ಬೆಂಗಳೂರು:ಕೆಲ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ‘ನಾಯಕತ್ವ ಬದಲಾವಣೆ’ ಚರ್ಚೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಪೂರ್ಣವಿರಾಮ ಹಾಕಿದ್ದಾರೆ. ಕೊಮ್ಮಘಟ್ಟದಲ್ಲಿ ಸೋಮವಾರ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವ ಅಬಾಧಿತ ಎಂದು ಪರೋಕ್ಷವಾಗಿ ಸಾರಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಜತೆಯಾಗಿ ಮುನ್ನಡೆಯೋಣ ಎಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರಧಾನಿ ಹೇಳಿದರು. ‘ಮೋದಿ ಅವರ ಆಶೀರ್ವಾದದಲ್ಲಿ ದೊಡ್ಡ ಶಕ್ತಿಯಿದೆ. ಉದ್ದೇಶಿತ ಗುರಿ ಸಾಧಿಸಲು ಆಶೀರ್ವದಿಸಬೇಕು’ ಎಂದು ಬಹಿರಂಗ ವೇದಿಕೆಯಲ್ಲಿ ಬೊಮ್ಮಾಯಿ ಮಾಡಿದ ಮನವಿಗೆ ಮೋದಿ ಅಸ್ತು ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಎರಡು ಬಾರಿ ರಾಜ್ಯಕ್ಕೆ ಬಂದಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ನೀಡಿದ ನಂತರವೂ ನಾಯಕತ್ವ ಬದಲಾವಣೆ ಕುರಿತ ಸಂದೇಹದ ಕಾಮೋಡ ಕರಗಿರಲಿಲ್ಲ. ಒಂದೂವರೆ ವರ್ಷದ ಬಳಿಕ ಮೋದಿ ರಾಜ್ಯಕ್ಕೆ ನೀಡಿದ ಭೇಟಿ ನಿರೀಕ್ಷೆಯಂತೆ ರಾಜ್ಯ ಸರ್ಕಾರ, ಪಕ್ಷದ ನಾಯಕತ್ವದ ಉತ್ಸಾಹ ಇಮ್ಮಡಿಗೊಳಿಸಿದೆ. ವರ್ಚಸ್ಸು ವೃದ್ಧಿಗೆ ವಿವಾದಗಳ ಅಡ್ಡಗಾಲು, ನಾಯಕತ್ವದ ಬದಲಾವಣೆ ಅಪಸ್ವರದಿಂದ ಬಸವಳಿದಿದ್ದ ಬೊಮ್ಮಾಯಿ ಆತ್ಮವಿಶ್ವಾಸವನ್ನೂ ಹೆಚ್ಚಿಸಿದೆ.
ಮಂತ್ರಿ ಮಂಡಳದ ಸಹೋದ್ಯೋಗಿಗಳು, ಶಾಸಕರು, ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ದ ನಾಯಕರಿಗೆ ಸ್ಪಷ್ಟ ಸಂದೇಶ ರವಾನೆಯಾಗಿದ್ದು, ರಾಜ್ಯದ ಅಭಿವೃದ್ಧಿಗೆ ಗಮನಹರಿಸಿ ಎಂದು ಮೋದಿ ಸೂಚ್ಯವಾಗಿ ಹೇಳಿದಂತಿದೆ. ಆಡಳಿತ ಚುಕ್ಕಾಣಿ ಹಿಡಿದವರ ಅಡ್ಡಿ-ಆತಂಕಗಳನ್ನೂ ಮೋದಿ ನಿವಾರಿಸಿದ್ದಾರೆ. ಜತೆಗೆ ಬೊಮ್ಮಾಯಿ ಜವಾಬ್ದಾರಿ ಹೆಚ್ಚಿದ್ದು, ಯಾವುದೇ ನೆಪಗಳಿಗೆ ಅವಕಾಶವಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಮೋದಿ ಸೃಷ್ಟಿಸಿದ ಸಕಾರಾತ್ಮಕ ಹವಾ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ನೆರವಾಗಲಿದ್ದು, ಬಿಬಿಎಂಪಿ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳ ಹೊಸ್ತಿಲಲ್ಲಿ ಟಾನಿಕ್ ನೀಡಿದಂತಾಗಿದೆ ಎಂದು ಪಕ್ಷದ ಹಿರಿಯ ನಾಯಕರು ವಿಶ್ಲೇಷಿಸಿದ್ದಾರೆ.
ವೇದಿಕೆ ಸದ್ಬಳಕೆಯಲ್ಲಿ ಸಫಲ:ಮೋದಿ ಜತೆ ಹಂಚಿಕೊಂಡ ವೇದಿಕೆಯನ್ನು ಬೊಮ್ಮಾಯಿ ‘ಸದ್ಬಳಕೆ’ ಮಾಡಿಕೊಂಡು ಆಂತರಿಕ, ಬಹಿರಂಗ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. ಸಮಾರಂಭದಲ್ಲಿ ಬೊಮ್ಮಾಯಿ ಮಾತನಾಡಿ, ಮೋದಿ ಅವರ ಮಹತ್ವಾಕಾಂಕ್ಷೆಯ ಸಂಕಲ್ಪವಾದ ಐದು ಟ್ರಿಲಿಯನ್ ಡಾಲರ್ ಎಕಾನಮಿಯತ್ತ ಗಮನಸೆಳೆದರು. ದೇಶದ ಐದು ಟ್ರಿಲಿಯನ್ ಡಾಲರ್ ಎಕಾನಮಿ ಗುರಿ ಸಾಧನೆಗೆ ಕರ್ನಾಟಕದಿಂದ 1.3 ಟ್ರಿಲಿಯನ್ ಡಾಲರ್ ಪಾಲುದಾರಿಕೆ ನೀಡುವ ಚಿಂತನೆಯಿದೆ. ‘ನವ ಭಾರತಕ್ಕಾಗಿ ನವ ಕರ್ನಾಟಕದ ಸಂಕಲ್ಪ’ವನ್ನು ಸಾಧಿಸಲು ಮೋದಿ ಅವರ ಆಶೀರ್ವಾದ ಬೇಕು. ಅವರ ಆಶೀರ್ವಾದದಲ್ಲಿ ದೊಡ್ಡ ಶಕ್ತಿಯಿದೆ ಎಂದು ಬೊಮ್ಮಾಯಿ ಅಪೇಕ್ಷೆ ತೋಡಿಕೊಂಡು, ಈಡೇರಿಸಿಕೊಳ್ಳುವಲ್ಲಿ ಸಫಲರಾದರು. ರಾಜ್ಯಪಾಲ ಥಾವರಚಂದ್ ಗೆಹಲೋತ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬೆಂಗಳೂರಿನ ಕಾರ್ಯಕ್ರಮಗಳಲ್ಲಿ ಮೋದಿಗೆ ಸಾಥ್ ನೀಡಿದ್ದಲ್ಲದೆ, ಮೈಸೂರಿಗೂ ಪ್ರಯಾಣಿಸಿದರು.
ಬಡವರಿಗೆ 15 ದಿನಕ್ಕೊಂದು ಹೊಸ ಯೋಜನೆ:ನನ್ನ ಸರ್ಕಾರ ಬಡವರಿಗೆ ಸಮರ್ಪಿತ ಸರ್ಕಾರವೆಂದು ಎಂಟು ವರ್ಷಗಳ ಹಿಂದೆ ಮೋದಿ ಅವರು ಹೇಳಿದ್ದನ್ನೇ ಪಾಲಿಸುತ್ತಿದ್ದು, ಬಡವರಿಗಾಗಿ ಪ್ರತಿ 15 ದಿನಗಳಿಗೊಮ್ಮೆ ಹೊಸ ಯೋಜನೆ ಜಾರಿಗೊಳಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಗರೀಬ್ ಕಲ್ಯಾಣ, ಪ್ರಧಾನಮಂತ್ರಿ ಆವಾಸ, ಉಜ್ವಲ, ಉಜಾಲಾ ಮುಂತಾದ ಯೋಜನೆಗಳು ಬಡವರ ಬಗ್ಗೆ ಮೋದಿ ಹೊಂದಿರುವ ಕಾಳಜಿಗೆ ಕೈಗನ್ನಡಿ ಎಂದು ಹೇಳಿದರು.
ಲವಲವಿಕೆ ಮೂಡ್:ಯಲಹಂಕ ವಾಯುನೆಲೆಯಲ್ಲಿ ಬರ ಮಾಡಿಕೊಳ್ಳಲು ಸಾಲುಗಟ್ಟಿ ನಿಂತ ನಾಯಕರ ದಂಡು ನೋಡಿದ ಮೋದಿ ಸಂತುಷ್ಟರಾದರೆ, ಜನಸ್ತೋಮ ಸ್ವಾಗತಿಸಿದ ಪರಿಯಿಂದ ಉತ್ತೇಜಿತರಾದರು. ಎಲ್ಲ ಕಾರ್ಯಕ್ರಮಗಳಲ್ಲಿ ಲವಲವಿಕೆ ಮೂಡ್​ನಲ್ಲಿದ್ದರು. ಕೊಮ್ಮಘಟ್ಟದಲ್ಲಿ ಮಾತ್ರ 20 ನಿಮಿಷ ಭಾಷಣ, ಉಳಿದೆಡೆ ಬೇರೆಯವರ ಮಾತಿಗೆ ಕಿವಿಗೊಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ 33 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳ ಪೂರ್ಣ ಅನುಷ್ಠಾನದಿಂದ ರಾಜ್ಯದ ನಿವ್ವಳ ಉತ್ಪನ್ನ ದರ (ಜಿಡಿಪಿ) ಶೇ.2 ವೃದ್ಧಿಯಾಗಲಿದೆ ಎಂಬ ಅಶಾಭಾವನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು.
ಕೊಮ್ಮಘಟ್ಟದಲ್ಲಿ ವಿವಿಧ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಿದ ಸಮಾರಂಭದಲ್ಲಿ ಪಾಲ್ಗೊಂಡು ಸಿಎಂ ಮಾತನಾಡಿದರು. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು ಉಪನಗರ ರೈಲ್ವೆ ಮಾರ್ಗ ನಿರ್ಮಾಣ ಯೋಜನೆ ಸೇರಿ ಬೆಂಗಳೂರು ಮಹಾನಗರದ ಸಂಪರ್ಕ, ಅಭಿವೃದ್ಧಿಗೆ ಮೋದಿಯವರು ಚಾಲನೆ ನೀಡಿದ್ದು, ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ ಎಂದರು. ಬೆಂಗಳೂರು ನಗರಕ್ಕೆ ನಾಲ್ಕು ದಿಕ್ಕಿನಲ್ಲಿ ಸಂಪರ್ಕ ಕಲ್ಪಿಸುವ ವರ್ತಲ ರಸ್ತೆ, ಸಂಚಾರ ದಟ್ಟಣೆ ತಗ್ಗಿಸಲಿರುವ ಮಲ್ಟಿಮೋಡ್ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣ ಯೋಜನೆಗಳಿಗೆ ಕೇಂದ್ರ ಸರ್ಕಾರದ ಸಹಾಯ ಲಭಿಸುತ್ತಿದೆ ಎಂದು ಹೇಳಿದರು.
ಪ್ರತಿಪಕ್ಷಗಳಿಗೆ ತಿರುಗೇಟು:ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 53.83 ಲಕ್ಷ ರೈತರಿಗೆ ಧನಸಹಾಯ, ಉಜ್ವಲ ಯೋಜನೆಯಡಿ 34 ಲಕ್ಷ ಮನೆಗಳಿಗೆ ವಿದ್ಯುತ್, ಮನೆ ಮನೆಗೆ ಗಂಗೆ ಯೋಜನೆಯಡಿ 48 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ, ಸ್ವನಿಧಿಯಡಿ 1.45 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ಹೀಗೆ ಕೊಡುಗೆಗಳ ಪಟ್ಟಿಯನ್ನು ಬೊಮ್ಮಾಯಿ ಮಂಡಿಸಿ, ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿದ ಕೊಡುಗೆ ಏನು ಎಂದು ಕೇಳುತ್ತಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವೇಗ ಪ್ರತಿದಿನ 16-17 ಕಿ.ಮೀ.ಗೆ ವೃದ್ಧಿಸಿದ್ದು, ದೇಶದ ಐದು ನಗರಗಳಿಗೆ ಮೆಟ್ರೋ ರೈಲ್ವೆ ಸೌಲಭ್ಯ ಮಂಜೂರಾಗಿದೆ. ಹೊಸದಾಗಿ ಮಂಜೂರು ಮಾಡಿದ ವೈದ್ಯಕೀಯ ಕಾಲೇಜುಗಳ ಪೈಕಿ ರಾಜ್ಯಕ್ಕೆ ನಾಲ್ಕು ಲಭಿಸಿವೆ ಎಂದು ವಿವರಿಸಿದರು. ರಾಜಕಾರಣಿ ಮುಂದಿನ ಚುನಾವಣೆ ಬಗ್ಗೆ ಯೋಚಿಸಿದರೆ, ಮುತ್ಸದ್ದಿ ಮುಂದಿನ ತಲೆಮಾರಿನ ಬಗ್ಗೆ ಚಿಂತಿಸುತ್ತಾರೆ. ಮುಂದಿನ ಪೀಳಿಗೆ ಬಗ್ಗೆ ಯೋಚಿಸುವ ಮೋದಿ ದೂರದೃಷ್ಟಿಯ ನಾಯಕ ಎಂದರು.
ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ; ಒಂದು ಮನೆಯಲ್ಲಿ 6, ಇನ್ನೊಂದು ಮನೆಯಲ್ಲಿ 3 ಶವ!

ನನಗೆ ಕುರ್ತಾ ಹೊಲಿದು ಕೊಡ್ಬೋದಾ? ಈಗ ಫುಲ್​ ಖುಷಿನಾ?: ಮೋದಿ ಹೀಗೆ ಕೇಳಿದ್ದಕ್ಕೂ ಕಾರಣವಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
