ಆರಂಭಿಕ ಬದುಕು:ಕಣವಿ ಜನಿಸಿದ್ದು 1928ರ ಜೂನ್ 28ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ. ತಂದೆ ಸಕ್ಕರೆಪ್ಪ-ತಾಯಿ ಪಾರ್ವತಮ್ಮ. ತಂದೆ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು. ತಾಯಿ ಗೃಹಿಣಿ. ಕಣವಿಯವರ ಬಾಲ್ಯ ಬಡತನದಲ್ಲೇ ಕಳೆಯಿತು. ಶಿರುಂದದಲ್ಲಿ ಆರಂಭಿಕ ಶಿಕ್ಷಣ, ನಂತರ ಧಾರವಾಡದ ಆರ್​ಎಲ್​ಎಸ್ ಹೈಸ್ಕೂಲ್ ಶಿಕ್ಷಣ, ಬಳಿಕ ಕರ್ನಾಟಕ ಕಾಲೇಜಿನಲ್ಲಿ ಪದವಿ. ಕರ್ನಾಟಕ ವಿ.ವಿ.ಯ ವಿದ್ಯಾರ್ಥಿಯಾಗಿ ಕನ್ನಡದಲ್ಲಿ ಎಂ.ಎ. ಮಾಡಿದರು.
ವೃತ್ತಿಯ ಮಜಲುಗಳು:ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ-ಪ್ರಕಟಣ ವಿಭಾಗದ ಕಾರ್ಯದರ್ಶಿಯಾಗಿ 1952ರಲ್ಲಿ ವೃತ್ತಿಜೀವನ ಆರಂಭಿಸಿದರು. ಕವಿವಿ ಪ್ರಸಾರಾಂಗದ ನಿರ್ದೇಶಕರಾಗಿ, ಕನ್ನಡ ಅಧ್ಯಯನ ಪೀಠದ ಗೌರವ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ, 1983ರಲ್ಲಿ ನಿವೃತ್ತರಾದರು. ಧಾರವಾಡದ ಕಲ್ಯಾಣನಗರದ ‘ಚೆಂಬೆಳಕು’ ನಿವಾಸದಲ್ಲಿ ವಾಸವಾಗಿದ್ದ ಅವರು, ಸಾವಿರಾರು ವಿದ್ಯಾರ್ಥಿಗಳು, ಕವಿ- ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದರು.
ಕವಿತೆಗಳ ಧ್ಯಾನ:ಕಣವಿಯವರಿಗೆ ಕಾವ್ಯದ ಬಗ್ಗೆ ಅಪರಿಮಿತ ನಿಷ್ಠೆ ಇತ್ತು. ಅವರು ಕೊನೆಯ ಉಸಿರಿನವರೆಗೂ ಕವಿತೆಗಳ ಹಿಂದೆ ಬಿದ್ದಿದ್ದರು. ಆರು ದಶಕಗಳಿಗೂ ಮಿಗಿಲಾಗಿ ಕವಿತೆಗಳನ್ನು ಬರೆದರು. ಅವರ ಕವನಗಳ ಮೇಲೆ ಬೇಂದ್ರೆ, ಕುವೆಂಪು, ಪುತಿನ ಮತ್ತು ಮಧುರಚೆನ್ನರ ಕಾವ್ಯಗಳ ಪ್ರಭಾವ ಮತ್ತು ಬಸವಣ್ಣನ ಶೀಲದ ಛಾಯೆ ಇತ್ತು. ಮಧುರಚೆನ್ನ, ಬೇಂದ್ರೆ, ಗುರುಲಿಂಗ ಕಾಪಸೆ, ಶಂಕರ ಮೊಕಾಶಿ ಪುಣೇಕರ್ ಮುಂತಾದವರ ಸಾಲಿಗೆ ಸೇರಿದವರು ಕಣವಿ. ಪ್ರಕೃತಿಯ ವರ್ಣನೆ, ಮಳೆಗಾಲದ ಚಿತ್ರಣದಿಂದ ಕೂಡಿದ ರಮ್ಯಭಾವದ ಕವನಗಳನ್ನು ಹೆಚ್ಚಾಗಿ ರಚಿಸುತ್ತಿದ್ದರು. ನಂತರ ಬೇರೆ ಶೈಲಿಯ ರಚನೆಗಳನ್ನು ಮಾಡಿದರು.
ಸಾಂಸ್ಕೃತಿಕ ಚಳವಳಿಯ ಸಾಕ್ಷಿ:ಧಾರವಾಡದ ಎಲ್ಲ ಬಗೆಯ ಸಾಂಸ್ಕೃತಿಕ ಜಗಳ, ಚಳವಳಿಗೆ ಕಣವಿಯವರು ಸಾಕ್ಷಿಯಾಗಿದ್ದರು. ಚಂಪಾ ನೇತೃತ್ವದ ಬಂಡಾಯ ಚಳವಳಿಯಾಗಲಿ, ಗೋಕಾಕ್ ಚಳವಳಿಯಾಗಲಿ ಎಲ್ಲವೂ ಅವರಿಗೆ ತಿಳಿದಿತ್ತು. ಸಾಹಿತ್ಯದ ಸುಳಿಗಳಿಗೆ ಅವರು ಸಾಕ್ಷಿಯಾಗಿದ್ದರು. ಆದರೆ ಕನ್ನಡಪರವಾದ ಹೋರಾಟಗಳಲ್ಲಿ ಅವರು ಕಡ್ಡಾಯವಾಗಿ ಭಾಗವಹಿಸುತ್ತಿದ್ದರು. ಉದಾಹರಣೆಗೆ ಧಾರವಾಡದಲ್ಲಿ ಗೋಕಾಕ್ ಚಳವಳಿ ನಡೆದಾಗ ಕಣವಿಯವರು ಅದರ ಭಾಗವಾಗಿದ್ದರು. ಮುಂದೆ ಧಾರವಾಡದಲ್ಲಿ ಮನೋಹರ ಗ್ರಂಥಮಾಲೆಯ ಬಳಗದವರು ‘ಸಾಹಿತ್ಯ ಸಂಭ್ರಮ’ ನಡೆಸಿದಾಗ ಅದರ ಪರವಾಗಿ ನಿಂತರು.
ಗದ್ಯ-ವಿಮರ್ಶೆ-ಪ್ರಬಂಧ:ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ, ವಚನಾಂತರಂಗ, ಶುಭನುಡಿಯೆ ಹಕ್ಕಿ, ಸಾಹಿತ್ಯ ಸಮಾಹಿತ, ಸದ್ಭಾವ, ಕಣವಿ ಸಮಗ್ರ ಗದ್ಯ, ಬೇಂದ್ರೆ ಕಾವ್ಯ ಕುಹುಕ್ಕುಹೂ, ಅವಿನಾಭಾವ, ಸ್ಮೃತಿ ಸೌರಭ, ನವಿಲೂರು ಮನೆಯಿಂದ, ನವ್ಯಧ್ವನಿ, ನಮ್ಮೆಲ್ಲರ ನೆಹರು, ನೈವೇದ್ಯ, ಕನ್ನಡದ ಕಾಲು ಶತಮಾನ, ಸಿದ್ಧಿ ವಿನಾಯಕ ಮೋದಕ, 1980: ಕವಿತೆಗಳು, ಜೀವನಸಿದ್ಧಿ, ಅನುಭಾವ ಪಥ, ಬಾಬಾ ಫರೀದ್.
ಎಂ.ಎ. ಮುಗಿದ ವರ್ಷವೇ ಕಣವಿ ಶಾಂತಾದೇವಿ ಅವರೊಡನೆ ವಿವಾಹವಾದರು. ಅವರೂ ಕಥೆಗಾರ್ತಿಯಾಗಿದ್ದರಿಂದ ‘ಸಾಹಿತಿ ದಂಪತಿ’ ಎಂದೇ ಖ್ಯಾತರಾಗಿದ್ದರು. 2020ರಲ್ಲಿ ಶಾಂತಾದೇವಿ ನಿಧನರಾದ ನಂತರ ಕಣವಿಯವರು ಸಭೆ-ಸಮಾರಂಭಗಳಿಂದ ದೂರವಾಗಿದ್ದರು. ಕೋವಿಡ್ ಆರಂಭವಾದಾಗಿನಿಂದ ಧಾರವಾಡದ ನಿವಾಸ ಬಿಟ್ಟರೆ, ಮಕ್ಕಳ ಮನೆಗಳಿಗೆ ಸೀಮಿತರಾಗಿದ್ದರು. ಮದುವೆ ಬಳಿಕ ಕಣವಿ ದಂಪತಿ ನೆಲೆಸಿದ್ದು ಧಾರವಾಡದಲ್ಲಿ. ಧಾರವಾಡ ಕಣವಿಯವರ ದಾಂಪತ್ಯ, ವೃತ್ತಿಜೀವನ ಮತ್ತು ಕಾವ್ಯಜೀವನದ ಧರೆಯಾಯಿತು. ಸುಸಂಸ್ಕೃತ, ಮೆಲುಮಾತಿನ ಕಣವಿ ತಮ್ಮ ಅಭಿಪ್ರಾಯಗಳನ್ನು ಯಾರ ಮೇಲೂ ಎಂದೂ ಹೇರಿದವರಲ್ಲ. ಕಣವಿ ದಂಪತಿಗೆ ಐವರು ಮಕ್ಕಳು; ನಾಲ್ವರು ಗಂಡು (ಶಿವಾನಂದ, ಚಂದ್ರಮೌಳಿ (ಕ್ರಿಕೆಟ್ ವೀಕ್ಷಕ ವಿವರಣೆಕಾರ), ಪ್ರಿಯದರ್ಶಿ, ಕರುಣಪ್ರಸಾದ) ಮತ್ತು ಒಬ್ಬ ಮಗಳು ರಂಜನಾ. ಮಕ್ಕಳ ಮೇಲಾಗಲೀ, ವೃತ್ತಿಯಲ್ಲಿ ಯಾವುದೇ ವಿದ್ಯಾರ್ಥಿಯ ಮೇಲಾಗಲೀ ಅವರು ರೇಗಿದವರಲ್ಲ. ಒಬ್ಬರು ಇಷ್ಟು ಮೃದುವಾಗಿರಬಹುದೇ ಎಂಬಷ್ಟು ಮೃದುಧೋರಣೆ ಅವರದ್ದು. ಕಣವಿಯವರ ಈ ಗುಣ ಅವರ ಮನೆ ಯನ್ನು ಹೇಗೋ ಹಾಗೆ ಅವರ ವೃತ್ತಿಜೀವನವನ್ನು ಪೊರೆದ ಒಂದು ಅಪರೂಪದ ಗುಣ.
ಕಾವ್ಯ:ಕಣವಿಯವರ ಮೊದಲ ಕಾವ್ಯ ಕಾವ್ಯಾಕ್ಷಿ ಪ್ರಕಟವಾಗಿದ್ದು 1949ರಲ್ಲಿ. ಮುಂದೆ ಭಾವಜೀವಿ, ಆಕಾಶಬುಟ್ಟಿ, ಮಧು ಚಂದ್ರ, ದೀಪಧಾರಿ, ಮಣ್ಣಿನ ಮೆರವಣಿಗೆ, ನೆಲ-ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಚಿರಂ ತನ ದಾಹ, ಜೀವಧ್ವನಿ, ಹಕ್ಕೀಪುಚ್ಚ, ಕಾರ್ತಿಕದ ಮೋಡ, ಹೂವು ಹೊರಳುವವು ಸೂರ್ಯನ ಕಡೆಗೆ, ಹೊಂಬೆಳಕು, ಜೀನಿಯಾ, ಬರೆದು ತೀರದ ಬದುಕು, ಸುನೀತ ಸಂಪದ, ಕಣವಿ ಸಮಗ್ರ ಕಾವ್ಯ, ಚಿಣ್ಣರ ಲೋಕವ ತೆರೆಯೋಣ, ಮಾನಸ ಪೂಜೆ, ಜೀವ-ಜೀವಾಳ, ಭೂಮಿ- ಬದುಕು, ಕಣವಿ ಕಾವ್ಯ ಭಂಡಾರ ಇತ್ಯಾದಿ ರಚಿಸಿದರು. (ಒಟ್ಟು ಕವನಗಳು 600)
ಕಾಲ ನಿಲ್ಲುವುದಿಲ್ಲ
ದೇಶದ ರಾಜಕೀಯ ಗಮನಿಸುತ್ತಿದ್ದ ಅವರು ರಾಷ್ಟ್ರದ ಕರೆ, ಇಂದೇ ಸೀಮೋಲ್ಲಂಘನ, ನೆಹರು ಶ್ರದ್ಧಾಂಜಲಿ, ಭಾರತ ಸುಪುತ್ರನ ಕೊನೆಯ ಬಯಕೆ ಕವನಗಳನ್ನು ರಚಿಸಿದ್ದಾರೆ. ಅವರು ಎಷ್ಟು ತಣ್ಣಗೆ ಜೀವನ ನೋಡಬಲ್ಲವರು ಎಂಬುದಕ್ಕೆ ‘ಕಾಲ ನಿಲ್ಲುವುದಿಲ್ಲ’ ಕವನ ಸಾಕ್ಷಿ.
ಮಾಡಿ ಉಂಡಿದ್ದೇವೆ ನಮನಮಗೆ ಸೇರಿದ ಅಡುಗೆ
ಇರಬಹುದು ಇದರಲ್ಲಿ ಕೆಲಭಾಗ ಜೀವನ ಸತ್ವ ಕಡಿಮೆ
ಇದ್ದ ಶಕ್ತಿಯಲ್ಲಿ ತುಸುದೂರ ನಡೆದಿದ್ದೇವೆ
ರೂಢಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ
ಮುಖ್ಯ ಬೇಕಾದದ್ದು ಜೀವಂತ ಗತಿ, ಹೊಸ ನೆತ್ತರಿನ ಕೊಡುಗೆ
ಪ್ರಶಸ್ತಿ ಗೌರವಗಳು:‘ಆಕಾಶಬುಟ್ಟಿ’ ಕವನ ಸಂಕಲನಕ್ಕೆ ಮುಂಬೈ ರಾಜ್ಯದ ಪ್ರಥಮ ಬಹುಮಾನ ಪಡೆದಿದ್ದರು. ಜೀವಧ್ವನಿ ಕವನ ಸಂಕಲನಕ್ಕೆ 1982ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಅಲ್ಲದೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ, ಬೇಂದ್ರೆ ರಾಷ್ಟ್ರೀಯ ಕಾವ್ಯ ಪ್ರಶಸ್ತಿ ಮುಂತಾದ ಗೌರವಕ್ಕೆ ಭಾಜನರಾಗಿದ್ದಾರೆ. ಅವರಿಗೆ ಆಪ್ತರು ಸೇರಿಕೊಂಡು 1980ರಲ್ಲಿ ‘ಚೆಂಬೆಳಕು’ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿದರು. ಕಣವಿಯವರು ಹಲವಾರು ಸಂಘಟನೆಗಳ ಗೌರವ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಜನರಲ್ ಕೌನ್ಸಿಲ್ ಮತ್ತು ಕನ್ನಡ ಸಲಹಾ ಸಮಿತಿ ಸದಸ್ಯರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ-ಅಧ್ಯಕ್ಷರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಗೋಕಾಕ್ ಚಳವಳಿಯ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಉಪಾಧ್ಯಕ್ಷರಾಗಿ, ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ಸರ್ವಾಧ್ಯಕ್ಷತೆ, ಧಾರವಾಡ ಸಾಹಿತ್ಯ ಸಂಭ್ರಮದ ಗೌರವಾಧ್ಯಕ್ಷರಾಗಿದ್ದರು ಮತ್ತು 2016ರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿದ್ದರು.
ಗೌರೀಶ ಕಾಯ್ಕಿಣಿಯವರ ‘ಚೆನ್ನವೀರ ಕಣವಿ ಕಾವ್ಯದೃಷ್ಟಿ’ ಗ್ರಂಥ ಕಣವಿ ಸಾಹಿತ್ಯದ ವಿಮರ್ಶೆಯನ್ನು ಹೊಂದಿದೆ. ಕಣವಿಯವರು ಅಮೆರಿಕದ ಮೇರಿಲ್ಯಾಂಡ್​ನ ಬಾಲ್ಟಿಮೋರ್​ನಲ್ಲಿ 2006ರಲ್ಲಿ ಜರುಗಿದ 4ನೇ ವಿಶ್ವ ಕನ್ನಡ ಸಮ್ಮೇಳನದ (ಅಕ್ಕ ಸಮ್ಮೇಳನ) ಅಧ್ಯಕ್ಷತೆ ವಹಿಸಿದ್ದರು. 2010ರಲ್ಲಿ ದುಬೈ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರ ಭಾವಗೀತೆಗಳ ಧ್ವನಿಸುರುಳಿಗಳು ಹೊರಬಂದಿವೆ. ಜಿ.ವಿ. ಅತ್ರಿ ಸಂಗೀತ ನಿರ್ದೇಶನದ ‘ಮಲ್ಲಿಗೆ ದಂಡೆ’, ಲಹರಿ ಕಂಪನಿಯ ‘ಒಂದು ಮುಂಜಾವಿನಲಿ’, ಜಯಶ್ರೀ ಅರವಿಂದ ಸಂಗೀತ ನಿರ್ದೇಶನದ ‘ಮಧು ಕೋಗಿಲೆ’, ಮೃತ್ಯುಂಜಯ ದೊಡವಾಡ ಸಂಗೀತ ನಿರ್ದೇಶನದ ‘ಬರುವುದೆಲ್ಲ ಬರಲಿಬಿಡು’ ಪ್ರಮುಖವಾದುವು. ರಾಜ್ಯ ವಾರ್ತಾ ಇಲಾಖೆ ಹಾಗೂ ಮೈಸೂರಿನ ಭಾಷಾ ಸಂಸ್ಥೆ ಕಣವಿಯವರ ಕುರಿತು ಸಾಕ್ಷ್ಯಚಿತ್ರ ನಿರ್ವಿು ಸಿವೆ.
ಎಲ್ಲರೊಂದಿಗೂ ಬೆರೆಯುತ್ತಿದ್ದರು:ಅವರು ಯಾವುದೇ ಪೂರ್ವಗ್ರಹವಿಲ್ಲದೆ ವಿವಿಧ ರೀತಿಯ ಸಭೆಗಳ ಅಧ್ಯಕ್ಷತೆ ನಡೆಸುತ್ತಿದ್ದರು. ಒಂದು ಪ್ರಸಂಗ. ಧಾರವಾಡದ ದೀರ್ಘಕಾಲದ ನಿವಾಸಿ ಯಾಗಿದ್ದ ಪೊ›. ಕೆ.ಎಸ್. ನಾರಾಯಣಾ ಚಾರ್ಯರು ಕಣವಿಯವರ ಮಿತ್ರರು. ಕೆ.ಎಸ್.ನ. ಅವರ ರಾಷ್ಟ್ರೀಯವಾದದ ಸಾಹಿತ್ಯ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ನಾರಾಯಣಾಚಾರ್ಯರ ಸಾಹಿತ್ಯದ ಕುರಿತು ಮೌಲಿಕವಾದ ಮಾತುಗಳನ್ನು ಆಡಿದ್ದರು. ಇನ್ನೊಂದು ಸಲ ಎಸ್.ಎಲ್.ಭೈರಪ್ಪ ಸಾಹಿತ್ಯ ಕುರಿತ ವಿಚಾರಗೋಷ್ಠಿಗೆ ಕಣವಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಕಣವಿ-ಭೈರಪ್ಪನವರು ಮಾತನಾಡುತ್ತಿದ್ದರು. ಕಣವಿಯವರು ‘ಬಹಳ ದಿನಗಳಾದವು ನಮ್ಮ ಮನೆಗೆ ನೀವು ಬಂದು’ ಎಂದರು. ಅದಕ್ಕೆ ಭೈರಪ್ಪನವರು ‘ಅದಕ್ಕೇನು ಒಂದು ನಾಲ್ಕು ದಿನ ಬಂದು ನಿಮ್ಮ ಮನೆಯಲ್ಲೇ ಇರುತ್ತೇನೆ’ ಎಂದು ಮುಗುಳ್ನಕ್ಕರು. ಇದು ಅವರಿಬ್ಬರ ಸ್ನೇಹ ಸೂಚಿಸುವ ಪ್ರಸಂಗ.

ನಾಡೋಜ ಚೆನ್ನವೀರ ಕಣವಿ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ತಂದಿದೆ. ಕಣವಿ ಅವರು 1996ರಲ್ಲಿ ಹಾಸನದಲ್ಲಿ ನಡೆದ 65ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. 36ಕ್ಕೂ ಹೆಚ್ಚು ಗ್ರಂಥಗಳನ್ನು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದರು. ಸೃಜನಶೀಲ ಕವಿಯನ್ನು ಕಳೆದುಕೊಂಡ ನಾಡು ಬಡವಾಗಿದೆ.
|ರಘುನಂದನ ಭಟ್ಟನರೂರು ಅಖಿಲ ಭಾರತೀಯ ಸಾಹಿತ್ಯ ಪರಿಷದ್​ನ ರಾಜ್ಯ ಪ್ರಧಾನ ಕಾರ್ಯದರ್ಶಿ
ಮೊದಲ ಕವನ ಸಂಕಲನ ಕಾವ್ಯಾಕ್ಷಿ (1949), ಬಳಿಕ ಕಣವಿಯವರು ಬೆಳೆಯುತ್ತ ಹೋದರು. 1950ರಲ್ಲಿ ಅವರ ಎರಡನೆಯ ಸಂಕಲನವಾಗಿ ಭಾವಜೀವಿ ಹೊರಬಂತು. ನಂತರ ಮೂರನೆಯ ಸಂಕಲನ ಹೊರತರುವ ವೇಳೆಗೆ ಕನ್ನಡ ಸಾಹಿತ್ಯದಲ್ಲಿ ಒಂದು ಕಡೆ ಪ್ರಗತಿಶೀಲರ ಕಾದಂಬರಿ, ಕಥೆಗಳು ಮತ್ತೊಂದು ಕಡೆ ನವ್ಯ ಕಾವ್ಯದ ಅಬ್ಬರ ಜೋರಾಗಿತ್ತು. ಮತ್ತೊಂದು ಕಡೆ ದೇಶವು ಆಗತಾನೆ ಸ್ವಾತಂತ್ರ್ಯ ಪಡೆದು ಹೊಸ ಸಂವಿಧಾನ ಪಡೆದಿತ್ತು. ಈ ಬದಲಾದ ಸಾರ್ವಜನಿಕ, ರಾಜಕೀಯ ಸಂದರ್ಭದಲ್ಲಿ ಕಣವಿಯವರ ಮೂರನೆಯ ಕವನ ಸಂಕಲನ ‘ಆಕಾಶಬುಟ್ಟಿ’ ಪ್ರಕಟವಾಯಿತು. ಇದರಲ್ಲಿ ಕಣವಿಯವರ ಹಿಂದಿನ ಸಂಕಲನಗಳಲ್ಲಿ ಇರದ ಹೊಸತನವನ್ನು ಎಲ್ಲರೂ ಗುರುತಿಸಿದರು. ಮುಂದೆ ಕಣವಿಯವರು ಭಾಷೆ, ಛಂದಸ್ಸು, ಭಾವನಿರೂಪಣೆ ಎಲ್ಲ ವಿಷಯಗಳಲ್ಲಿ ಹೊಸತನದ ಹುಡುಕಾಟ ಮಾಡುತ್ತಲೇ ಇದ್ದರು. ಮುಖ್ಯವಾಗಿ ಅವರು ಕೆಲವು ಗದ್ಯ ಕೃತಿಗಳನ್ನು ರಚಿಸಿದ್ದರೂ ತಮ್ಮ ನೆಲೆ ಕಾವ್ಯ ಎಂಬುದನ್ನು ಅರಿತುಕೊಂಡರು. ಈ ಖಚಿತ ಅರಿವು ಒಬ್ಬ ಲೇಖಕರಿಗೆ ಬರುವುದು ಸಾಮಾನ್ಯ ಸಂಗತಿಯಲ್ಲ. ಅಡಿಗ, ನರಸಿಂಹಸ್ವಾಮಿ ಮತ್ತು ಕಣವಿಯವರು ಅವರ ತಲೆಮಾರಿನಲ್ಲಿ ಈ ಖಚಿತತೆ ಹೊಂದಿದ ಪ್ರಮುಖ ಕವಿಗಳು.
ಕಣವಿಯವರ ಮಿತ್ರರಗುಂಪು ವಿಶೇಷವಿತ್ತು. ಕಣವಿ, ಎಂ.ಎಂ.ಕಲ್ಬುರ್ಗಿ, ಗುರುಲಿಂಗ ಕಾಪಸೆ ಮತ್ತು ಸದಾನಂದ ಕನವಳ್ಳಿಯವರ ಜೋಡಿಗೆ ಆಪ್ತರು ‘ಕಳ್ಳುಬಳ್ಳಿ ಗೆಳೆಯರು’ ಎಂದು ಕರೆಯುತ್ತಿದ್ದರು. ಕಣವಿ ಕವಿತೆ ಬರೆಯತೊಡಗಿದಾಗ ಧಾರವಾಡದಲ್ಲಿ ಬೇಂದ್ರೆ, ಮೈಸೂರಿನಲ್ಲಿ ಅಡಿಗರು, ಕುವೆಂಪು, ಬೆಂಗಳೂರಿನಲ್ಲಿ ಪುತಿನ ಮತ್ತು ಕೆ.ಎಸ್.ನರಸಿಂಹಸ್ವಾಮಿ ಪ್ರಮುಖ ಕವಿಗಳಾಗಿದ್ದರು. ಕಣವಿ ಮತ್ತು ಜಿ.ಎಸ್.ಶಿವರುದ್ರಪ್ಪನವರು ಹೊಸದಾಗಿ ಹೆಸರು ಮಾಡತೊಡಗಿದ್ದರು. ಅವರಿಬ್ಬರ ಕವನಗಳು ರಸಿಕರ ಗಮನ ಸೆಳೆಯತೊಡಗಿದ್ದವು. ಕಣವಿ, ಜಿ.ಎಸ್.ಎಸ್. ನವೋದಯ ಮತ್ತು ನವ್ಯ ಕವನ ಧಾರೆಗಳ ಉತ್ತಮ ಅಂಶಗಳನ್ನು ಹೀರಿಕೊಂಡಿದ್ದರು. ಹೀಗಾಗಿ ಅವರನ್ನು ‘ಸಮನ್ವಯ ಕವಿಗಳು’ ಎಂದು ವಿಮರ್ಶಕರು ಗುರುತಿಸಿದರು. ಆದರೆ ಉಳಿದ ಉತ್ತಮ ಕವಿಗಳಂತೆ ಕಣವಿಯವರನ್ನು ಪ್ರತ್ಯೇಕವಾಗಿ ಅವರ ಕಾವ್ಯದ ಸಾಧನೆಯ ಮೇಲೆ ಅಳೆದು ಕನ್ನಡ ವಿಮರ್ಶೆ ಮಾಡಿದ್ದು ಸಮಾಧಾನದ ಸಂಗತಿ.
ಕಂಬನಿ ಮಿಡಿದ ವಿಧಾನಸಭೆ:ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ನಿಧನಕ್ಕೆ ವಿಧಾನಸಭೆ ಕಂಬನಿ ಮಿಡಿಯಿತು. ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ನಿರ್ಣಯ ಮಂಡಿಸಿ, ‘ನವ್ಯತೆಯಲ್ಲಿಯೂ ವಿಭಿನ್ನತೆ ಕಾಯ್ದುಕೊಂಡ ಕನ್ನಡದ ಸಮನ್ವಯ ಕವಿ’ ಎಂದು ನೆನಪಿಸಿಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಣವಿ ಅವರು ಸೃಜನಶೀಲ ಕವಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಕಣವಿ ನಿಧನದಿಂದ ಸಾಹಿತ್ಯ ಲೋಕವಲ್ಲದೆ ಇಡೀ ನಾಡಿಗೆ ನಷ್ಟವಾಗಿದೆ ಎಂದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕಣವಿಯವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ರಾಷ್ಟ್ರಕವಿ ಎಂದು ಘೋಷಿಸಿದ್ದರೂ ಚೆನ್ನಾಗಿರುತ್ತಿತ್ತು, ರಾಷ್ಟ್ರಕವಿ ಎಂದು ಕರೆಸಿಕೊಳ್ಳಲು ಎಲ್ಲ ಅರ್ಹತೆ ಹೊಂದಿದ್ದರು. ಸಮಾಜಮುಖಿ ಕವಿಯ ನಿಧನವು ನೋವಿನ ಸಂಗತಿ ಎಂದರು.

ಕಣವಿ ಅವರನ್ನು ಭೇಟಿಯಾದಾಗಲೆಲ್ಲ ಕನ್ನಡ, ಕನ್ನಡ ಸಾಹಿತ್ಯ, ಧಾರವಾಡದ ಅಭಿವೃದ್ಧಿಯ ಬಗ್ಗೆ ರ್ಚಚಿಸುತ್ತಿದ್ದರು. ಧೀಮಂತ ಸಾಹಿತಿಯನ್ನು ಕಳೆದುಕೊಂಡ ಕರುನಾಡು ಬಡವಾಗಿದೆ.
|ಪ್ರಲ್ಹಾದ ಜೋಶಿಕೇಂದ್ರ ಸಚಿವ
ಸಾಹಿತ್ಯ ಕ್ಷೇತ್ರದಲ್ಲಿ ಚೆನ್ನವೀರ ಕಣವಿ ಅವರು ಆದರ್ಶದ ಮೇರು ಶಿಖರವಾಗಿ ನಿಲ್ಲುತ್ತಾರೆ. ಅವರಿಗೆ ‘ರಾಷ್ಟ್ರಕವಿ’ ಗೌರವ ಎಂದೋ ದೊರೆಯಬೇಕಾಗಿತ್ತು, ಆ ಕುರಿತು ಸರ್ಕಾರವು ಕೆಲ ದಿನಗಳ ಹಿಂದೆಯೇ ಶಿಫಾರಸು ಮಾಡಿತ್ತು. ಒಂದು ಶತಮಾನದ ಕೊಂಡಿ ಕಳಚಿರುವುದು ದುಃಖದ ಸಂಗತಿ. ಕಣವಿ ಅವರು ಕನ್ನಡಿಗರ ಹೃದಯದಲ್ಲಿ ತಮ್ಮ ಸಾಹಿತ್ಯದ ಮೂಲಕ ಸದಾ ಜೀವಂತವಾಗಿರುತ್ತಾರೆ.
|ಡಾ. ಪ್ರಭಾಕರ ಕೋರೆಕೆಎಲ್​ಇ ಕಾರ್ಯಾಧ್ಯಕ್ಷ
ಸಾರಸ್ವತ ಲೋಕ ಅಪರೂಪದ ಕವಿಯನ್ನು ಕಳೆದುಕೊಂಡಿದೆ. ಅವರು ಸಜ್ಜನಿಕೆ, ಸೌಜನ್ಯ, ತಾಳ್ಮೆಯ ಪ್ರತಿರೂಪವಾಗಿದ್ದರು. ಅವರ ಸಂಪೂರ್ಣ ಕೃತಿಗಳನ್ನು ಸಾಹಿತ್ಯ ಪರಿಷತ್​ನಿಂದ ಮರುಪ್ರಕಟಣೆಗೆ ಯತ್ನಿಸಲಾಗುವುದು.
|ನಾಡೋಜ ಮಹೇಶ ಜೋಶಿಕಸಾಪ ಅಧ್ಯಕ್ಷ
ಸಮನ್ವಯ ಕವಿ
ಸಮನ್ವಯ ಕವಿ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡವರು. ಸಾಹಿತ್ಯ ಸಾಧನೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1981), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1985), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1989), ಪಂಪ ಪ್ರಶಸ್ತಿ (1999) ಸೇರಿ ಹಲವು ಪ್ರಶಸ್ತಿಗಳು ಕಣವಿ ಅವರಿಗೆ ಸಂದಿವೆ. 65ನೇ ಕನ್ನಡ ಸಾಹಿತ್ಯ ಸಮ್ಮೇಳನ (1996) ಹಾಸನದಲ್ಲಿ ಜರುಗಿದಾಗ ಕಣವಿ ಸಮ್ಮೇಳನಾಧ್ಯಕ್ಷರಾಗಿದ್ದರು. ಕನ್ನಡ ನಾಡು-ನುಡಿಗಾಗಿ ನಡೆದ ಚಳವಳಿಗಳಲ್ಲಿ ಕಣವಿ ಭಾಗವಹಿಸಿದ್ದರು. ಅವರ ಕಾವ್ಯ ಸಂಕಲನಗಳಲ್ಲಿ ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ದೀಪಧಾರಿ, ಮೆರವಣಿಗೆ, ಜೀವಧ್ವನಿ, ನಗರದಲ್ಲಿ ನೆರಳು, ಚಿರಂತನದಾಸ ಮೊದಲಾದವು ಪ್ರಸಿದ್ಧವಾಗಿವೆ. ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಸಮತೋಲನ ಇತ್ಯಾದಿ ವಿಮರ್ಶಾ ಗ್ರಂಥಗಳು ಜನಪ್ರಿಯವಾಗಿವೆ.
|ಡಾ. ಜಿ.ಎಂ. ಹೆಗಡೆ
ಚೆನ್ನವೀರ ಕಣವಿ ಅವರು ಭಾವಜೀವಿಯಾಗಿ, ಸ್ನೇಹಜೀವಿ ಯಾಗಿ, ಪ್ರೀತಿ, ಅಂತಃಕರಣಗಳಿಂದ ಮಾನವೀಯ ಸಂಬಂಧಗಳನ್ನು ಹೊಳೆಯಾಗಿ ಹೊಳೆಯಾಗಿ ಹರಿಸಿದವರು. ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ ಕನ್ನಡ ಕಾವ್ಯ ಪರಂಪರೆಯಲ್ಲಿ ಕಣವಿಯವರ ಸೃಜನಶೀಲತೆ ಅಗಾಧವಾದದ್ದು. ನಿಸರ್ಗದ ಬಗೆಗೆ ಗಾಢವಾದ ಪ್ರೀತಿ, ಮಾನವ ಬದುಕಿನ ಉತ್ಕರ್ಷದ ಬಗೆಗೆ ಪ್ರೀತಿ ತುಂಬಿದ ಕಣವಿ ಅವರ ಕವಿತೆಗಳು ಸುಸಂಸ್ಕೃತ ಮನಸ್ಸಿನ ಪ್ರತಿಬಿಂಬವಾಗಿದೆ. ಶ್ರೇಷ್ಠ ಕವಿಗಳಾಗಿರುವಂತೆಯೇ ಸಹೃದಯಿ ವಿಮರ್ಶಕರೂ ಆಗಿದ್ದರು. ಕನ್ನಡ ಸಾಹಿತ್ಯ ಪರಂಪರೆಯನ್ನು, ಸಮಕಾಲೀನ ಸಾಹಿತಿಗಳನ್ನು, ಕವಿಕಾವ್ಯವನ್ನು ವಿಮರ್ಶೆಯ ನಿಕಷಕ್ಕೆ ತಂದವರು ಕಣವಿಯವರು. ‘ಸಾಹಿತ್ಯ ಚಿಂತನ’, ಕಾವ್ಯಾನುಸಂಧಾನ’, ‘ಸಮಾಹಿತ’, ‘ಸಮತೋಲನ’, ‘ಮಧುರಚೆನ್ನ’, ‘ವಚನಾಂತರಂಗ’ ಸಾಹಿತ್ಯ ಸಾಮಾಜಿಕ ವಿಮರ್ಶಾ ಗ್ರಂಥಗಳಲ್ಲಿ ಕಣವಿಯವರ ಸಾಹಿತ್ಯ ವಿಮರ್ಶೆಯ ಸೊಗಸನ್ನು ನಾವು ಆಸ್ವಾದಿಸುತ್ತೇವೆ. ಭಾರತೀಯ ಕಾವ್ಯ ಮೀಮಾಂಸೆ, ಪಾಶ್ಚಾತ್ಯ ವಿಮರ್ಶೆ ಅಧ್ಯಯನದಿಂದ ಕಣವಿಯವರು ಸಮತೋಲನ ನಿಲುವನ್ನು ವಿಮರ್ಶೆಯಲ್ಲಿ ಪ್ರಕಟಿಸಿದ್ದಾರೆ. ಕನ್ನಡದ ಅನೇಕ ಸಮಕಾಲೀನ ಕವಿಗಳ ಕವಿತಾ ಸಂಕಲನಗಳಿಗೆ ಕಣವಿ ಅವರು ಬರೆದ ಮುನ್ನುಡಿಗಳ ಸಂಚಯ ‘ಶುಭ ನುಡಿಯೆ ಹಕ್ಕಿ’ ಪ್ರಕಟವಾಗಿದೆ. ‘ಕವಿ ಕಣವಿ ಸಂದರ್ಶನ’ ಗ್ರಂಥದಲ್ಲಿ ಕಣವಿಯವರೊಂದಿಗಿನ ಸಾಹಿತ್ಯ ಸಂವಾದವಿದೆ.
ಅವರು ಸಮಾಹಿತ ಪ್ರತಿಭೆಯ ಕವಿ. ‘ಭಾವಜೀವಿಯು ನಾನು, ನನ್ನೆದೆಯ ನಂಬಿರುವ ತಂಬಿರುವ ಕನಸುಗಳ ಕಲ್ಪವೃಕ್ಷ’ ಎಂದ ಕಣವಿಯವರು ಭಾವಗೀತೆಯ ಉತ್ಕರ್ಷದ ಕಾಲದಲ್ಲಿ ಕಾವ್ಯಹಾದಿಯಲ್ಲಿ ಹೆಜ್ಜೆಯಿಟ್ಟರು. ಪ್ರಗತಿಶೀಲ, ನವ್ಯ, ನವ್ಯೋತ್ತರ ಸಂದರ್ಭದಲ್ಲಿ ಕಣವಿ ಯವರು ತಮ್ಮ ಕಾವ್ಯವನ್ನು ಶ್ರುತಿಗೊಳಿಸಿದವರು. ಸಾಹಿತ್ಯದ ಯಾವುದೇ ಪಥ, ಪ್ರಣಾಲಿಗೆ ಬದ್ಧರಾಗದೆ ಎಲ್ಲ ಕಾಲದ, ಎಲ್ಲ ಮನೋಧರ್ಮದ ಚಿಂತನೆಗಳನ್ನು ತಮ್ಮ ದಾಗಿಸಿಕೊಂಡು ಕವಿತೆ ರಚಿಸಿದ ಅವರು ಶುದ್ಧಸಾಹಿತ್ಯದ ಸಾತ್ವಿಕ ವಕ್ತಾರರು. ಕಣವಿ ಕಾವ್ಯದಲ್ಲಿ ಪರಂಪರೆಯ ಅರಿವು, ಚಾರಿತ್ರಿಕ ಪ್ರಜ್ಞೆ, ಸಮಕಾಲೀನ ಸಂವೇದನೆ ಅಂತಸ್ಥವಾಗಿವೆ. ‘ಏನಾದರೂ ಇರಲಿ, ಹಾಡು ನಿಲ್ಲಿಸಬೇಡ, ದೀಪ ತಟ್ಟನೆ ಆರಿಹೋಗಬಹುದು’ ಎಂದು ಹೇಳಿದ ಅವರು ಕವಿತೆಯ ಸೃಷ್ಟಿ ಕಾರ್ಯದಲ್ಲಿ ನಿರಂತರವಾಗಿ ತಮ್ಮ ಭಾವಸಂವೇದನೆಗಳನ್ನು ಪ್ರಕಟಿಸುತ್ತ ಬಂದರು.
ಕಣವಿಯವರ ಕಾವ್ಯದ ವಿಮರ್ಶೆ ಬೇಂದ್ರೆಯವರ ಮೂಲಕವೇ ಆರಂಭವಾದದ್ದು ಒಂದು ಚಾರಿತ್ರಿಕ ಘಟನೆ ಎಂದು ಹೇಳಬಹುದು. ಬೇಂದ್ರೆಯವರು ಕಣವಿ ಕಾವ್ಯದಲ್ಲಿ ‘ಜೀವಂತ ಗತಿ’ಯನ್ನು ಗುರುತಿಸಿದರು. ಗೋಕಾಕರು ‘ಸೂಕ್ಷಾ್ಮಂತಃಕರಣ ಪ್ರಜ್ಞೆಯಲ್ಲಿಯೇ ಕಣವಿ ಕಾವ್ಯದ ಉಗಮಸ್ಥಾನವಿದೆ’ ಎಂದರು. ‘ಅಮೋಘವಾದ ಅನುಭವ ರಸಾರ್ದ್ರ ದೃಷ್ಟಿಯಿಂದ ಕಣವಿ ಕಾವ್ಯ ಅಲೌಕಿಕವಾದ ಉಲ್ಲಾಸ ನೀಡುತ್ತದೆ’ ಎಂದು ಪುತಿನ ಉದ್ಗರಿಸಿದ್ದಾರೆ. ‘ಮೂರ್ತಿ ಶಿಲ್ಪದಂತೆ ಕಣವಿ ಕವಿತೆಗಳ ಅಭಿವ್ಯಕ್ತಿ ಅಸಾಧಾರಣವಾದದ್ದು’ ಎಂದು ಗೌರೀಶ ಕಾಯ್ಕಿಣಿ ಅವರು ಕಣವಿ ಕವಿತೆಗಳ ಕಸಬುಗಾರಿಕೆಯ ವೈಶಿಷ್ಟ್ಯ ವನ್ನು ವಿವರಿಸಿದ್ದಾರೆ. ‘ಧಾರವಾಡದ ಕಣವಿ ಅಪ್ರತಿಮ ಕವಿಯು, ಇವನ ಕವಿತೆಯೊಳಗಿ ಹುದು ಸಕ್ಕರೆಯ ಸವಿಯು’ ಎಂದರು ದಿನ ಕರ ದೇಸಾಯಿ. ಕಣವಿಯವರ ಕವಿತೆಗಳು ಕನ್ನಡ ವಿಮರ್ಶಕರ ಬಹುವಿಧದ ಜಿಜ್ಞಾಸೆ, ಚಿಂತನೆಗೆ ವಸ್ತುವಾದಂತೆಯೇ ಸಹೃದಯರ ಪ್ರೀತ್ಯಾದರಕ್ಕೆ ಪಾತ್ರವಾಗಿವೆ. ಕಣವಿ ಅವರಿಗೆ ಐವತ್ತು ತುಂಬಿದಾಗ ಬಂದ ‘ಚೆಂಬೆಳಕು’, ಎಪ್ಪತ್ತು ತುಂಬಿದಾಗ ‘ಮುಗಿಯದ ಹಾಡು’ ಕಾವ್ಯಾಭಿನಂದನ ಗ್ರಂಥ, ಎಪ್ಪತೆôದು ತುಂಬಿದಾಗ ‘ಬೆಳ್ಳಿತೇರಿನ ದಾರಿ’ ಕಣವಿ ಕಾವ್ಯಾನುಸಂಧಾನ ಗ್ರಂಥಗಳು ಅರ್ಪಿತ ವಾಗಿದ್ದು ಅವುಗಳಲ್ಲಿ ಕಣವಿ ಕಾವ್ಯದ ವಿಮರ್ಶೆಯ ವಿಭಿನ್ನ ಲೇಖನಗಳಿವೆ.
(ಲೇಖಕರು ನಿವೃತ್ತ ಪ್ರಾಧ್ಯಾಪಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
