ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರುವಲ್ಲಿ ಉತ್ತರ ಕರ್ನಾಟಕದ ಪಾತ್ರ ಪ್ರಮುಖ. ಹೌದು. ಯಡಿಯೂರಪ್ಪ ಎಂದರೆ ಉತ್ತರ ಕರ್ನಾಟಕದಲ್ಲಿ ಬಲು ಜನಪ್ರಿಯ ನಾಯಕ. ಅವರಿಗೂ ಉ.ಕ. ಎಂದರೆ ಅಚ್ಚುಮೆಚ್ಚು.
30-40 ವರ್ಷದ ಹಿಂದೆ, ರಾಜ್ಯದಲ್ಲಿ ಬಿಜೆಪಿ ಬಲ ಲೆಕ್ಕಕ್ಕಿಲ್ಲ ಎನ್ನುವ ಕಾಲದಲ್ಲಿ ಬಿಎಸ್​ವೈ ರಾಜ್ಯಾಧ್ಯಕ್ಷರಾದರು. ಪಕ್ಷವನ್ನು ಬಲಪಡಿಸಲು ಅವರು ಮೊದಲು ನೆಚ್ಚಿಕೊಂಡಿದ್ದೇ ಉ.ಕ. ಭಾಗವನ್ನು. ಏಕೆಂದರೆ, ಆಗಲೇ ಈ ಭಾಗದಲ್ಲಿ ಜನಸಂಘದ ಬೇರುಗಳು ಗಟ್ಟಿಯಾಗಿದ್ದವು. ಹಾಗೆ ಬಿಎಸ್​ವೈ ಉ.ಕ.ದತ್ತ ಹೊರಳಿದಾಗ, ಕೇಂದ್ರ ಸ್ಥಾನ ಮಾಡಿಕೊಂಡಿದ್ದು ಹುಬ್ಬಳ್ಳಿ-ಧಾರವಾಡವನ್ನು.
ಇಲ್ಲಿ ಎಬಿವಿಪಿ ಚಟುವಟಿಕೆಗಳು ಚುರುಕಾಗಿದ್ದವು. ವಿದ್ಯಾರ್ಥಿ ಸಂಘಟನೆ ಮೂಲಕ ಬೆಳೆದುಬಂದ ಎಚ್.ಎನ್. ಅನಂತಕುಮಾರ್, ಜಗದೀಶ ಶೆಟ್ಟರ್, ಅಶೋಕ ಕಾಟವೆ, ರಾಜೇಂದ್ರ ಗೋಖಲೆ ಸೇರಿ ಜನಪರ ಹೋರಾಟಗಳನ್ನು ಸಂಘಟಿಸುವ ಉಮೇದಿಯ ಯುವಕರು ಇಲ್ಲಿದ್ದರು. ಹಿರಿಯ ನಾಯಕ ಚಂದ್ರಕಾಂತ ಬೆಲ್ಲದ, ಶಾಸಕರಾಗಿದ್ದ ಎಂ.ಜಿ. ಜರತಾರಘರ ಮೊದಲಾದವರು ಬೆಂಬಲವಾಗಿದ್ದರು.
ಅದೇ ಸಂದರ್ಭದಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದ ಮೇಲೆದ್ದಿತ್ತು. ಮಹಾನಗರ ಪಾಲಿಕೆ ಸ್ವಾಮ್ಯದ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ವಿಷಯವನ್ನು ಬಿಜೆಪಿ ಪ್ರತಿಷ್ಠೆ ವಿಷಯವಾಗಿ ತೆಗೆದುಕೊಂಡು, ಬೃಹತ್ ಹೋರಾಟವನ್ನೇ ಸಂಘಟಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ರಾಷ್ಟ್ರೀಯ ನಾಯಕಿ ಉಮಾಭಾರತಿ ಸಹ ಹೋರಾಟದಲ್ಲಿ ಪಾಲ್ಗೊಂಡರು. ಅವರ ಬಂಧನವಾಯಿತು. ಈ ಹೋರಾಟದಲ್ಲಿ ಯಡಿಯೂರಪ್ಪ ಸಕ್ರಿಯ ನೇತೃತ್ವ ವಹಿಸಿದ್ದರು. ಅವರ ಮೇಲೆಯೂ ಪ್ರಕರಣ ದಾಖಲಾದವು.
ಪಕ್ಷ ಸಂಘಟನೆಗಾಗಿ ಉತ್ತರ ಕನ್ನಡದಿಂದ ಬೀದರ್​ವರೆಗಿನ ಎಲ್ಲ ಜಿಲ್ಲೆಗಳಿಗೂ ಮೇಲಿಂದ ಮೇಲೆ ಭೇಟಿ ನೀಡಿದ ಯಡಿಯೂರಪ್ಪ, ಇಲ್ಲಿಯ ಜನಸಾಮಾನ್ಯರ ಸಮಸ್ಯೆಗಳನ್ನು ಚೆನ್ನಾಗಿ ಅರಿತುಕೊಂಡರು. ನೀರಾವರಿ ಯೋಜನೆಗಳು ಸೇರಿ ವಿವಿಧ ಹೋರಾಟಗಳನ್ನು ಪಕ್ಷದ ವತಿಯಿಂದ ಸಂಘಟಿಸುತ್ತ ಹೋದರು. ಕೃಷ್ಣಾ ಮೇಲ್ದಂಡೆ ಯೋಜನೆ, ಸಂತ್ರಸ್ತರಿಗೆ ಪರಿಹಾರ, ಕರಾವಳಿ ಭಾಗದ ಅಡಕೆ ಬೆಳೆಗಾರರು, ಮೀನುಗಾರರು ಸೇರಿ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷದ ವತಿಯಿಂದ ನಿರಂತರ ಹೋರಾಟ ನಡೆಯುವಂತೆ ನೋಡಿಕೊಂಡರು.
ಉ.ಕ. ಭಾಗದಲ್ಲಿ ಮೇಲಿಂದ ಮೇಲೆ ಪ್ರವಾಸ ಮಾಡುವ ವೇಳೆ ಮಠ-ಮಂದಿರಗಳಿಗೆ ಭೇಟಿ, ಗಣ್ಯರೊಂದಿಗೆ ಚರ್ಚೆ, ಜನರು ಸೇರಿದಲ್ಲಿಗೇ ಹೋಗಿ ಭಾಷಣ, ಕಾರ್ಯಕರ್ತರ ಮನೆಯಲ್ಲೇ ಊಟ… ಹೀಗೆ ಯಡಿಯೂರಪ್ಪ ದಿನಚರಿಗಳು ಇರುತ್ತಿದ್ದವು.
ಪಾದರಸಂತೆ ಚುರುಕಾಗಿದ್ದ ಅವರ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಮಾತ್ರವಲ್ಲ; ಜನಸಾಮಾನ್ಯರಿಗೂ ಅಭಿಮಾನ ಮೂಡಿದ್ದು ಸಹಜವಾಗಿತ್ತು. ಹೋರಾಟಗಳ ಸಂಘಟನೆ, ನೇತೃತ್ವದ ಪರಿಣಾಮವಾಗಿ ಯಡಿಯೂರಪ್ಪ-ಎಚ್.ಎನ್. ಅನಂತಕುಮಾರ್ ಅವರನ್ನು ಜನರು ಹಕ್ಕ-ಬುಕ್ಕರೆಂದೇ ಕರೆಯುವಷ್ಟರ ಮಟ್ಟಿಗೆ ಜನಪ್ರಿಯತೆ ಪ್ರಾಪ್ತವಾಯಿತು.
ಇಬ್ಬರೇ ಶಾಸಕರಿದ್ದಾಗಿನಿಂದಲೂ ವಿಧಾನಸೌಧದಲ್ಲಿ ಗಟ್ಟಿ ಧ್ವನಿಯವರೆಂದೇ ಗುರುತಿಸಿಕೊಂಡ ಬಿಎಸ್​ವೈ, ಉ.ಕ.ದ ಸಮಸ್ಯೆಗಳಿಗೆ ಅಲ್ಲಿಯೂ ಧ್ವನಿಯಾದರು.
ಉಳುವವನೇ ಹೊಲದೊಡೆಯ ಕಾನೂನಿನಿಂದ ಪ್ರಮುಖ ಲಿಂಗಾಯತ ವೀರಶೈವ ಸಮಾಜ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದು, ಜನತಾ ಪರಿವಾರದೊಟ್ಟಿಗೆ ಹೆಚ್ಚಾಗಿ ಗುರುತಿಸಿಕೊಂಡಿತು. ಜನತಾ ಪರಿವಾರ ಒಡೆದು ಹೋದಾಗ ಈ ಭಾಗದ ಪ್ರಮುಖ ನಾಯಕರನ್ನು ಬಿಎಸ್​ವೈ ಬಿಜೆಪಿಗೆ ಸೆಳೆದುಕೊಂಡು ಪಕ್ಷದ ವ್ಯಾಪ್ತಿ ಹೆಚ್ಚಿಸಿದರು.
ಇದೆಲ್ಲದರ ಪರಿಣಾಮವಾಗಿ 1994 ರ ಚುನಾವಣೆಯಲ್ಲಿ ಉತ್ತರ ಕರ್ನಾಟಕಲ್ಲಿ ಬಿಜೆಪಿ ಬೇರು ಗಟ್ಟಿಯಾಗತೊಡಗಿತು. 2004ರಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿಯೂ ಉ.ಕ.ದ ಬೆಂಬಲ ದೊಡ್ಡದಿತ್ತು. ಮುಂದೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಬಿಎಸ್​ವೈ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದರು. ಮುಂಗಡಪತ್ರದಲ್ಲಿ ಅನುದಾನ ಮೀಸಲಿಟ್ಟಿಲ್ಲವಾದರೂ ಕಾಳಜಿ ವಹಿಸಿ ಕಳಸಾ-ಬಂಡೂರಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ, ಧಾರಾಳವಾಗಿ ಹಣ ಒದಗಿಸಿದರು! ಬೆಳಗಾವಿ ಸುವರ್ಣ ಸೌಧಕ್ಕೆ ಹಣ ಒದಗಿಸಿದವರೂ ಅವರೇ. 2008ರಲ್ಲಿ ಉತ್ತರ ಕರ್ನಾಟಕ ಕೇಸರಿಮಯವಾಯಿತು. ಬಿಎಸ್​ವೈ ಮುಖ್ಯಮಂತ್ರಿಯಾದಾಗ ಈ ಭಾಗದ ನೀರಾವರಿ ಯೋಜನೆಗಳು, ಮಠ-ಮಂದಿರಗಳು, ಬಹುಕಾಲದ ಬೇಡಿಕೆಯ ಕಾಮಗಾರಿಗಳಿಗೆ ಕೈ ಬಿಚ್ಚಿ ಹಣ ನೀಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೂರು ಕೋಟಿ ರೂ. ಪ್ಯಾಕೇಜ್ ಘೊಷಣೆ ಮಾಡಿದರು. 2009ರ ಭಾರಿ ನೆರೆಹಾವಳಿ ಉ.ಕ.ವನ್ನು ತಲ್ಲಣಗೊಳಿಸಿತ್ತು. ಆಗ ದಾನಿಗಳ ನೆರವನ್ನೂ ಪಡೆದು, ಹಾನಿಗೀಡಾದ ಇಡೀ ಗ್ರಾಮಗಳನ್ನೇ ಶಾಶ್ವತವಾಗಿ ಸ್ಥಳಾಂತರಿಸಿದ್ದು ಸೇರಿ ಅನೇಕ ದೃಢ ನಿರ್ಧಾರಗಳು ಯಡಿಯೂರಪ್ಪ ಕಾಳಜಿಯನ್ನು ಮತ್ತೆ ಮತ್ತೆ ಸಾಬೀತುಪಡಿಸಿದವು.
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಸಮ್ಮಿಶ್ರ ಸರ್ಕಾರ ಇದ್ದಾಗಲೂ ಗಡಿ ತಂಟೆಯಂಥ ವಿಷಯದಲ್ಲಿ ಯಾರ ಮುಲಾಜಿಗೂ ಒಳಗಾಗದೇ ಗಟ್ಟಿ ನಿಲುವು ತಳೆದದ್ದು, ವಿಶ್ವ ಕನ್ನಡ ಸಮ್ಮೇಳನವನ್ನು ಬೆಳಗಾವಿಯಲ್ಲೇ ಯಶಸ್ವಿಯಾಗಿ ನಡೆಸಿದ್ದು ಸೇರಿ ಅನೇಕ ಸಂದರ್ಭದಲ್ಲಿ ತೋರ್ಪಡಿಸಿದ ಕಾಳಜಿಯೂ ಈ ಭಾಗದಲ್ಲಿ ಅವರ ಜನಪ್ರಿಯತೆ ಹೆಚ್ಚಲು ಕಾರಣವಾಯಿತು. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ಯಡಿಯೂರಪ್ಪ ಅವರೇ ಸಿಎಂ ಆಗಿರುವುದರಿಂದ ಸಹಜವಾಗಿ ಉ.ಕ.ದ ಜನರ ನಿರೀಕ್ಷೆ ಹೆಚ್ಚಿವೆ.
ಅ.ಭಾ. ವೀರಶೈವ ಮಹಾಸಭಾ ಸಂಸ್ಥಾಪಕರಲ್ಲಿ ನಾನೂ ಒಬ್ಬ. ಸಮುದಾಯ ಸಂಘಟನೆ ಮಾಡಿದ್ದ ಜನತಾ ಪರಿವಾರದಲ್ಲಿ ನಾನಿದ್ದೆ. ನನ್ನನ್ನು ಬಿಜೆಪಿಗೆ ಕರೆತಂದವರೇ ಯಡಿಯೂರಪ್ಪನವರು. ಈ ಭಾಗದಲ್ಲಿ ಆಗ ಬಿಜೆಪಿ ಗಟ್ಟಿಯಾಗಿರಲಿಲ್ಲ. ಬಿಎಸ್​ವೈ ಮೇಲಿಂದ ಮೇಲೆ ಭೇಟಿ ನೀಡುವವರು. ನನಗೆ ಹಳೇ ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನ ಕೊಟ್ಟರು. ರಾಜ್ಯ ಉಪಾಧ್ಯಕ್ಷನಾಗಿ ಮಾಡಿದರು. ಆಗ ನಾನು ಸಮುದಾಯ ಸಂಘಟನೆಗಾಗಿ ಇದ್ದ ಸಂಪರ್ಕಗಳನ್ನು ಬಳಸಿಕೊಂಡು ಬಿಜೆಪಿ ಬಲಪಡಿಸಿದೆ. ಮುಂದೆ ಶಾಸಕನೂ ಆದೆ. ಯಡಿಯೂರಪ್ಪ ಅವರಿಗೆ 60 ವರ್ಷ ತುಂಬಿದಾಗ ಧಾರವಾಡದಲ್ಲಿ ದೊಡ್ಡ ಅಭಿನಂದನಾ ಸಮಾರಂಭ ಮಾಡಿಸಿದೆ. ಅವರೊಬ್ಬ ದಣಿವರಿಯದ ಹೋರಾಟಗಾರ, ಛಲಗಾರ, ಸಂಘಟಕ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ, ಅಭಿವೃದ್ಧಿಯ ಕನಸು ನನಸು ಮಾಡಿಕೊಳ್ಳುವ ಶಕ್ತಿ ಇರುವ ಅಪರೂಪದ ನಾಯಕ.
| ಚಂದ್ರಕಾಂತ ಬೆಲ್ಲದ ಮಾಜಿ ಶಾಸಕ, ಧಾರವಾಡ
ಜಿ.ಟಿ.ಹೆಗಡೆ ಹುಬ್ಬಳ್ಳಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − four =
Remember me
