಕೇಂದ್ರದಿಂದ ರಾಜ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ನೆರವು ಮರೀಚಿಕೆ ಎಂಬ ವಾದವಿತ್ತು. ಹೀಗಾಗಿ ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಎಂಬ ಘೋಷವಾಖ್ಯವನ್ನು ಮತದಾರ ಬೆಂಬಲಿಸಿದ ಪರಿಣಾಮ ಬಿಜೆಪಿ ಅತಿ ಹೆಚ್ಚು 105 ಸ್ಥಾನಗಳನ್ನು ಗೆದ್ದಿತ್ತು.
ಮೈತ್ರಿ ಸರ್ಕಾರ ಪತನದ ನಂತರ ಯಡಿಯೂರಪ್ಪ ಸಿಎಂ ಆಗಿ ಸಂದಿಗ್ಧ ಸನ್ನಿವೇಶದಲ್ಲಿ ಅಧಿಕಾರ ಸ್ವೀಕರಿಸುವುದರೊಂದಿಗೆ ಜನಾದೇಶದಂತೆ ಕೇಂದ್ರ, ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದಂತಾಗಿತ್ತು. ಬಳಿಕ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನ ಗೆದ್ದಿತ್ತು. ಇಷ್ಟೆಲ್ಲಾ ಆದ ಮೇಲೂ ಮೋದಿ ಸರ್ಕಾರ ರಾಜ್ಯದ ಕೋರಿಕೆಗಳನ್ನು ಮಾನ್ಯ ಮಾಡುವುದಿರಲಿ, ಕಿವಿಯಾಗುತ್ತಲೂ ಇಲ್ಲ. ಹೊಸ ಬೇಡಿಕೆಗಳಿಗೂ ಸ್ಪಂದನೆ ಇಲ್ಲ. ರೈಲ್ವೆ ಮತ್ತು ಭೂ ಸಾರಿಗೆ ಇಲಾಖೆಯಿಂದ ಅರೆಕಾಸಿನ ಮಜ್ಜಿಗೆಯಷ್ಟು ಅನುಕೂಲವಾಗಿದ್ದು ಬಿಟ್ಟರೆ ಉಳಿದ ಇಲಾಖೆಗಳಿಂದ ಯಾವುದೇ ಸಹಕಾರ ಸಿಗುತ್ತಿಲ್ಲ. ಚುನಾವಣೆ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದಾಗ ಮೋದಿ ಮಾಡಿದ ಭಾಷಣ, ಆಡಿದ ಮಾತು ಇನ್ನೂ ಅವರದೇ ಪಕ್ಷದ ಕಾರ್ಯಕರ್ತರ ಕಿವಿಯಲ್ಲಿ ಗುಂಯ್ಗುಡುತ್ತಿದೆ.
‘ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರದಿಂದ ಬಂದ ಅನುದಾನ ರಾಜ್ಯದ ಜನರಿಗೆ ತಲುಪಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ರಾಜ್ಯಕ್ಕೆ 73,000 ಕೋಟಿ ರೂ. ಸಿಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ 2 ಲಕ್ಷ ಕೋಟಿ ರೂ.ಗೂ ಅಧಿಕ ಅನುದಾನ ಸಿಗುತ್ತಿದೆ. ಆ ಹಣ ಎಲ್ಲಿ ಹೋಯಿತು’ ಎಂದು ಮೋದಿ ಬೆಂಗಳೂರು ಪ್ರಚಾರ ಸಭೆಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದ್ದರು. ಆದರೆ, ಇಂದು ಬಿಜೆಪಿ ಸರ್ಕಾರವೇ ಇದೆ. ಆದರೂ ತನ್ನ ಪಾಲಿನ ಹಣಕ್ಕೆ ಮತ್ತೆ ಮತ್ತೆ ಮನವಿ ಸಲ್ಲಿಸುವ ಸಂದರ್ಭ ಎದುರಾಗಿದೆ; ನರೇಗಾ, ನೆರೆ ಪರಿಹಾರದ ಹಣವನ್ನು ಪಡೆದುಕೊಳ್ಳಲೂ ಪರದಾಡಬೇಕಾಗಿದೆ. ಇನ್ನು ವಿಶೇಷ ಪ್ಯಾಕೇಜ್​ಗಳ ಬಗ್ಗೆ ಕೇಳುವಂತೆಯೇ ಇಲ್ಲ.
ಸ್ಪಂದನೆಯಿಲ್ಲ:ಹಣಕಾಸು ಕೋರಿಕೆಗಳ ಬಗ್ಗೆ ಕೇಂದ್ರದ ಸ್ಪಂದನೆಯೇ ಇಲ್ಲ ಎಂದು ರಾಜ್ಯ ಹಣಕಾಸು ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಅಲ್ಲಿ ಏನು ನಡೆಯುತ್ತಿದೆ ಎಂದು ಅರಿವಿಗೆ ಬರುತ್ತಿಲ್ಲ, ನಮ್ಮ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ಕೇಂದ್ರದ ವಿರುದ್ಧ ದನಿ ಎತ್ತಲು ಅವಕಾಶವಿಲ್ಲ. ಬೇರೆ ಪಕ್ಷ ಅಧಿಕಾರ ಇರುವ ರಾಜ್ಯಗಳು ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹೇರುತ್ತಿವೆ ಎಂಬುದು ಅವರ ವಾದ. ಆರ್ಥಿಕ ಹಿನ್ನಡೆ ಕಾರಣಕ್ಕೆ ಕೇಂದ್ರಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹ ಆಗದೆ ಇರಬಹುದು. ಹಾಗೆಂದು ರಾಜ್ಯಗಳನ್ನು ಕತ್ತಲಲ್ಲಿ ಇಡುವುದು ಸರಿಯಲ್ಲ. ಅಂತೂ ಎಲ್ಲರೂ ದನಿ ಎತ್ತಿದ್ದಕ್ಕಾಗಿ ಇತ್ತೀಚೆಗೆ ಒಂದು ಕಂತು ಪರಿಹಾರ ಹಣ ಬಿಡುಗಡೆಯಾಯಿತು ಎಂದು ಹಣಕಾಸು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಆತಂಕವಿದೆ:ಜಿಎಸ್​ಟಿ ಪರಿಹಾರ ಹಣದ ಒಂದು ಕಂತು ಬಿಡುಗಡೆಯಾಗಿದ್ದರಿಂದ ಡಿಸೆಂಬರ್​ವರೆಗೆ ಸಮಸ್ಯೆ ಇರಲಿಲ್ಲ. ಆದರೆ, ಮುಂದೆ ಬಾಕಿ ಇರುವ ಹಣ ಬಿಡುಗಡೆ ಆದರಷ್ಟೇ ಆರ್ಥಿಕ ನಿರ್ವಹಣೆ ಸಲೀಸಾಗಲಿದೆ. ಇಲ್ಲವಾದರೆ ಕಷ್ಟ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ. ಮೊದಲು ಪ್ರತಿ ತಿಂಗಳು ಪಾವತಿ ಆಗುತ್ತಿತ್ತು, ಬಳಿಕ 2, 3 ತಿಂಗಳಿಗೊಮ್ಮೆ ಪಾವತಿ ಪದ್ಧತಿಗೆ ಬದಲಾಯಿತು. ಈಗ ಮನವಿ ಕೊಟ್ಟು ಒತ್ತಾಯ ಹೇರಬೇಕಾಗಿದೆ.
ರಾಜ್ಯದ ನಿರೀಕ್ಷೆ
ಕೇಂದ್ರದ ತೆರಿಗೆ ಪಾಲಿನ ರೂಪದಲ್ಲಿ ಈ ಆರ್ಥಿಕ ಸಾಲಿನಲ್ಲಿ ರಾಜ್ಯಕ್ಕೆ 36,215 ಕೋಟಿ ರೂ. ಹಾಗೂ 15,371 ಕೋಟಿ ರೂ. ಸಹಾಯಧನ ನಿರೀಕ್ಷಿಸಲಾಗಿದೆ. ಈ ನಿರೀಕ್ಷೆ ಮೇಲೆ ರಾಜ್ಯ ಸರ್ಕಾರ ಆಯವ್ಯಯ ನಿರ್ವಹಿಸಲಿದೆ. ಕೇಂದ್ರದಿಂದ ಪಾಲು ಕಡಿಮೆ ಯಾದರೆ ರಾಜ್ಯ ಮಾಡಬೇಕಾದ ಖರ್ಚು ಮಿತಿಗೊಳ್ಳಲಿದೆ. ಒಂದು ಅಂದಾಜಿನ ಪ್ರಕಾರ ಕೇಂದ್ರದಿಂದ ಬರುವ ಹಣದಲ್ಲಿ ಸುಮಾರು 5 ಸಾವಿರ ಕೋಟಿ ರೂ. ಕಮ್ಮಿಯಾಗುವ ಸಾಧ್ಯತೆ ಇದೆ.
ಉತ್ತರ ಸಿಗದ ಪ್ರಶ್ನೆಗಳು
ಮಹದಾಯಿ ಮತ್ತು ಕೃಷ್ಣಾ ನದಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವೇ ತಡೆಯಾಗಿದ್ದು, ನೀರು ಬಳಕೆಗೆ ಅಧಿಸೂಚನೆ ಹೊರಡಿಸಲು ಆಸಕ್ತಿ ವಹಿಸದೆ ರಾಜ್ಯದೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವುದು ರಾಜ್ಯ ಬಿಜೆಪಿ ನಾಯಕರಿಗೆ ಇರಿಸುಮುರಿಸು ಉಂಟುಮಾಡುತ್ತಿದೆ. ‘ಗುಡ್ ಗವರ್ನೆನ್ಸ್, ಸ್ಮಾರ್ಟ್ ಗವರ್ನೆನ್ಸ್’ ಎಲ್ಲ ಚುನಾವಣೆ ಪ್ರಚಾರದ ಸರಕೇ ಹೊರತು ಅನುಷ್ಠಾನಕ್ಕೆ ಬಂದಂತೆ ಕಾಣಿಸುತ್ತಿಲ್ಲ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − 14 =
Remember me
