ಬೆಂಗಳೂರು: ಹೂಡಿಕೆದಾರರು ಕೃಷಿ ಭೂಮಿ ಖರೀದಿಸಲು ಇದ್ದ ನಿರ್ಬಂಧವನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಹಾಕಲು ಮುಂದಾಗಿರುವ ಸರ್ಕಾರ ಈ ಸಂಬಂಧ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವುದಕ್ಕೆ ಕರ್ನಾಟಕ ಭೂ ಸುಧಾರಣಾ ಕಾಯ್ದೆಯಲ್ಲಿ ಕೆಲವು ಅಡ್ಡಿಗಳಿವೆ. ಅದರಲ್ಲೂ ಪ್ರಮುಖವಾಗಿ ಸೆಕ್ಷನ್ 79 ಎ ಮತ್ತು ಬಿ ಪ್ರಮುಖ ತೊಡಕಾಗಿದೆ. ಈಗ ಈ ಎರಡೂ ಸೆಕ್ಷನ್​ಗಳನ್ನು ರದ್ದುಮಾಡುವ ಬಗ್ಗೆ ಚರ್ಚೆ ನಡೆದಿದೆ.
ಕೃಷಿ ಭೂಮಿ ರೈತರಲ್ಲೇ ಉಳಿಯಬೇಕೆಂಬ ಕಾರಣಕ್ಕೆ ಡಿ. ದೇವರಾಜ ಅರಸು ಸಿಎಂ ಆಗಿದ್ದಾಗ ಕರ್ನಾಟಕ ಭೂ ಸುಧಾರಣಾ ಕಾಯ್ದೆ ರೂಪಿಸಿದರು. ಆ ನಂತರ ಹಲವು ಬಾರಿ ಕಾಯ್ದೆ ತಿದ್ದುಪಡಿಯಾಗಿದೆ.
ಸಿಎಂ ಯಡಿಯೂರಪ್ಪ ಈಚೆಗೆ ದಾವೋಸ್ ಪ್ರವಾಸದಿಂದ ಹಿಂದಿರುಗಿದ ಬಳಿಕ ನಿರುದ್ಯೋಗ ಸಮಸ್ಯೆಗೆ ಪರಿಹಾರದ ನಿಟ್ಟಿನಲ್ಲಿ ಹೆಚ್ಚು ಹೂಡಿಕೆ ಆಹ್ವಾನಿಸಲು ಉದ್ಯಮಿಗಳಿಗೆ ಭೂಮಿ ಖರೀದಿ ಪ್ರಕ್ರಿಯೆಯನ್ನು ಸುಲಭವಾಗಿಸುವ ಮಾತನಾಡಿದ್ದರು. ಅದನ್ನು ಸಾಕಾರಗೊಳಿಸಲು ಕಂದಾಯ ಇಲಾಖೆ ಅಧ್ಯಯನ ನಡೆಸಿದೆ. ಭೂಮಿ ಗುತ್ತಿಗೆ, ಭೂ ಸ್ವಾಧೀನ ಕಾಯ್ದೆ ತರುವ ಬಗ್ಗೆ ಚರ್ಚೆಗಳಾಗಿದ್ದು, ಅದರ ಮುಂದುವರಿದ ಭಾಗವಾಗಿ ಭೂ ಸುಧಾರಣೆ ಕಾಯ್ದೆಯಿಂದ ಸೆಕ್ಷನ್ 79 ಎ ಮತ್ತು ಬಿ ತೆಗೆದುಹಾಕಲಾಗುತ್ತದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರ ಪ್ರದೇಶ, ಪಂಜಾಬ್ ಸೇರಿ ಕೆಲವು ರಾಜ್ಯಗಳಲ್ಲಿ ಭೂಮಿ ವರ್ಗಾವಣೆಗೆ ಯಾವುದೇ ಕಾನೂನಿನ ಅಡ್ಡಿ ಇಲ್ಲ.
ಪಾಳು ಭೂಮಿ ಬಳಕೆ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ, ಪಾಳುಬಿದ್ದಿರುವ ಭೂಮಿಯನ್ನು ಕೈಗಾರಿಕೆಗೆ ಬಳಸಬಹುದೆಂಬುದು ಸರ್ಕಾರ ಲೆಕ್ಕಾಚಾರ. ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್ ಭೂಮಿ ಪಾಳು ಬಿದ್ದು ವಾರ್ಷಿಕ ಸುಮಾರು 8000 ಕೋಟಿ ರೂ. ನಷ್ಟವಾಗುತ್ತಿದೆ ಎಂಬ ಅಂದಾಜಿದೆ. ಭೂಖರೀದಿ ಕಾನೂನು ವಿಘ್ನ ಸರಿಸಿದರೆ ಈ ಭೂಮಿ ಬಳಕೆಯಾಗಬಹುದೆಂದು ಹೇಳಲಾಗುತ್ತದೆ.
ರೈತರ ಆತಂಕವೇನು
ಜಮೀನು ಕೃಷಿಕರ ಕೈತಪು್ಪತ್ತದೆ
ಜಿಪಿಎ ಮಾಡಿಸಿಕೊಂಡು ಮೋಸ ಮಾಡುವ ಮಧ್ಯವರ್ತಿಗಳ ಹಾವಳಿ
ಕೃಷಿ ಉತ್ಪನ್ನ ಕಡಿಮೆಯಾಗುವ ಭಯ
ರೈತರು ಬೀದಿಗೆ ಬಿದ್ದು ನಗರದತ್ತ ವಲಸೆ ಹೆಚ್ಚಬಹುದು
ಉಳಿದಿರುವ ಭೂಮಿ?
ಕೆಐಎಡಿಬಿ 6,000 ಕೋಟಿ ರೂ. ಮೌಲ್ಯದ 6,593 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಿಟ್ಟುಕೊಂಡಿದೆ. ಸುಮಾರು 3,172 ಕೋಟಿ ರೂ.ಗಳ ಮೌಲ್ಯದ ಇನ್ನೂ ಅಭಿವೃದ್ಧಿಯಾಗದ 30,507 ಎಕರೆ ಭೂಮಿಗೆ ಪ್ರಾಥಮಿಕ ಅಧಿಸೂಚನೆಯಾಗಿದೆ. ಆ ಭೂಮಿಯಲ್ಲಿಯೇ ಕೈಗಾರಿಕೆ ಸ್ಥಾಪನೆಗೆ ಅನುಮತಿ ನೀಡಬಹುದಾಗಿದೆ.
ನಡೆಯದ ಭೂ ಆಡಿಟ್
ಕೈಗಾರಿಕೆಗಳಿಗೆ ನೀಡಿರುವ ಭೂಮಿಯಲ್ಲಿ ಎಷ್ಟು ಬಳಕೆ ಆಗಿದೆ ಎಂಬ ಬಗ್ಗೆ ಈವರೆಗೂ ಭೂ ಆಡಿಟ್ ನಡೆದಿಲ್ಲ. ಸರ್ಕಾರ ಆಡಿಟ್ ಮಾಡಿಸುವ ಬಗ್ಗೆ ಹಿಂದಿನಿಂದಲೂ ಪ್ರಸ್ತಾಪಿಸುತ್ತಿದ್ದು, ಯಾವುದೇ ಕೈಗಾರಿಕೆಗಳು ಭೂಮಿ ಬಳಸಿಲ್ಲ ಎಂದರೆ ವಾಪಸ್ ಪಡೆಯುವುದಾಗಿ ಹೇಳುತ್ತಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ಸರ್ಕಾರ ಕೈಗಾರಿಕೆಗಳು ಬಳಸದ 40 ಸಾವಿರ ಎಕರೆಯನ್ನು ಮತ್ತೆ ರೈತರಿಗೆ ನೀಡಲು ಸಿದ್ಧತೆ ನಡೆಸಿದೆ. ನಮ್ಮ ರಾಜ್ಯದಲ್ಲಿ ಭೂ ಆಡಿಟ್ ನಡೆದರೆ ರೈತರಿಗೆ ಸಾಕಷ್ಟು ಭೂಮಿ ವಾಪಸ್ ಸಿಗಲಿದೆ.
ಸರ್ಕಾರ ಸೆಕ್ಷನ್ 79 ಎ ಮತ್ತು ಬಿ ರದ್ದುಮಾಡಿದಲ್ಲಿ ರೈತರ ಕೈಯಲ್ಲಿ ಭೂಮಿ ಉಳಿಯುವುದಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಮುಂದುವರಿದರೆ ಹೋರಾಟ ಅನಿವಾರ್ಯ.
– ಮಾರುತಿ ಮಾನ್ಪಡೆ, ರೈತ ಹೋರಾಟಗಾರರು
ಕೈಗಾರಿಕೆಗೆ ಭೂಮಿ! ಕತೆ ಏನು?
ರಾಜ್ಯ ಸರ್ಕಾರ ಕೈಗಾರಿಕೆ ಸ್ಥಾಪನೆ ಉದ್ದೇಶದಿಂದಲೇ ಹಿಂದೆ ಭೂ ಬ್ಯಾಂಕ್ ಸ್ಥಾಪನೆ ಮಾಡಿದ್ದು, ಭೂಮಿ ಮಂಜೂರು ಮಾಡುತ್ತಲೇ ಬರುತ್ತಿದೆ. ರಾಜ್ಯಾದ್ಯಂತ 1,21, 286 ಎಕರೆ ಭೂಮಿಯನ್ನು ಭೂ ಬ್ಯಾಂಕ್​ಗಾಗಿ ಗುರುತಿಸಲಾಗಿತ್ತು. ಇದರಲ್ಲಿ 1,06,889 ಎಕರೆ ಖಾಸಗಿ ಭೂಮಿಯಾದರೆ ಉಳಿದಿದ್ದು ಸರ್ಕಾರಿ ಭೂಮಿ, ಸರ್ಕಾರ ಗುರುತಿಸಿದ್ದ ಭೂಮಿಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು 53,175 ಎಕರೆಗೆ. ಅದರಲ್ಲಿ 38,080 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಅದರಲ್ಲೂ 21,486 ಎಕರೆಯನ್ನು ಮಾತ್ರ ಸ್ವಾಧೀನಕ್ಕೆ ಪಡೆಯಲಾಗಿದೆ. ರಾಜ್ಯದಲ್ಲಿ ಇದುವರೆಗೆ 26,524 ಎಕರೆ ಭೂಮಿಯನ್ನು 14,435 ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗಿದೆ. ಸರ್ಕಾರವೇ ಹೇಳುವ ಪ್ರಕಾರ ಗುರುತಿಸಿರುವ ಭೂಮಿಯಲ್ಲಿ ಸುಮಾರು 13 ಸಾವಿರ ಎಕರೆ ಕೈಗಾರಿಕೆಗಳ ಸ್ಥಾಪನೆಗೆ ಅರ್ಹವಾಗಿಲ್ಲ.
ಸರ್ಕಾರ ಹೇಳುವ ಅನುಕೂಲಗಳು
ಉದ್ಯಮಿಗಳು ಭೂಮಿ ಖರೀದಿಸಲು ಇಲಾಖೆಗಳಿಗೆ ಅಲೆಯಬೇಕಾಗಿಲ್ಲ
ಕೃಷಿ ಕ್ಷೇತ್ರದಲ್ಲಿ ಉತ್ತಮ ಹೂಡಿಕೆಯನ್ನು ನಿರೀಕ್ಷೆ ಮಾಡಬಹುದು
ಭೂಮಿಯನ್ನು ಪಾಳುಬಿಡುವುದು ತಪು್ಪತ್ತದೆ
ಕೈಗಾರಿಕೆಗಳು ಬಂದು ನಿರುದ್ಯೋಗ ನಿವಾರಣೆಯಾಗುತ್ತದೆ
ನಿರ್ಧಾರಕ್ಕೆ ಕಾರಣವೇನು?
ಕೃಷಿ ಭೂಮಿಯನ್ನು ಎಲ್ಲರೂ ಖರೀದಿಸಲು ಸಾಧ್ಯವಾಗದಿರುವುದು
ಭೂಮಿ ಖರೀದಿಗಿರುವ ವಿಘ್ನ ನಿವಾರಿಸಲು ಉದ್ಯಮಿಗಳ ತೀವ್ರ ಒತ್ತಡ
ನಿಯಮ ಹೇಳುವುದೇನು?
ಸೆಕ್ಷನ್ 79 ಎ ಪ್ರಕಾರ ಕೃಷಿಯೇತರ ಆದಾಯ 25 ಲಕ್ಷ ರೂ.ಗಿಂತ ಕಡಿಮೆ ಇರುವವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ಇದೆ. ಅದಕ್ಕಿಂತ ಹೆಚ್ಚಿನ ಆದಾಯ ಇರುವವರಿಗೆ ಅವಕಾಶ ಇಲ್ಲ. ಒಂದೊಮ್ಮೆ ಸುಳ್ಳು ಹೇಳಿ ಭೂಮಿ ಖರೀದಿಸಿದ್ದರೂ ಆ ಭೂಮಿಯನ್ನು ಸರ್ಕಾರ ಮತ್ತೆ ವಶಕ್ಕೆ ತೆಗೆದುಕೊಳ್ಳಬಹುದಾಗಿತ್ತು. ಈ ನಿರ್ಬಂಧ ಇನ್ನು ಸಡಿಲವಾಗಲಿದೆ.
ಸೆಕ್ಷನ್ 79 ಬಿ ಪ್ರಕಾರ ಟ್ರಸ್ಟ್, ಮಂಡಳಿ, ಸಂಸ್ಥೆಯ ಹೆಸರನಲ್ಲಿ ಜಮೀನು ಪಡೆದಿದ್ದರೂ ವಾಪಸ್ ಸ್ವಾಧೀನಕ್ಕೆ ಪಡೆಯಲು ಅವಕಾಶ ಇದೆ.
ಉದ್ಯಮಿಗಳು ಹೆಚ್ಚೆಚ್ಚು ಹೂಡಿಕೆ ಮಾಡುವ ಉದ್ದೇಶದಿಂದ ಭೂ ಖರೀದಿಯನ್ನು ಸರಳ ಮಾಡಲು ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79 ಎ ಮತ್ತು ಬಿ ತೆಗೆದುಹಾಕಲು ನಿರ್ಧರಿಸಿದ್ದೇವೆ. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಉದ್ದೇಶ ಹೊಂದಿದ್ದೇವೆ.
| ಆರ್. ಅಶೋಕ್ ಕಂದಾಯ ಸಚಿವ
ರುದ್ರಣ್ಣ ಹರ್ತಿಕೋಟೆ
ಸುಪ್ರೀಂಕೋರ್ಟ್​ ಆದೇಶವನ್ನು ಉಲ್ಲಂಘಿಸಿದ ಅನರ್ಹ ಶಾಸಕ ಪ್ರತಾಪ್​ಗೌಡ್​ ಪಾಟೀಲ್​ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
