|ಕೀರ್ತಿನಾರಾಯಣ ಸಿ.ಬೆಂಗಳೂರು
ಇನ್ನು ಎರಡು ವರ್ಷದಲ್ಲಿ ದೇಶದ ಪ್ರತಿ ಮನೆಗೂ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ‘ಜಲಜೀವನ್ ಮಿಷನ್’ ಯೋಜನೆ ಅನುಷ್ಠಾನ ಪ್ರಗತಿಯಲ್ಲಿರುವ ನಡುವೆಯೇ ದೇಶದ 23 ರಾಜ್ಯಗಳ 370 ಜಿಲ್ಲೆಗಳ ಅಂತರ್ಜಲದಲ್ಲಿ ‘ಫ್ಲೋರೈಡ್’ ಅಂಶ ಅಪಾಯದ ಮಟ್ಟ (1.5 ಎಂ.ಜಿ.ಗಿಂತ ಜಾಸ್ತಿ) ಮೀರಿರುವ ವಿಚಾರ ಬಹಿರಂಗವಾಗಿದೆ.
ಬೆಂಗಳೂರು ಸೇರಿ ಕರ್ನಾಟಕದ 30 ಜಿಲ್ಲೆಗಳಲ್ಲಿ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಫ್ಲೋರೈಡ್ ಅಂಶವಿರುವುದು ದೃಢಪಟ್ಟಿದೆ. ಫ್ಲೋರೈಡ್ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಬಗ್ಗೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದಾಗ್ಯೂ ಈವರೆಗೆ ಫ್ಲೋರೈಡ್ ಮುಕ್ತ ನೀರು ಸೇವಿಸುವ ಭಾಗ್ಯ ಜನರಿಗೆ ಸಿಕ್ಕಿಲ್ಲ. ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿವೆ.
ಕರ್ನಾಟಕದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಉದ್ದೇಶಕ್ಕಾಗಿ 2021-22 ವರ್ಷಕ್ಕೆ ಕೇಂದ್ರ ಸರ್ಕಾರ 5008 ಕೋಟಿ ರೂ. ಅನುದಾನ ಕೊಟ್ಟಿದೆ. 2022ರ ಮಾ.17ರವರೆಗೆ 1252 ಕೋಟಿ ರೂ. ಡ್ರಾ ಮಾಡಿಕೊಂಡಿದ್ದು, ಅದರಲ್ಲಿ 1208 ಕೋಟಿ ರೂ. ಖರ್ಚು ಮಾಡಿದೆ.
ದೇಶಾದ್ಯಂತ ಪ್ರಾದೇಶಿಕ ಮಟ್ಟದಲ್ಲಿ ವಿವಿಧ ವೈಜ್ಞಾನಿಕ ಅಧ್ಯಯನಗಳ ಮೂಲಕ ಕೇಂದ್ರ ಅಂತರ್ಜಲ ಮಂಡಳಿ (ಸಿಜಿಡಬ್ಲುಬಿ) ಅಂತರ್ಜಲ ಗುಣಮಟ್ಟದ ಮೇಲ್ವಿಚಾರಣೆ ವಹಿಸುತ್ತಿದೆ. ಅದರ ವರದಿ ಪ್ರಕಾರ 43 ಜಿಲ್ಲೆಗಳಲ್ಲಿ ಪ್ಲೋರೈಡ್​ಯುುಕ್ತ ನೀರು ಹೊಂದಿರುವ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಉತ್ತರ ಪ್ರದೇಶ (34 ಜಿಲ್ಲೆ), 3ನೇ ಸ್ಥಾನದಲ್ಲಿ ರಾಜಸ್ಥಾನ (33 ಜಿಲ್ಲೆ) ಹಾಗೂ 30 ಜಿಲ್ಲೆಗಳಲ್ಲಿ ಪ್ಲೋರೈಡ್​ಯುುಕ್ತ ನೀರು ಪತ್ತೆಯಾಗುವುದರೊಂದಿಗೆ ಕರ್ನಾಟಕ 4ನೇ ಸ್ಥಾನದಲ್ಲಿ ಉಳಿದಿದೆ.
ರಾಜ್ಯದ ಎಲ್ಲೆಲ್ಲಿ ಫ್ಲೋರೈಡ್ ಆತಂಕ?:ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ದಕ್ಷಿಣ ಕನ್ನಡ, ಗದಗ, ಕಲಬುರ್ಗಿ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ಉತ್ತರ ಕನ್ನಡ, ಉಡುಪಿ, ಕೊಡಗು.
ಎರಡು ಜಿಲ್ಲೆಗಳಲ್ಲಿ ಅರ್ಸೆನಿಕ್ ಅಂಶ:ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಂತರ್ಜಲದಲ್ಲಿ 0.01 ಮಿಲಿ ಗ್ರಾಂಗಿಂತ ಹೆಚ್ಚು ಅರ್ಸೆನಿಕ್ (ನಂಜು) ಅಂಶ ಪತ್ತೆಯಾಗಿದೆ. ಈ ನೀರು ಸೇವನೆಯಿಂದ ಚರ್ಮದ ಸಮಸ್ಯೆ, ಹೊಟ್ಟೆ ನೋವು, ವಾಂತಿ ಸೇರಿ ಇನ್ನಿತರ ಗಂಭೀರ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ನೀರಿನ ಪರೀಕ್ಷೆಗೆ ಫೀಲ್ಡ್ ಟೆಸ್ಟ್ ಕಿಟ್:ಜಲ ಜೀವನ್ ಮಿಷನ್​ನಡಿಯಲ್ಲಿ ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ನಿಗಾ ವಹಿಸಲು ಆದ್ಯತೆ ನೀಡಲಾಗಿದೆ. ಫೀಲ್ಡ್ ಟೆಸ್ಟ್ ಕಿಟ್​ಗಳನ್ನು (ಎಫ್​ಟಿಕೆ) ಬಳಸಿಕೊಂಡು ಯಾವುದೇ ರೀತಿಯ ಮಾಲಿನ್ಯದ ನೀರಿನ ಮಾದರಿಗಳನ್ನು ಪರೀಕ್ಷಿಸಲು ಪ್ರತಿ ಗ್ರಾಮದಲ್ಲಿ ಐವರು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಎಫ್​ಟಿಕೆಗಳನ್ನು ಖರೀದಿಸಿ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗುತ್ತದೆ. ಎಫ್​ಟಿಕೆ ಒಂಬತ್ತು ಮಾನದಂಡಗಳ ಮೇಲೆ ನೀರನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ.
ಪ್ರತಿ ಮನೆಯಲ್ಲೂ ಸಮಸ್ಯೆ:ಕಲಬುರ್ಗಿಯ ಸೇಡಂ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರತಿಯೊಂದು ಮನೆಯಲ್ಲೂ ಫ್ಲೋರೈಡ್ ಸಮಸ್ಯೆಯಿಂದ ತುತ್ತಾದವರಿದ್ದಾರೆ. ಫ್ಲೋರೈಡ್​ಯುುಕ್ತ ನೀರು ಸೇವನೆಯಿಂದ ಹಲ್ಲುಗಳ ಹಳದಿಯಾಗಿರುವುದು, ಕಾಲು ಸೊಟ್ಟಗಾಗಿ ಕುಂಟುವುದು, ಬೆನ್ನು ಗೂನಾಗಿ ನಡೆಯುವಂತಹ ಸಮಸ್ಯೆಗಳಿಗೆ ಜನ ಒಳಗಾಗಿದ್ದಾರೆ. ಈ ಬಗ್ಗೆ 2010-12ರ ಅವಧಿಯಲ್ಲಿ ಅಧ್ಯಯನ ಮಾಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು ಎಂದು ಭೂವಿಜ್ಞಾನಿ ಬಿ.ಸಿ. ಪ್ರಭಾಕರ್ ಮಾಹಿತಿ ನೀಡುತ್ತಾರೆ.
ಫ್ಲೋರೈಡ್ ಹೆಚ್ಚಲು ಕಾರಣ:ಗ್ರಾನೈಟ್ ಶಿಲೆಗಳಿರುವ ಕಡೆ ಫ್ಲೋರೇಡ್ ಅಂಶ ನೀರಿನಲ್ಲಿ ಬೆರೆಯುತ್ತದೆ. ಹಠಾತ್ತನೆ ಫ್ಲೋರೈಡ್ ಅಂಶ ಬೆರೆಯುವುದಿಲ್ಲ. ಗ್ರಾನೈಟ್ ಶಿಲೆ ನೀರಿನ ಸಂಪರ್ಕಕ್ಕೆ ಬಂದಾಗ ನಿಧಾನವಾಗಿ ಫ್ಲೋರೈಡ್ ಅಂಶ ಬಿಡುಗಡೆಯಾಗುತ್ತದೆ. ಪೂರ್ಣಪ್ರಮಾಣದಲ್ಲಿ ನೀರಿನಲ್ಲಿ ಸೇರಲು ನೂರಾರು, ಸಾವಿರಾರು ವರ್ಷಗಳೇ ಬೇಕಾಗುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಇದರ ಪ್ರಮಾಣ ಹೆಚ್ಚಿರುತ್ತದೆ ಎನ್ನುತ್ತಾರೆ ಭೂ ವಿಜ್ಞಾನಿಗಳು.
ಫ್ಲೋರೈಡ್ ಅಂಶ 0.5 ಮಿಲಿ ಗ್ರಾಂ ಇದ್ದರೆ ದೇಹದ ಆರೋಗ್ಯಕ್ಕೆ ಅನುಕೂಲ. 1.5 ಮಿಲಿ ಗ್ರಾಂ ಮೀರಿದರೆ ಒಂದಲ್ಲ ಒಂದು ರೀತಿ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಹಲವು ಜಿಲ್ಲೆಗಳಲ್ಲಿ ಜನ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೀರಿನಿಂದ ಫ್ಲೋರೈಡ್ ಅಂಶ ತೆಗೆಯುವ ಪರಿಣಾಮಕಾರಿ ವ್ಯವಸ್ಥೆ ಈವರೆಗೂ ಬಂದಿಲ್ಲ.
|ಬಿ.ಸಿ.ಪ್ರಭಾಕರ, ಹಿರಿಯ ಭೂ ವಿಜ್ಞಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
