|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯ ಸರ್ಕಾರ ಪರಿಶಿಷ್ಟರ ಅಭ್ಯುದಯಕ್ಕಾಗಿ ರೂಪಿಸಿದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಉಪ ಯೋಜನೆಯಡಿ ಒಂಭತ್ತು ವರ್ಷಗಳಲ್ಲಿ 1.31 ಲಕ್ಷ ಕೋಟಿ ರೂ. ವೆಚ್ಚವಾಗಿದ್ದರೂ ಅವರ ಬದುಕು ಹಸನಾಗಿಲ್ಲ. ಆದ್ದರಿಂದಲೇ ಈ ವರ್ಗಗಳಿಗೆ ಏನು ಬೇಕಾಗಿದೆ ಎಂಬ ಸಮೀಕ್ಷೆಗೆ ಮುಂದಾಗಿದೆ.
ಆಂಧ್ರಪ್ರದೇಶದ ಮಾದರಿಯಲ್ಲಿ 2014ರಲ್ಲಿ ಉಪಯೋಜನೆಯ ಕಾಯ್ದೆ ರೂಪಿಸಲಾಯಿತು. ಆ ವರ್ಗಗಳಿಗೆ ಜನಸಂಖ್ಯೆಯ ಆಧಾರದಲ್ಲಿ ಶೇ. 24.1 ರಷ್ಟು ಅನುದಾನ ವೆಚ್ಚ ಮಾಡಬೇಕು, ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲವೆಂಬುದು ಉದ್ದೇಶವಾಗಿತ್ತು. ಅದರಂತೆ ಈವರೆಗೆ ಹಣ ಹೇರಳವಾಗಿ ವೆಚ್ಚ ಆಗಿದೆ. ಆದರೆ ಉದ್ದೇಶ ಮಾತ್ರ ಈಡೇರಿಲ್ಲ. ಮೇಲ್ಜಾತಿಗಳಿಗೆ ಹೋಲಿಸಿದರೆ ಅಭಿವೃದ್ಧಿಯ ಕಂದಕ ಹಾಗೆಯೇ ಮುಂದುವರಿದಿದೆ.
ರಾಜ್ಯ ಸರ್ಕಾರ 2014 ರಿಂದ 1.61 ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಅದರಲ್ಲಿ 1.36 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಸಹ ಮಾಡಿದೆ. ಅದರಲ್ಲಿ 1.32 ಲಕ್ಷ ಕೋಟಿ ರೂಪಾಯಿಗಳು ಖರ್ಚಾಗಿವೆ. ಆದರೆ ತಲುಪಬೇಕಾದ ಕಡೆ ತಲುಪಿಲ್ಲ ಅಷ್ಟೇ. ಇಷ್ಟು ದೊಡ್ಡ ಮೊತ್ತ ಖರ್ಚಾಗಿದ್ದರೆ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಅವಕಾಶವಿತ್ತು. ಆದರೆ, ಆ ಕೆಲಸ ಆಗಿಲ್ಲ. ಯೋಜನೆಯ ಸದುದ್ದೇಶವೇ ಪರಿಶಿಷ್ಟರ ಬದುಕು ಅಭಿವೃದ್ದಿಯಾಗಬೇಕು ಎಂಬುದಾಗಿತ್ತು.
ಪರಿವರ್ತನೆ:ಎಸ್​ಸಿಎಸ್​ಪಿ ಮತ್ತು ಟಿಎಸ್​ಪಿ ಉಪ ಯೋಜನೆಯ ಕಲಂ 7ಡಿ ಅನ್ವಯ ಸರ್ಕಾರ ಇಚ್ಛಿಸಿದ ಯಾವುದೇ ಕಾಮಗಾರಿಯನ್ನು ಶೇ.6ರಷ್ಟು ಮೊತ್ತದಲ್ಲಿ ಕೈಗೊಳ್ಳಲು ಅವಕಾಶ ಇದೆ. ಅದನ್ನೇ ದುರುಪಯೋಗ ಮಾಡಿಕೊಂಡು ಲೋಕೋಪಯೋಗಿ, ಜಲ ಸಂಪನ್ಮೂಲ, ರಸ್ತೆ ನಿರ್ವಣ, ಕಟ್ಟಡ, ಗ್ರಾಮೀಣಾಭಿವೃದ್ಧಿಯಲ್ಲಿ ನಿರ್ವಣಕ್ಕೆ ಬಳಕೆ ಮಾಡಲಾಗುತ್ತಿದೆ. ಇದರಿಂದ ಪರಿಶಿಷ್ಟರಿಗೆ ಅನುಕೂಲವೇನು ಎಂಬ ಪ್ರಶ್ನೆ ಎದುರಾಗಿದೆ. ಆದ್ದರಿಂದಲೇ 7ಡಿ ಕಲಂ ರದ್ದು ಮಾಡುವಂತೆ ಒತ್ತಡ ಇದೆ. ಸರ್ಕಾರ ಈ ಬಗ್ಗೆ ಸದ್ಯದಲ್ಲಿಯೇ ನಿರ್ಧಾರ ಕೈಗೊಳ್ಳಲಿದೆ.
ಸರ್ಕಾರ ಮೀಸಲಿಟ್ಟ ಮೊತ್ತ ಅನ್ಯ ಉದ್ದೇಶಗಳಿಗೆ ಬಳಕೆಯಾಗದೆ ಅಗತ್ಯ ಇರುವ ಕಡೆ ಬಳಕೆಯಾಗುವಂತೆ ನೋಡಿಕೊಳ್ಳಬೇಕಾಗಿದೆ. ಪರಿಶಿಷ್ಟರ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ದಲಿತರ ವೈಯಕ್ತಿಕ ಅಭಿವೃದ್ಧಿಗೂ ಆದ್ಯತೆ ನೀಡಬೇಕು.
|ಮಾವಳ್ಳಿ ಶಂಕರ್
ಇನ್ನೆರಡು ವಾರದಲ್ಲಿ ಸಮೀಕ್ಷೆ:ಹಣ ಖರ್ಚಾದರೂ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲವೆಂಬುದನ್ನು ಮನಗಂಡೇ ಸರ್ಕಾರ ಪರಿಶಿಷ್ಟರ ಅಗತ್ಯಗಳೇನು ಎಂಬ ಬಗ್ಗೆ ಸಮೀಕ್ಷೆ ಕೈಗೆತ್ತಿಕೊಂಡಿದೆ. ಮೂಲಸೌಕರ್ಯದ ಎಲ್ಲ ಆಯಾಮಗಳಲ್ಲಿಯೂ ಸಮೀಕ್ಷೆ ನಡೆಯುತ್ತಿದೆ. ಎರಡು ಅಥವಾ ಮೂರು ವಾರದಲ್ಲಿ ವರದಿ ಸರ್ಕಾರದ ಕೈ ಸೇರಲಿದೆ.
ಇಷ್ಟೊಂದು ದೊಡ್ಡ ಮಟ್ಟದ ಹಣ ಖರ್ಚಾದಾಗ ಅದಕ್ಕೆ ತಕ್ಕಂತೆ ಯೋಜನೆಗಳು ರೂಪುಗೊಳ್ಳದಿರುವುದು ದುರದೃಷ್ಟಕರ. ಅಭಿವೃದ್ಧಿಯ ಅಂತರಗಳು ಕಡಿಮೆಯಾಗಬೇಕಾಗಿತ್ತು. ಅಂತಹ ಪ್ರಯತ್ನ ಇನ್ನಾದರೂ ಆಗಬೇಕಾಗಿದೆ. ಸಮಾಜ ಕಲ್ಯಾಣ ಮತ್ತು ಯೋಜನಾ ಇಲಾಖೆಗಳ ಜವಾಬ್ದಾರಿ ಹೆಚ್ಚಾಗಿದೆ.
|ಡಿ. ಚಂದ್ರಶೇಖರಯ್ಯರಾಜ್ಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ನೌಕರರ ಸಂಘ ಅಧ್ಯಕ್ಷ
ಪರಿಶಿಷ್ಟರ ಬದುಕು ಹಸನಾಗಲು ಕ್ರಮ ಕೈಗೊಳ್ಳಲಾಗುತ್ತದೆ. ಮನೆ ಇಲ್ಲದವರಿಗೆ ಭೂಮಿ ಖರೀದಿಸಿ ನಿವೇಶನ ಹಂಚುತ್ತೇವೆ. ವಿದ್ಯುತ್, ಶಿಕ್ಷಣ ಹೀಗೆ ಅಗತ್ಯ ವಲಯಗಳಿಗೆ ನೆರವು ನೀಡುತ್ತೇವೆ. ಕಲಂ 7ಡಿ ರದ್ದು ಮಾಡುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ಮಾಡುತ್ತೇವೆ. ಈ ಉಪಯೋಜನೆಯಿಂದ ಪರಿಶಿಷ್ಟರಿಗೆ ಅನುಕೂಲವಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
|ಕೋಟ ಶ್ರೀನಿವಾಸ ಪೂಜಾರಿಸಮಾಜ ಕಲ್ಯಾಣ ಸಚಿವ
ಸೌಲಭ್ಯ ಮರೀಚಿಕೆ:ಲಭ್ಯ ಮಾಹಿತಿಯ ಪ್ರಕಾರ ದಲಿತ ಸಮುದಾಯದಲ್ಲಿ ಅಂದಾಜು 5 ಲಕ್ಷ ಕುಟುಂಬಗಳಿಗೆ ಸ್ವಂತ ಸೂರೇ ಇಲ್ಲ. ಇನ್ನೂ ಅನೇಕ ಕುಟುಂಬಗಳ ಮನೆಗೆ ವಿದ್ಯುತ್ ಸೌಲಭ್ಯವಿಲ್ಲ. ಶಿಕ್ಷಣ ಮರೀಚಿಕೆಯಾಗಿದೆ.
ಪರಿಶಿಷ್ಟರು ಹೆಚ್ಚಿರುವ ಜಿಲ್ಲೆಗಳು:ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್, ಚಾಮರಾಜನಗರ, ಯಾದಗಿರಿ, ಕೋಲಾರ, ದಾವಣಗೆರೆ, ಕೊಪ್ಪಳ, ಮೈಸೂರು, ಕಲಬುರಗಿ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಮಗಳೂರು, ವಿಜಯನಗರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 6 =
Remember me
