|ಕೀರ್ತಿನಾರಾಯಣ ಸಿ.ಬೆಂಗಳೂರು
ನಿರುದ್ಯೋಗಿ ಯುವಕ-ಯುವತಿಯರಿಗೆ ಆರ್ಥಿಕ ನೆರವು ನೀಡಿ ಸ್ವಾವಲಂಬಿ ಜೀವನ ಕಲ್ಪಿಸುವ ಉದ್ದೇಶದಿಂದ ಅನುಷ್ಠಾನಕ್ಕೆ ತಂದಿರುವ ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ದುರ್ಬಳಕೆಯಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ಬ್ಯಾಂಕ್ ಅಧಿಕಾರಿಗಳೇ ಕೋಟ್ಯಂತರ ರೂ. ಗುಳುಂ ಮಾಡಿದ್ದಾರೆ. ಮುದ್ರಾ ಸಾಲ ಕೊಡಿಸುವುದಾಗಿ ಹುಟ್ಟಿಕೊಂಡಿರುವ ನಕಲಿ ಏಜೆನ್ಸಿಗಳು, ಅಮಾಯಕರಿಂದ ಲಕ್ಷಾಂತರ ರೂ. ಪಡೆದು ಟೋಪಿ ಹಾಕುತ್ತಿರುವ ಪ್ರಕರಣಗಳೂ ವರದಿಯಾಗಿವೆ.
ಸಾರ್ವಜನಿಕ ವಲಯ ಬ್ಯಾಂಕ್​ಗಳ (ಪಿಎಸ್​ಬಿ) ಮಾಹಿತಿ ಪ್ರಕಾರ 2022ರ ಜು.1ರವರೆಗೆ ಮುದ್ರಾ ಯೋಜನೆಗೆ ಸಂಬಂಧಿಸಿದಂತೆ 2506 ನಕಲಿ ಖಾತೆಗಳು ಸೃಷ್ಟಿಯಾಗಿದ್ದು, 58.36 ಕೋಟಿ ರೂ. ಹಣ ವಂಚನೆಯಾಗಿರುವುದು ದೃಢಪಟ್ಟಿದೆ. ಕಳೆದ 3 ವರ್ಷದಲ್ಲಿ ಕರ್ನಾಟಕದಲ್ಲಿ 17 ವಂಚನೆ ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನಲ್ಲಿ 344 ಹಾಗೂ ಆಂಧ್ರ ಪ್ರದೇಶದಲ್ಲಿ 241 ಅತಿ ಹೆಚ್ಚು ವಂಚನೆ ಪ್ರಕರಣಗಳು ನಡೆದಿವೆ. ಒಟ್ಟಾರೆ 2313 ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, 2018-19ರಲ್ಲಿ ಅತಿಹೆಚ್ಚು 1253 ಕೇಸ್​ಗಳು ಬಯಲಾಗಿವೆ.
103 ಅಧಿಕಾರಿ ಮತ್ತು ನೌಕರರ ಕರ್ತವ್ಯಲೋಪ ತನಿಖೆಯಲ್ಲಿ ದೃಢಪಟ್ಟಿದ್ದು, ಆರ್​ಬಿಐ ಮಾರ್ಗಸೂಚಿ ಪ್ರಕಾರ 68 ಮಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ರಾಜಸ್ಥಾನದಲ್ಲಿ ಪಿಎನ್​ಬಿ ಬ್ಯಾಂಕ್​ನ 65 ಲಕ್ಷ ವಂಚನೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿದೆ. ಕೆಲ ರಾಜ್ಯಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಕೇಸ್​ಗಳು ದಾಖಲಾಗಿವೆ.
ಮುದ್ರಾ ಯೋಜನೆ ಆರಂಭವಾದಾಗಿನಿಂದ 2022ರ ಮಾ. 25ರವರೆಗೆ ಕರೊನಾ ಕಾರಣಕ್ಕೆ 2020-21ನೇ ವರ್ಷ ಹೊರತುಪಡಿಸಿ 34.42 ಕೋಟಿ ಖಾತೆಗಳಿಗೆ 18.60 ಲಕ್ಷ ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ವಿತರಣೆಯಾಗಿರುವ ಒಟ್ಟಾರೆ ಸಾಲದಲ್ಲಿ ಅಂದಾಜು ಶೇ.22ರಷ್ಟು ಸಾಲವನ್ನು ಹೊಸದಾಗಿ ಉದ್ಯಮ ಆರಂಭಿಸಿದವರಿಗೆ ನೀಡಲಾಗಿದೆ. 2022ರ ಆರ್ಥಿಕ ವರ್ಷದಲ್ಲಿ 4.86 ಕೋಟಿ ಖಾತೆಗಳಿಗೆ 3.07 ಲಕ್ಷ ಕೋಟಿ ರೂ. ಸಾಲ ಮಂಜೂರಾಗಿದೆ. ಒಟ್ಟು ಮಂಜೂರಾದ ಸಾಲಗಳ ಪೈಕಿ ಅಂದಾಜು ಶೇ.68ರಷ್ಟು ಸಾಲ ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ. ಕರ್ನಾಟಕದಲ್ಲಿ 3.3 ಕೋಟಿ ಖಾತೆಗಳಿಗೆ 1.74 ಲಕ್ಷ ಕೋಟಿ ಸಾಲ ಮಂಜೂರಾಗಿದೆ. ಇದರಲ್ಲಿ 1.71 ಲಕ್ಷ ಕೋಟಿ ಖಾತೆಗಳಿಗೆ ವಿತರಣೆಯಾಗಿದೆ.
ಯೋಜನೆಯ ಜನಪ್ರಿಯತೆ ಹೆಚ್ಚಿದಂತೆ ಹಣದ ದುರ್ಬಳಕೆ ಹಾಗೂ ವಂಚನೆ ಪ್ರಕರಣಗಳು ಹೆಚ್ಚಿವೆ. ಬ್ಯಾಂಕ್​ಗಳಲ್ಲಿ ಸುಲಭವಾಗಿ ಮುದ್ರಾ ಯೋಜನೆಯಡಿ ಸಾಲ ಕೊಡಿಸುವುದಾಗಿ ಹಣ ಪಡೆದು ಟೋಪಿ ಹಾಕುತ್ತಿರುವ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗಿದೆ. 2022 ಮೇ ತಿಂಗಳಲ್ಲಿ ಚನ್ನಪಟ್ಟಣದ ಸಿದ್ದೇಗೌಡ ಎಂಬುವವರಿಗೆ ಕರೆ ಮಾಡಿದ್ದ ಸೈಬರ್ ಖದೀಮರು, 8 ಲಕ್ಷ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಹಂತಹಂತವಾಗಿ 55 ಸಾವಿರ ರೂ. ಪಡೆದು ವಂಚಿಸಿದ್ದಾರೆ.
150ಕ್ಕೂ ಅಧಿಕ ಜನರಿಗೆ ವಂಚಿಸಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಐವರು ಮಹಿಳೆಯರು ಸೇರಿ 7 ಜನರನ್ನು ಬಂಧಿಸಿದ್ದರು. ಟೆಲಿಕಾಲರ್ ಏಜೆನ್ಸಿ ತೆರೆದಿದ್ದ ಆರೋಪಿಗಳು, ಬಡ ಜನರನ್ನು ಗುರಿಯಾಗಿಸಿಕೊಂಡು ಮೊಬೈಲ್ ಕರೆ ಮಾಡುತ್ತಿದ್ದರು. ಕಡಿಮೆ ಬಡ್ಡಿ ದರಕ್ಕೆ ಮುದ್ರಾ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದರು. ನಂತರ ಅರ್ಜಿ ಶುಲ್ಕ, ನೋಂದಣಿ ಶುಲ್ಕ, ವಿಮೆ ಶುಲ್ಕ ಹೀಗೆ ಬೇರೆ ಬೇರೆ ಶುಲ್ಕಗಳ ಹೆಸರಲ್ಲಿ ಹಂತಹಂತವಾಗಿ ಹಣ ಹಾಕಿಸಿಕೊಂಡು ಮೋಸ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು.
ವರ್ಷವಿತರಣೆ ಮೊತ್ತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
