| ನಿತ್ಯಾನಂದ ಶಿವಗಂಗೆ ಚಿಕ್ಕಮಗಳೂರುಶಕ್ತಿ ಯೋಜನೆಯಡಿ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಉಚಿತ ವಾಗಿ ಪ್ರಯಾಣಿಸುತ್ತಿರುವ ಮಹಿಳೆಯರು ಟಿಕೆಟ್ ಪಡೆದ ಊರಿನಲ್ಲಿ ಬಸ್​ನಿಂದ ಇಳಿಯದೆ ಮಾರ್ಗ ಮಧ್ಯದಲ್ಲೇ ಇಳಿದು ಹೋಗುತ್ತಿದ್ದಾರೆ. ಮಹಿಳೆಯರ ಈ ನಡೆ ಕಂಡಕ್ಟರ್​ಗಳ ಉದ್ಯೋಗಕ್ಕೆ ಕಂಟಕವಾಗಿ ಪರಿಣಮಿಸಿದ್ದು, ಮಾಡದ ತಪ್ಪಿಗೆ ಅಮಾನತು, ಮುಂಬಡ್ತಿ ತಡೆ, ವರ್ಗಾವಣೆ ಹೀಗೆ ನಾನಾ ಶಿಕ್ಷೆಗಳಿಗೆ ಗುರಿಯಾಗುತ್ತಿದ್ದಾರೆ.
ಯಾವ ಊರಿಗೆ ಹೋಗಬೇಕೆಂದು ಮಹಿಳೆಯರು ಟಿಕೆಟ್ ಪಡೆಯುತ್ತಾರೆಯೋ ಆ ಊರಿಗೆ ಹೋಗುವ ಮೊದಲೇ ಮಹಿಳೆಯರು ಬಸ್​ನಿಂದ ಇಳಿದು ಹೋಗುತ್ತಿದ್ದಾರೆ. ಈ ವೇಳೆ ಚೆಕ್ಕಿಂಗ್​ಗೆ ಬರುವ ಇನ್ಸ್​ಪೆಕ್ಟರ್​ಗಳು ಟಿಕೆಟ್ ವಿತರಣೆಯಾದಷ್ಟು ಜನ ಬಸ್​ನಲ್ಲಿ ಇಲ್ಲ ಎಂದು ಕಂಡಕ್ಟರ್​ಗಳಿಗೆ ಆಪಾದನಾ ಪತ್ರ ನೀಡುತ್ತಾರೆ. ಜತೆಗೆ ಕೆಎಸ್​ಆರ್​ಟಿಸಿ ಡಿಸಿಗಳಿಗೆ ವರದಿ ನೀಡುತ್ತಿದ್ದಾರೆ. ಈ ವರದಿಯನ್ನು ಆಧರಿಸಿ ಕೆಎಸ್​ಆರ್​ಟಿಸಿ ಡಿಸಿ ಕಂಡಕ್ಟರ್​ಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಬಸ್ ಚೆಕ್ಕಿಂಗ್ ವೇಳೆ ಟಿಕೆಟ್ ನೀಡಿದಷ್ಟು ಪ್ರಯಾಣಿಕರು ಬಸ್​ನಲ್ಲಿ ಇಲ್ಲದಿದ್ದರೆ ಕಂಡಕ್ಟರ್ ವಿರುದ್ಧ ಔಟ್​ಸ್ಟ್ಯಾಂಡಿಂಗ್ ಕೇಸ್ ಹಾಗೂ ರೆಡ್​ವಾರ್ಕ್ ಕೇಸ್ ದಾಖಲಾಗುತ್ತದೆ. 80 ರೂ. ಟಿಕೆಟ್ ಪಡೆದ ಮಹಿಳೆಯರು ಬಸ್​ನಿಂದ ಇಳಿದು ಹೋಗಿದ್ದರೆ ಕಂಡಕ್ಟರ್​ಗಳ ಮೇಲೆ ರೆಡ್​ವಾರ್ಕ್ ಕೇಸ್ ದಾಖಲು ಮಾಡಲಾಗುತ್ತದೆ. 126 ರೂ. ಹಾಗೂ ಮೇಲ್ಪಟ್ಟ ಟಿಕೆಟ್ ಪಡೆದವರು ಬಸ್​ನಿಂದ ಇಳಿದುಹೋಗಿದ್ದರೆ ಔಟ್​ಸ್ಟ್ಯಾಂಡಿಂಗ್ ಕೇಸ್ ದಾಖಲಿಸಲಾಗುತ್ತದೆ.
ಔಟ್​ಸ್ಟ್ಯಾಂಡಿಂಗ್ ಕೇಸ್ ದಾಖಲಾದ ಕಂಡಕ್ಟರ್ ಅನ್ನು ಆತ ಕಾರ್ಯನಿರ್ವಹಿಸುತ್ತಿದ್ದ ಡಿಪೋದಿಂದ ಬೇರೆ ಡಿಪೋಗೆ ವರ್ಗಾವಣೆ ಮಾಡಲಾಗುತ್ತದೆ. ಜತೆಗೆ ಇನ್ಕ್ರಿಮೆಂಟ್ ಕಟ್ ಹಾಗೂ ಅಮಾನತು ಶಿಕ್ಷೆಯೂ ಇದೆ. ರೆಡ್​ವಾರ್ಕ್ ಕೇಸ್ ದಾಖಲಾದ ಕಂಡಕ್ಟರ್​ಗಳಿಗೆ ಅವರೇ ಒಂದು ಮಾರ್ಗ ಆಯ್ಕೆಮಾಡಿಕೊಳ್ಳಲು ಅವಕಾಶ ಇರುವುದಿಲ್ಲ. ಬದಲಿಗೆ ಅಧಿಕಾರಿಗಳು ಹೇಳಿದ ಮಾರ್ಗಗಳಲ್ಲೇ ಕೆಲಸ ಮಾಡಬೇಕು. ಯಾವ ವೇಳೆಗೆ ಕೆಲಸಕ್ಕೆ ಕರೆದರೂ ಹೋಗಬೇಕು. ಇದರೊಂದಿಗೆ ಮುಂಬಡ್ತಿ ತಡೆ ಹಾಗೂ ವರ್ಗಾವಣೆ ಶಿಕ್ಷೆಯನ್ನೂ ಅನುಭವಿಸಬೇಕಿದೆ.
ಮಧ್ಯದಲ್ಲೇ ಇಳಿಯಲು ಕಾರಣ ಹಲವು:ಮಹಿಳೆಯರು ಮಧ್ಯದಲ್ಲೇ ಬಸ್ ಇಳಿಯುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಕೆಎಸ್​ಆರ್​ಟಿಸಿ ಸಿಬ್ಬಂದಿಗೆ ಕುತೂಹಲದ ಉತ್ತರಗಳು ಸಿಗುತ್ತಿವೆ. ಓರ್ವ ಮಹಿಳೆ ಒಂದು ಊರಿಗೆ ಹೊರಟಾಗ ಹಿಂದಿನ ಬಸ್​ನಲ್ಲಿ ಆಕೆಯ ಸ್ನೇಹಿತೆಯೋ ಅಥವಾ ಸಂಬಂಧಿಯೋ ಬರುತ್ತಿರುವುದಾಗಿ ಫೋನ್ ಮಾಡಿದರೆ ತಕ್ಷಣ ಆ ಮಹಿಳೆ ಮುಂದಿನ ಬಸ್ ನಿಲ್ದಾಣದಲ್ಲಿಯೇ ಇಳಿಯುತ್ತಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ತೀರ್ಥ ಕ್ಷೇತ್ರಗಳಿಗೆ ಟಿಕೆಟ್ ಪಡೆಯುವ ಮಹಿಳೆಯರು ಬಸ್​ನಲ್ಲಿ ಯಾರಾದರೂ ಮಾರ್ಗಮಧ್ಯೆ ಇನ್ನೊಂದು ಪುಣ್ಯ ಕ್ಷೇತ್ರವಿದೆ ಎಂದು ಹೇಳಿದರೆ ಟಿಕೆಟ್ ಖರೀದಿಸಿದ ಕ್ಷೇತ್ರಕ್ಕೆ ತೆರಳದೆ ಮಾರ್ಗಮಧ್ಯವಿರುವ ಕ್ಷೇತ್ರದಲ್ಲಿ ಇಳಿದು ಅಲ್ಲಿಗೆ ಹೋಗಿ ಬಳಿಕ ಬೇರೆ ಬಸ್​ನಲ್ಲಿ ಮುಂದಿನ ತೀರ್ಥ ಕ್ಷೇತ್ರಕ್ಕೆ ಸಾಗುತ್ತಿದ್ದಾರೆ.
ಇನ್ನು ತಾವೂ ಹತ್ತಿದ ಬಸ್ ವೇಗವಾಗಿ ಹೋಗುತ್ತಿಲ್ಲ ಎಂಬುದು ತಿಳಿದುಬಂದರೆ, ದೂರದ ಊರಿಗೆ ಸಂಚರಿಸುವ ಬಸ್​ಗಳು ಊಟ, ತಿಂಡಿ, ಟೀ ಕುಡಿಯಲು ಮಾರ್ಗ ಮಧ್ಯೆ ಬಸ್ ನಿಲ್ಲಿಸಿದಾಗ ಕಾಲು ಗಂಟೆ, ಅರ್ಧ ಗಂಟೆ ಸಮಯ ವ್ಯರ್ಥ ಮಾಡುವುದು ಏಕೆಂದು ಭಾವಿಸುವ ಮಹಿಳೆಯರು ಬೇರೆ ಬಸ್ ಹತ್ತಿ ಹೋಗುತ್ತಿದ್ದಾರೆ.
ಅಮ್ಮ, ಅಕ್ಕ ದಯಮಾಡಿ ನೀವು ಎಲ್ಲಿಗೆ ಹೋಗಲು ಟಿಕೆಟ್ ಪಡೆದಿದ್ದೀರೋ ಅಲ್ಲೆ ಬಸ್​ನಿಂದ ಇಳಿಯಿರಿ. ಮಾರ್ಗಮಧ್ಯೆ ಬಸ್​ನಿಂದ ಇಳಿದು ನಮ್ಮ ಕೆಲಸಕ್ಕೆ ಕುತ್ತು ತರಬೇಡಿ ಎಂದು ಮಹಿಳೆಯರ ಬಳಿ ಬೇಡುವುದೇ ನಮ್ಮ ಕೆಲಸವಾಗಿದೆ. ಹೀಗೆ ಮನವಿ ಮಾಡಿದರೂ ಮಹಿಳೆಯರು ಮಧ್ಯದಲ್ಲೇ ಬಸ್​ನಿಂದ ಇಳಿದು ಹೋಗುತ್ತಿದ್ದಾರೆ. ಇದನ್ನು ಮೇಲಾಧಿಕಾರಿಗಳಿಗೆ ಹೇಳಿದರೂ ಅವರಿಗೆ ವಾಸ್ತವ ಅರ್ಥವಾಗುತ್ತಿಲ್ಲ.
| ಹೆಸರು ಹೇಳಲಿಚ್ಛಿಸದ ಕಂಡಕ್ಟರ್
ಒಂದು ವೇಳೆ ಮಹಿಳೆಯರು ಮಾರ್ಗಮಧ್ಯೆ ಬಸ್​ನಿಂದ ಇಳಿದು ಹೋದರೂ ಕಂಡಕ್ಟರ್​ಗಳು ಮುಂದಿನ ನಿಲ್ದಾಣದ ಕಂಟ್ರೋಲರ್​ಗೆ ಮಾಹಿತಿ ನೀಡಿ ಒಪ್ಪಿಗೆ ಪಡೆಯಬೇಕು. ಈ ಕುರಿತು ಕಂಡಕ್ಟರ್​ಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇವೆ. ಯಾವುದೇ ಅಕ್ರಮಗಳು ನಡೆಯಬಾರದು ಎಂಬ ಕಾರಣಕ್ಕೆ ಕೆಲ ಕಂಡಕ್ಟರ್​ಗಳಿಗೆ ನೋಟಿಸ್ ನೀಡಲಾಗಿದೆ. ಆದರೆ ಇದುವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ.
| ವಿಜಯ್ ಕುಮಾರ್, ಶಿವಮೊಗ್ಗ ಕೆಎಸ್​ಆರ್​ಟಿಸಿ ಡಿಸಿ
ಕಂಟ್ರೋಲರ್​ಗೆ ರಿಪೋರ್ಟ್ ಮಾಡಿ:ಬಸ್ ಹತ್ತುವ ಮಹಿಳೆಯರು ಮಾರ್ಗಮಧ್ಯೆ ಇಳಿದು ಹೋದರೆ ಎಷ್ಟು ಜನ ಇಳಿದು ಹೋಗಿದ್ದಾರೆ ಎಂಬುದು ಇಟಿಎಂ ಯಂತ್ರದಲ್ಲಿ ಗೊತ್ತಾಗುತ್ತದೆ. ಆಗ ಎಷ್ಟು ಮಂದಿ ಇಳಿದುಹೋದರು ಎಂಬುದನ್ನು ಎಂಟ್ರಿ ಶೀಟ್​ನಲ್ಲಿ ದಾಖಲು ಮಾಡಿ ಮುಂದಿನ ಬಸ್ ನಿಲ್ದಾಣದ ಕಂಟ್ರೋಲರ್ ಬಳಿ ಅಪ್ರೂವಲ್ ಪಡೆಯಿರಿ ಎಂದು ಕಂಡೆಕ್ಟರ್​ಗಳಿಗೆ ಸೂಚನೆ ನೀಡಲಾಗಿದೆ. ಆದರೆ ಮುಂದಿನ ನಿಲ್ದಾಣ ಬರುವ ಮೊದಲೇ ಚೆಕ್ಕಿಂಗ್ ಇನ್ಸ್​ಪೆಕ್ಟರ್​ಗಳು ಬಂದಾಗ ಕಂಡಕ್ಟರ್​ಗಳು ಬಲಿಪಶುವಾಗುತ್ತಿದ್ದಾರೆ.
ಭರ್ತಿಯಾಗುತ್ತಿವೆ ಬಸ್:ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಕೆಎಸ್​ಆರ್​ಟಿಸಿ ಬಸ್​ಗಳು ಪ್ರಯಾಣಿಕರಿಂದ ಭರ್ತಿಯಾಗುತ್ತಿವೆ. 54 ಪ್ರಯಾಣಿಕರ ಸಾಮರ್ಥ್ಯದ ಬಸ್​ಗಳಲ್ಲಿ ಬರೋಬ್ಬರಿ 100 ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ಒಂದು ಸ್ಟೇಜ್​ನಿಂದ ಇನ್ನೊಂದು ಸ್ಟೇಜ್ ತಲುಪುವ ಮುನ್ನವೇ ಟಿಕೆಟ್ ವಿತರಣೆ ಮಾಡುವುದು ಕಂಡಕ್ಟರ್​ಗಳಿಗೆ ಕಷ್ಟ ಸಾಧ್ಯವಾಗಿದೆ. ಇದರ ಮಧ್ಯೆ ಮಹಿಳೆಯರು ಮಾರ್ಗ ಮಧ್ಯದಲ್ಲಿ ಇಳಿಯದಂತೆ ತಡೆಯುವುದೂ ಸವಾಲಿನ ಕೆಲಸವಾಗಿದೆ. ತುಂಬಿರುವ ಬಸ್​ಗಳಲ್ಲಿ ಯಾರು ಎಲ್ಲಿ ಇಳಿದರು ಎಂಬುದೇ ಗೊತ್ತಾಗಲ್ಲ ಎನ್ನುತ್ತಾರೆ ಕೆಎಸ್​ಆರ್​ಟಿಸಿ ಕಂಡಕ್ಟರ್​ಗಳು.
ವಿಶ್ವಕಪ್ ಕ್ರಿಕೆಟ್​: ಭಾರತದ ಇಂದಿನ ಭರ್ಜರಿ ಗೆಲುವನ್ನು ‘ಕಾಪಿ-ಪೇಸ್ಟ್’ ಎಂದಿದ್ದೇಕೆ ಗೂಗಲ್?

16 ದಿನ ಮನೆಯಲ್ಲಿ ಯಾರೂ ಇರಲಿಲ್ಲ, ಆದ್ರೂ ಬಂತು ಕರೆಂಟ್ ಬಿಲ್ ಮೂರುಪಟ್ಟು!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:1 × 5 =
Remember me
