ಗದಗ:ಜಿಲ್ಲಾ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ ಮಿತಿಮೀರಿದೆ. ಗುಂಪುಗಾರಿಕೆ, ಸ್ವಪ್ರತಿಷ್ಠೆ, ಸ್ವಜನಪಕ್ಷಪಾತದಿಂದ ಪಕ್ಷದೊಳಗೆ ಅಸಮಾಧಾನ ಹೆಚ್ಚಾಗತೊಡಗಿದೆ. ಪಕ್ಷದ ಸೂತ್ರ ಹಿಡಿದವರು ಆನೆ ನಡೆದಿದ್ದೆ ದಾರಿ ಎಂದು ವರ್ತಿಸಿ ಮನಸ್ಸಿಗೆ ಬಂದಂತೆ ಆದೇಶ ಹೊರಡಿಸಿ ಪಕ್ಷಕ್ಕೆ ತೀವ್ರ ಹಾನಿ ಉಂಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಜಿಲ್ಲಾ ಬಿಜೆಪಿಯಲ್ಲಿ ಸಚಿವ ಸಿ.ಸಿ. ಪಾಟೀಲ ಅವರೊಂದಿಗೆ ಗುರುತಿಸಿಕೊಂಡಿರುವವರ ಗುಂಪು, ಸಚಿವ ಶ್ರೀರಾಮುಲು ಅವರ ಬೆಂಬಲಿಗರ ಗುಂಪು, ಪಕ್ಷದ ನಿಷ್ಠಾವಂತರ ಗುಂಪು, ಸಂಘ ಪರಿವಾರದ ಮೂಲಕ ಪಕ್ಷದಲ್ಲಿ ಗುರುತಿಸಿಕೊಂಡಿರುವವರ ಗುಂಪು… ಹೀಗೆ ಹಲವಾರು ಗುಂಪುಗಳು ಚಾಲ್ತಿಯಲ್ಲಿವೆ.
ಇತ್ತೀಚೆಗೆ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಂತಹ ಆರೋಪಗಳಿಗೆ ಪುಷ್ಟಿ ನೀಡುತ್ತಿವೆ. ನಗರದ ಶ್ರೀನಿವಾಸ ಗಾರ್ಡನ್​ನಲ್ಲಿ ಆಯೋಜನೆಯಗಿದ್ದ ಜನ್ಮ ದಿನಾಚರಣೆ ಕಾರ್ಯಕ್ರಮ, ಆನಂತರದ ವಿದ್ಯಮಾನಗಳಿಂದ ಪಕ್ಷದಲ್ಲಿ ಮತ್ತಷ್ಟು ಗೋಜಲು ಉಂಟಾಗಿದೆ. ಕೋವಿಡ್-19 ಸಮಯದಲ್ಲಿ ಜನ್ಮ ದಿನ ಆಚರಣೆ ಮಾಡಿಕೊಳ್ಳುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ. ಇದರಿಂದ ಪಕ್ಷಕ್ಕೆ ಮುಜುಗರವಾಗಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಅವರು ಕಾರ್ಯಕರ್ತ ಎಚ್.ಎಸ್.ಶಿವನಗೌಡರ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದರಿಂದ ಅಸಮಾಧಾನ ಮತ್ತಷ್ಟು ತೀವ್ರಗೊಂಡಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ತೆಗೆದುಕೊಂಡಿರುವ ಅಮಾನತು ಕ್ರಮವನ್ನು ಶಿವನಗೌಡ ಬಹಿರಂಗವಾಗಿ ಪ್ರಶ್ನಿಸಿದ್ದಲ್ಲದೆ, ‘ಬರ್ತಡೇ ಪಾರ್ಟಿ ನನ್ನದಲ್ಲ. ಸ್ನೇಹಿತರ ಪಾರ್ಟಿಗೆ ನಾನು ಹೋಗಿ ಶುಭ ಹಾರೈಸಿ ಊಟವನ್ನು ಮಾಡದೇ ಬಂದಿದ್ದೇನೆ. ಹೀಗಿದ್ದರೂ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಅವರು ವಿಚಾರಣೆ ನಡೆಸದೆ, ಸೌಜನ್ಯಕ್ಕೂ ಕರೆ ಮಾಡಿ ಮಾತನಾಡದೆ, ನೋಟಿಸ್ ನೀಡದೆ ಮಾಧ್ಯಮಗಳಲ್ಲಿ ಪ್ರಸಾರಗೊಂಡಿರುವ ವರದಿಗಳನ್ನು ಆಧಾರವಾಗಿಟ್ಟುಕೊಂಡು ಅಮಾನತು ಮಾಡಿರುವ ಕ್ರಮ ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದೊಳಗೆ ಗದ್ದಲ ಶುರುವಾಗಿದ್ದು, ಶ್ರೀರಾಮುಲು ಅವರ ಬೆಂಬಲಿಗರನ್ನು ಉದ್ದೇಶ ಪೂರ್ವಕವಾಗಿ ಮೂಲೆ ಗುಂಪು ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಚಿವ ಶ್ರೀರಾಮುಲು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಹಿಂದೆ ಯಾರೆಲ್ಲ ಇದ್ದರು ಎಂಬುದನ್ನು ಗುರುತಿಸಿ ಸಮಯಕ್ಕೆ ಕಾದು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರ ಓಲೈಕೆಗಾಗಿ ಇಂತಹ ಅವೈಜ್ಞಾನಿಕ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ ಎಂಬುದು ಕಾರ್ಯಕರ್ತರಿಗೆ ಅರ್ಥವಾಗಿದೆ. ಜಿಲ್ಲೆಯಲ್ಲಿ ಸಚಿವ ಶ್ರೀರಾಮುಲು ಹೊಂದಿರುವ ಜನಪ್ರಿಯತೆ ಕುಗ್ಗಿಸುವ ಕೆಲಸಗಳ ಪೈಕಿ ಇದು ಒಂದಾಗಿದೆ ಎಂದು ಕೆಲ ಬಿಜೆಪಿ ಮುಖಂಡರು ಬಹಿರಂಗವಾಗಿ ಆರೋಪಿಸುತ್ತಿದ್ದಾರೆ.
ತಪ್ಪು ಯಾರೇ ಮಾಡಿದರೂ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಮುಲಾಜು ಇಟ್ಟುಕೊಳ್ಳುವುದು ಬೇಡ. ಶಿವನಗೌಡ ತಪು್ಪ ಮಾಡಿದ್ದರೆ ಅಮಾನತು ಮಾಡಿದ್ದು ಸರಿ. ಪಕ್ಷದೊಳಗಿದ್ದು ತಪು್ಪಮಾಡಿದ ಎಲ್ಲರಿಗೂ ಅನ್ವಯಿಸಬೇಕು. ಕಳೆದ ಒಂದು ವರ್ಷದಿಂದ ಪಕ್ಷದೊಳಗೆ ಏನೆಲ್ಲ ಬಾನಗಡಿ ನಡೆದವು ಎಂಬುದು ಜಗಜ್ಜಾಹೀರು ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹರಿದಾಡಿದವು. ಬಿಜೆಪಿ ಮುಖಂಡರು ಭ್ರಷ್ಟಾಚಾರ ನಡೆಸಿದ್ದಾರೆ. 35 ಇಲಾಖೆಯಲ್ಲೂ ಹಣ ವಸೂಲಿ ಮಾಡುತ್ತಾರೆ ಎಂದು ಕಾರ್ಯಕರ್ತರೊಬ್ಬರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದು ಸಾರ್ವಜನಿಕವಾಗಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ಪಕ್ಷದ ಕಚೇರಿಯಲ್ಲಿ ಏನೆಲ್ಲ ಅವಾಂತರಗಳು ನಡೆಯುತ್ತಿವೆ ಎಂಬುದು ಜಿಲ್ಲಾಧ್ಯಕ್ಷರಿಗೆ ಗೊತ್ತಿಲ್ಲವೇ? ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುವುದಿಲ್ಲವೇ? ಮುಖಂಡರಿಗೆ ಮುಜುಗರ ಆಗಲಿಲ್ಲವೇ? ಹಾಗಂತ ಶಿವನಗೌಡರ ಪರವಾಗಿ ಮಾತನಾಡುತ್ತಿದ್ದೇವೆ ಎಂದರ್ಥವಲ್ಲ. ತಪು್ಪ ಮಾಡಿದವರೆಲ್ಲರಿಗೂ ಶಿಕ್ಷೆ ಆಗಬೇಕು ಎಂದು ಅನೇಕ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
ಪಕ್ಷದ ಪದಾಧಿಕಾರಿಗಳ ನೇಮಕ ವಿಷಯದಲ್ಲೂ ಶ್ರೀರಾಮುಲು ಬಳಗದಲ್ಲಿ ಗುರುತಿಸಿಕೊಂಡಿರುವ ಮುಖಂಡರು, ಕಾರ್ಯಕರ್ತರನ್ನು ದೂರ ಇಡಲಾಯಿತು. ಪಕ್ಷದ ಬೆಳವಣಿಗೆಗೆ ಕಳೆದ 20-30 ವರ್ಷದಿಂದ ಶ್ರಮಿಸಿದರೂ ಪಕ್ಷದೊಳಗೆ ಕವಡೆ ಕಿಮ್ಮತ್ತು ಸಿಗುತ್ತಿಲ್ಲ. ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ ಎಂದು ಅನೇಕ ಬಿಜೆಪಿ ಮುಖಂಡರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಸಚಿವ ಸಿ.ಸಿ.ಪಾಟೀಲ, ಶಾಸಕ ಕಳಕಪ್ಪ ಬಂಡಿ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರು ಎನ್ನುವ ಕಾರ್ಯಕರ್ತರು, ಈಗ ಅವರುಗಳೂ ಒಂದೊಂದು ಗುಂಪು ಕಟ್ಟಿಕೊಂಡಿದ್ದಾರೆ ಎಂದೂ ದೂರುತ್ತಾರೆ.
ಬೈಯುವ ಸಚಿವರು
ಸಚಿವ ಸಿ.ಸಿ.ಪಾಟೀಲ ಪಕ್ಷದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಕೆಲಸ ಕಾರ್ಯಗಳ ಸಲುವಾಗಿ ತಮ್ಮನ್ನು ಭೇಟಿ ಮಾಡಲು ಬಂದ ಕಾರ್ಯಕರ್ತರಿಗೆ ಮುಖ ಮೋತಿ ನೋಡದೇ ಬೈದು ವಾಪಸ್ ಕಳಿಸುತ್ತಾರೆ ಎಂದು ಪ್ರಮುಖ ಬಿಜೆಪಿ ಕಾರ್ಯಕರ್ತರೂ ಆರೋಪಿಸುತ್ತಾರೆ. ಪಕ್ಷ ಅಧಿಕಾರದಲ್ಲಿದ್ದಾಗ ಶಾಸಕರು, ಸಚಿವರ ಬಳಿ ಕೆಲಸ ಕಾರ್ಯಗಳ ನಿಮಿತ್ತ ಕಾರ್ಯಕರ್ತರು ಭೇಟಿ ಮಾಡುವುದು ಸಹಜ. ಅದನ್ನು ಅರ್ಥ ಮಾಡಿಕೊಳ್ಳದ ಸಚಿವರು ಬೈದು ವಾಪಸ್ ಕಳಿಸುತ್ತಾರೆ. ಇವರ ಗೆಲುವುಗಾಗಿ ಶ್ರಮಿಸಿದ್ದು ತಪ್ಪಾಯಿತು ಎಂದು ಅನಿಸತೊಡಗಿದೆ ಎಂದು ಕೆಲ ಕಾರ್ಯಕರ್ತರು ಗೋಳಾಡುತ್ತಿದ್ದಾರೆ. ಈ ಸಂಬಂಧ ಪಕ್ಷದ ವರಿಷ್ಠರ ವರೆಗೂ ದೂರು ಒಯ್ದಿದ್ದಾಗಿ ತಿಳಿಸಲಾಗಿದೆ.
ಗದಗ ಜಿಲ್ಲೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳ, ಕಾರ್ಯಕರ್ತರ ಕೆಲಸವಾಗುತ್ತಿಲ್ಲ, ಕಾಂಗ್ರೆಸ್ ಕಾರ್ಯಕರ್ತರ ಮತ್ತು ಪ್ರತಿನಿಧಿಗಳದ್ದೆಲ್ಲವೂ ಮುತುವರ್ಜಿಯಿಂದ ಮಾಡಿಕೊಡಲಾಗುತ್ತಿದೆ.. ಎಂಬ ಮಾತು ಸಾಮಾನ್ಯ ಕಾರ್ಯಕರ್ತರೂ ಆಡುತ್ತಾರೆ.
ನಿಗಾ ವಹಿಸಿದೆ ಆರ್​ಎಸ್​ಎಸ್
ಗದಗ ಜಿಲ್ಲಾ ಬಿಜೆಪಿಯ ಕೆಲ ಅಹಿತಕರ ಘಟನೆಗಳು ಸಂಘ ಪರಿವಾರ ಮುಖಂಡರ ಗಮನಕ್ಕೂ ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಪಕ್ಷ ನಡೆಯುತ್ತಿರುವ ಹಾದಿಯ ಬಗ್ಗೆ ಬೇಸರಗೊಂಡಿದ್ದಾರೆ. ಪ್ರತಿ ಬೆಳವಣಿಗೆಯನ್ನೂ ಕೂಲಂಕಷವಾಗಿ ನೋಡುತ್ತಿರುವ ಅವರು ಕಾಲಕಾಲಕ್ಕೆ ಕೇಂದ್ರ ಕಚೇರಿಗೂ ಜಿಲ್ಲಾ ಘಟಕದಲ್ಲಿರುವ ಬೆಳವಣಿಗೆ ಬಗ್ಗೆ ಮಾಹಿತಿಯನ್ನು ರವಾನಿಸುತ್ತಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
