ಬೆಂಗಳೂರು:ಹೆಂಡತಿಯಾದವಳು ಗಂಡನ ಲೈಂಗಿಕ ಗುಲಾಮಳಲ್ಲ. ಪತ್ನಿಯೊಂದಿಗೆ ಪತಿ ನಡೆಸುವ ಬಲವಂತದ ಸಂಭೋಗವೂ ಅತ್ಯಾಚಾರವೆಂದೇ ಪರಿಗಣಿಸಬೇಕಾಗುತ್ತದೆ ಎಂದಿರುವ ಹೈಕೋರ್ಟ್, ‘ಮ್ಯಾರಿಟಲ್ ರೇಪ್’ (ವೈವಾಹಿಕ ಅತ್ಯಾಚಾರ) ಪ್ರಕರಣಗಳಲ್ಲಿ ಪತಿಗೆ ನೀಡುವ ವಿನಾಯಿತಿ ರದ್ದುಪಡಿಸುವ ಬಗ್ಗೆ ಶಾಸಕಾಂಗ ಚಿಂತನೆ ನಡೆಸುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ, ದೌರ್ಜನ್ಯವೆಸಗಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದುಕೋರಿ ಒಡಿಶಾ ಮೂಲದ ಹೃಷಿಕೇಶ್ ಸಾಹೂ (43) ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಮ್ಯಾರಿಟಲ್ ರೇಪ್ ಪ್ರಕರಣಗಳಲ್ಲಿ ಪತಿ ವಿರುದ್ಧ ದಾಖಲಾಗುವ ಅತ್ಯಾಚಾರ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದೆ. ಪತ್ನಿ ದಾಖಲಿಸುವ ಅತ್ಯಾಚಾರ ಪ್ರಕರಣದಲ್ಲಿ ಪತಿಗೆ ವಿನಾಯಿತಿ ಇದೆ ಎಂಬ ಅರ್ಜಿದಾರನ ವಾದವನ್ನು ತಳ್ಳಿ ಹಾಕಿರುವ ಹೈಕೋರ್ಟ್, ಇಂತಹ ಕೃತ್ಯಗಳು ಪತ್ನಿಯ ಮನಸ್ಸು ಮತ್ತು ಮಾನಸಿಕ ಸ್ಥಿತಿಗತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ಹೀನ ಕೃತ್ಯಗಳು ಪತ್ನಿಯ ಆತ್ಮದ ಮೇಲೆ ಅಳಿಸಲಾಗದ ಕಲೆಗಳನ್ನು ಮೂಡಿಸುತ್ತದೆ. ಹೀಗಿರುವಾಗ ವೈವಾಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗಿರುವ ವಿನಾಯಿತಿ ರದ್ದುಪಡಿಸುವುದು ಸೂಕ್ತವೆನಿಸುತ್ತದೆ ಎಂದು 90 ಪುಟಗಳ ತೀರ್ಪಿನಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ದೌರ್ಜನ್ಯಕ್ಕೆ ವಿವಾಹ ಪರ್ವಿುಟ್ ಅಲ್ಲ:ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಅನೇಕ ದೇಶಗಳಲ್ಲಿ ಮ್ಯಾರಿಟಲ್ ರೇಪ್ ಎನ್ನುವುದು ಅಪರಾಧ ಕೃತ್ಯವೆನಿಸಿಕೊಂಡಿದೆ. ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಪತಿ ಸಂಭೋಗಿಸಿದರೆ ಅದನ್ನು ಅತ್ಯಾಚಾರವೆಂದೇ ಪರಿಗಣಿಸಬೇಕಾಗುತ್ತದೆ. ಇಂಗ್ಲೆಂಡ್​ನಲ್ಲೂ ಇಂಥ ಪ್ರಕರಣಗಳಲ್ಲಿ ಪತಿಗಿರುವ ವಿನಾಯಿತಿ ರದ್ದುಪಡಿಸಲಾಗಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆ ಹಾಗೂ ಪತ್ನಿ ನಡುವೆ ತಾರತಮ್ಯ ಸರಿಯಲ್ಲ. ವಿವಾಹ ಎನ್ನುವುದು ಪತ್ನಿಯ ಮೇಲೆ ಪೈಶಾಚಿಕ ದೌರ್ಜನ್ಯವೆಸಗಲು ನೀಡುವ ಅನುಮತಿಯಲ್ಲ ಎಂದಿರುವ ಹೈಕೋರ್ಟ್, ವೈವಾಹಿಕ ಅತ್ಯಾಚಾರಗಳಲ್ಲಿ ಪತಿಗೆ ವಿನಾಯಿತಿ ನೀಡುವ ಕ್ರಮ ಸಂವಿಧಾನದ ಪರಿಚ್ಛೇದ 14ರ ಅಡಿ ನೀಡಲಾಗಿರುವ ಸಮಾನತೆಯ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ತೀರ್ಪಿನಲ್ಲಿ ಹೇಳಿದೆ.
ಮೌನದ ಹಿಂದಿನ ಮಾತು ಆಲಿಸಬೇಕಿದೆ:ಅನಾದಿ ಕಾಲದಿಂದಲೂ ಪುರುಷ, ಮಹಿಳೆಯನ್ನು ಗುಲಾಮಗಿರಿಗೆ ಬಳಸಿಕೊಳ್ಳುತ್ತಾ ಬಂದಿದ್ದಾನೆ. ಮಹಿಳೆಯಿಂದಲೇ ಪುರುಷ ಅಸ್ವಿತ್ವದಲ್ಲಿದ್ದರೂ ಹೆಣ್ಣಿನ ವಿಚಾರದಲ್ಲಿ ಗಂಡು ಒರಟುತನದಿಂದ ವರ್ತಿಸುತ್ತಿದ್ದಾನೆ. ಗಂಡಸರು ತಮ್ಮ ಪತ್ನಿಯರು ಮತ್ತವರ ದೇಹ, ಮನಸ್ಸು, ಆತ್ಮಗಳನ್ನು ಆಳುವವರು ಎಂಬ ಯೋಚನೆ ಹಿಂದಿನಿಂದಲೂ ಬಂದಿದೆ. ಇತ್ತೀಚಿನ ದಿನಗಳಲ್ಲೂ ಇಂತಹ ಪ್ರಕರಣಗಳು ದೇಶದಲ್ಲಿ ಬಹಳ ವೇಗವಾಗಿ ಹೆಚ್ಚುತ್ತಿವೆ. ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗುವುದು ಅತ್ಯಾಚಾರವಲ್ಲದೇ ಬೇರೇನೂ ಅಲ್ಲ. ಆದ್ದರಿಂದ, ಕಾನೂನು ರಚಿಸುವವರು ‘ಮೌನ ಹಿಂದಿನ ಮಾತುಗಳನ್ನು ಕೇಳಬೇಕಿದೆ’ ಎಂದು ಹೈಕೋರ್ಟ್ ಮಾರ್ವಿುಕವಾಗಿ ನುಡಿದಿದೆ.
ಪ್ರಕರಣ ರದ್ದತಿಗೆ ನಕಾರ:ಪತಿಯ ವಾದವನ್ನು ತಳ್ಳಿ ಹಾಕಿರುವ ಹೈಕೋರ್ಟ್, ಪತ್ನಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ. ಪ್ರಕರಣವನ್ನು ವಿಚಾರಣಾ ನ್ಯಾಯಲಯ ನಿರ್ಧರಿಸಬೇಕಿದೆ. ಜತೆಗೆ, ಆರೋಪಿ ಪತಿಯ ವಿರುದ್ಧದ ಕೌಟುಂಬಿಕ ದೌರ್ಜನ್ಯ, ಮಹಿಳೆ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪಗಳು ಪತ್ನಿಯ ದೂರು ಮತ್ತು ಪೊಲೀಸರ ದೋಷಾರೋಪ ಪಟ್ಟಿಯಲ್ಲಿ ಪ್ರಸ್ತಾಪವಾಗಿದ್ದು, ಅವುಗಳನ್ನೂ ವಿಚಾರಣಾ ನ್ಯಾಯಾಲಯ ನಿರ್ಧರಿಸಬೇಕಿದೆ. ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಂಬಂಧವೂ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ಈ ವಿಚಾರವೂ ವಿಚಾರಣಾ ನ್ಯಾಯಾಲಯದಲ್ಲೇ ತೀರ್ವನವಾಗಬೇಕಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಪ್ರಕರಣವೇನು?:ಒಡಿಶಾ ಮೂಲದ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಮದುವೆ ಯಾದಾಗಿನಿಂದಲೂ ಪತಿ ಅಶ್ಲೀಲ ವಿಡಿಯೊಗಳನ್ನು ತೋರಿಸಿ, ಅಸಹಜ ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಿದ್ದ ಎಂದು ಆರೋಪಿಸಿ ಪತ್ನಿ ಬೆಂಗಳೂರು ಪೂರ್ವ ವಲಯದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಒಮ್ಮೆ ಗರ್ಭಪಾತವಾಗಿದ್ದು, ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾಗಲೂ ಪತಿ ಒತ್ತಾಯಪೂರ್ವಕ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಲೈಂಗಿಕ ಗುಲಾಮಳಂತೆ ನಡೆಸಿಕೊಂಡಿದ್ದಲ್ಲದೆ, ಅಪ್ರಾಪ್ತ ಮಗಳ ಮೇಲೂ ಪತಿ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಪತ್ನಿ ದೂರಿನಲ್ಲಿ ಆರೋಪಿಸಿದ್ದರು. ಪೊಲೀಸರು ಆರೋಪಿ ಪತಿಯ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪತಿ ವಿರುದ್ಧದ ಪ್ರಕರಣ ಕೈಬಿಡಲು ವಿಚಾರಣಾ ನ್ಯಾಯಾಲಯ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದ.
ತಂದೆ ಸ್ಫೋಟಕ್ಕೆ ಬಲಿ; ಅರ್ಧ ಸುಟ್ಟು ಸಾವಿನೊಂದಿಗೆ ಸೆಣಸಾಡುತ್ತಿರುವ ಪುತ್ರಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 9 =
Remember me
