ಒಬ್ಬಾಕೆ, ಗಾರೆ ಕೆಲಸ ಮಾಡುವಾಗ ಮಹಡಿಯಿಂದ ಜಾರಿ ಬಿದ್ದು ಸೊಂಟ ಮುರಿದುಕೊಂಡ ತನ್ನ ಗಂಡನ, ಲಕ್ವಾ ಹೊಡೆದು ಮಲಗಿರುವ ತನ್ನ ಮಾವನ, ಕುರುಡಿ ಅತ್ತೆಯ ಜೊತೆಯಲ್ಲಿ ಎರಡು ಮಕ್ಕಳ ಹೊಟ್ಟೆ ತುಂಬಿಸಲು, ಒಬ್ಬ ಶ್ರೀಮಂತರ ಮನೆಯಲ್ಲಿ ಬೆಳಗಿನಿಂದ ಸಂಜೆವರೆಗೆ ಮನೆ ಕೆಲಸ ಮಾಡುತ್ತಿದ್ದಳು. ಕೆಲಸಗಳನ್ನೆಲ್ಲ ಮುಗಿಸಿ ಅಡುಗೆ ಮನೆಯಿಂದ ತನ್ನ ಸೆರಗನ್ನು ಅದಕ್ಕೆ ಸುತ್ತಿದ ಗಂಟನ್ನು ಗಟ್ಟಿಯಾಗಿ ಹಿಡಿದುಕೊಂಡು ಸರಸರನೆ ತನ್ನ ಮನೆಯ ಕಡೆ ಹೊರಟುಬಿಡುತ್ತಿದ್ದಳು. ಇವಳ ಈ ನಡೆ ಮನೆ ಸೊಸೆಯ ಅನುಮಾನಕ್ಕೆ ಕಾರಣವಾಯಿತು. ಬಹುಶಃ ಮನೆಯಿಂದ ಏನನ್ನೊ ಕದ್ದು ತೆಗೆದುಕೊಂಡು ಹೋಗುತ್ತಿರಬಹುದೆಂಬ ಸಂಶಯ ಬಂದು ಈ ವಿಷಯವನ್ನು ತನ್ನ ಅತ್ತೆಗೆ ಹೇಳುತ್ತಾಳೆ. ಆಗ ಅತ್ತೆ ‘ಛೆ ಛೆ ಆಕೆ ಅಂತಹವಳಲ್ಲ್ಲ ಎನ್ನಲು ನಾಳೆ ದಿನ ನೀವೇ ನೋಡುವಿರಂತೆ ಎಂದಳು ಸೊಸೆ. ಅವಳ ಮಾತಿಗೆ ಒಪ್ಪಿ ಅತ್ತೆ ಮರುದಿನ ಸ್ವತಃ ಮರೆಯಲ್ಲಿ ನಿಂತು ನೋಡಲು ಸೊಸೆ ಹೇಳಿದ್ದು ಖಚಿತವಾಯಿತು. ಏನನ್ನಾದರೂ ಕದ್ದು ಒಯ್ದಳೇ ಎಂಬುದನ್ನು ಪರೀಕ್ಷಿಸಿದಾಗ ಏನೂ ಪತ್ತೆಯಾಗಲಿಲ್ಲ. ಮತ್ತೆ ಏನನ್ನು ಬಚ್ಚಿಟ್ಟುಕೊಂಡು ಹೋಗುತ್ತಿದ್ದಾಳೆ ಎಂಬುದನ್ನು ತಿಳಿದುಕೊಳ್ಳಲು ಅತ್ತೆ ಅಡುಗೆ ಮನೆಗೆ ಸಿ. ಸಿ. ಕ್ಯಾಮರಾ ಹಾಕಿಸುತ್ತಾಳೆ. ಮರುದಿನವೂ ಕೆಲಸದಾಕೆ ಅದೇ ಕೆಲಸವನ್ನು ಮುಂದುವರಿಸಿದಳು. ಜೋಡಿಸಿರುವ ಸಿಸಿ ಕ್ಯಾಮರಾದ ಬಗ್ಗೆ ಅವಳಿಗೆ ಅರಿವಿಲ್ಲ. ಆಕೆ ಮನೆಯಿಂದ ಹೊರಗೆ ಹೋದಮೇಲೆ ಸಿಸಿ ಕ್ಯಾಮರಾ ನೋಡಿದಾಗ ಕೆಲಸದಾಕೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದಳು. ಆಕೆ ಮಾಡಿದ್ದೇನು? ಎಂದಿನಂತೆ ಮನೆಯವರ ಊಟದ ನಂತರ ಎಲ್ಲಾ ತಟ್ಟೆಗಳಿಂದ ಅವರೆಲ್ಲ ತಿನ್ನದೇ ಉಳಿಸಿದ ಆಹಾರ ಪದಾರ್ಥಗಳನ್ನು ಕವರಿನೊಳಗೆ ತುಂಬಿಸಿ ತನ್ನ ಸೆರಗೊಳಗೆ ಗಂಟು ಕಟ್ಟಿ ಅವಸರದಲ್ಲಿ ಹೊರಟುಹೋಗಿದ್ದಳು. ಎರಡು ಮೂರು ಚಮಚದಷ್ಟು ಮಾತ್ರ ತಿಂದು ಏಳುವ ಇವರ ಊಟದ ತಟ್ಟೆಯಲ್ಲಿ ಆಹಾರದ ಪೋಲು ಧಾರಾಳವಾಗಿ ನಡೆಯುತ್ತಿತ್ತು. ಆದರೆ ಈ ಎಂಜಲನ್ನು ಕಟ್ಟಿಕೊಂಡು ಆಕೆ ಏನು ಮಾಡುತ್ತಾಳೆ ಎಂಬುದನ್ನು ಪರೀಕ್ಷಿಸಲು ಅತ್ತೆ ತನ್ನ ಕಾರು ಡ್ರೈವರ್ ಅನ್ನು ಕರೆದು ಆಕೆಯನ್ನು ಫಾಲೋ ಮಾಡಿ ಸತ್ಯಾಂಶವನ್ನು ತಿಳಿದುಕೊಳ್ಳಲು ಆದೇಶಿಸುತ್ತಾಳೆ. ಅಂತೆಯೇ ಮನೆಯಿಂದ ಹೊರಟ ಕೆಲಸದಾಕೆಯನ್ನು ಅವಳಿಗೆ ಗೊತ್ತಿಲ್ಲದಂತೆ ಡ್ರೈವರ್ ಹಿಂಬಾಲಿಸುತ್ತಾನೆ. ಅವಳು ತನ್ನ ಗುಡಿಸಲಿಗೆ ಹೋಗುತ್ತಾಳೆ. ಡ್ರೈವರ್ ಕಿಟಕಿಯಿಂದ ನೋಡುತ್ತ ಎಲ್ಲವನ್ನು ವಿಡಿಯೋ ಮಾಡುತ್ತಾನೆ. ಆಗ ಅಲ್ಲಿ ಹೃದಯ ಕರಗಿಸುವ ದೃಶ್ಯಗಳು ಸೆರೆಯಾಗುತ್ತವೆ.
ಕೆಲಸದಾಕೆ ಸೆರಗಲ್ಲಿ ಗಂಟು ಕಟ್ಟಿ ತಂದಿದ್ದ ಎಲ್ಲಾ ಆಹಾರ ಪದಾರ್ಥಗಳನ್ನು ಮನೆಯವರೆಲ್ಲರಿಗೂ ಹಂಚುತ್ತಾಳೆ. ಮನೆಯವರೆಲ್ಲ ಎಲ್ಲವನ್ನೂ ಸೇವಿಸು ತ್ತಾರೆ. ‘ನಿನ್ನ ಯಜಮಾನರ ಮನೆಯವರು ಎಷ್ಟೊಂದು ಒಳ್ಳೆಯವರು, ದಿನಾ ನಮಗೆ ರುಚಿರುಚಿ ಯಾದ ಆಹಾರ ಪದಾರ್ಥಗಳನ್ನು ನಿನ್ನ ಮೂಲಕ ಕಳುಹಿಸುತ್ತಿದ್ದಾರೆ’ ಎಂದು ಹಾಡಿ ಹೊಗಳುತ್ತಾರೆ. ‘ದೇವರು ಅವರನ್ನು ಚೆನ್ನಾಗಿ ಇಡಲಿ’ ಎಂದು ಹರಸುತ್ತಾರೆ. ಈ ವಿಡಿಯೋ ನೋಡಿದ ಮನೆಯವರ ಕಣ್ಣುಗಳು ತೇವಗೊಳ್ಳುತ್ತವೆ. ಏಕೆ ಹೀಗೆ ಮಾಡಿದೆ ಎಂದು ಕೇಳಲಾಗಿ ಆ ಕೆಲಸದವಳು ಹೇಳುತ್ತಾಳೆ: ‘ನಾವು ಬಡವರು. ಇಂತಹ ಸ್ವಾದಿಷ್ಟ
ಆಹಾರವನ್ನು ತಯಾರಿಸುವ ಸಾಮರ್ಥ್ಯ ನಮಗೆ ಇಲ್ಲ. ಮೇಲಾಗಿ ನೀವು ಕೈಯಲ್ಲಿ ಮುಟ್ಟದೆ ಬರೇ ಎರಡು ಮೂರು ಚಮಚೆಗಳಷ್ಟು ತಿಂದು, ಬಿಡುವ ಆಹಾರ ನಮ್ಮ ಪಾಲಿಗೆ ಎಂಜಲು ಅಲ್ಲ;ನಿಮ್ಮ ಕೃಪೆ, ದೇವರ ಕೊಡುಗೆ’.
ಮರುದಿನ ಕೆಲಸದಾಕೆ ಬರುತ್ತಿದ್ದಂತೆ ಆಕೆಗೆ ಮನೆಯವರು ತಿನ್ನದೇ ಉಳಿದಿರುವ ಎಂಜಲನ್ನು ಕಸದ ಡಬ್ಬಿಗೆ ಸುರಿಯುವಂತೆ ಹಾಗೂ ಅವರ ಮನೆಯವರಿಗೂ ಬೇಕಾಗುವಷ್ಟು ಊಟವನ್ನು ತಯಾರಿಸುವಂತೆ ಮನೆಯ ಯಜಮಾನಿ ಆದೇಶಿಸುತ್ತಾಳೆ. ಮಾತ್ರವೇ ಅಲ್ಲ, ಇನ್ನು ಮುಂದೆ ಈ ಮನೆಯಲ್ಲಿ ಯಾರೂ ಆಹಾರವನ್ನು ಪೋಲು ಮಾಡುವಂತಿಲ್ಲ ಎಂಬ ಕಟ್ಟುನಿಟ್ಟಾದ ಸೂಚನೆಯನ್ನು ಮನೆಯವರಿಗೆಲ್ಲಾ ನೀಡುತ್ತಾಳೆ. ಹಾಗೂ ಕೆಲಸದಾಕೆಗೆ ತನ್ನ ಮನೆಯವರಿಗೆ ಬೇಕಾಗುವಷ್ಟು ಆಹಾರವನ್ನು ತೆಗೆದುಕೊಂಡು ಹೋಗುವಂತೆ ಸೂಚಿಸುತ್ತಾಳೆ.
ಹೌದು, ನಾವು ದುಡಿದು ಗಳಿಸಿದ ಅನ್ನವನ್ನು ಉಣ್ಣುವ ಹಕ್ಕು ನಮಗಿದೆ. ಆದರೆ ಅದನ್ನು ಪೋಲು ಮಾಡುವ ಹಕ್ಕು ನಮಗಿಲ್ಲ. ಅದು ಬಡವರ ಪಾಲು. ಆಹಾರದ ಪೋಲು ಒಂದು ಸಾಮಾಜಿಕ ಅಪರಾಧ! ಮೇಲಾಗಿ ಯಾರಾದರೂ ತಾಳಲಾರದ ಹಸಿವನ್ನು ಹಿಂಗಿಸಿಕೊಳ್ಳಲು ಊಟ ತಿಂಡಿಗಳನ್ನು ಕದ್ದರೆ ಅಂತಹವರನ್ನು ಹೊಡೆಯಬಾರದು, ಶಿಕ್ಷಿಸಬಾರದು. ಅದು ಮಾನವೀಯತೆಯಲ್ಲ; ತಾಳಲಾರದ ಹಸಿವಿನ ಎದುರು ಯಾರೂ ಸತ್ಯವಂತರಲ್ಲ; ಸಭ್ಯರಲ್ಲ!
IPL 2024; ಪ್ಲೇಆಫ್​ಗೇರುವ ನಾಲ್ಕು ತಂಡಗಳನ್ನು ಹೆಸರಿಸಿದ ಜಂಬೋ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 8 =
Remember me
