ಚಿಕ್ಕಮಗಳೂರು :ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳನ್ನು ನಂಬಿಸಿ ಸುಮಾರು 2.5 ಕೋಟಿ ರೂ. ಸಂಗ್ರಹ ಮಾಡಿ ವಂಚಿಸಿದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಕಲಿ ಅಧಿಕಾರಿ ಮತ್ತು ಆತನ ಕಾರು ಚಾಲಕನನ್ನು ಬಂಧಿಸಿರುವ ಪೊಲೀಸರು, 17.25 ಲಕ್ಷ ರೂ. ನಗದು, 36 ಲಕ್ಷ ರೂ. ಚಿನ್ನಾಭರಣ, ಲ್ಯಾಪ್​ಟಾಪ್, ನಕಲಿ ಗುರುತಿನ ಚೀಟಿಗಳು ಮತ್ತು ವಿವಿಧ ದಾಖಲೆ ಪತ್ರಗಳನ್ನು ವಶಡಿಸಿಕೊಂಡಿದ್ದಾರೆ.
ಬೆಂಗಳೂರಿನ ನಾಗರಬಾವಿಯ ಬ್ರೋಕರ್ ಪ್ರಭಾಕರ (34) ಶಿಕ್ಷಣ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ನಿರುದ್ಯೋಗಿಗಳನ್ನು ವಂಚಿಸುತ್ತಿದ್ದು, ಸುಮಾರು 2.5 ಕೋಟಿ ರೂ. ಸಂಗ್ರಹ ಮಾಡಿರಬಹುದು ಎಂದು ಶಂಕಿಸಲಾಗಿದೆ. ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿ ರಾಜ್ಯದ 17 ಜಿಲ್ಲೆಯ 35 ಅಭ್ಯರ್ಥಿಗಳ ಉದ್ಯೋಗದ ನಕಲಿ ಐಡೆಂಟಿಟಿ ಕಾರ್ಡ್ ಮತ್ತು ನಕಲಿ ಉದ್ಯೋಗ ಪತ್ರ, 48 ನಿರುದ್ಯೋಗಿಗಳ ಮೂಲ ಶೈಕ್ಷಣಿಕ ದಾಖಲಾತಿಗಳು, ಆಧಾರ್ ಕಾರ್ಡ್, ಪಾನ್​ಕಾರ್ಡ್, ಬ್ಯಾಂಕ್ ಪಾಸ್​ಬುಕ್ ಆತನ ಬಳಿ ಸಿಕ್ಕಿವೆ ಎಂದು ಎಸ್ಪಿ ಎಂ.ಎಚ್.ಅಕ್ಷಯ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿಕ್ಕಮಗಳೂರು ತಾಲೂಕು ಚಿಕ್ಕಗೌಜ ಗ್ರಾಮದ ಉಮೇಶ್ ವಂಚನೆ ದೂರು ದಾಖಲು ಮಾಡಿದ್ದರು. ಉಮೇಶ್ ನಗರದ ವಿಷ್ಣು ಡೆಲಿಕೆಸಿ ಹೋಟೆಲ್​ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದು, ಗ್ರಾಹಕನಾಗಿ ಹೋಟೆಲ್​ಗೆ ಹಲವು ಬಾರಿ ಬಂದ ಆರೋಪಿ ಪ್ರಭಾಕರ್ ಬೆಂಗಳೂರಿನ ಎಸ್​ಎಸ್​ಎಲ್​ಸಿ ಬೋರ್ಡ್​ನಲ್ಲಿ ಮುಖ್ಯ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದ. ನಂತರ ಪಿಯು ಬೋರ್ಡ್​ನಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುತ್ತೇನೆಂದು ಹೇಳಿ ದಾಖಲಾತಿಗಳೊಂದಿಗೆ 7 ಲಕ್ಷ ರೂ. ಅನ್ನು ತನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ನಕಲಿ ನೇಮಕಾತಿ ಪತ್ರ ಕೊಟ್ಟು ವಂಚಿಸಿದ್ದ. ವಂಚನೆಗೊಳಗಾಗಿದ್ದ ಉಮೇಶ್ ಸ್ನೇಹಿತನ ಜತೆ ಬೆಂಗಳೂರಿಗೆ ತೆರಳಿ ಪ್ರೌಢಶಿಕ್ಷಣ ಮಂಡಳಿ ಮತ್ತು ಪಿಯು ಬೋರ್ಡ್​ಗಳಲ್ಲಿ ಪ್ರಭಾಕರ್ ಬಗ್ಗೆ ವಿಚಾರಿಸಿದಾಗ, ಮೋಸ ಹೋಗಿರುವುದು ಗೊತ್ತಾಗಿದೆ.
ತೀರ್ಥಯಾತ್ರೆಗೆ 35 ಲಕ್ಷ ರೂ.!ವಂಚಕ ತನ್ನ ಪಾಪಕೃತ್ಯ ಪರಿಹಾರಕ್ಕೆ ಹಲವು ತೀರ್ಥ ಕ್ಷೇತ್ರಗಳ ದರ್ಶನಕ್ಕೆ ಪ್ರವಾಸ ಮಾಡಿದ್ದು, ಇದಕ್ಕಾಗಿ ಮಾಡಿರುವ ಖರ್ಚು 35 ಲಕ್ಷ ರೂ.! ವೈಷ್ಣೋದೇವಿ, ಯಮುನೋತ್ರಿ, ಗಂಗೋತ್ರಿ, ಹರಿದ್ವಾರ, ರಿಷಿಕೇಷ, ಬದರಿನಾಥ, ಕೇದಾರನಾಥ, ಫಂಡರಪುರ, ಶಿರಡಿ, ಮಂತ್ರಾಲಯ, ಪುಟ್ಟಪರ್ತಿ, ಧರ್ಮಸ್ಥಳ, ಹೊರನಾಡು, ಗೋಕರ್ಣ, ಮುರ್ಡೆಶ್ವರ, ಮಧುರೆ, ಮುಂತಾದ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾನೆ.
ತಿಮ್ಮಪ್ಪನ ಹುಂಡಿಗೆ 5 ಲಕ್ಷ ರೂ.ಆರೋಪಿ ವಂಚನೆ ಕೃತ್ಯದ ತಪ್ಪೊಪ್ಪಿಗೆಗಾಗಿ ತಿರುಪತಿಗೆ ವಾರಕ್ಕೊಮ್ಮೆ ಭೇಟಿ ನೀಡುತ್ತಿದ್ದು, ಐದು ಲಕ್ಷ ರೂ. ಅನ್ನು ಹುಂಡಿಗೆ ಹಾಕಿದ್ದಾನೆ. ತಿರುಪತಿಗೆ ಹೋಗಿ ಬರಲು ಸುಮಾರು 10 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿದ್ದಾನೆ. ಐಷಾರಾಮಿ ಪ್ರವಾಸ ಮಾಡಿದ್ದು, ಪ್ರವಾಸಕ್ಕಾಗಿ 10 ಲಕ್ಷ ರೂ. ಖರ್ಚು ಮಾಡಿದ್ದಾನೆ.
ಪೊಲೀಸರಿಗೆ ಆರೋಪಿ ಹೇಳಿದ್ದೇನು?ಮಲ್ಲೇಶ್ವರಂನಲ್ಲಿರುವ ಎಸ್​ಎಸ್​ಎಲ್​ಸಿ ಬೋರ್ಡ್​ಗೆ ದಾಖಲೆ ಸರಿಪಡಿಸಿಕೊಳ್ಳುವುದು ಸೇರಿ ವಿವಿಧ ಕಾರಣಗಳಿಗೆ ಜನ ಬರುತ್ತಿದ್ದರು. ಕ್ಲರ್ಕ್​ಗಳನ್ನು ಪರಿಚಯಿಸಿಕೊಂಡು ದಾಖಲಾತಿ ಸರಿಪಡಿಸುವುದು, ಅಂಕಪಟ್ಟಿ ಕೊಡಿಸುವುದು ಸೇರಿ ಹಲವು ಕೆಲಸ ಮಾಡಿಕೊಟ್ಟು ವಿದ್ಯಾರ್ಥಿಗಳಿಂದ ಹಣ ಪಡೆಯುತ್ತಿದ್ದೆ. ಹೆಚ್ಚು ಹಣ ಸಂಪಾದನೆ ಮಾಡಬೇಕೆಂದು ಮಂಡಳಿಯ ಮುಖ್ಯ ಆಪ್ತ ಕಾರ್ಯದರ್ಶಿ ಎಂದು ಕಾರ್ಡ್ ಮಾಡಿಸಿ, ಈ ಕೆಲಸಕ್ಕೆ ಮುಂದಾದೆ ಎಂದು ವಿಚಾರಣೆ ವೇಳೆ ಪ್ರಭಾಕರ್ ಬಾಯಿ ಬಿಟ್ಟಿದ್ದಾನೆ.
ಪ್ರೊಬೇಷನರಿಗೆ ತಾನೇ ಸಂಬಳ ನೀಡುತ್ತಿದ್ದ!ಪ್ರಥಮ ದರ್ಜೆ ಸಹಾಯಕ ಹುದ್ದೆಗೆ 12ರಿಂದ 13 ಲಕ್ಷ ರೂ., ದ್ವಿತೀಯ ದರ್ಜೆ ಸಹಾಯಕ ಹಾಗೂ ಕಂಪ್ಯೂಟರ್ ಆಪರೇಟರ್​ಗೆ 5ರಿಂದ 7 ಲಕ್ಷ ರೂ., ಡಿ ಗ್ರೂಪ್ ನೌಕರಿಗೆ 5 ಲಕ್ಷ ರೂ. ನಿಗದಿಪಡಿಸಿ ಮುಂಗಡ ಪಡೆದು ಉದ್ಯೋಗ ಖಾತರಿಯಾದ ನಂತರ ಪೂರ್ಣ ಹಣ ನೀಡುವಂತೆ ಒಪ್ಪಂದ ಮಾಡಿಕೊಳ್ಳುತ್ತಿದ್ದ. ನಂತರ ಸರ್ಕಾರದ ನಕಲಿ ಲೆಟರ್ ಹೆಡ್​ನಲ್ಲಿ ಉದ್ಯೋಗ ಖಾತರಿ ಪತ್ರ ನೀಡಿ ಉಳಿದ ಹಣ ಪಡೆದು ಆರೋಪಿ ವಂಚಿಸಿದ್ದಾನೆ. ಅಲ್ಲದೆ, 8ರಿಂದ 12 ತಿಂಗಳು ಪ್ರೊಬೇಷನರಿ ಅವಧಿಗೆ ಸ್ಟೈಫೆಂಡ್ ಆಗಿ ಕೆಲವರಿಗೆ 20 ಸಾವಿರ, ಮತ್ತೆ ಕೆಲವರಿಗೆ 15 ಸಾವಿರ ರೂ. ಅನ್ನು ತಾನೇ ಅಭ್ಯರ್ಥಿಗಳ ಖಾತೆಗೆ ಜಮೆ ಮಾಡಿ ನಂಬಿಕೆ ಹುಟ್ಟಿಸಿ ಚಾಣಾಕ್ಷ್ಯನದಿಂದ ಮೋಸ ಮಾಡಿದ್ದಾನೆ.
2.43 ಕೋಟಿ ರೂಪಾಯಿ ಮನೆ ಖರೀದಿ?2.43 ಕೋಟಿ ರೂ. ಮೌಲ್ಯದ ಮನೆ ಖರೀದಿಗೆ ಒಪ್ಪಂದ ಮಾಡಿಕೊಂಡು 15.25 ಲಕ್ಷ ಮುಂಗಡ ಪಾವತಿಸಿದ್ದು, 40 ಲಕ್ಷ ರೂ. ಚಿನ್ನಾಭರಣ ಖರೀದಿ ಮಾಡಿದ್ದಾನೆ. ಇನೋವಾ ಕಾರು, ಬೆಂಗಳೂರಿನ ಸುಮತಿ ಎಂಟರ್​ಪ್ರೖೆಸಸ್ ಸೈಬರ್ ಸೆಂಟರ್​ನಲ್ಲಿ ನಕಲಿ ಲೆಟರ್ ಹೆಡ್, ನಕಲಿ ಐಡೆಂಟಿಟಿ ಕಾರ್ಡ್ ಮತ್ತು ಕೃತ್ಯಕ್ಕೆ ಬಳಸಿದ ಕಂಪ್ಯೂಟರ್ ಇತರ ವಸ್ತುಗಳು, ಎಸ್​ಎಲ್​ಬಿ ಪ್ರಿಂಟಿಂಗ್ ಪ್ರೆಸ್ ಮೇಲೆ ದಾಳಿ ನಡೆಸಿ ಕಂಪ್ಯೂಟರ್ ಮತ್ತು ಪ್ರಿಂಟಿಂಗ್ ಯಂತ್ರ ಸೇರಿ ವಿವಿಧ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಡ್ಡಿಗಾಗಿ ಹಣ ಕೊಟ್ಟಿರುವ ಬಗ್ಗೆ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಎಸ್ಪಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?ಚಿಕ್ಕಮಗಳೂರು ನಗರ ಠಾಣಾಧಿಕಾರಿ ಟಿ.ಐ.ತೇಜಸ್ವಿ ನೇತೃತ್ವದಲ್ಲಿ ತಂಡ ರಚನೆ ಮಾಡಿ, ಪ್ರಕರಣದ ಬೆನ್ನತ್ತಿ ಬೆಂಗಳೂರಿಗೂ ತೆರಳಿ ಆರೋಪಿ ಮಾಹಿತಿ ಕಲೆ ಹಾಕಿತ್ತು. ಆರೋಪಿ ಇನ್ನೋವಾ ಕಾರಿನಲ್ಲಿ ನಗರಕ್ಕೆ ಬಂದು ಬೆಂಗಳೂರಿಗೆ ಹಿಂತಿರುಗುವ ಖಚಿತ ಮಾಹಿತಿ ಪಡೆದು ವಶಕ್ಕೆ ಪಡೆದಾಗ, ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಮುಖ್ಯ ಆಪ್ತ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ಗುರುತಿನ ಚೀಟಿ ತೋರಿಸಿದ್ದ. ಈ ಗುರುತಿನ ಚೀಟಿ ನಕಲಿ ಎಂಬುದು ಖಚಿತವಾಗುತ್ತಿದ್ದಂತೆ ಬಂಧಿಸಿದ್ದಾರೆ.
ಮೋಸದ ದುಡ್ಡು-ಹೆಲಿಕಾಪ್ಟರ್​ನಲ್ಲಿ ಯಾತ್ರೆ! ಪದವಿ ಮುಗಿಸಿದ ಯುವಕರೇ ಮಿಸ್​ಮಾಡ್ದೆ ಇದನ್ನು ಓದಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 9 =
Remember me
