ಗುಡಿಯ ಪೂಜೆಯೊ, ಕಥೆಯೊ, ಸೊಗಸು ನೋಟವೊ, ಹಾಡೊ|ಬಡವರಿಂಗುಪಕೃತಿಯೊ, ಆವುದೊ ಮನದ||ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ|ಬಿಡುಗಡೆಯೊ ಜೀವಕ್ಕೆ-ಮಂಕುತಿಮ್ಮ||832||
ಗುಡಿಯ ಪೂಜೆ, ಪುಣ್ಯ ಕಥೆಗಳನ್ನಾಲಿಸುವುದು, ಸುಂದರವಾದ ದೃಶ್ಯಗಳು, ಮಧುರವಾದ ಹಾಡುಗಳನ್ನಾಲಿಸುವುದು ಅಥವಾ ಬಡವರಿಗೆ ಸಹಾಯವನ್ನು ಮಾಡುವುದು ಹೀಗೆ ಯಾವುದರಿಂದ ಮನಸ್ಸಿನ ಬಡಿದಾಟ, ಉದ್ವೇಗಗಳು ಶಮನವಾಗುತ್ತದೋ ಅದರಿಂದಲೇ ಜೀವಕ್ಕೆ ನೆಮ್ಮದಿ, ಅದುವೆ ಜೀವದ ಬಿಡುಗಡೆಗೆ ಇರುವ ದಾರಿ ಎನ್ನುತ್ತಾರೆ ಡಿ.ವಿ.ಜಿ.
ಅದೊಂದು ಪುಟ್ಟ ಊರು. ಅಲ್ಲೊಂದು ಪುಟ್ಟ ದೇವಸ್ಥಾನ. ವಿಶೇಷ ದಿನವಲ್ಲದೆ ಅಲ್ಲಿಗೆ ಬರುವ ಭಕ್ತರ ಸಂಖ್ಯೆ ಕಡಿಮೆಯೇ. ಹಾಗೆಂದು ದೇಗುಲದ ಅರ್ಚಕರಿಗೆ ಅದರ ಬಗ್ಗೆ ಬೇಸರವಿಲ್ಲ. ಲವಲವಿಕೆಯಿಂದ ಓಡಾಡುತ್ತಿದ್ದರು. ಸದಾ ಭಗವಂತನ ನಾಮಸ್ಮರಣೆಯಲ್ಲಿ ನಿರತರಾಗಿರುತ್ತಿದ್ದರು. ದೇಗುಲದ ಹೊರ ಭಾಗದ ಪ್ರಾಂಗಣದಲ್ಲಿ ಹಲವು ವಿಧದ ಹೂವಿನ ಗಿಡಗಳನ್ನವರು ಬೆಳೆದಿದ್ದರು. ಬಗೆಬಗೆಯ ಹೂವುಗಳು ಅರಳಿ ಆಕರ್ಷಕವಾಗಿ ಕಂಗೊಳಿಸುತ್ತಿತ್ತು. ಅರ್ಚಕರು ಸೂರ್ಯ ಮೂಡುವ ಮೊದಲೇ ಎದ್ದು ಎಳೆ ಹೂವುಗಳನ್ನು ಕೊಯ್ದು ವಿವಿಧ ರೀತಿಯ ಹೂಮಾಲೆಗಳನ್ನು ಕಟ್ಟುತ್ತಿದ್ದರು. ಬೆಳಗಿನ ಪೂಜೆಯ ಹೊತ್ತಿಗೆ ವೈವಿಧ್ಯಮಯವಾದ ಹೂಮಾಲೆಗಳು ದೇವರ ವಿಗ್ರಹದ ಮೇಲೆ ರಾರಾಜಿಸುತ್ತಿದ್ದವು. ವಿಶೇಷ ದಿನಗಳಲ್ಲಿ ಭಕ್ತಾದಿಗಳು ಖರೀದಿಸಿ ತಂದು ಅರ್ಪಿಸಿದ ಹೂವಿನ ಮಾಲೆ ಬಹಳಷ್ಟಿರುತ್ತಿತ್ತಾದರೂ ಅರ್ಚಕರು ತಮ್ಮ ನಿತ್ಯದ ಕಾಯಕದಿಂದ ಹಿಂತೆಗೆಯುತ್ತಿರಲಿಲ್ಲ. ನನ್ನ ಮನಸ್ಸಿನ ಸಂತೋಷಕ್ಕೆ ನಾನಿದನ್ನು ಮಾಡುವುದು, ಮನಸ್ಸು ಏನೇನೋ ಯೋಚಿಸಿ ಬೇಸರ ಪಡುವುದಕ್ಕಿಂತ ಹೂಕಟ್ಟುವ ಧ್ಯಾನಸ್ಥ ಸ್ಥಿತಿಯು ನನಗೆ ಇಡೀ ದಿನಕ್ಕೆ ಉಲ್ಲಾಸ ನೀಡುತ್ತದೆ ಎನ್ನುತ್ತಿದ್ದರು.
ಹೀಗೆ ಸಮಾಜಸೇವೆ, ಹವ್ಯಾಸಗಳು, ಜೀವನ ಮೌಲ್ಯವೇ ಮೊದಲಾದವುಗಳಿಗಾಗಿ ಬಾಳುವವರು ಹಲವರು. ಗಾಯಗೊಂಡು ಬೀದಿಗೆ ಬಿದ್ದ ನಾಯಿ, ಬೆಕ್ಕು, ಹಕ್ಕಿಗಳನ್ನು ಮನೆಗೆ ತಂದು ಆರೈಕೆ ಮಾಡುವವರು, ಹಾದಿಯ ಬದಿಯಲ್ಲಿ ಗಿಡನೆಟ್ಟು ಪೋಷಿಸುವವರು, ಪ್ರವಾಸಿ ತಾಣಗಳ ಬಳಿ ಬಿದ್ದ ಕಸಗಳನ್ನು
ಹೆಕ್ಕಿ, ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಚ್ಛತೆಯನ್ನು ಮಾಡುವವರು, ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಮನೆ ಪಾಠ ಹೇಳುವವರು, ಅನಾಥ ಮಕ್ಕಳ ಪೋಷಣೆಯ ಹೊಣೆ ಹೊತ್ತವರು, ಮನೆಯಂಗಳಕ್ಕೆ ಬರುವ ಹಕ್ಕಿ, ಅಳಿಲುಗಳಿಗೆ ದಿನನಿತ್ಯ ಅನ್ನ ಇಡುವವರು ಹೀಗೆ ಅವೆಷ್ಟೋ ಜನ ಇತರ ಜೀವಗಳ ಕಷ್ಟ- ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸಂತೃಪ್ತಿಯನ್ನು ಅನುಭವಿಸುತ್ತಾರೆ. ಹೀಗೆ ಸ್ವಸಂತೋಷಕ್ಕಾಗಿ ಸಮಾಜಮುಖಿಯಾಗಿ ದುಡಿಯುವವರಿಗೆ ಸ್ವಾರ್ಥಾಪೇಕ್ಷೆ ಇರುವುದಿಲ್ಲ.
ಇದೇ ರೀತಿ ಸಾಹಿತ್ಯದ ಓದು, ಬರವಣಿಗೆಯಲ್ಲಿ ತಮ್ಮತನವನ್ನು ಹುಡುಕಿಕೊಂಡವರು, ಸಂಗೀತ, ನೃತ್ಯ, ನಾಟಕ ಮುಂತಾದ ಲಲಿತಕಲೆಗಳನ್ನು ಆಸ್ವಾದಿಸುತ್ತಾ, ತಮ್ಮಷ್ಟಕ್ಕೆ ಅಭ್ಯಾಸವನ್ನು ಮಾಡುತ್ತಾ, ಆಸಕ್ತರಿಗೆ ಕಲಿಸುತ್ತಾ ಕಳೆದುಹೋಗುವವರು, ದೇವರ ಧ್ಯಾನ, ಪೂಜೆ, ಆಚರಣೆಗಳಲ್ಲಿ ತಲ್ಲೀನವಾದವರು, ಮನಸ್ಸು ಬಂದೆಡೆಗೆ ವಾರಗಟ್ಟಲೆ ಪ್ರವಾಸ ಹೊರಡುವವರು, ಪ್ರಕೃತಿ ಸೌಂದರ್ಯವನ್ನು ಕಾಣುತ್ತಾ ಮೈಮರೆಯುವವರುಹೀಗೆ ಬೇರೆಬೇರೆ ಸದಭಿರುಚಿಯ ಕಾಯಕದಲ್ಲಿ ತೊಡಗಿಸಿಕೊಂಡು ಮನದ ನೋವುಗಳನ್ನು ಮರೆಯುವವರು, ಆತ್ಮಾನಂದವನ್ನು ಅನುಭವಿಸುವವರು ಹಲವರು.
ಈ ರೀತಿ ಬದುಕಿಗೊಂದು ಧ್ಯೇಯವನ್ನು, ಹವ್ಯಾಸವನ್ನು ಇರಿಸಿಕೊಂಡವರು ತೀವ್ರವಾದ ಸಂತಾಪಕ್ಕೋ, ನಿರಾಸೆಗೋ ಒಳಗಾಗಲಾರರು. ಯಾಕೆಂದರೆ ಅಂತಹ ಸಂದರ್ಭದಲ್ಲಿ ಅದರಿಂದ ಮುಕ್ತರಾಗಲು ಅವರು ರೂಢಿಸಿಕೊಂಡ ಹವ್ಯಾಸವು ಸಹಾಯಕವಾಗುತ್ತದೆ. ಸಾಮಾನ್ಯವಾಗಿ ಹತಾಶೆಯಿಂದ, ನೋವಿನಿಂದ ಒದ್ದಾಡುವ ಜೀವಗಳು ಇಂತಹ ಬಿಡುಗಡೆಯ ಹಾದಿಯನ್ನು ಹೊಂದಿರುವುದೇ ಇಲ್ಲ. ನಿರಾಸೆ, ಅಸೂಯೆ, ಅಸಹನೆ, ಹಿಂಜರಿಕೆ ಮುಂತಾದ ಋಣಾತ್ಮಕ ಭಾವಗಳನ್ನು ಪೋಷಿಸುತ್ತಾ ಚಡಪಡಿಸುತ್ತಿರುತ್ತಾರೆ. ಸುಖ-ಸಂತೋಷಗಳನ್ನು ವಸ್ತು-ವ್ಯಕ್ತಿಗಳಲ್ಲಿ ಹುಡುಕುವುದರಿಂದಾಗಿ ಸದಾ ಸಂಕಟದಲ್ಲಿ ನರಳುತ್ತಿರುತ್ತಾರೆ. ಬದುಕಿನ ಪ್ರತಿಯೊಂದು ಸಂದರ್ಭಗಳನ್ನು ಅನುಭವವೆಂದು ಪರಿಗಣಿಸುತ್ತ, ಅರಿವನ್ನು ವಿಸ್ತರಿಸುತ್ತ ಹೋಗಬಲ್ಲವರನ್ನು ಯಾವ ಸೋಲು ಮತ್ತು ನೋವುಗಳು ಕಾಡುವುದಿಲ್ಲ.
ಯಾಕೆಂದರೆ ಅವರಿಗೆ ಜೀವನದ ಮೌಲ್ಯವು ಅರ್ಥವಾಗಿರುತ್ತದೆ. ಸಂತೃಪ್ತಿಯನ್ನು ನೀಡುವ ಕೆಲಸ ಕಾರ್ಯಗಳನ್ನು ಮಾಡುತ್ತ ಮನದ ದುಗುಡ-ದುಮ್ಮಾನಗಳನ್ನು ಮರೆತು ಹಗುರಾಗುತ್ತಾರೆ. ಇದರಿಂದಾಗಿ ಜೀವವು ಆನಂದಾನುಭೂತಿಯನ್ನು ಹೊಂದುತ್ತದೆ. ಮನಸ್ಸಿನ ಕ್ಲೇಶವನ್ನು ಕಳೆದು ಶಾಂತಿ ನೆಮ್ಮದಿಯನ್ನು ನೀಡುವ ಕೆಲಸ-ಕಾರ್ಯಗಳು ಯಾವುದಿವೆಯೋ ಅವುಗಳಿಂದಲೇ ಜೀವಕ್ಕೆ ಬಂಧ ಮುಕ್ತಿ. ಸಂತೃಪ್ತಿಯಿಂದ ಜೀವೋತ್ಕರ್ಷ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಎನ್ಐಎಗೆ ಒಪ್ಪಿಸಲು ವಿಜಯೇಂದ್ರ ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
