ಪಿ.ಕೆ. ರವಿಕುಮಾರ್ಮೈಸೂರು:ರಾಜ್ಯದ ಪರಿಸರ ಪ್ರವಾಸೋದ್ಯಮ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕರ್ನಾಟಕ ಅರಣ್ಯ ಇಲಾಖೆ ಗುಡ್ ನ್ಯೂಸ್ ನೀಡಿದೆ. ಅರಣ್ಯ ಇಲಾಖೆ ಅಧೀನದಲ್ಲಿರುವ ಸಂರಕ್ಷಿತ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳಿಗಾಗಿ ಆಗಮಿಸುವ ಪ್ರವಾಸಿಗರಿಗೆ ವಿಮೆ ಭದ್ರತೆ ಒದಗಿಸಲಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರು, ವನ್ಯಜೀವಿ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬುಧವಾರ ಪತ್ರ ಬರೆದಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶಗಳು, ರಾಷ್ಟ್ರೀಯ ಉದ್ಯಾನವನಗಳು ಹಾಗೂ ಅಭಯಾರಣ್ಯಗಳನ್ನು ಹೊಂದಿರುವ ರಾಜ್ಯದಲ್ಲಿ ಅಗಾಧ ವನ್ಯಜೀವಿ ಸಂಪತ್ತಿದೆ. ಇಲ್ಲಿನ ಪ್ರಕೃತಿ ಸೌಂದರ್ಯವು ಸಂರಕ್ಷಿತ ಪ್ರದೇಶಗಳ ಹೊರಗೂ ಹಬ್ಬಿದ್ದು, ಹಲವಾರು ಸುಂದರ ಗಿರಿಧಾಮಗಳು, ಜಲಪಾತಗಳನ್ನು ಒಳಗೊಂಡಿದೆ. ಆ ಮೂಲಕ ದೇಶದಲ್ಲಿಯೇ ಪರಿಸರ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ರಾಜ್ಯಗಳಲ್ಲಿ ಒಂದಾಗಿದೆ. ಅಲ್ಲದೇ, ಕರಾವಳಿಯೂ ಹಲವಾರು ಸುಪ್ರಸಿದ್ಧ ತಾಣಗಳನ್ನು ಹೊಂದಿದ್ದು, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ.
ಪರಿಸರ ಪ್ರವಾಸೋದ್ಯಮ ಸ್ಥಳಗಳಲ್ಲಿ ಚಾರಣ, ಹಿನ್ನೀರು ಸಫಾರಿ, ಕಯಾಕಿಂಗ್, ಬೋಟಿಂಗ್, ರ್ಯಾಫ್ಟಿಂಗ್ ಸೇರಿದಂತೆ ಹಲವಾರು ಚಟುವಟಿಕೆಗಳನ್ನು ಪ್ರವಾಸಿಗರಿಗೆ ಒದಗಿಸಲಾಗುತ್ತಿದೆ. ಕೆಲವು ಚಟುವಟಿಕೆಗಳ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗುವ ಹಾಗೂ ವನ್ಯಜೀವಿಗಳಿಂದ ದಾಳಿ ಸೇರಿದಂತೆ ಕೆಲವು ಅಪಾಯಗಳು ಇಲ್ಲದಿಲ್ಲ. ಆಕಸ್ಮಿಕವಾಗಿ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. 2009ರಲ್ಲಿ ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ಹಿನ್ನೀರಿನಲ್ಲಿ ಪ್ರವಾಸಿ ಬೋಟ್ ಮುಳುಗಿ ಸಂಭವಿಸಿದ ದುರಂತದಲ್ಲಿ ಹಲವರು ಮೃತಪಟ್ಟಿದ್ದರು. ಹೀಗಾಗಿ, ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಅನಿರೀಕ್ಷಿತ ದುರ್ಘಟನೆ ಸಂಭವಿಸಿದಾಗ ವಿಮೆ ಸೌಲಭ್ಯವನ್ನು ಒದಗಿಸುವ ಮಹತ್ವವನ್ನು ಒತ್ತಿ ಹೇಳುತ್ತವೆ.
ಸುಸ್ಥಿರ ಪ್ರವಾಸೋದ್ಯಮ ವ್ಯವಸ್ಥೆಯನ್ನು ನಿರ್ವಿುಸುವುದು ಹಾಗೂ ಪ್ರವಾಸಿಗರಿಗೆ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಅನುಭವ ಒದಗಿಸುವುದು ಕರ್ನಾಟಕ ಪ್ರವಾಸೋದ್ಯಮ ನೀತಿ -2020-25ರ ಪ್ರಮುಖ ಭಾಗವಾಗಿದೆ. ಆದ್ದರಿಂದ ಪರಿಸರ ಪ್ರವಾಸೋದ್ಯಮ ಸ್ಥಳಗಳಲ್ಲಿ ಪ್ರವಾಸಿಗರಿಗೆ ವಿಮೆ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ವನ್ಯಜೀವಿ ಸಂರಕ್ಷಣಾವಾದಿ ಬೆಳಗಾವಿಯ ಗಿರಿಧರ ಕುಲಕರ್ಣಿ ಅರಣ್ಯ ಇಲಾಖೆ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ ಕಳೆದ ಜನವರಿ ಹಾಗೂ ಮೇ ತಿಂಗಳಿನಲ್ಲಿ ಪತ್ರ ಬರೆದಿದ್ದರು.
ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆ (ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್) ಈಗಾಗಲೇ ತನ್ನ ಅಧೀನದಲ್ಲಿರುವ ಘಟಕಗಳಲ್ಲಿ ವಿಮಾ ಸೌಲಭ್ಯ ಒದಗಿಸುತ್ತಿದ್ದು, ಇದೇ ಮಾದರಿಯಲ್ಲಿ ಅರಣ್ಯ ಇಲಾಖೆಯ ಅಧೀನದಲ್ಲಿರುವ ಪ್ರವಾಸಿ ಸ್ಥಳಗಳಲ್ಲೂ ವಿಮಾ ಯೋಜನೆ ಅನುಷ್ಠಾನ ಮಾಡಬಹುದೆಂದು ಗಿರಿಧರ ಇಲಾಖೆಯ ಗಮನ ಸೆಳೆದಿದ್ದರು. ಹೀಗಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಪರವಾಗಿ ವನ್ಯಜೀವಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರು, ವನ್ಯಜೀವಿ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಿಮೆ ಯೋಜನೆ ಬಗ್ಗೆ ಸೂಚನೆ ನೀಡಿದ್ದಾರೆ.
ಪರಿಸರ ಪ್ರವಾಸೋದ್ಯಮ ಸ್ಥಳಗಳಲ್ಲಿ ಪ್ರವಾಸಿಗರಿಗೆ ವಿಮೆ ಸೌಲಭ್ಯ ಒದಗಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದೆ. ನನ್ನ ಮನವಿಯನ್ನು ಅರಣ್ಯ ಇಲಾಖೆ ಪರಿಗಣಿಸಿರುವುದು ಸಂತಸ ತಂದಿದ್ದು, ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಮೆ ಭದ್ರತೆಯು ಪ್ರವಾಸಿಗರಿಗೆ ಸುರಕ್ಷಿತ ಮತ್ತು ಗುಣಮಟ್ಟದ ಅನುಭವ ಒದಗಿಸುವಲ್ಲಿ ಸಹಕಾರಿಯಾಗಲಿದೆ.| ಗಿರಿಧರ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 17 =
Remember me
