ನನ್ನ ನೆಂಟರೊಬ್ಬರಿಗೆ ಅತಿ ಮೂತ್ರ ವಿಸರ್ಜನೆ ಕಾಯಿಲೆ. ಆಸ್ಪತ್ರೆಗೆ ಕರೆದೊಯ್ದೆ. ಪರೀಕ್ಷಿಸಿದ ವೈದ್ಯರು ‘ದಿನದಲ್ಲಿ ಎಷ್ಟು ಲೀಟರ್ ನೀರು ಕುಡಿಯುತ್ತೀರಿ?’ ಎಂದು ಕೇಳಿದರು. ಅದಕ್ಕೆ 4-5 ಲೀಟರ್ ಅಂದರು. ‘ಪ್ರತಿ ಸಾರಿ ಕುಡಿಯುವ ವೇಳೆ ದಾಹ ಆಗುತ್ತಾ? ಇಲ್ಲವೇ ನೀರಡಿಕೆ ಆದರೂ ಬಿಟ್ಟರೂ ನೀರು ಕುಡಿಯೋ ಅಭ್ಯಾಸ ಇದೆಯಾ?’ ಅಂತಾ ಕೇಳಿದ್ದಕ್ಕೆ ಎರಡನೇ ಪ್ರಶ್ನೆಗೆ ‘ಊಂ’ ಅಂದರು. ಆಗ ವೈದ್ಯರು ‘ಅಗತ್ಯವಿದ್ದರಷ್ಟೆ ನೀರು ಸೇವಿಸಿ. ಸುಮ್ಮಸುಮ್ಮನೆ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ’ ಅಂದರು. ಡಾಕ್ಟರ್ ಹೇಳಿದಂತೆ ಅವರೀಗ ದಾಹ ಆದಾಗಷ್ಟೆ ನೀರು ಕುಡಿಯುತ್ತಾರೆ. ಅವರೇ ಹೇಳುವಂತೆ ಈಗ ಪ್ರತಿ ದಿನ 1-2 ಲೀಟರ್ ನೀರು ಉಳಿಸುತ್ತಿದ್ದಾರೆ!. ಆರೋಗ್ಯವೂ ಚೆನ್ನಾಗಿದೆ. ಅವರೀಗ ನೀರು ಕುಡಿಯುವ ಬಗ್ಗೆ ತಾವಿರುವ ಪರಿಸರದಲ್ಲಿ ಪಾಠ ಮಾಡುತ್ತಿದ್ದಾರೆ. ಈ ಹೊತ್ತಲ್ಲಿ ಅವರೀಗ ನನ್ನ ದೃಷ್ಟಿಯಲ್ಲಿ ಅಕ್ಷರಶಃ ಜಲಯೋಧರಂತೆ ಕಾಣುತ್ತಾರೆ.
ವೈದ್ಯರ ಸಲಹೆಯಲ್ಲಿ ನಿಜವಿದೆ. ಯಾವುದೇ ವಸ್ತುವನ್ನು ಅಗತ್ಯವಿದ್ದಾಗಷ್ಟೆ ಅದು ನಿಯ‘ಮಿತ’ವಾಗಿ ಬಳಸಬೇಕು. ಅದು ನೀರು, ಆಹಾರ… ಹೀಗೆ ಮತ್ಯಾವುದೇ ಆಗಿರಲಿ. ಎಲ್ಲೆ ಮೀರಿ, ಅರ್ಥಹೀನವಾಗಿ ಬಳಸಿದರೆ ನಮ್ಮ ಆರೋಗ್ಯಕ್ಕೆ ಆಪತ್ತು, ಆ ಸಂಪತ್ತಿಗೆ ವಿಪತ್ತು. ಬರಿದಾಗುವ ಸಂಪನ್ಮೂಲವಾದ ನೀರಿನ ವಿಷಯದಲ್ಲಿ ನಾವು ಮೊದಲಿಂದಲೂ ಇದೇ ಪ್ರಮಾದವನ್ನು ಪುನರಾವರ್ತಿಸುತ್ತ ಬಂದಿದ್ದೇವೆ. ದುಡ್ಡನ್ನು ಹಿಡಿತವಿಲ್ಲದೆ ಖರ್ಚು ಮಾಡಿದಾಗ ‘ಹಣವನ್ನು ನೀರು ಖರ್ಚು ಮಾಡಿದಂಗೆ ಮಾಡ್ತೀರಿ’ ಅನ್ನೋದು ರೂಢಿ. ನೀರಿನ ಬಳಕೆಯಲ್ಲಿ ನಾವು ಎಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತೇವೆ ಎನ್ನುವುದಕ್ಕೆ ಈ ರೂಪಕಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.
ಈಗ ನೀರಿನ ವಿಷಯದಲ್ಲಿ ನಗರ, ಹಳ್ಳಿಗಳೆನ್ನದೆ ಹೆಚ್ಚುಕಮ್ಮಿ ಎಲ್ಲೆಡೆ ವಿಷಮ ಸ್ಥಿತಿ ತಲುಪಿದೆ. ಮಳೆ ತಡವಾದಷ್ಟು ಹಳ್ಳಿ-ದಿಲ್ಲಿ ಎನ್ನುವ ಭೇದವಿಲ್ಲದೆ ಎಲ್ಲೆಡೆ ಜೀವಜಲಕ್ಕೆ ಕಂಟಕ ಎದುರಾಗುವುದು ಕಟ್ಟಿಟ್ಟ ಬುತ್ತಿ. ಈಗಂತೂ ಸರ್ಕಾರ ತನ್ನ ಶಕ್ತಿಯನ್ನು ಮೀರಿ, ಕೊಳವೆಬಾವಿ ಕೊರೆಯಿಸಿ ನೀರು ಸರಬರಾಜಿಗೆ (ಕೆಲವೆಡೆ ಕೈ ಚೆಲ್ಲಾಗಿದೆ) ಹಗಲಿರುಳು ಶ್ರಮಿಸುತ್ತಿದೆ. ಆದರೂ, ಆಳುವ ಪ್ರಭುತ್ವಕ್ಕೆ ನಿರಂತರವಾಗಿ ನೀರು ಒದಗಿಸುವ, ನಮಗೆ ನೀರು ಸಿಗುವ ನಿಶ್ಚಿತ ಭರವಸೆ, ನಿರಾತಂಕ ಇಬ್ಬರಲ್ಲೂ ಇಲ್ಲ.
ಈಗಾಗಲೇ ನದಿ, ಡ್ಯಾಂಗಳು ಸೇರಿದಂತೆ ಜಲಮೂಲಗಳೆಲ್ಲ ಭಾಗಶಃ ಬರಿದಾಗಿವೆ. ಕೊರೆಯಿಸುವ ನೂರು ಕೊಳವೆ ಬಾವಿಗಳ ಪೈಕಿ ನೀರು ಚಿಮ್ಮುವ ಬೋರ್​ವೆಲ್​ಗಳ ಸಂಖ್ಯೆ ಸರಾಸರಿ ಒಂದಂಕಿ ದಾಟುತ್ತಿಲ್ಲ. ಏತನ್ಮಧ್ಯೆ ನೀರು ಕಂಡ ಕೊಳವೆಬಾವಿಗಳೂ ಎಷ್ಟು ದಿನ ನೀರು ಎತ್ತುತ್ತವೆ? ಎನ್ನುವ ಖಾತ್ರಿ ಇಲ್ಲ. ದಿನಬೆಳಗಾದರೆ ಸಾಲುಸಾಲು ಬೋರ್​ವೆಲ್​ಗಳು ಬತ್ತುವುದು ಒಂದೆಡೆಯಾದರೆ ಮತ್ತೊಂದಿಷ್ಟು ಈ ಕ್ಷಣ, ಮರುಕ್ಷಣ ಬರಿದಾಗುವಂತಿವೆ. ಆದ್ದಾಗ್ಯೂ ನಾವು ಛಲದಂಕ ಮಲ್ಲರಂತೆ ಜೀವಜಲವನ್ನು ಪಡೆಯಲು ಜಿದ್ದಿಗೆ ಬಿದ್ದು ಕೊಳವೆಬಾವಿಗಳನ್ನು ಕೊರೆಯಿಸಿದ್ದೇ ಕೊರೆಯಿಸಿದ್ದು. ಮಳೆಯೇ ಇಲ್ಲದ ಮೇಲೆ ಧರೆಯ ಒಡಲಲ್ಲಿ ಜಲ ಸಿಗುವುದಾದರೂ ಎಂತು? ಹಿಂದೆಲ್ಲ ಮಳೆ ಬರದಿದ್ದಾಗ, ಹಳ್ಳ-ಕೊಳ್ಳ ಹರಿಯದಿದ್ದಾಗ, ಕೆರೆ-ಕಟ್ಟೆ, ನದಿಗಳು ಬತ್ತಿದಾಗ ಯಾತಕ್ಕೆ ಮಳೆ ಹೋದವೋ ಶಿವಾ…? ಎಂದು ಕರುಳಿಗೆ ಹಚ್ಚಿಕೊಂಡು, ಆತ್ಮಾವಲೋಕನ ಮಾಡಿಕೊಳ್ಳಲಿಲ್ಲ. ಭೂಮಿ ಮೇಲ್ಮೈ ಸಿಗುವ ನೀರಷ್ಟೆ ಆರೋಗ್ಯ ದೃಷ್ಟಿಯಿಂದ ಶ್ರೇಷ್ಠ. ಅಂರ್ತಜಲದ ಸೇವನೆ ಆರೋಗ್ಯಕ್ಕೆ ಮಾರಕ ಎಂಬ ಸತ್ಯ ಗೊತ್ತಿದ್ದೂ ಅಸಂಖ್ಯಾತ ತಪ್ಪುಗಳನ್ನು ಸರಣಿಯಾಗಿ ಗೆಯ್ಯುತ್ತಲೇ ಬಂದೆವು. ಈಗಂತೂ ಅಂರ್ತಜಲಕ್ಕೆ ಎಗ್ಗಿಲ್ಲದೆ ಕನ್ನ ಹಾಕುತ್ತಿದ್ದೇವೆ. ಅಂತರ್ಜಲ ಎನ್ನುವುದು ಬ್ಯಾಂಕ್​ಲ್ಲಿಟ್ಟ ಹಣದಂತೆ. ಅನಿವಾರ್ಯತೆ ಸೃಷ್ಟಿಯಾದಾಗ, ಅಗತ್ಯವಿದ್ದಷ್ಟೆ ಮೇಲೆತ್ತಿ ಅಳೆದು ತೂಗಿ ಖರ್ಚು ಮಾಡಬೇಕಿತ್ತು. ಆಮೇಲೆ ಕಾಲಕಾಲಕ್ಕೆ ಮಳೆ ಬರುವಂತೆ ನೋಡಿಕೊಂಡು, ಆ ಮಳೆ ನೀರನ್ನು ಭೂಮಿ ಆಳಕ್ಕೆ ಕಳುಹಿಸಿ ಬಳಸಿದ ಅಂತರ್ಜಲವನ್ನು ಪುನಃ ಸರಿದೂಗಿಸಬೇಕಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ಬರೀ ನೀರನ್ನು ಮೇಲೆತ್ತುತ್ತಲೇ ಬಂದೆವು. ಪ್ರಕೃತಿ ಸಮತೋಲನ ಕಾದಿಟ್ಟುಕೊಳ್ಳವುದನ್ನೇ ನಿರ್ಲಕ್ಷಿಸಿದೆವು. ಪರಿಣಾಮ ಭೂಗರ್ಭದಲ್ಲಿದ್ದ ನೀರಿನ ಅಲ್ಪ ಡೆಪಾಸಿಟ್​ನಲ್ಲಿ ಈಗ ಬಹುತೇಕ ಖಾಲಿ ಖಾಲಿ.
ಅದರ ಫಲವೇ ಇಂದಿನ ನೀರಿನ ಎಮರ್ಜೆನ್ಸಿ. ಹೆಜ್ಜೆಹೆಜ್ಜೆಗೂ ನೀರಿನ ಬವಣೆ ಜೀವಹಿಂಡುತ್ತಿದೆ. ನೀರಿಗಾಗಿ ಇರೋಬರೋ ಹಣವನ್ನೆಲ್ಲ ಸುರಿಯುವ ಪರಿಸ್ಥಿತಿ ಎದುರಾಗಿದೆ. ನಗರಗಳಲ್ಲಂತೂ ಕೈಯಲ್ಲಿ ಹಣ ಹಿಡಿದು, ವಾರದ ಮುಂಚೆ ಟ್ಯಾಂಕರ್ ನೀರಿಗೆ ಮುಂಗಡವಾಗಿ ಆರ್ಡರ್ ಅಲ್ಲಲ್ಲ ಬೇಡಿಕೆ ಇಟ್ಟರೂ ಸಕಾಲದಲ್ಲಿ ನೀರು ಸಿಗುತ್ತಿಲ್ಲ. ಇದೆಲ್ಲ ಭವಿಷ್ಯದಲ್ಲಿ ನೀರಿನ ಕೊರತೆ ಮತ್ತಷ್ಟು ಭೀಕರ ಸ್ವರೂಪಕ್ಕೆ ತಿರುಗುವ ಮುನ್ಸೂಚನೆಯಷ್ಟೆ. ಈ ಸಮಯದಲ್ಲಿ ನೀರಿನ ಸಮಸ್ಯೆ ನೀಗಿಸಲು ತತ್​ಕ್ಷಣಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕುವುದು, ಕಂಡುಕೊಳ್ಳುವುದು ಅನಿವಾರ್ಯವೇ. ಅಲ್ಲಿಗೆ ಹರಸಾಹಸಪಟ್ಟು ಪ್ರಜೆಗಳಿಗೆ ನೀರು ಒದಗಿಸಿದ್ದಕ್ಕೆ ಆಡಳಿತ ವ್ಯವಸ್ಥೆಯೂ, ಅಂತೂ ಇಂತೂ ನೀರು ಸಿಕ್ಕಿತು ಎಂದು ನಾವು ನಿಟ್ಟುಸಿರು ಬಿಟ್ಟು ಜಲಗಂಡಾಂತರದಿಂದ ಮುಕ್ತಿ ಸಿಕ್ಕಿತೆಂದು ಅಂದುಕೊಂಡರೆ ಅದು ನಮ್ಮ ಮೂರ್ಖತನವಷ್ಟೆ.
ಯಾಕೆಂದರೆ ಇಂತಹ ಘಟನೆಗಳು ಈಗಾಗಲೇ ಸಾಕಷ್ಟು ಆಗಿಹೋಗಿರುವುದು ಇತಿಹಾಸದಿಂದ ತಿಳಿಯುತ್ತದೆ. ಹತ್ತರೊಂದಿಗೆ ಹನ್ನೊಂದು ಎನ್ನುವಂತೆ ಈಗಲೂ ಇದೇ ಪರಿಸ್ಥಿತಿ, ಮನಸ್ಥಿತಿ ಮರುಕಳಿಸಬಾರದಷ್ಟೆ. ಇದು ತಾತ್ಕಾಲಿಕ ರಿಲೀಫ್ ಎನ್ನುವ ಪ್ರಜ್ಞೆ, ಎಚ್ಚರಿಕೆ ಸದಾಕಾಲವೂ ನಮ್ಮಲ್ಲಿ ಜಾಗೃತವಾಗಿರುವಂತೆ ನೋಡಿಕೊಳ್ಳುವುದೇ ನಮ್ಮ ಮುಂದಿರುವ ದೊಡ್ಡ ಸವಾಲು. ಅದಕ್ಕಾಗಿ ಈಗಿರುವ ನೀರಿನ ತುರ್ತು ಅ‘ಭಾವ’ವನ್ನು, ನಾವೀಗ ನೀರಿಗಾಗಿ ನಡೆಸುವ ಪರದಾಟ, ಹೋರಾಟವನ್ನು ಜಲಜಾಗೃತಿಯ ಝುರಿಯನ್ನಾಗಿ ಪರಿವರ್ತಿಸಿಕೊಳ್ಳಬೇಕು. ಅದು ಜಲ ಸಂರಕ್ಷಣೆ ನಿಟ್ಟಿನಲ್ಲಿ ಹೊಸ ದಿಕ್ಸೂಚಿ ಆಗಬೇಕು.
ಯಾಕೆಂದರೆ ಹಸಿವು ಇದ್ದಾಗ ಅನ್ನದ, ನೀರಡಿಕೆ ಆದಾಗ ನೀರಿನ ಮಹತ್ವ ಗೊತ್ತಾಗುತ್ತದೆ. ತಡವಾಗಿಯಾದರೂ ಈಗ ನೀರಿನ ಮಹತ್ವ, ಅನಿವಾರ್ಯತೆ ನಮ್ಮೆಲ್ಲರ ಅರಿವಿಗೆ ಬರುತ್ತಿದೆ. ತಾಪಮಾನ ಏರಿದಂತೆ, ನೀರಿನ ಕೊರತೆ ತಾರಕಕ್ಕೇರಿದಂತೆ ಈ ಜ್ಞಾನದ ಒಳಹರಿವು ಹೆಚ್ಚಾಗುತ್ತಲೇ ಹೋಗಬೇಕು. ಇದೇ ಜಲಸಂರಕ್ಷಣೆ ವಿಷಯದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಬೇಕು. ಆದರೆ ಹೀಗೆ ಆಗುತ್ತದೆ ಎನ್ನವ ನಂಬಿಕೆ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಅದೃಷ್ಟಕ್ಕೆ ಒಮ್ಮೆ ಮಳೆ ಬಿದ್ದು, ಹಳ್ಳಕೊಳ್ಳ ಹರಿದು, ನೀರು ನಿರಾಯಸವಾಗಿ ಸಿಗುವಂತಾಗಿ ಬಿಟ್ಟರೆ ಅದರೊಟ್ಟಿಗೆ ಈ ನೀರಿನ ಅರಿವು ಸಹ ಕೊಚ್ಚಿ ಹೋಗುವುದೂ ಅಷ್ಟೇ ಸತ್ಯ ಮತ್ತು ಕಟುವಾಸ್ತವ.
ಇನ್ನಾದರೂ ಹೀಗಾಗದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ನಾವೆಲ್ಲ ಸೇರಿ ಜಲಕ್ಷಾಮಕ್ಕೆ ಸ್ಪಷ್ಟ ಕಾರಣಗಳನ್ನು ಕಂಡುಕೊಳ್ಳುವುದರ ಜೊತೆಗೆ ಭವಿಷ್ಯದಲ್ಲಿ ಜಲಸಮಸ್ಯೆ ಪ್ರತಿ ವರ್ಷದ ಜ್ವಲಂತ ಸಮಸ್ಯೆಯಾಗದಂತೆ ದೂರದೃಷ್ಟಿ ಇಟ್ಟುಕೊಂಡು ಈ ಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕು. ಯಾಕೆಂದರೆ ರಾಜ್ಯದೆಲ್ಲೆಡೆ ಬರ, ಜಲಕ್ಷಾಮ ತಾಂಡವಾಡುತ್ತಿರುವ ಈ ಹೊತ್ತಲ್ಲಿ ಜೀವಜಲ ಸೆಲೆ ಚೆನ್ನಾಗಿ ಇರುವ ಕೆಲವೆಡೆ ನೀರಿನ ಮಹತ್ವ ಅರಿಯದೇ ಮನಬದಂತೆ ಬಳಸುತ್ತಿದ್ದಾರೆ. ಬಹುತೇಕ ಕಡೆ ಸಾರ್ವಜನಿಕ ಕೊಳಾಯಿ, ನೀರಿನ ತೊಟ್ಟಿ, ಟ್ಯಾಂಕ್​ಗಳಲ್ಲಿ ನೀರು ಪೋಲಾಗಿ ವೃಥಾ ಹರಿಯುವುದು ಸರ್ವೆಸಾಮಾನ್ಯ ದೃಶ್ಯವಾಗಿದೆ. ನೀರು ವ್ಯರ್ಥವಾಗಿ ಹರಿಯುತ್ತಿದೆ ಎಂದು ಕೆಲ ಪ್ರಜ್ಞಾವಂತರು ನಳ ಬಂದ್ ಮಾಡಿದರೆ, ಸ್ವಂತ ಬೋರ್​ವೆಲ್ ಹಾಕಿಸಿಕೊಂಡು ಬೇಕಾಬಿಟ್ಟಿ ಬಳಸುವವರಿಗೆ ಜಲಪಾಠ ಮಾಡಿದರೆ ‘ನೀರು ನಿನ್ನದಾ..?’ ಎಂದು ಕೇಳುವ, ಆ ಮೂಲಕ ಪ್ರಜ್ಞಾವಂತಿಕೆಯನ್ನೇ ಗೇಲಿ ಮಾಡುವ ಕೀಳು ಮನಸ್ಥಿತಿಯ ಜನರೇ ನೀರ ಸಂರಕ್ಷಣೆಯ ನಿಜವಾದ ಶತ್ರುಗಳು.
ಇಂತಹ ವರ್ತನೆ, ಮನಸ್ಥಿತಿ ಖಂಡನೀಯ. ಹಾಗೆ ಅಂತಹವರನ್ನು ಅಂಕೆಗೆ ತರುವುದು ಇಂದಿನ ತುರ್ತು ಸಹ. ಕಾರಣ ಇಷ್ಟೆ- ಪ್ರತಿ ಹನಿಯೂ ಅತ್ಯಮೂಲ್ಯ. ಪ್ರತಿಯೊಬ್ಬರೂ ಹನಿ ನೀರ ಹಮ್ಮಿರರಾಗಬೇಕಿದೆ. ಯಾಕೆಂದರೆ ನೀರಿಲ್ಲದ ನಾಳೆಗಳನ್ನು ಕನಸು ಮನಸಿನಲ್ಲೂ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅದಕ್ಕಾಗಿ ನೀರಿನ ಮಹತ್ವ ಅರಿತು ಅದನ್ನು ಹಿತ, ಮಿತವಾಗಿ ಬಳಸುವ ಪಾಠ ಮೊಟ್ಟಮೊದಲು ಮನೆಯಿಂದಲೇ ಶುರುವಾಗಬೇಕು. ಪ್ರತಿ ಮನೆ-ಮನಗಳು ಜಲ ಸಾಕ್ಷರತೆ ಅಭಿಯಾನವನ್ನು ಸ್ವಯಂಪ್ರೇರಣೆಯಿಂದ, ಸಂಪೂರ್ಣ ಸಮರ್ಪಿಸಿಕೊಂಡು ಮಾಡಬೇಕು. ಒಬ್ಬರು ಮತ್ತೊಬ್ಬರು ಮಾಡುವ ಜಲಪಾಠಕ್ಕೆ ಕಿವಿಯಾಗಬೇಕು. ನೀರಿನ ವಿಷಯದಲ್ಲಿ ಮಾಡುವ ತಪ್ಪುಗಳನ್ನು ತಿದ್ದಿಕೊಂಡು, ಸರಿ ಅನಿಸಿದ್ದನ್ನು ಒಪ್ಪಿಕೊಂಡು ಅನುಷ್ಠಾನಕ್ಕೆ ತರಬೇಕು.
ನಾವು ದೈನಂದಿನ ಬಳಸುವ ನೀರಿನಲ್ಲಿ ಎಲ್ಲೆಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಬಳಸುತ್ತೇವೆ? ಎಂದು ಪಟ್ಟಿ ಮಾಡಿ ಅದಕ್ಕೆ ಕಡಿವಾಣ ಹಾಕಬೇಕು. ಆ ತಪ್ಪುಗಳು ಇತರರು ಮಾಡದಂತೆ ತಿಳಿಹೇಳಬೇಕು. ಅಲ್ಲದೆ ಇತರರಲ್ಲಿಯ ನೀರಿನ ವಿಚಾರಧಾರೆಗಳನ್ನು ನೀರೆರೆದು ಪೋಷಿಸಬೇಕು. ಆ ಮೂಲಕ ಜಲಜೋಪಾನ ಮಂತ್ರವು ಜನಾಂದೋಲನ ಸ್ವರೂಪ ಪಡೆಯಬೇಕು.
ಇನ್ನು, ನೀರಿನ ವಿಷಯದಲ್ಲಿ ಉಪೇಕ್ಷಾ ಭಾವ ಉಳ್ಳವರನ್ನು ಭೀಕರ ಜಲಕ್ಷಾಮ ಇರುವ ಕಡೆ ಕರೆದ್ಯೊಯ್ದು, ಇಲ್ಲವೆ ಅವರು ಇದ್ದಲ್ಲೇ ಮನಸ್ಸಿಗೆ ನಾಟುವಂತೆ ಅಲ್ಲಿನ ಪರಿಸ್ಥಿತಿಯ ದರ್ಶನ ಮಾಡಿಸಿ, ಆ ಮಾನಸಿಕತೆ ಬದಲಿಸಬೇಕು. ಈಗ ನಾಡಿನೆಲ್ಲೆಡೆ ಜಾತ್ರೆ, ರಥೋತ್ಸವ, ಮದುವೆ, ಶುಭಸಮಾರಂಭಗಳ ಸುಗ್ಗಿ. ಅಲ್ಲಿ ನೀರು, ಪ್ರಕೃತಿ, ಪರಿಸರದ ಸಂರಕ್ಷಣೆ ಕುರಿತು ಬೀದಿನಾಟಕಗಳು, ಜಾಗೃತಿಜಾಥಾ, ಸಂವಾದ, ವಿಚಾರಗೋಷ್ಠಿ, ಉಪನ್ಯಾಸ ಕಾರ್ಯಕ್ರಮಗಳನ್ನು ಸರಣಿಯಾಗಿ ಹಮ್ಮಿಕೊಳ್ಳಬೇಕು. ಪ್ರಜ್ಞಾವಂತರು, ಜಲಯೋಧರು ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿ ನೀರ ಪ್ರಾಮುಖ್ಯದ ಸಂದೇಶವನ್ನು ಹರಿಬಿಡಬೇಕು. ಸರ್ಕಾರ ತನ್ನ ಜನಪ್ರಿಯ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ನಾಡಿನ ಮೂಲೆಮೂಲೆಗೂ ತಲುಪುವ ಹಾಗೆ ಪ್ರಚಾರ ನೀಡುವಂತೆ, ಪ್ರಕೃತಿ, ನೀರಿನ ಮಹತ್ವ, ಸಂರಕ್ಷಣೆಯ ವಿಷಯಗಳನ್ನೂ ಅಷ್ಟೇ ಪರಿಣಾಮಕಾರಿಯಾಗಿ ಮತ್ತು ಸತತವಾಗಿ ಪ್ರಚುರಪಡಿಸಬೇಕು.
ಇನ್ನು ನಾವು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇದ್ದೇವೆ. ಅಭ್ಯರ್ಥಿಗಳು ಹೇಗಿದ್ದರೂ ಪ್ರಚಾರಕ್ಕೆ ಕರಪತ್ರ, ಧ್ವನಿವರ್ಧಕ, ದೃಶ್ಯ, ಶ್ರವಣ ಮಾಧ್ಯಮ ಬಳಸುತ್ತಾರೆ. ಅಲ್ಲಿ ಚುನಾವಣಾ ಪ್ರಚಾರದ ಜೊತೆಗೆ ಜಲಜಾಗೃತಿ ಕಾರ್ಯಕ್ರಮಕ್ಕೆ, ಅಭಿಯಾನಕ್ಕೆ ಇಂಬು ಕೊಡಬೇಕು. ಜಾಹೀರಾತು ಸಂಸ್ಥೆಗಳು ತಮ್ಮ ಉತ್ಪನ್ನಗಳ ಜಾಹೀರಾತುಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಪ್ರಾರ್ಥನೆ, ಆಟ, ಪಾಠ- ಪ್ರವಚನಗಳಲ್ಲಿ, ಬೇಸಿಗೆ ಶಿಬರಗಳಲ್ಲಿ, ಸರ್ಕಾರ ತನ್ನ ಪ್ರತಿಯೊಂದು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜಲಜಾಗೃತಿ ಅಂಶಗಳನ್ನು ಕಡ್ಡಾಯಗೊಳಿಸಬೇಕು. ಬಸ್ಸು, ಆಟೋ, ಲಾರಿ… ಹೀಗೆ ಸಾರಿಗೆ ವಾಹನಗಳು, ಗೋಡೆಗಳ ಮೇಲೆ ನೀರಿನ ಮಹತ್ವ ಸಾರುವ ಕೋಟ್, ಚಿತ್ರಗಳು ರಾರಾಜಿಸುವಂತಾಗಬೇಕು. ಕೈಗಾರಿಕೆಗಳು ಸೇರಿದಂತೆ ಬೃಹತ್ ಉದ್ಯಮಗಳಲ್ಲಿ ನೀರಿನ ಮಿತ, ಪುನರ್ ಬಳಕೆ ಬಗ್ಗೆ ಹೆಚ್ಚು ಒತ್ತು ಕೊಡುವಂತೆ ಉದ್ದೀಪಿಸಬೇಕು. ಕೃಷಿಯಲ್ಲಿ ಹನಿ, ತುಂತುರು ನೀರಾವರಿ, ಜಲಮರುಪೂರಣ, ಮಳೆನೀರು ಕೊಯ್ಲು, ಜಲಮೂಲಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕೆಲಸಗಳಾಗಬೇಕು. ಇದರೊಟ್ಟಿಗೆ ಈಗಿರುವ ಕಾಯಿದೆ-ಕಾನೂನುಗಳನ್ನು ಮತ್ತಷ್ಟು ಕಠಿಣಗೊಳಿಸಿ, ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು.
ಒಟ್ಟಿನಲ್ಲಿ ಎಲ್ಲೆಲ್ಲೂ, ಎಲ್ಲರಲ್ಲೂ ಪ್ರಕೃತಿ, ನೀರು ಉಳಿಸುವ ಚಿಂತನೆಗಳು, ಕೆಲಸಗಳು ಅನುರಣಿಸಬೇಕು. ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಬೇಕೇ ವಿನಃ
ವಿಮುಖವಾಗಿ ಅಲ್ಲ ಎನ್ನುವ ಸತ್ಯದ ಮನವರಿಕೆ ಆಗಬೇಕು. ಇದೆಲ್ಲ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಆಗುವ ಕಾರ್ಯವಲ್ಲ. ಇದು ಸಾಕಷ್ಟು ಸಮಯ, ಬದ್ಧತೆ, ಶ್ರದ್ಧೆ, ಇಚ್ಛಾಶಕ್ತಿಯನ್ನು ಬೇಡುತ್ತದೆ. ಈಗಿನಿಂದಲೇ ಆ ನಿಟ್ಟಿನಲ್ಲಿ ಇಡೀ ಸಮಾಜ ಸಾಮೂಹಿಕ ಹೊಣೆಗಾರಿಕೆ ಮತ್ತು ಸರ್ವರ ಸಹಭಾಗಿತ್ವದಿಂದ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇ ಆದರೆ ನಾವು ಸೇರಿದಂತೆ ಮುಂದಿನ ಪೀಳಿಗೆ ನೀರಿಲ್ಲದೆ ಪರಿತಪಿಸುವುದನ್ನು ತಪ್ಪಿಸಬಹುದು. ಅದಕ್ಕಾಗಿ ಪ್ರತಿ ಮನೆ-ಮನಗಳಲ್ಲಿ ನೀರಿನ ಅರಿವು ಗುಪ್ತಗಾಮಿನಿಯಂತೆ ನಿರಂತರವಾಗಿ ಹರಿಯುತ್ತಲೇ ಇರಬೇಕು.
IPL 2024: ಈ ಸೀಸನ್​ನಲ್ಲಿ ಕ್ರಿಕೆಟ್ ಫ್ಯಾನ್ಸ್​ಗಳ ಮುಂದೆ ಕಾಣಿಸಿಕೊಳ್ಳದ ಸ್ಟಾರ್​ ಆಟಗಾರರಿವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
