ಬೆಂಗಳೂರು:ಸಿಐಡಿ ಕಚೇರಿ ಆವರಣದಲ್ಲಿರುವ ಪೊಲೀಸ್ ನೇಮಕಾತಿ ವಿಭಾಗದ ಕಚೇರಿಯಲ್ಲೇ ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ಅಕ್ರಮ ನೇಮಕಾತಿ ‘ಕಳ್ಳಾಟ’ ನಡೆದಿರುವ ಸ್ಪೋಟಕ ಮಾಹಿತಿ ಜತೆಯಲ್ಲೇ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್​ಗಳ (ಪಿಡಬ್ಲ್ಯುಡಿ) ನೇಮಕಾತಿಯಲ್ಲೂ ಅಕ್ರಮ ನಡೆದಿತ್ತೆಂಬ ಮತ್ತೊಂದು ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ. ಸಿಐಡಿ ಕಚೇರಿಯ ಸ್ಟ್ರಾಂಗ್ ರೂಂನಲ್ಲಿ ಇರಿಸಿದ್ದ ಓಎಂಆರ್ ಶೀಟ್​ಗಳನ್ನು ನೇಮಕಾತಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ರಾತ್ರೋರಾತ್ರಿ ತಿದ್ದಿರುವುದು ಸಿಐಡಿ ತನಿಖೆಯಲ್ಲಿ ಬಹಿರಂಗವಾಗಿದೆ.
ಏತನ್ಮಧ್ಯೆ ಪಿಎಸ್​ಐ ನೇಮಕ ಅಕ್ರಮದಲ್ಲಿ ಬಂಧಿತನಾಗಿರುವ ಕಿಂಗ್​ಪಿನ್ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಮುಖಂಡ ರುದ್ರೇಗೌಡ ಪಾಟೀಲನನ್ನು ಪಿಡಬ್ಲ್ಯುಡಿ ನೇಮಕಾತಿ ಹಗರಣದ ತನಿಖೆಗಾಗಿ ಬೆಂಗಳೂರಿನ ಅನ್ನಪೂಣೇಶ್ವರಿನಗರ ಪೊಲೀಸರು ಬುಧವಾರ ಕಸ್ಟಡಿಗೆ ಪಡೆದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಪಿಡಬ್ಲ್ಯುಡಿ ಅಕ್ರಮದಲ್ಲಿ ಭಾಗಿಯಾಗಿರುವ ಇನ್ನಷ್ಟು ಜನರ ಹೆಸರುಗಳನ್ನು ರುದ್ರೇಗೌಡ ಪಾಟೀಲ್ ಬಹಿರಂಗಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಂನಲ್ಲೇ ಗೋಲ್ಮಾಲ್ ನಡೆದಿದೆ. ಅದರಲ್ಲೂ ಸ್ಟ್ರಾಂಗ್ ರೂಂ ಉಸ್ತುವಾರಿಗೆ ನಿಯೋಜನೆಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಯೇ ಓಎಂಆರ್ ಶೀಟ್ ತಿದ್ದಿದ್ದಾರೆ. ಈಗ ಅಕ್ರಮದಲ್ಲಿ ಕೆಳ ಹಂತದ ಸಿಬ್ಬಂದಿ ಸಿಐಡಿ ಬಲೆಗೆ ಬಿದ್ದ ಬೆನ್ನಲ್ಲೇ ಹಿರಿಯ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. ಮೇಲಧಿಕಾರಿಗಳ ಕಣ್ತಪ್ಪಿಸಿ ಇಷ್ಟೊಂದು ದೊಡ್ಡ ಮಟ್ಟದ ಹಗರಣ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಪೊಲೀಸ್ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇಲೆಯೇ ಕೆಳಹಂತದ ಸಿಬ್ಬಂದಿ ಅಕ್ರಮ ಎಸಗಿದ್ದಾರೆ ಎಂದು ಪೊಲೀಸ್ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಸಬ್ ಇನ್​ಸ್ಪೆಕ್ಟರ್ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ 15 ಪ್ರಶ್ನೆಗಳಿಗೆ ಉತ್ತರಿಸಿದ್ದ ಅಭ್ಯರ್ಥಿಗಳ ಓಎಂಆರ್ ಶೀಟ್ ತೆಗೆದು 120ಕ್ಕಿಂತ ಹೆಚ್ಚಿನ ಅಂಕ ಬರುವಂತೆ ತಿದ್ದಿರುವುದು ಬೆಳಕಿಗೆ ಬಂದಿದೆ. ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಹರ್ಷ, ಸಶಸ್ತ್ರ ಮೀಸಲು ಪಡೆಯ ಸಬ್ ಇನ್​ಸ್ಪೆಕ್ಟರ್ ಶ್ರೀನಿವಾಸ್, ಹೆಡ್ ಕಾನ್​ಸ್ಟೇಬಲ್ ಲೋಕೇಶ್, ದ್ವಿತೀಯ ದರ್ಜೆ ಸಹಾಯಕ ಶ್ರೀಧರ್ ಮತ್ತು ಮಧ್ಯವರ್ತಿಗಳಾದ ಮಂಜುನಾಥ್ ಮತ್ತು ಶರತ್ ರಾಮಣ್ಣ ಎಂಬುವರನ್ನು ಸಿಐಡಿ ಪೊಲೀಸರು ಮಂಗಳವಾರ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಬೆಂಗಳೂರು ನಗರ ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳ ಓಎಂಆರ್ ಶೀಟ್​ಗಳನ್ನು ಸಿಐಡಿ ಆವರಣದಲ್ಲಿರುವ ಪೊಲೀಸ್ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಂನಲ್ಲಿ ಸಂಗ್ರಹ ಮಾಡಲಾಗಿತ್ತು. ರೂಂ ಉಸ್ತುವಾರಿಯನ್ನು ಬಂಧಿತ ಹರ್ಷ, ಶ್ರೀಧರ್, ಲೋಕೇಶ್ ಹಾಗೂ ಶ್ರೀನಿವಾಸ್​ಗೆ ವಹಿಸಲಾಗಿತ್ತು. ಡೀಲ್ ಕುದುರಿಸಿಕೊಂಡಿದ್ದ ಆರೋಪಿಗಳು ರಾತ್ರಿ ವೇಳೆ ಸ್ಟ್ರಾಂಗ್ ರೂಂಗೆ ಹೋಗಿ ತಾವು ಗುರುತಿಸಿದ್ದ ಅಭ್ಯರ್ಥಿಗಳ ಓಎಂಆರ್ ಶೀಟ್​ಗಳನ್ನು ತೆಗೆದು, ಹೆಚ್ಚಿನ ಅಂಕ ಬರುವಂತೆ ತಿದ್ದಿದ್ದಾರೆ.
ಬಂಧಿತ ಕಿಂಗ್​ಪಿನ್ ರುದ್ರಗೌಡ (ಆರ್​ಡಿ) ಪಾಟೀಲ್ ಪ್ರತ್ಯೇಕ ಕೊಠಡಿ ಮತ್ತು ಕೆಲವು ಸವಲತ್ತುಗಳಿಗೆ ಪಟ್ಟು ಹಿಡಿದು ಕಲಬುರಗಿ ಸೆಂಟ್ರಲ್ ಜೈಲು ಅಧಿಕಾರಿಗಳು, ಸಿಬ್ಬಂದಿಗೇ ಆವಾಜ್ ಹಾಕಿರುವುದು ಬೆಳಕಿಗೆ ಬಂದಿದೆ. 2 ದಿನದ ಹಿಂದೆ ಪ್ರತ್ಯೇಕ ಸೆಲ್, ಅದರಲ್ಲಿ ಟಿವಿ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದ. ತನಗೆ ಒಳ್ಳೆಯ ವ್ಯವಸ್ಥೆ ಮಾಡಿ ಎಂದು ದರ್ಪ ಮೆರೆದಿದ್ದ. ಅದಕ್ಕೆ ಜೈಲು ಅಧಿಕಾರಿಗಳು ಸೊಪ್ಪು ಹಾಕಿಲ್ಲ ಎಂದು ತಿಳಿದು ಬಂದಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು, 150 ಅಂಕಗಳ 2ನೇ ಪತ್ರಿಕೆ ಓಎಂಆರ್ ಶೀಟ್​ನಲ್ಲಿ 15 ರಿಂದ 20 ಪ್ರಶ್ನೆಗಳಿಗೆ ಉತ್ತರಿಸಿ ಉಳಿದವನ್ನು ಖಾಲಿ ಬಿಡುತ್ತಿದ್ದರು. ಮೊದಲೇ ಸಂಚು ರೂಪಿಸಿದಂತೆ ರಾತ್ರೋರಾತ್ರಿ 120ಕ್ಕಿಂತ ಹೆಚ್ಚಿನ ಅಂಕ ಬರುವಂತೆ ತಿದ್ದಿ ಎಸ್​ಐ ಹುದ್ದೆಗೆ ಆಯ್ಕೆ ಆಗುವಂತೆ ಮಾಡಿದ್ದಾರೆ. 50 ಅಂಕಗಳ ಮೊದಲ ಪತ್ರಿಕೆಯಲ್ಲಿ 20 ರಿಂದ 25 ಅಂಕ ಪಡೆದವರು, 2ನೇ ಪತ್ರಿಕೆಯಲ್ಲಿ ಅಧಿಕ ಅಂಕ ಗಳಿಸಿ ರ್ಯಾಂಕ್ ಬರುವಂತೆ ಮಾಡಿದ್ದರು.
2021ರ ಡಿಸೆಂಬರ್​ನಲ್ಲಿ ನಡೆದ ಪಿಡಬ್ಲ್ಯುಡಿ ಜೆಇ ನೇಮಕಾತಿ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿದ್ದ ಕಲಬುರಗಿ ಜಿಲ್ಲೆಯ ವೀರಣ್ಣ ಗೌಡ ಎಂಬಾತ ಸೆರೆಸಿಕ್ಕಿದ್ದ. ತನಿಖೆ ನಡೆಸಿದ ಅನ್ನಪೂರ್ಣೆಶ್ವರಿನಗರ ಪೊಲೀಸರು, ಮೂವರು ಅಭ್ಯರ್ಥಿಗಳು ಸೇರಿ 15 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಕೇಸಿನಲ್ಲೂ ನೀರಾವರಿ ಇಲಾಖೆಯ ಮಂಜುನಾಥ್ ಮೇಳಕುಂದಿ ಬಂಧನವಾಗಿತ್ತು. ರುದ್ರಗೌಡ ಪಾಟೀಲ್ (ಆರ್.ಡಿ. ಪಾಟೀಲ್) ನಾಪತ್ತೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿ ಕೈಬಿಟ್ಟಿದ್ದರು. ಎಸ್​ಐ ನೇಮಕಾತಿ ಅಕ್ರಮದ ತನಿಖೆ ವೇಳೆ ರುದ್ರಗೌಡ ಪಾಟೀಲ್ ಬಂಧನಕ್ಕೆ ಒಳಗಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಈತನೇ ಆರ್.ಡಿ. ಪಾಟೀಲ್ ಎಂಬುದು ಗೊತ್ತಾಗಿದೆ. ಜೆಇ ಪರೀಕ್ಷಾ ಅಕ್ರಮದಲ್ಲಿ ರುದ್ರಗೌಡ ಪಾಟೀಲ್ ಪಾತ್ರದ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಸಿಐಡಿ ಕಸ್ಟಡಿ ಮುಗಿದ ಮೇಲೆ ವಶಕ್ಕೆ ಪಡೆದು ತನಿಖೆ ನಡೆಸಿ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸುವಂತೆ ಅನ್ನಪೂಣೇಶ್ವರಿನಗರ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಆರ್.ಡಿ. ಪಾಟೀಲ್​ನನ್ನು ವಶಕ್ಕೆ ಪಡೆದ ಪೊಲೀಸರು ಬುಧವಾರ ಕೋರ್ಟ್​ಗೆ ಹಾಜರುಪಡಿಸಿ ತನಿಖೆ ಸಲುವಾಗಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ನ್ಯಾಯಾಲಯ 10 ದಿನ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 11 =
Remember me
