|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಬಜೆಟ್​ನಲ್ಲಿ ಮೀಸಲಿಟ್ಟಿರುವ ಸಾವಿರಾರು ಕೋಟಿ ರೂಪಾಯಿ ಈಗ ಕೆಲವು ಪ್ರಭಾವಿಗಳ ಪಾಲಾಗುತ್ತಿರುವುದು ಬೆಳಕಿಗೆ ಬಂದಿದೆ. ಶಿಕ್ಷಣ ಸಂಸ್ಥೆ, ಧಾರ್ವಿುಕ ಕೇಂದ್ರಗಳ ಅಭಿವೃದ್ಧಿಗೆ ಕಾಯ್ದಿರಿಸಿದ್ದ ಮೊತ್ತದಲ್ಲಿ ಪ್ರಭಾವಿ ಸಚಿವರೊಬ್ಬರು ತಮಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗೆ ದೊಡ್ಡ ಮಟ್ಟದ ಅನುದಾನ ಮಂಜೂರು ಮಾಡಿಸಿಕೊಂಡಿದ್ದಾರೆ. ಇದೇ ರೀತಿ ಕೆಲವು ಶಾಸಕರೂ ಸರ್ಕಾರದಿಂದ ಅನುದಾನ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಗೆ ಮೀಸಲಿಟ್ಟ ಹಣವನ್ನು ಕಾನೂನಿಗೆ ವಿರುದ್ಧವಾಗಿ ಮೂಲಸೌಕರ್ಯ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ ಎಂಬುದು ಪ್ರತಿಪಕ್ಷ ಕಾಂಗ್ರೆಸ್ ವಾದವಾಗಿತ್ತು. ಇದರ ಹೊರತಾಗಿಯೂ ವೈಯಕ್ತಿಕ ಸಂಸ್ಥೆಗಳಿಗೆ ಅನುದಾನ ರೂಪದಲ್ಲಿ ಹಣ ಪಡೆದುಕೊಳ್ಳಲಾಗುತ್ತಿದ್ದು, ಬಜೆಟ್ ನಲ್ಲಿ ಮೀಸಲಿಡುವ ಉದ್ದೇಶವೇ ಹಳ್ಳ ಹಿಡಿಯುತ್ತಿರುವ ಲಕ್ಷಣ ಕಾಣಿಸಿದೆ. ಶಿಕ್ಷಣ ಸಂಸ್ಥೆ, ಧಾರ್ವಿುಕ ಸಂಸ್ಥೆಗಳಿಗೆ ವಿಶೇಷ ಅನುದಾನ ನೆಪದಲ್ಲಿ ಅರ್ಜಿ ಸಲ್ಲಿಸಿ ಏಕಗವಾಕ್ಷಿ ಮೂಲಕ ಅನುದಾನ ಪಡೆದುಕೊಳ್ಳಲಾಗುತ್ತಿದೆ. ಈ ರೀತಿ ಅನುದಾನ ಪಡೆಯಲು ನೆರವಾಗುವ ಜಾಲವೂ ಸಕ್ರಿಯವಾಗಿದ್ದು, ಅವರು ಶೇ.10ರವರೆಗೆ ಕಮೀಷನ್ ಪಡೆದುಕೊಳ್ಳುತ್ತಾರೆಂಬ ಆರೋಪ ವೂ ಬಿಜೆಪಿ ವಲಯದಲ್ಲೇ ಕೇಳಿಬಂದಿದೆ.
ಚುನಾವಣೆ ವರ್ಷ, ಚರ್ಚೆಗಿಲ್ಲ ಅವಕಾಶ:ಚುನಾವಣೆ ಸಮೀಪಿಸುತ್ತಿರುವ ಕಾರಣ ಹಣದ ಹರಿವಿಗೆ ಅಡೆ ತಡೆಯೇ ಇಲ್ಲದಂತಾಗಿದೆ. ವೈಯಕ್ತಿಕವಾಗಿ ಅನುಕೂಲ, ವಿಶ್ವಾಸ ಗಿಟ್ಟಿಸಿಕೊಳ್ಳಲು ಈ ರೀತಿ ಅವಕಾಶ ಮಾಡಿಕೊಡಲಾಗಿದೆ ಎಂಬ ಮಾತು ಕೇಳಿಬಂದಿದೆ. ಎಸ್ಟಿ, ಎಸ್ಟಿ ಪಂಗಡಕ್ಕೆ ಸೇರಿದ ಪ್ರಭಾವಿಗಳಿಗೆ ಹೆಚ್ಚಿನ ಪರಾಮರ್ಶೆ ಇಲ್ಲದೇ ಹಣ ಬಿಡುಗಡೆ ಮಾಡಲಾಗಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ನೂರು ಕೋಟಿಗಿಂತ ಹೆಚ್ಚಿನ ಹಣ 3-4 ಇಲಾಖೆಗಳಿಂದ ನೀಡಲಾಗಿದೆ.
ಅನುದಾನ ನಿಗದಿ ಹೇಗೆ?:ಎಸ್​ಸಿಪಿ, ಟಿಎಸ್​ಪಿ ಕಾಯ್ದೆಯ ಸೆಕ್ಷನ್ 3ರಲ್ಲಿ ಸಂಪನ್ಮೂಲ ಬಳಕೆ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಆ ಪ್ರಕಾರ ವಿನಾಯಿತಿಸಲಾದ ವೆಚ್ಚ ಎಂದರೆ ಈ ಅಧಿನಿಯಮದ ಅನ್ವಯದಿಂದ ವಿನಾಯಿತಿಗೊಳಿಸಲಾದ ವೆಚ್ಚ ಮತ್ತು ಇದು ವೇತನ, ಪಿಂಚಣಿ, ಆಡಳಿತಾತ್ಮಕ ವೆಚ್ಚ, ವೇತನ ಸಹಾಯಾನುದಾನ, ಮೂಲಧನ ಮರು ಸಂದಾಯ, ಸರ್ಕಾರ ತನ್ನದೇ ಸಾಲಗಳ ಲೆಕ್ಕದ ಮೇಲೆ ಬಡ್ಡಿ ಸಂದಾಯ, ಆಡಳಿತಾತ್ಮಕ ಸ್ವರೂಪದ ಇತರ ಯಾವುದೇ ವೆಚ್ಚವನ್ನು ಒಳಗೊಳ್ಳುತ್ತದೆ. ಇವುಗಳನ್ನು ಹೊರತುಪಡಿಸಿ ಹಂಚಿಕೆ ಮಾಡಬಹುದಾದ ಮೊತ್ತದ ಆಧಾರದ ಮೇಲೆ ಎಸ್​ಸಿಪಿ ಮತ್ತು ಟಿಎಸ್​ಪಿಗೆ ಅನುದಾನವನ್ನು ನಿಗದಿಪಡಿಸಲಾಗುತ್ತದೆ. ಇದರ ಆಧಾರದ ಮೇಲೆ ಜನಸಂಖ್ಯೆಗನುಗುಣವಾಗಿ ಅನುದಾನವನ್ನು ನಿಗದಿಪಡಿಸಲಾಗುತ್ತಿದೆ.
ಹಣ ದುರುಪಯೋಗ ಹೇಗೆ?:ಸರ್ಕಾರ ಜಾರಿಗೆ ತಂದಿರುವ ಎಸ್​ಸಿಪಿ, ಟಿಎಸ್​ಪಿ ಕಾಯ್ದೆಯ ಪ್ರಕಾರ ಒಟ್ಟು ಬಜೆಟ್​ನ ಶೇ. 24.1 ಭಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸ ಬೇಕಾಗುತ್ತದೆ. ಆ ವರ್ಷ ಹಣ ಉಳಿಕೆಯಾದರೆ ಮುಂದಿನ ವರ್ಷ ಖರ್ಚು ಮಾಡಬೇಕು. ಈ ರೀತಿ ಮೀಸಲಿಟ್ಟ ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸದೇ ಪರಿಶಿಷ್ಟರ ಪೈಕಿ ಪ್ರಭಾವಿಗಳು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ರೂಪದಲ್ಲಿ ನೀಡಲಾಗಿದೆ. ಈ ಮೂಲಕ ಲೆಕ್ಕದಲ್ಲಿ ಖರ್ಚು ತೋರಿಸಲಾಗುತ್ತದೆ. ಆದರೆ ನಿಜವಾಗಿ ಪರಿಶಿಷ್ಟರಿಗೆ ಅನುಕೂಲ ಆಗುವುದೇ ಇಲ್ಲ. ಅನುದಾನ ಪಡೆದುಕೊಂಡ ಶಿಕ್ಷಣ ಸಂಸ್ಥೆಯಲ್ಲಿ ಎಷ್ಟು ಪರಿಶಿಷ್ಟರು ಶಿಕ್ಷಣ ಪಡೆಯುತ್ತಿದ್ದಾರೆ ಎಂಬುದೂ ಮುಖ್ಯವಾಗುತ್ತದೆ. ಸಿಬಿಎಸ್​ಇ, ಐಸಿಎಸ್​ಇ ಶಾಲೆ ನಡೆಸಿ ದುಬಾರಿ ಶುಲ್ಕ, ಡೊನೇಷನ್ ಪಡೆದುಕೊಳ್ಳಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಮುಗಿಬಿದ್ದ ಶಾಸಕರು:ಆಡಳಿತ ಪಕ್ಷದ ಶಾಸಕರೇ ಅನುದಾನ ಪಡೆದುಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಸಚಿವರೊಬ್ಬರು ಶಿಕ್ಷಣ ಸಂಸ್ಥೆಯೊಂದಕ್ಕೆ ಅನುದಾನ ಪಡೆದುಕೊಂಡ ಬಗೆಯನ್ನು ಮಾದರಿಯಾಗಿಟ್ಟುಕೊಂಡು ಇತ್ತೀಚೆಗೆ ಕೆಲವು ಶಾಸಕರು ಶೇ.10 ಕಮೀಷನ್ ಕೊಟ್ಟರೂ ಪರವಾಗಿಲ್ಲ ಒಂದಷ್ಟು ಕೋಟಿಯನ್ನು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಗುಸುಗುಸು ಬಿಜೆಪಿ ವಲಯದಲ್ಲೇ ಕೇಳಿಬಂದಿದೆ.
ಹೊಣೆಗಾರಿಕೆಯೂ ಇಲ್ಲ:ಅನುದಾನವನ್ನು ಬಳಕೆ ಮಾಡಿಕೊಂಡ ಬಗ್ಗೆ ಲೆಕ್ಕವನ್ನೂ ಸರಿಯಾಗಿ ನೀಡಲಾಗಿಲ್ಲ ಎಂಬ ಮಾಹಿತಿ ಇದೆ. ಸಾಮಾನ್ಯವಾಗಿ ಸರ್ಕಾರದ ಅನುದಾನ ಗಳು ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಪಟ್ಟವರಿಗೆ ವರ್ಗವಾಗುತ್ತದೆ. ಜಿಲ್ಲಾಧಿಕಾರಿ ಸಂಬಂಧಪಟ್ಟ ವರದಿ ಪಡೆದುಕೊಂಡು ಪರಿಶೀಲನೆ ನಡೆಸಿಯೇ ಹಣದ ವರ್ಗಾವಣೆಗೆ ಕ್ರಮಕೈಗೊಳ್ಳುತ್ತಾರೆ. ಈಗ ಅನುದಾನ ವರ್ಗಾವಣೆಯಲ್ಲಿ ಜಿಲ್ಲಾಧಿಕಾರಿ ಪಾತ್ರ ಇಲ್ಲ. ನೇರವಾಗಿ ಸಂಬಂಧಪಟ್ಟ ಸಂಸ್ಥೆಗಳಿಗೇ ನೀಡಲಾಗಿದೆ.
ಸ್ನೇಹಿತೆಯ ಮನೆಯಲ್ಲಿ ಬಟ್ಟೆ ಬದಲಿಸುವ ನೆಪದಲ್ಲಿ ಬಾಗಿಲು ಹಾಕಿಕೊಂಡ ಈಕೆ ಮಾಡಿದ್ದೇ ಬೇರೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 15 =
Remember me
