|ವಿಲಾಸ ಮೇಲಗಿರಿಬೆಂಗಳೂರು
ವಿಪರೀತ ಮಳೆ, ಪ್ರವಾಹದ ಅಬ್ಬರಕ್ಕೆ ಉತ್ತರ ಕರ್ನಾಟಕ ತತ್ತರಿಸಿ ಹೋಗಿತ್ತು. ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳು ಪ್ರವಾಹ ಪರಿಸ್ಥಿತಿಯಿಂದ ಭಾರಿ ಹಾನಿ ಅನುಭವಿಸಿದವು. ಜತೆಗೆ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟ ಕಾರಣ 18 ಜಿಲ್ಲೆಗಳ 49 ತಾಲೂಕುಗಳಿಗೆ ಬರ ಬಾಧಿಸಿತ್ತು. ನೆರೆ, ಬರವನ್ನು ಎದುರಿಸುವಷ್ಟರಲ್ಲೇ ಬಂದೇರಗಿದ ಕರೊನಾ ಮಹಾಮಾರಿ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಿತು. ಲಾಕ್​ಡೌನ್​ನಿಂದ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಇದರಿಂದ ಸರ್ಕಾರಕ್ಕೆ ಬರಬೇಕಾದ ಆದಾಯ ತಪ್ಪಿ ಹೋಯಿತು. ಅಷ್ಟೇ ಅಲ್ಲ, ಕೋವಿಡ್ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ನೂರಾರು ಕೋಟಿ ಖರ್ಚು ಮಾಡಬೇಕಾಯಿತು. ಇದರ ನೇರ ಪರಿಣಾಮ ಅಭಿವೃದ್ಧಿ ಕಾರ್ಯಗಳ ಮೇಲೂ ಕಾಣಿಸಿಕೊಂಡಿತು. ಲಾಕ್​ಡೌನ್ ತರುವಾಯ ಅಬಕಾರಿ ಆದಾಯ ನಿರೀಕ್ಷೆಗೆ ಮೀರಿ ಬರುತ್ತಿದೆ. ಜತೆಗೆ ಸರ್ಕಾರ ಸಾಲ ಮಾಡಿ ಅಭಿವೃದ್ಧಿ ಕೆಲಸಗಳು ಹಿಂದೆ ಬೀಳದಂತೆ ನೋಡಿಕೊಳ್ಳಲು ಯತ್ನಿಸುತ್ತಿದೆ. ಎಂತಹದ್ದೇ ಆರ್ಥಿಕ ಸಂಕಷ್ಟ ಎದುರಾದರೂ ಮಾರ್ಚ್ ಅಂತ್ಯಕ್ಕೆ ಬಜೆಟ್ ಘೋಷಿತ ಕಾರ್ಯಕ್ರಮಗಳಲ್ಲಿ ಶೇಕಡ 85ರಷ್ಟು ಗುರಿ ಸಾಧಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
‘ಮಳೆ ಹಾಗೂ ಪ್ರವಾಹದಿಂದ ಬಿದ್ದ ಮನೆಗಳನ್ನು ಸಹ ನಿರ್ವಿುಸಿಕೊಡಲಾಗದೆ ಸರ್ಕಾರ ಜನರಿಗೆ ಅನ್ಯಾಯ ಮಾಡಿದೆ. ಬಡವರು ಸೂರು ಹೊಂದುವ ಕನಸಿಗೆ ಕೊಳ್ಳಿ ಇಟ್ಟಿದೆ’ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆ ನಡುವೆಯೂ ವಸತಿ ಇಲಾಖೆ ಗಮನಾರ್ಹ ಸಾಧನೆ ಮಾಡಿದೆ. 2019-20ನೇ ಸಾಲಿನಲ್ಲಿ ಹಾನಿಗೊಳಗಾದ ಮನೆಗಳಿಗೆ 1,733.42 ಕೋಟಿ ರೂ. ಹಾಗೂ 2020-21ನೇ ಸಾಲಿನಲ್ಲಿ ಹಾನಿಗೀಡಾದ ಮನೆಗಳಿಗೆ 17.30 ಕೋಟಿ ರೂ. ಹೀಗೆ ಒಟ್ಟು 1750.72 ಕೋಟಿ ರೂ.ಗಳನ್ನು ಸಂತ್ರಸ್ತರ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ಈವರೆಗೆ 1.59 ಲಕ್ಷ ಮನೆ ನಿರ್ವಿುಸಲಾಗಿದೆ. ಈ ಅವಧಿಯಲ್ಲಿ ರಾಜ್ಯಾದ್ಯಂತ 100.62 ಎಕರೆ ಖಾಸಗಿ ಜಮೀನು ಖರೀದಿಸಲಾಗಿದ್ದು, ಈವರೆಗೆ ಒಟ್ಟು 7342 ಆಶ್ರಯ ನಿವೇಶನ ಹಂಚಿಕೆ ಮಾಡಲಾಗಿದೆ. 4908 ಎಕರೆ ಜಮೀನನ್ನು ವಸತಿ ನಿವೇಶನ ಹಂಚಿಕೆಗೆ ಕಾಯ್ದಿರಿಸಿದ್ದು, 1,39,974 ನಿವೇಶನ ರಚಿಸಿ ಹಂಚಿಕೆ ಮಾಡಲು ಕ್ರಮ ಕೈಗೊಂಡಿದೆ.
ವಿದ್ಯಾಗಮದ ಸಾಧನೆ:ಲಾಕ್​ಡೌನ್ ಸಂದರ್ಭದಲ್ಲಿ ಶಾಲೆ-ಕಾಲೇಜು ಬಂದ್ ಆದಾಗ ದೇಶಕ್ಕೇ ಮಾದರಿಯಾಗುವಂತೆ ರಾಜ್ಯದಲ್ಲಿ ವಿದ್ಯಾಗಮ ಪರಿಚಯಿಸಲಾಯಿತು. ಬಿಸಿಊಟದ ಬದಲಿಗೆ ಆಹಾರ ಧಾನ್ಯಗಳನ್ನು ಮಕ್ಕಳ ಮನೆ-ಮನೆಗೆ ತಲುಪಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳನ್ನು ದೇಶಕ್ಕೆ ಮಾದರಿಯಾಗುವಂತೆ ನಡೆಸಲಾಯಿತು. ಶಾಲೆ ಬಂದ್ ಹಿನ್ನೆಲೆಯಲ್ಲಿ ಮಕ್ಕಳಿಗೆ ಒತ್ತಡವಾಗಬಾರದೆಂದು ಶೇಕಡ 30ರಷ್ಟು ಪಠ್ಯ ಕಡಿತ ಮಾಡಲಾಗಿದೆ. ಪಾಲಕರಿಗೆ ಆರ್ಥಿಕ ಹೊರೆ ತಪ್ಪಿಸಲು ಖಾಸಗಿ ಶಾಲೆಗಳ ಶುಲ್ಕವನ್ನು ಶೇ.30ರಷ್ಟು ಕಡಿತಗೊಳಿಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅತಿಥಿ ಉಪನ್ಯಾಸಕರಿಗೆ 3 ತಿಂಗಳ ಗೌರವಧನವಾಗಿ 55,74,245 ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಶಾಲೆಗಳ ಪುನರ್ ನಿರ್ವಣಕ್ಕೆ, ಭಾಗಶಃ ಹಾನಿಯಾಗಿರುವ ಶಾಲೆಗಳ ನವೀಕರಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ.
ಅನುದಾನಕ್ಕೆ ಕತ್ತರಿ:2020-21ನೇ ಸಾಲಿಗೆ 17,745.77 ಕೋಟಿ ರೂ. ಮೀಸಲಿರಿಸಲಾಗಿದೆ. ಹಿಂದಿನ ಸಾಲಿನ ಶಿಲ್ಕು ಅನುದಾನ 2356.09 ಕೋಟಿ ರೂ. ಸೇರಿ 29,101.86 ಕೋಟಿ ರೂ. ಲಭ್ಯವಿತ್ತು. ಇದರಲ್ಲಿ ಡಿಸೆಂಬರ್​ವರೆಗೆ 9774.56 ಕೋಟಿ ರೂ. ಬಿಡುಗಡೆಯಾಗಿದ್ದು, 8484.99 ಕೋಟಿ ರೂ. ಖರ್ಚು ಮಾಡಲಾಗಿದೆ. ಪರಿಶಿಷ್ಟ ಪಂಗಡ ಉಪಯೋಜನೆಯಡಿ ಪರಿಷ್ಕೃತ ಅಂದಾಜು 7704.26 ಕೋಟಿ ರೂ. ಹಾಗೂ ಪ್ರಾಥಮಿಕ ಶಿಲ್ಕು 1051.21 ಕೋಟಿ ರೂ. ಸೇರಿ ಒಟ್ಟು 8,755.47 ಕೋಟಿ ರೂ. ಅನುದಾನದ ಲಭ್ಯತೆ ಇದೆ. ಈ ಪೈಕಿ ಡಿಸೆಂಬರ್ ಅಂತ್ಯಕ್ಕೆ 4226.75 ಕೋಟಿ ರೂ. ಮಾತ್ರ ಬಿಡುಗಡೆಯಾಗಿದ್ದು, 3188.29 ಕೋಟಿ ರೂ. ಖರ್ಚಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಗಂಗಾಕಲ್ಯಾಣ ಯೋಜನೆಯಡಿ ಮೀಸಲಿಟ್ಟ 405 ಕೋಟಿ ರೂಪಾಯಿಗಳಲ್ಲಿ ಡಿಸೆಂಬರ್ ಅಂತ್ಯದವರೆಗೆ 88.48 ಕೋಟಿ ರೂ. ಮಾತ್ರ ಖರ್ಚಾಗಿದೆ. 2020-21ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರ ತೀರಾ ಕಡಿಮೆ ಅನುದಾನ ನಿಗದಿ ಮಾಡಿದೆ. 2020-21ರಲ್ಲಿ 1124.93 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಡಿಸೆಂಬರ್ ಅಂತ್ಯಕ್ಕೆ ಕೇವಲ 412.07 ಕೋಟಿ ರೂ. ಬಿಡುಗಡೆ ಮಾಡಿದೆ.
ಜೀವನಚೈತ್ರ ಯಾತ್ರೆಗೆ ಬ್ರೇಕ್:ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯ ಹಾಗೂ ದೇಶದ ಪ್ರಮುಖ ತೀರ್ಥಕ್ಷೇತ್ರಗಳ ದರ್ಶನಕ್ಕಾಗಿ ಜೀವನಚೈತ್ರ ಯಾತ್ರೆ ಯೋಜನೆ ರೂಪಿಸಿ 20 ಕೋಟಿ ರೂ. ಅನುದಾನ ಘೊಷಿಸಲಾಗಿತ್ತು. ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮೀರಿದ ಫಲಾನುಭವಿಗಳಿಗಾಗಿ ಈ ಯೋಜನೆ ಘೊಷಣೆಯಾಗಿತ್ತು. ಆದರೆ, ಕೋವಿಡ್ ಕಾರಣಕ್ಕಾಗಿ ಯೋಜನೆ ಅನುಷ್ಠಾನ ಸಾಧ್ಯವಾಗಲಿಲ್ಲ. ಮುಂದಿನ ಆರ್ಥಿಕ ವರ್ಷದಲ್ಲಿ ಯೋಜನೆ ಜಾರಿಗೆ ಇಲಾಖೆ ಚಿಂತಿಸಿದೆ.
ಕಾರ್ವಿುಕರ ಕೈಹಿಡಿದ ಖಾತ್ರಿ:ಗ್ರಾಮೀಣಾಭಿವೃದ್ಧಿ ಇಲಾಖೆ ನರೇಗಾ ಯೋಜನೆಯಡಿ 14.10 ಕೋಟಿ ಮಾನವ ದಿನಗಳನ್ನು ಸೃಜಿಸಿ ಕರೊನಾ ಸಂಕಷ್ಟಕ್ಕೆ ಸಿಲುಕಿ ನಗರ ಬಿಟ್ಟು ಹಳ್ಳಿಗೆ ಮರಳಿದವರಿಗೆ ಕೆಲಸ ಕೊಡುವಲ್ಲಿ ಯಶಸ್ವಿಯಾಗಿದೆ. ನರೇಗಾದಡಿ 44.86 ಲಕ್ಷ ಕೂಲಿ ಕಾರ್ವಿುಕರಿಗೆ ಕೆಲಸ ನೀಡಿದ್ದು, 8.34 ಲಕ್ಷ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಡಿಸೆಂಬರ್ ಅಂತ್ಯಕ್ಕೆ 4234.19 ಕೋಟಿ ರೂ. ವೆಚ್ಚ ಮಾಡಲಾಗಿದೆ. 2.55 ಲಕ್ಷ ಮಹಿಳಾ ಕಾರ್ವಿುಕರಿಗೆ ಹೆಚ್ಚುವರಿಯಾಗಿ ಕೆಲಸ ನೀಡಿರುವುದು ದೇಶದಲ್ಲೇ ದಾಖಲೆಯಾಗಿದೆ.
ಕೃಷಿಕರಿಗೆ ಹಲವು ನೆರವು:ಕೃಷಿ ಇಲಾಖೆ ಕರೊನಾ ಕಾಲದಲ್ಲಿ ರೈತರ ಬಗ್ಗೆ ಕಾಳಜಿ ತೋರಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ಪ್ರತಿ ವರ್ಷ ರೈತರಿಗೆ  4 ಸಾವಿರ ರೂ. ಪ್ರೋತ್ಸಾಹ ಧನ ನೀಡಿದೆ. ಕೃಷಿ ಹೆಲ್ತ್ ಕ್ಲಿನಿಕ್ ಸ್ಥಾಪಿಸಲಾಗಿದೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಅಗ್ರಿವಾರ್ ರೂಮ್ ಅಸ್ತಿತ್ವಕ್ಕೆ ತರಲಾಗಿದೆ. ಪರಿಶಿಷ್ಟರಿಗೆ ಸಣ್ಣ ಟ್ರಾ್ಯಕ್ಟರ್ ಖರೀದಿಸಲು ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. 150 ಕೃಷಿ ಯಂತ್ರಧಾರೆ ಕೇಂದ್ರ ತೆರೆಯಲಾಗಿದೆ. ರೈತರಲ್ಲಿ ಸ್ಪೂರ್ತಿ ತುಂಬಲು ಚಿತ್ರನಟ ದರ್ಶನ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಕೃಷಿ ಆಧುನಿಕತೆ ಮತ್ತು ಹೊಸ ತಂತ್ರಜ್ಞಾನ ಉತ್ತೇಜನಕ್ಕೆ ಕೃಷಿ ಸ್ಟಾರ್ಟ್​ಅಪ್ ಹಬ್ ಗುರಿ ಹೊಂದಲಾಗಿದೆ.
ಕೋವಿಡ್ ನಿಯಂತ್ರಣಕ್ಕೆ ಕೊಡುಗೆ:ಆರೋಗ್ಯ ಇಲಾಖೆಯಲ್ಲಿ ಕೋವಿಡ್ ಉಪಕರಣ/ಪರಿಕರ ಖರೀದಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪದ ನಡುವೆಯೂ ಕೋವಿಡ್-19ರ ನಿರ್ವಹಣೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ ದೊರಕಿದೆ. ಕೋವಿಡ್ ಸಂದರ್ಭದಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಜನವರಿವರೆಗೆ ನೀಡಿರುವ ಚಿಕಿತ್ಸಾ ವೆಚ್ಚದ ಬಾಬ್ತು 620 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದುವರಗೆ  311 ಕೋಟಿ ರೂ. ಖರ್ಚಾಗಿದೆ.
20 ಲಕ್ಷ ಉದ್ಯೋಗ ಸೃಜನೆ ಗುರಿ:ಹೂಡಿಕೆದಾರರ ಆಕರ್ಷಣೆ, ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಜತೆಗೆ ಸಣ್ಣ ಕೈಗಾರಿಕೆಗಳ ಸ್ಥಾಪನೆ ಮತ್ತು ವಹಿವಾಟು ವಿಸ್ತರಣೆಗೆ ಉತ್ತೇಜನ ನೀಡುವ ಉದ್ದೇಶದ ಕೈಗಾರಿಕಾ ನೀತಿ-2020-2025 ಜಾರಿಯಾಗಿದೆ. ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಜತೆಗೆ 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ.
2 ಲಕ್ಷ ಮನೆಗಳಿಗೆ ನೀರು:ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮನೆ-ಮನೆಗೆ ಗಂಗೆ ಯೋಜನೆಯಡಿ 8384.52 ಕೋಟಿ ರೂ. ಅನುದಾನದಡಿ 23.57 ಲಕ್ಷ ಮನೆಗಳಿಗೆ ನೀರು ಒದಗಿಸುವ ಗುರಿ ಹೊಂದಿದ್ದು, ಡಿಸೆಂಬರ್ ಅಂತ್ಯಕ್ಕೆ 2 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.
ನಿಲ್ಲದ ನೀರಾವರಿ ಯೋಜನೆಗಳು:ಕರೊನಾ ಮಹಾಮಾರಿ ನಡುವೆಯೂ ಜಲಸಂಪನ್ಮೂಲ ಇಲಾಖೆ ಚುರುಕಿನ ಕಾರ್ಯ ಕೈಗೊಂಡಿದೆ. ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತು ನೀಡಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ಕಾರಣ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಕೊಪ್ಪಳ ಜಿಲ್ಲೆಯ ನವಲಿ ಗ್ರಾಮದ ಸಮೀಪ ಸಮತೋಲನ ಜಲಾಶಯ ನಿರ್ವಣಕ್ಕೆ ಯೋಜನೆ ರೂಪಿಸಲಾಗಿದೆ. ಮಧ್ಯ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಹಾಸನ, ತುಮಕೂರು ಜಿಲ್ಲೆಗಳ ಬರ ನೀಗಿಸಲು ಕೈಗೆತ್ತಿಕೊಳ್ಳಲಾಗಿರುವ ಎತ್ತಿನಹೊಳೆ ಯೋಜನೆ ಕುಂಟುತ್ತ ಸಾಗಿದೆ.
ಕೋವಿಡ್ ಸಂದರ್ಭದಲ್ಲೂ ರಾಜ್ಯದ ಆರ್ಥಿಕ ನಿರ್ವಹಣೆ ಉತ್ತಮವಾಗಿದೆ. ಲಾಕ್​ಡೌನ್ ನಂತರ ಅರ್ಥವ್ಯವಸ್ಥೆ ಗಮನಾರ್ಹವಾಗಿ ಚೇತರಿಕೆ ಕಾಣುತ್ತಿದೆ. ತೆರಿಗೆ ಸಂಗ್ರಹದಲ್ಲೂ ಸುಧಾರಣೆ ಕಾಣುತ್ತಿದೆ. ಕೃಷಿ ಬೆಳವಣಿಗೆ ದರ ಕೂಡ ಚೆನ್ನಾಗಿದೆ.
|ಡಾ.ಎಂ.ಜಿ.ಚಂದ್ರಕಾಂತ್ನಿವೃತ್ತ ನಿರ್ದೇಶಕರು, ಐಸೆಕ್
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಹಿಡಿಯಲು ಬಂದ ಸಬ್​ ಇನ್​ಸ್ಪೆಕ್ಟರ್​ ಮೇಲೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಕಳ್ಳ; ಎಸ್​ಐ ಬಲಗೈಗೆ ಗಾಯ

ಬ್ಯಾಂಕ್​ ವ್ಯವಹಾರದ ಬಗ್ಗೆ ಅನುಮಾನ; ಪಿಗ್ಮಿ ಹಣ ಹಿಂದಿರುಗಿಸುವಂತೆ ಮುಗಿಬಿದ್ದ ಖಾತೆದಾರರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 14 =
Remember me
