ಶ್ರೀಕಾಂತ್ ಶೇಷಾದ್ರಿ ಬೆಂಗಳೂರುವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದ ಗ್ಯಾರಂಟಿ ಯೋಜನೆಗಳು ಪ್ರತಿನಿತ್ಯ ಸಾರ್ವಜನಿಕ ವಲಯದಲ್ಲಿ ಬಹು ರ್ಚಚಿತ ವಿಷಯ. ಗ್ಯಾರಂಟಿ ಅನು ಷ್ಠಾನವನ್ನು ರಾಷ್ಟ್ರೀಯ ಚುನಾವಣೆ ವಿಷಯವಾಗಿ ಮಾಡಲು ಕಾಂಗ್ರೆಸ್ ಬಯಸಿದೆ.
‘ಭದ್ರತೆಯ ಖಾತರಿ ಕೊಡದ ಆರ್ಥಿಕ ಯೋಜನೆಯಿಂದ ಯಾವ ಉಪಯೋಗವೂ ಇಲ್ಲ. ಯೋಜನೆ ಒಪ್ಪಿತವಾಗಬೇಕಾದರೆ, ಅದು ಮಿತವ್ಯಯದ್ದು ಮತ್ತು ಸುಭದ್ರವೂ ಆಗಿರಬೇಕು. ಅದು ಮಿತವ್ಯಯದ್ದು ಆಗಿರದಿದ್ದರೆ, ಬಹುಶಃ ನಡೆದೀತು. ಆದರೆ, ಸುಭದ್ರವಾಗಿಲ್ಲದಿದ್ದರೆ ಖಂಡಿತ ನಡೆಯುವುದಿಲ್ಲ’ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಯನ್ನು ಪ್ರಸ್ತಾಪಿಸಿಯೇ ಗ್ಯಾರಂಟಿ ಯೋಜನೆ ಪ್ರಕಟಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಹಂತದವರೆಗೂ ಚ್ಯುತಿ ಬಾರದಂತೆ ಮುನ್ನಡೆಸಿದ್ದಾರೆ.
ರಾಜ್ಯದ ಮಟ್ಟಿಗೆ ಹೇಳುವುದಾದರೆ ಯೋಜನೆ ಲಾಭ ಪಡೆದವರ ಬಾಯಲ್ಲಿ ಸಮಾಧಾನದ ಮಾತು ಕೇಳಿಬಂದರೆ, ಇನ್ನೂ ಫಲಾನುಭವಿ ಎನಿಸಿಕೊಳ್ಳದವರು ಅವಕಾಶಕ್ಕಾಗಿ ಪರದಾಡುತ್ತ ಬೆನ್ನುಬಿದ್ದಿದ್ದಾರೆ. 2 ಸಾವಿರ ಭಾಗ್ಯಲಕ್ಷ್ಮಿ ನೆರವಿಗಾಗಿ ಸೂರದ, ಬೀದರ್, ಕಲಬುರಗಿ, ರಾಯಚೂರಿನಿಂದ ಬೆಂಗಳೂರಿಗೆ ಅರಸಿ ಬಂದವರೂ ಇದ್ದಾರೆ.
ಅಂದಹಾಗೆ ಈ ಗ್ಯಾರಂಟಿ ಯೋಜನೆ ಬಜೆಟ್​ನ ಮೇಲೆ ಗಾಢ ಪರಿಣಾಮ ಬೀರುವ ವಿಚಾರ. 2023-24ನೇ ಸಾಲಿನ ಬಜೆಟ್​ನಲ್ಲಿ (ಜುಲೈನಲ್ಲಿ ಮಂಡಿಸಿದ) ಗ್ಯಾರಂಟಿ ದೊಡ್ಡ ಪಾಲು ಪಡೆದುಕೊಂಡಿತ್ತು. ಅನುಷ್ಠಾನ ಸಾಧ್ಯವೇ ಎಂಬ ಪ್ರಶ್ನೆಗಳ ನಡುವೆ ಒಟ್ಟಾರೆ ಐದು ಗ್ಯಾರಂಟಿ ಯೋಜನೆಗಳಿಗೆ 35-40 ಸಾವಿರ ಕೋಟಿ ರೂ.ನಷ್ಟು ಖರ್ಚು ಮಾಡಿ ಸದ್ಯಕ್ಕಂತೂ, ‘ನಾವು ನುಡಿದಂತೆ ನಡೆದಿದ್ದೇವೆ’ ಎಂದು ಸಿದ್ದರಾಮಯ್ಯ ಎದೆತಟ್ಟಿ ಹೇಳುವ ಪರಿಸ್ಥಿತಿ ಇದೆ.
ಜನರಲ್ಲಿ ಸಮಾಧಾನ:ಗ್ಯಾರಂಟಿ ಅನುಷ್ಠಾನದ ಬಗ್ಗೆ ಪ್ರಧಾನಿ ಆದಿಯಾಗಿ ವಿಪಕ್ಷದ ನಾಯಕರೆಲ್ಲ ನಕಾರಾತ್ಮಕವಾಗಿಯೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದು ಆರ್ಥಿಕ ಪರಿಸ್ಥಿತಿಯನ್ನು ಹಾಳುಗೆಡವುತ್ತದೆ ಎಂದು ಟೀಕಿಸಿದ್ದರು. ಅಂದಹಾಗೆ ಈ ಗ್ಯಾರಂಟಿಗೆ ಹೊಸ ಷರತ್ತುಗಳು ಬರುತ್ತವೆ, ಫಲಾನುಭವಿಗಳ ಸಂಖ್ಯೆ ತಗ್ಗುತ್ತದೆ. ಯೋಜನೆಗಳೇ ನಿಲ್ಲುತ್ತವೆ ಎಂಬ ಚರ್ಚೆ ಇದೆ. ಆದರೂ, ಯೋಜನೆ ಲಾಭ ಮಾತ್ರ ನೇರವಾಗಿ ಮನೆಮನೆಗಳಿಗೆ ತಲುಪಿವೆ. ಜನರು ಅನುಭವಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ವಿದ್ಯುತ್ ಬಿಲ್​ನಲ್ಲಿ ಒಂದು ಸಾವಿರ ರೂ.ವರೆಗೆ, ಗೃಹಲಕ್ಷಿ ್ಮ ಯೋಜನೆಯಲ್ಲಿ 2000 ರೂ., ಶಕ್ತಿ ಯೋಜನೆಯಲ್ಲಿ 2-3 ಸಾವಿರ ರೂ.ವರೆಗೆ ಹಣ ಉಳಿಯುತ್ತದೆ. ಐದು ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಸುಮಾರು 4-5 ಸಾವಿರ ಪ್ರತಿ ತಿಂಗಳು ಉಳಿತಾಯವಾಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ.
ತೆರಿಗೆ ಬಾರದ ಕಡೆ ಹಣ:ಗ್ಯಾರಂಟಿಗಳಿಂದ ಜನರ ಕೈಗೆ ನೇರವಾಗಿ ಹಣ ಹೋಗಿದೆ ಆದರೆ, ಸಾಮಾನ್ಯ ಜನರು ತರಕಾರಿ ಅಂಗಡಿ, ಪೆಟ್ಟಿಗೆ ಅಂಗಡಿ, ತಮ್ಮ ಮನೆ ಸುತ್ತಮುತ್ತಲಿನ ಸಣ್ಣಪುಟ್ಟ ಅಂಗಡಿಯಲ್ಲಿ ಖರೀದಿ, ವ್ಯವಹಾರ ನಡೆಸುವುದರಿಂದ ಅಲ್ಲಿಂದ ದೊಡ್ಡ ಪ್ರಮಾಣದಲ್ಲಿ ಸರ್ಕಾರಕ್ಕೆ ತೆರಿಗೆ ಸಂಗ್ರಹ ಬರಲ್ಲ. ಅಲ್ಲಿ ಮಾರಾಟವಾಗುವ ವಸ್ತುವಿನ ತೆರಿಗೆ ಕಡಿಮೆ ಸ್ಲ್ಯಾಬ್​ನದ್ದಾಗಿರುತ್ತದೆ ಅಥವಾ ತೆರಿಗೆ ವ್ಯಾಪ್ತಿಗೆ ಬರದ ಪದಾರ್ಥಗಳೇ ಆಗಿರುತ್ತವೆ. ಸಾಮಾನ್ಯವಾಗಿ ಐಷಾರಾಮಿ ವಸ್ತುವಿನ ಮಾರಾಟದಿಂದ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ಬರುವುದು. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಗ್ಯಾರಂಟಿ ಭಾರವೇ ಸರಿ ಎಂಬುದು ಹಣಕಾಸು ಇಲಾಖೆ ಅಧಿಕಾರಿಗಳ ನಿಷ್ಠುರ ಅಭಿಪ್ರಾಯ.
ಸರ್ಕಾರಕ್ಕೆ ಹೆಗ್ಗಳಿಕೆ:ಶಕ್ತಿ ಯೋಜನೆ-ಮಹಿಳೆಯರಿಗೆ ಉಚಿತ ಪ್ರಯಾಣವನ್ನು 2023 ಜೂನ್ 11ರಂದು ಜಾರಿಗೊಳಿಸಲಾಗಿದೆ. ರಾಜ್ಯದ 3.5 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಅವಕಾಶವಿದೆ. ಈ ಯೋಜನೆ ಪ್ರಾರಂಭವಾದಂದಿನಿಂದ ಮಹಿಳಾ ಪ್ರಯಾಣಿಕರು ಇಲ್ಲಿಯವರೆಗೆ 150.17 ಕೋಟಿ (ಟ್ರಿಪ್) ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ 3584 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅನ್ನಭಾಗ್ಯ ವಿಚಾರಕ್ಕೆ ಬಂದರೆ, ಕೇಂದ್ರ ಸರ್ಕಾರ ನೀಡುವ 5 ಕಿಲೋ ಆಹಾರಧಾನ್ಯದೊಂದಿಗೆ ಹೆಚ್ಚುವರಿಯಾಗಿ 5 ಕಿಲೋ ಆಹಾರಧಾನ್ಯವನ್ನು ಸೇರಿಸಿ ಪ್ರತಿ ಫಲಾನುಭವಿಗೆ 10 ಕಿಲೋ ಆಹಾರಧಾನ್ಯವನ್ನು ವಿತರಿಸಲು ರಾಜ್ಯ ಸರ್ಕಾರವು ಮುಂದಾಗಿತ್ತು. ಅಕ್ಕಿ ಬೆಲೆ ದುಬಾರಿಯಾಗಿದ್ದರಿಂದ ಅರ್ಹ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಹೆಚ್ಚುವರಿ 5 ಕೆಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿಗೆ 34 ರೂ.ನಂತೆ ಕುಟುಂಬದ ಸದಸ್ಯರುಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತಿದೆ. ಜುಲೈನಿಂದ ಜನವರಿ ಅಂತ್ಯಕ್ಕೆ ಒಟ್ಟು 4595 ಕೋಟಿ ರೂ.ಗಳನ್ನು ಅರ್ಹ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. ಗೃಹಜ್ಯೋತಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, 2023ರ ಜುಲೈ 1ರಿಂದ ಜಾರಿಗೆ ಬಂದಿದೆ. ನಾಡಿನ 1.50 ಕೋಟಿ ಗ್ರಾಹಕರು ಯೋಜನೆಯ ಸದುಪಯೋಗ ಪಡೆಯುತ್ತಿದ್ದು, ಸರ್ಕಾರ ಪ್ರತಿ ತಿಂಗಳೂ ಮುಂಗಡವಾಗಿ ಎಲ್ಲ ಎಸ್ಕಾಂಗಳಿಗೆ 700 ಕೋಟಿ ರೂ. ಸಹಾಯಧನ ಬಿಡುಗಡೆ ಮಾಡುತ್ತಿದೆ.
ಅರ್ಹ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯಡಿ 1.12 ಕೋಟಿ ಮಹಿಳಾ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಈವರೆಗೆ 11037 ಕೋಟಿ ರೂ. ವರ್ಗಾಯಿಸಲಾಗಿದೆ. ಯುವನಿಧಿ ಯೋಜನೆಯಡಿ 2022-23 ಸಾಲಿನಲ್ಲಿ ಉತ್ತೀರ್ಣರಾದ ಪದವೀಧರರು ಮತ್ತು ಡಿಪ್ಲೊಮಾ ಕೋರ್ಸ್ ಪೂರೈಸಿದ ಬಳಿಕ 180 ದಿನಗಳು ಪೂರ್ಣಗೊಂಡರೂ ಉದ್ಯೋಗವನ್ನು ಪಡೆಯದೆ ಇದ್ದರೆ ಕ್ರಮವಾಗಿ ಮಾಸಿಕ 3000 ರೂ. ಮತ್ತು 1500 ರೂ. ನಿರುದ್ಯೋಗ ಭತ್ಯೆಯನ್ನು ಎರಡು ವರ್ಷದ ಅವಧಿಗೆ ಅಥವಾ ಎರಡು ವರ್ಷದೊಳಗೆ ಉದ್ಯೋಗ ಪಡೆಯುವವರೆಗೆ ಪಾವತಿಸಲು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಯೋಜನೆ ಅನುಷ್ಠಾನ ಪ್ರಗತಿಯಲ್ಲಿದೆ.
ದೂರಗಾಮಿ ಆತಂಕ:ಐದು ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷದಲ್ಲಿ 52-56 ಸಾವಿರ ಕೋಟಿ ರೂ. ಬೇಕಾಗಬಹುದು ಎಂಬುದು ಆರಂಭಿಕ ಅಂದಾಜು. ಪ್ರಸ್ತುತ ಆರ್ಥಿಕ ವರ್ಷದ ಕೊನೆಯಲ್ಲಿದ್ದು, 40 ಸಾವಿರ ಕೋಟಿ ರೂ.ವರೆಗೂ ವೆಚ್ಚ ಮಾಡಲು ಅನುದಾನ ಒದಗಿಸಿಕೊಂಡಿದೆ. ಇದರ ಪರಿಣಾಮ ಇತರ ಅಭಿವೃದ್ಧಿ ಚಟುವಟಿಕೆಗಳಿಗೆ, ವಿಶೇಷ ಅನುದಾನಗಳಿಗೆ ಹಿನ್ನಡೆಯಾಗಿದೆ. ಇದನ್ನು ಸಿದ್ದರಾಮಯ್ಯ ಸಂಪುಟದ ಸಚಿವರೂ ನಿರ್ದಾಕ್ಷಿಣ್ಯವಾಗಿ ಒಪ್ಪಿಕೊಳ್ಳುತ್ತಾರೆ. ಆಡಳಿತ ಪಕ್ಷದ ಶಾಸಕರಿಗೇ ಇದರ ಪರಿಣಾಮ ನೇರವಾಗಿ ತಟ್ಟಿದೆ. ರಾಜಕೀಯ ಲೆಕ್ಕಾಚಾರದಲ್ಲಿ ಗ್ಯಾರಂಟಿ ಯೋಜನೆ ಸಿದ್ದರಾಮಯ್ಯ ಹಾಗೂ ಸರ್ಕಾರದ ಕ್ರೆಡಿಟ್ ಹೆಚ್ಚಿಸಿದೆ. ಇನ್ನೊಂದೆಡೆ ಕ್ಷೇತ್ರದಲ್ಲಿ ಯಾವುದೇ ಕೆಲಸವಾಗದೆ ಆಡಳಿತ ಪಕ್ಷದ ಶಾಸಕರು ಜನರ ಸಿಟ್ಟನ್ನು ಎದುರಿಸಿ ಮುಗುಮ್ಮಾಗಿದ್ದಾರೆ.
ಮುಂದಿನ ದಿನಗಳಲ್ಲಿ ಈ ಗ್ಯಾರಂಟಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕ ಹಣಕಾಸು ಇಲಾಖೆಯಲ್ಲಿದೆ. 2024-25ನೇ ಸಾಲಿನಲ್ಲೇ ವೇತನ ಆಯೋಗ ಜಾರಿ ಮೂಲಕ ಸರ್ಕಾರಿ ನೌಕರರ ವೇತನ ಹೆಚ್ಚಿಸಬೇಕು, ಅದರ ಬಾಬ್ತು ವಾರ್ಷಿಕ 12 ಸಾವಿರ ಕೋಟಿ ರೂ. ಬೇಕಾಗಬಹುದು. ಇನ್ನೊಂದೆಡೆ ಕೃಷಿ ಪಂಪ್​ಸೆಟ್​ಗೆ ಉಚಿತ ವಿದ್ಯುತ್ ನೀಡುವುದರ ಹೊರೆ ವಿಪರೀತ ಹೆಚ್ಚಾಗಿದೆ. ಅದನ್ನೂ ತೂಗಿಸಬೇಕು. ಇಷ್ಟೇ ಅಲ್ಲದೆ, ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ ಗ್ಯಾರಂಟಿ ಹೊರತುಪಡಿಸಿ ಇತರ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು. ಇನ್ನೊಂದು ದೊಡ್ಡ ಸಂಗತಿ ಎಂದರೆ ಮೂಲಸೌಕರ್ಯ ಅಥವಾ ಮುಂದುವರಿದ ಯೋಜನೆ ಹಾಗೂ ಹಿಂದಿನ ಸರ್ಕಾರದ ಅವಧಿಯಲ್ಲಿ ಒಪ್ಪಿಗೆ ನೀಡಿ ಮುಗಿದಿರುವ ಕಾಮಗಾರಿಗಳ ಬಾಕಿಯನ್ನು ತೀರಿಸಬೇಕು. ಹೀಗಾಗಿ ಗ್ಯಾರಂಟಿ ಅನುಷ್ಠಾನ ಹಣಕಾಸು ಇಲಾಖೆ ಪಾಲಿಗಂತೂ ಹುಲ್ಲಿನ ಹಾಸಿಗೆಯೇನಲ್ಲ.
ಈಗಿನ ಪರಿಸ್ಥಿತಿಯಲ್ಲಿ ಆರ್ಥಿಕ ತಜ್ಞ ಜೆಎಂ ಕೀನ್ಸ್ ಅವರ ಸಾರ್ವತ್ರಿಕ ಮೀಮಾಂಸೆ ಮತ್ತು ಅಗ್ಗದ ಹಣಕಾಸು ನೀತಿ ಪ್ರಚಲಿತವಾಗಿದೆ. ಬಡವರಿಗೆ ಬೆಂಬಲವಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಿ ಆರ್ಥಿಕ ಸಮತೋಲನ ತರುವ ಪ್ರಯತ್ನ ಮಾಡಲಾಗಿದೆ. ಗ್ಯಾರಂಟಿ ಯೋಜನೆ ಎಂದರೆ ಕಡ್ಡಾಯವಾಗಿ ನೆರವು ನೀಡುವ ಭರವಸೆ ಈಗ ಅನುಷ್ಠಾನವಾಗುತ್ತಿದೆ. ರಾಜ್ಯದ ಜತೆ ಕೇಂದ್ರವೂ ಇದೇ ಮಾದರಿಯಲ್ಲಿ ಅನುಷ್ಠಾನ ಮಾಡಬೇಕು. ಅದೇ ರೀತಿ ರಾಜ್ಯ ಸರ್ಕಾರವು ಬೊಕ್ಕಸವನ್ನು ಭರ್ತಿ ಮಾಡಲು ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು, ತೆರಿಗೆ ಕೊಡಲು ಸಾಮರ್ಥ್ಯ ಇರವವರಿಗೆ ಕೊಂಚ ಹೆಚ್ಚು ತೆರಿಗೆ ಹಾಕಿ, ತೆರಿಗೆಯೇತರ ಆದಾಯ ವೃದ್ಧಿ ಮಾಡಿಕೊಳ್ಳಬೇಕು.
| ಪ್ರೊ.ಕೃಷ್ಣೇಗೌಡ ಆರ್ಥಿಕ ತಜ್ಞರು
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 5 =
Remember me
