ಚುನಾಯಿತ ಪ್ರಧಾನಮಂತ್ರಿ ಶೇಖ್ ಹಸೀನಾ ವಾಜಿದ್ ನಿರ್ಗಮನಾನಂತರ ಬಾಂಗ್ಲಾದೇಶದಲ್ಲಿ ಆದಷ್ಟು ಶೀಘ್ರದಲ್ಲಿ ಚುನಾವಣೆಗಳನನ್ನು ನಡೆಸಿ ಚುನಾಯಿತ ಸರ್ಕಾರಕ್ಕೆ ಅಧಿಕಾರವನ್ನು ಹಸ್ತಾಂತರಿಸುವ ವಾಗ್ದಾನದೊಂದಿಗೆ ಅರ್ಥಶಾಸ್ತ್ರಜ್ಞ ಮೊಹಮ್ಮದ್ ಯೂನುಸ್ ನೇತೃತ್ವದ ಉಸ್ತುವಾರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವಾರಗಳಾಗುತ್ತಿವೆ. ಚುನಾವಣೆಯ ವಾಗ್ದಾನ ಶೀಘ್ರದಲ್ಲೆನೂ ಪೂರೈಸುವುದಿಲ್ಲ ಎಂಬ ಸೂಚನೆ ಢಾಳಾಗಿ ಕಾಣುತ್ತಿದೆ. ಅದು ಹೊರಬಂದದ್ದು ಸ್ವತಃ ಯೂನುಸ್ ಅವರಿಂದ ಎನ್ನುವುದು ಗಮನಿಸಬೇಕಾದ ಅಂಶ. ಆಗಸ್ಟ್ 18ರಂದು ಢಾಕಾದಲ್ಲಿನ ವಿದೇಶಿ ರಾಜತಂತ್ರಜ್ಞರೊಂದಿಗೆ ಮಾತನಾಡುತ್ತ ಡಾ.ಯೂನುಸ್ ಹೇಳಿದ್ದು, ‘ನಮ್ಮ ಚುನಾವಣಾ ಆಯೋಗ, ನ್ಯಾಯಾಂಗ, ನಾಗರಿಕ ಆಡಳಿತ ವ್ಯವಸ್ಥೆ, ಸುರಕ್ಷಾ ಪಡೆಗಳು ಮತ್ತು ಮಾಧ್ಯಮಗಳಲ್ಲಿ ಮುಖ್ಯ ಸುಧಾರಣೆಗಳನ್ನು ಜಾರಿಗೆ ತಂದ ನಂತರ ಮುಕ್ತ, ನ್ಯಾಯಯುತ, ಪ್ರಾತಿನಿಧಿಕ ಚುನಾವಣೆಗಳನ್ನು ಬಾಂಗ್ಲಾದೇಶ ನಡೆಸುತ್ತದೆ’ ಎಂದು! ಇಷ್ಟೊಂದು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಪ್ರಕ್ರಿಯೆ ಒಂದು ತಿಂಗಳಲ್ಲಿ ಅಥವಾ ಒಂದು ವರ್ಷದಲ್ಲಿ ನಡೆಯುವುಂತಹದಲ್ಲ. ಇರುವುದನ್ನು ಇರುವ ಹಾಗೆಯೇ ಹೇಳುವುದಾದರೆ ಅದು 84 ವರ್ಷಗಳ ಡಾ. ಯೂನುಸ್​ರ ಈ ಬದುಕಿನಲ್ಲಂತೂ ಪೂರ್ಣಗೊಳ್ಳುವುದಿಲ್ಲ.
ತಮ್ಮ ಗ್ರಾಮೀಣ ಬ್ಯಾಂಕ್ ಮತ್ತಿತರ ಯೋಜನೆಗಳ ಮೂಲಕ ಕೋಟ್ಯಂತರ ಬಡಜನರ ಬದುಕನ್ನು ಹಸನುಗೊಳಿಸಿ ಜಾಗತಿಕವಾಗಿ ಆದರಣೀಯರಾಗಿರುವ ಡಾ. ಯೂನುಸ್ ಉಸ್ತುವಾರಿ ಸರ್ಕಾರದ ಮಾರ್ಗದರ್ಶಿಯಾಗಬೇಕೆಂದು ಬಯಸಿದ್ದು ಮೀಸಲಾತಿ-ವಿರೋಧಿ ಆಂದೋಲನವನ್ನು ತಿಂಗಳುಗಟ್ಟಲೆ ನಡೆಸಿದ ವಿದ್ಯಾರ್ಥಿಗಳು. ಅವರ ಆಶಯದಂತೇ ಡಾ. ಯೂನುಸ್ ನೇತೃತ್ವದ ಉಸ್ತುವಾರಿ ಸರ್ಕಾರ ರಚನೆಯೂ ಆಯಿತು. ಇದರ ಮೇಲ್ನೋಟದ ಅರ್ಥ ನಮ್ಮದೊಂದು ನೆರೆನಾಡಿನ ರಾಜಕೀಯ ಭವಿಷ್ಯವಿಂದು ವಿರ್ದ್ಯಾರ್ಥಿಗಳಿಂದ ರೂಪಿತಗೊಳ್ಳುತ್ತಿದೆ!
ಹಾಗೆ ನೋಡಿದರೆ ದೇಶವೊಂದರ ಸರ್ಕಾರವನ್ನು ಅಥವಾ ಅದರ ನೀತಿಗಳನ್ನು, ಸಮಾಜೋ-ರಾಜಕೀಯ ಚಿಂತನೆಗಳನ್ನು ವಿದ್ಯಾರ್ಥಿಗಳು ಪ್ರಭಾವಿಸುವುದು ಅಥವಾ ಬದಲಾಯಿಸುವುದಕ್ಕೆ ಇಂದಿನ ಬಾಂಗ್ಲಾದೇಶ ಮೊದಲ ಉದಾಹರಣೆಯೇನಲ್ಲ. ನಮ್ಮ ತಲೆಮಾರಿನಲೇ ಅದು ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ಆಗಿಹೋಗಿದೆ. 1968ರಲ್ಲಿ ಪಶ್ಚಿಮದ ಹಲವಾರು ದೇಶಗಳಲ್ಲಿ ವಿದ್ಯಾರ್ಥಿಗಳು ಬದಲಾವಣೆಯ ರಣಕಹಳೆ ಮೊಳಗಿಸಿದ್ದು ಸಮಕಾಲೀನ ಇತಿಹಾಸದಲ್ಲಿ ದಾಖಲಾಗಿಹೋಗಿದೆ. ಆ ವರ್ಷ ಅಮೆರಿಕದಲ್ಲಿ ವಿದ್ಯಾರ್ಥಿ ಆಂದೋಲನಗಳು ವಿಯೆಟ್ನಾಂ ಯುದ್ಧದ ಬಗೆಗಿನ ಅಮೆರಿಕನ್ ಸಮಾಜದ ಅಸಂತೋಷದ ಪ್ರತೀಕವಾದರೆ ಯುರೋಪ್​ನಲ್ಲಿ, ಮುಖ್ಯವಾಗಿ ಫ್ರಾನ್ಸ್, ಝೆಕೋಸ್ಲೊವಾಕಿಯಾ ಮತ್ತು ಯುಗೋಸ್ಲಾವಿಯಾಗಳಲ್ಲಿ, ಅವು ಸ್ಟಾಲಿನಿಸ್ಟ್ ಸರ್ವಾಧಿಕಾರಿ ಮೌಲ್ಯಗಳ ನಿರಾಕರಣೆಯ ಕೂಗಾಗಿದ್ದವು. ಬಿಸಿರಕ್ತದ ನವಚೇತನಗಳ ಈ ಆಂದೋಲನಗಳು ತತ್​ಕ್ಷಣಕ್ಕೆ ನಿರೀಕ್ಷಿತ ಬದಲಾವಣೆಗಳನ್ನೇನೂ ತರಲಿಲ್ಲವಾದರೂ ಅವುಗಳ ದೂರಗಾಮಿ ಪರಿಣಾಮಗಳು ಆ ದೇಶಗಳ ಸಮಾಜೋ-ರಾಜಕೀಯ ಮೌಲ್ಯಗಳನ್ನು ಗಮನಾರ್ಹವಾಗಿ ಬದಲಿಸಿಬಿಟ್ಟದ್ದು ನಿಜ. 1968ರ ವಿಯೆಟ್ನಾಂ ಯುದ್ಧ-ವಿರೋಧಿ ಪ್ರತಿಭಟನೆಗಳು ಅಧ್ಯಕ್ಷ ಲಿಂಡನ್ ಜಾನ್ಸನ್​ರ ರಾಜಕೀಯ ಬದುಕಿಗೆ ಇತಿಶ್ರೀ ಹಾಡಿದರೂ ವಿಯೆಟ್ನಾಂ ಯುದ್ಧ ತಕ್ಷಣ ನಿಲುಗಡೆಗೆ ಬರಲಿಲ್ಲ. ಆದರೆ ಯುದ್ಧ ಭೀಕರವಾಗಿ ಮುಂದುವರಿಯುತ್ತಿದ್ದಂತೇ ತೆರೆಮರೆಯಲ್ಲಿ ಶಾಂತಿಸಂಧಾನದ ಮಹತ್ವವನ್ನು ಹೊಸ ರಿಚರ್ಡ್ ನಿಕ್ಸನ್ ಸರ್ಕಾರ ಮನಗಾಣುವಂತೆ ಮಾಡಿದ್ದು ಆ ವಿದ್ಯಾರ್ಥಿ ಪ್ರತಿಭಟನೆಗಳು. ತತ್ಪರಿಣಾಮವಾಗಿಯೇ ಹೆನ್ಸಿ ಕಿಸಿಂಜರ್ ಮತ್ತು ಲೀ ಡಕ್ ಥೋ ನಡುವೆ 1969ರಲ್ಲಿ ಪ್ಯಾರಿಸ್​ನಲ್ಲಿ ರಹಸ್ಯವಾಗಿ ಆರಂಭವಾದ ಮಾತುಕತೆಗಳು ನಾಲ್ಕುವರ್ಷಗಳ ನಂತರ ಫಲ ನೀಡಿ ಅಂತಿಮವಾಗಿ ಪ್ಯಾರಿಸ್ ಶಾಂತಿ ಒಪ್ಪಂದಕ್ಕೆ ಕಾರಣವಾದವು.
ಯುರೋಪ್ ಬಗ್ಗೆ ಹೇಳುವುದಾದರೆ 1968ರ ಮೇನಲ್ಲಿ ಪ್ಯಾರಿಸ್ ವಿದ್ಯಾರ್ಥಿ ಆಂದೋಲನಗಳು ಬಲಾಢ್ಯ ಅಧ್ಯಕ್ಷ ಚಾರ್ಲ್ಸ್ ಡಿ’ ಗಾಲ್​ರ ಕುರ್ಚಿಯನ್ನೇ ಅಲುಗಾಡಿಸಿದರೂ ತಿಂಗಳ ಅಂತ್ಯದ ಹೊತ್ತಿಗೆ ಕಾವು ಕಳೆದುಕೊಂಡವು. ಅಷ್ಟೇ ಅಲ್ಲ, ಮುಂದಿನ ತಿಂಗಳಲ್ಲೇ ನಡೆದ ಚುನಾವಣೆಗಳಲ್ಲಿ ಗಾಲಿಸ್ಟ್ ಪಕ್ಷ ಹಿಂದಿಗಿಂತಲೂ ಸಶಕ್ತವಾಗಿ ಹೊರಹೊಮ್ಮಿತು. ಆದರೆ ಫ್ರೆಂಚ್ ಸಮಾಜೋ-ರಾಜಕೀಯ ಮೌಲ್ಯಗಳು ಈ ಅಂದೋಲನಗಳ ಪರಿಣಾಮವಾಗಿ ಗಮನಾರ್ಹವಾಗಿ ಬದಲಾದವು. ಅಲ್ಲಿಯವರೆಗೆ ಪ್ರಧಾನವಾಗಿದ್ದ ರಾಜಕೀಯ ವಿಧೇಯತೆ ಹಾಗೂ ಕ್ರಿಶ್ಚಿಯನ್ ಧಾರ್ವಿುಕ ಮೌಲ್ಯಗಳು ಹಿಂದೆ ಸರಿದು ಲಿಂಗಸಮಾನತೆ ಮತ್ತು ಮಾನವ ಹಕ್ಕುಗಳು ಮುಂಚೂಣಿಗೆ ಬಂದವು. ಈ ಎರಡು ಮೌಲ್ಯಗಳು ಅಲ್ಲಿಂದೀಚೆಗೆ ಪಶ್ಚಿಮ ಯುರೋಪ್​ನ ಸಮಾಜೋ-ರಾಜಕೀಯ ಬದುಕನ್ನು ನಿರಂತರವಾಗಿ, ಹಿಂದೆಂದಿಗಿಂತಲೂ ಹೆಚ್ಚಾಗಿ ಪ್ರಭಾವಿಸುತ್ತ ಬರುತ್ತಿವೆ.
ಆ ದಿನಗಳಲ್ಲೇ ಝೆಕೊಸ್ಲೊವೇಕಿಯಾದಲ್ಲಿ ಸೋವಿಯತ್ ನಿಯಂತ್ರಣದ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ದಂಗೆಯೆದ್ದರು. ಆದರೆ ಅವರ ಪ್ರಜಾಪ್ರಭುತ್ವವಾದಿ ಆಂದೋಲನ ಸೋವಿಯತ್ ಸೇನಾಶಕ್ತಿಯ ಮುಂದೆ ನಿಲ್ಲಲಾಗಲಿಲ್ಲ. ಆದರೆ ಅಂದು ಪೂರ್ವ ಯುರೋಪ್​ನಲ್ಲಿ ಹೀಗೆ ಮೊಳಕೆಯೊಡೆದ ಪ್ರಜಾಪ್ರಭುತ್ವದ ಬಯಕೆ ಮುಂದಿನ ಎರಡು ದಶಕಗಳಲ್ಲಿ ಸುತ್ತಲ ದೇಶಗಳಲ್ಲೆಲ್ಲ ಹರಡಿತು. ಇದಕ್ಕೆ ಪೂರಕವಾದದ್ದು ಮಿಖಾಯಿಲ್ ಗೋರ್ಬಚೆವ್​ರ ಮೂರು ಐತಿಹಾಸಿಕ ಸುಧಾರಣಾ ಕಾರ್ಯಕ್ರಮಗಳಾದ ‘ಗ್ಲಾಸ್​ನಾಸ್ತ್ (ಮುಕ್ತತೆ), ಪೆರೆಸ್ತ್ರೋಯ್ಕಾ (ಪುನರ್​ವ್ಯವಸ್ಥೆ) ಮತ್ತು ದೆಮೋಕ್ರಾತಿಝಾಸಿಯಾ (ಪ್ರಜಾಪ್ರಭುತ್ವೀಕರಣ)’ಗಳು. ಅವುಗಳ ಪರಿಣಾಮವಾಗಿ ಸೋವಿಯತ್ ಯೂನಿಯನ್ ಮತ್ತು ಪೂರ್ವ ಯುರೋಪ್​ನ ರಾಷ್ಟ್ರಗಳಲ್ಲಿ 80ರ ದಶಕದ ಅಂತ್ಯದ ಹೊತ್ತಿಗೆ ಕಮ್ಯೂನಿಸ್ಟ್ ಸರ್ಕಾರಗಳು ತಟಪಟನೆ ಉರುಳತೊಡಗಿದವು ಮತ್ತು ಅವು ಪ್ರತಿಪಾದಿಸುತ್ತಿದ್ದ ಸ್ಟಾ್ಯಲಿನಿಸ್ಟ್ ಸರ್ವಾಧಿಕಾರಿ ಮೌಲ್ಯಗಳು ಇತಿಹಾಸದ ಕಸದ ಬುಟ್ಟಿಗೆ ಸೇರತೊಡಗಿದವು. ಈ ಬೆಳವಣಿಗೆಗಳಿಂದ ಪ್ರಭಾವಿತರಾದ ಬೀಜಿಂಗ್ ವಿದ್ಯಾರ್ಥಿಗಳು ತಮ್ಮ ಈ ಪೂರ್ವದ ಕಮ್ಯೂನಿಸ್ಟ್ ದೈತ್ಯನಲ್ಲೂ ಅಂತಹದೇ ಬದಲಾವಣೆಗಳನ್ನು ಬಯಸಿ ಅದಕ್ಕಾಗಿ ತಿಯೆನಾನ್​ವೆುನ್ ಚೌಕ್​ದಲ್ಲಿ ಸತತ ಅರುವಾರಗಳವರೆಗೆ ಪ್ರತಿಭಟನೆ ನಡೆಸಿದರು. ಆ ವಿದ್ಯಾರ್ಥಿ ಆಂದೋಲನ ಕೊನೆಗೂ ಅಂತ್ಯಗೊಂಡದ್ದು ಜೂನ್ 4ರ ರಾತ್ರಿ ನಡೆದ ಸೇನಾ ಕಾರ್ಯಾಚರಣೆಯಿಂದ. ಈ ರಕ್ತಪಾತದಲ್ಲಿ ಮಡಿದ ವಿದ್ಯಾರ್ಥಿಗಳೆಷ್ಟು ಎನ್ನುವುದು ಇನ್ನೂ ನಿಖರವಾಗಿ ತಿಳಿದಿಲ್ಲ. ನಿಗೂಢತೆಯೇ ಸಾಕಾರಗೊಂಡ ಚೀನಾದಲ್ಲಿ ಹೊಸಯುಗದ ಹರಿಕಾರನಂತೆ ಕಂಡ ಈ ವಿದ್ಯಾರ್ಥಿ ಆಂದೋಲನ ದಾರುಣವಾಗಿ ಅಂತ್ಯವಾದದ್ದೇನೋ ನಿಜ. ಆದರೆ ಇದು ಬಿಂಬಿಸಿದ ಮೌಲ್ಯಗಳನ್ನು ಕೊನೇಪಕ್ಷ ಆರ್ಥಿಕ ರಂಗದಲ್ಲಾದರೂ ಅಳವಡಿಸಿಕೊಳ್ಳುವಂತೆ ಅಧ್ಯಕ್ಷ ಡೆಂಗ್ ಷಿಯಾವೋಪಿಂಗ್ ಮತ್ತು ಪ್ರಧಾನಿ ಲಿ ಪೆಂಗ್ ಸರ್ಕಾರವನ್ನು ಪ್ರೇರೇಪಿಸಿದ್ದು ಯಾರೂ ನಿರಾಕರಿಸಲಾಗದ ಸತ್ಯ. ನಾಲ್ಕೇ ವರ್ಷಗಳಲ್ಲಿ ಚೀನೀ ಕಮ್ಯೂನಿಸ್ಟ್ ಪಕ್ಷ ಆರ್ಥಿಕ ರಂಗದಲ್ಲಿ ಉದಾರವಾದಿ ನೀತಿಯನ್ನು ಅಧಿಕೃತವಾಗಿ ಆಳವಡಿಸಿಕೊಂಡಿತು. (ಈ ಪ್ರಕ್ರಿಯೆ 1978ರಲ್ಲೇ ಪ್ರಾರಂಭವಾಗಿದ್ದರೂ ತೀವ್ರಗತಿ ಪಡೆದುಕೊಂಡದ್ದು ಮತ್ತು ಸರ್ಕಾರ ಮತ್ತು ಪಕ್ಷದ ಅಧಿಕೃತ ನೀತಿಯಾದದ್ದು 1984ರ ನಂತರ.)
ಹೀಗೆ ಅಮೆರಿಕ, ಯುರೋಪ್ ಮತ್ತು ಚೀನಾಗಳಲ್ಲಿ ನಡೆದ ವಿದ್ಯಾರ್ಥಿ ಆಂದೋಲನಗಳು, ಪ್ರತಿಭಟನೆಗಳು ಆ ಕ್ಷಣದಲ್ಲಿ ವಿಫಲವಾದರೂ ಅನತೀ ಕಾಲದಲ್ಲೇ ಅವು ಬಯಸಿದ ಪರಿಣಾಮಗಳು ಸಾಕಾರಗೊಳ್ಳತೊಡಗಿದ್ದು ಐತಿಹಾಸಿದ ಸತ್ಯ. ಹಾಗೆಯೇ ನಮ್ಮಲ್ಲಿ ಹದಿನಾಲ್ಕು ವರ್ಷಗಳ ಹಿಂದೆ ಜನವರಿ 3, 2010ರ ಭಾನುವಾರ ಸಂಜೆ ಅಂದಿನ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್​ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಸೇರಿದ ಲಕ್ಷಾಂತರ ವಿದ್ಯಾರ್ಥಿಗಳನ್ನು ಮರೆಯಲಾದೀತೇ? ಆ ಮಹಾ ವಿದ್ಯಾರ್ಥಿ ಸಮಾವೇಶ ಆಯೋಜಿಸಿದ ‘ತೆಲಂಗಾಣ ವಿದ್ಯಾರ್ಥಿ ಗರ್ಜನ’ ಪ್ರತ್ಯೇಕ ತೆಲಂಗಾಣ ರಾಜ್ಯದ ಅನಿವಾರ್ಯತೆಯನ್ನು ಕೇಂದ್ರ ಸರ್ಕಾರ ಹಾಗೂ ಅಂದಿನ ಆಂಧ್ರಪ್ರದೇಶ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿತು.
ಈಗ ಬಾಂಗ್ಲಾದೇಶಕ್ಕೆ ಹಿಂತಿರುಗೋಣ. ಅದು ಪಾಕಿಸ್ತಾನದ ಭಾಗವಾಗಿದ್ದಾಲೇ 1968-69ರಲ್ಲಿ ವಿದ್ಯಾರ್ಥಿ ಆಂದೋಲನವನ್ನು ಕಂಡಿತ್ತು. ಸೇನಾ ಸರ್ವಾಧಿಕಾರಿ ಜ. ಅಯೂಬ್ ಖಾನ್ ವಿರುದ್ಧ ಎದ್ದ ಆ ಆಂದೋಲನದ ಪರಿಣಾಮವಾಗಿ ಆತ ರಾಜೀನಾಮೆ ನೀಡಿ ಅಧಿಕಾರವನ್ನು ಜ. ಯಾಹ್ಯಾ ಖಾನ್ ಕೈಗೊಪ್ಪಿಸಿದರು. ಯಾಹ್ಯಾ ಮಾಡಿದ ಒಳ್ಳೆಯ ಕೆಲಸವೆಂದರೆ ಪಾಕಿಸ್ತಾನದ ಇತಿಹಾಸದಲ್ಲೇ ಮೊಟ್ಟಮೊದಲ ಸಾರ್ವತ್ರಿಕ ಚುನಾವಣೆಗಳನ್ನು ಆಯೋಜಿಸಿದ್ದು. ಆದರೆ ಅದರಲ್ಲಿ ವಿಜಯಿಯಾದ ಅವಾಮಿ ಲೀಗ್​ಗೆ ಅಧಿಕಾರ ಒಪ್ಪಿಸಲು ಯಾಹ್ಯಾ ಖಾನ್ ನಿರಾಕರಿಸಿದ ಕಾರಣ ಪೂರ್ವ ಪಾಕಿಸ್ತಾನೀಯರು ದಂಗೆಯೆದ್ದು ಭಾರತದ ಸಹಾಯದಿಂದ ಸ್ವತಂತ್ರ ಬಾಂಗ್ಲಾದೇಶವನ್ನು ಕಟ್ಟಿಕೊಳ್ಳುವಂತಾಯಿತು.
ಹೀಗೆ ವಿದ್ಯಾರ್ಥಿ ಆಂದೋಲನವೇ ವ್ಯಾಪಕಗೊಳ್ಳುವುದರ ಮೂಲಕ ಸ್ವತಂತ್ರಗೊಂಡ ಬಾಂಗ್ಲಾದೇಶದಲ್ಲಿ ಇಂದು ನಡಯುತ್ತಿರುವ ವಿದ್ಯಾರ್ಥಿ ಆಂದೋಲನ ಆಸಕ್ತಿಕರವಾಗಿಯೇ ಕಾಣುತ್ತದೆ. ಆದರೆ ಅಂದಿನ ವಿದ್ಯಾರ್ಥಿಗಳು ದೇಶದ ಸ್ವಾತಂತ್ರ್ಯಕ್ಕಾಗಿ, ಬಂಗಾಳಿ ಅಸ್ಮಿತೆಗಾಗಿ, ಧರ್ಮನಿರಪೇಕ್ಷತೆಗಾಗಿ ಸಿಡಿದೆದ್ದರೆ ಇಂದಿನ ವಿದ್ಯಾರ್ಥಿಗಳು ದೇಶವನ್ನು ಧಾರ್ವಿುಕವಾಗಿ ಮೂಲಭೂತವಾಗಿಸಲು, ಪಾಕಿಸ್ತಾನದ ಹಿಂಬಾಲಕರಾಗಲು ಆಂದೋಲನಕ್ಕಿಳಿದಿದ್ದಾರೆ.
ಜಮಾತ್ ಎ-ಇಸ್ಲಾಮಿ ಪಕ್ಷದ ವಿದ್ಯಾರ್ಥಿ ಅಂಗ ‘ಇಸ್ಲಾಮಿಕ್ ಛಾತ್ರ ಶಿಬಿರ್’ ಹಸೀನಾ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರ ಒಳಸುಳಿಗಳನ್ನು ಬಿಡಿಸುತ್ತ ಹೋದರೆ ಬಾಂಗ್ಲಾದೇಶದಲ್ಲಿ ಇಂದು ನಡೆಯುತ್ತಿರುವುದು ಒಂದು ಸಂಚಿನಂತೆ ಕಾಣುತ್ತದೆ.
ಮೂಲಭೂತವಾದಿ ಜಮಾತ್​ನ ವಿದ್ಯಾರ್ಥಿಗಳು ಡಾ. ಮಹಮದ್ ಯೂನುಸ್​ರನ್ನು ಉಸ್ತುವಾರಿ ಸರ್ಕಾರದ ಮಾರ್ಗದರ್ಶಿಯಾಗುವಂತೆ ಕೇಳಿಕೊಂಡದ್ದು, ಅದಕ್ಕೆ ಕೆಲವೇ ತಾಸುಗಳಲ್ಲಿ ಪ್ರತಿಕ್ರಿಯಿಸಿದ ಡಾ. ಯೂನುಸ್ ತಾವು ಉಸ್ತುವಾರಿ ಸರ್ಕಾರ ಮುಖ್ಯಸ್ಥರಾಗಲೂ ಸಿದ್ಧವೆಂದು ಅತಿ ಧಾರಾಳವಾಗಿಯೇ ಸ್ಪಂದಿಸಿದ್ದನ್ನು ಗಮನಿಸಿದಾಗ ಮೀಸಲಾತಿ-ವಿರೋಧಿ ಆಂದೋಲನ ಶೇಖ್ ಹಸೀನಾರ ವಿರುದ್ಧವಾಗಿ ತಿರುಗಿದ್ದು, ಅವರಿಗೆ ರಕ್ಷಣೆ ನೀಡಲಾಗದೆ ಸೇನಾ ಮುಖ್ಯಸ್ಥ ಜ. ವಖಾರ್-ಉಝ್-ಝುಮಾನ್ ‘ಕೈಚೆಲ್ಲಿದ್ದು’, ವಿಧಿಯಿಲ್ಲದೆ ಹಸೀನಾ ದೇಶ ತೊರೆದದ್ದು, ಅದಕ್ಕೇ ಕಾದಿದ್ದಂತೆ ಜ. ಝುಮಾನ್ ಉಸ್ತುವಾರಿ ಸರ್ಕಾರ ಸ್ಥಾಪಿಸುವುದಾಗಿ ದೇಶಕ್ಕೆ ಘೊಷಿಸಿದ್ದು, ಆ ಕುರಿತಾಗಿ ವಿದ್ಯಾರ್ಥಿಗಳ ‘ಬಯಕೆ’ ಮತ್ತು ಡಾ. ಯೂನುಸ್​ರ ‘ಧಾರಾಳ ಸ್ಪಂದನೆ’ಯನ್ನು ಒಟ್ಟಾಗಿ ಅವಲೋಕಿಸಿದರೆ ಇದೆಲ್ಲವೂ ಒಂದು ಪೂರ್ವಯೋಜಿತ ಸಂಚಿನಂತೆ ಕಾಣುತ್ತದೆ. ಜತೆಗೆ, ಮಧ್ಯಂತರ ಸರ್ಕಾರ ಸ್ಥಾಪಿಸುವ ಜ.ಝುಮಾನ್​ರ ಘೊಷಣೆಯನ್ನು ‘ಸಂತಸ’ದಿಂದ ಸ್ವಾಗತಿಸಿದ ಅಮೆರಿಕದ ವಿದೇಶಾಂಗ ಇಲಾಖೆಯ ನೀತಿ ಮತ್ತು ಇಷ್ಟೆಲ್ಲವೂ ಕೇವಲ ಒಂದು ಹಗಲಿನ ಉತ್ತರಾರ್ಧದಲ್ಲಿ ನಡೆದುಹೋದದ್ದು ಸಂಚಿಗೆ ಸ್ಪಷ್ಟ ಸಾಕ್ಷಿಯಾಗುತ್ತದೆ.
ವಿದ್ಯಾರ್ಥಿಗಳ ಆಯ್ಕೆಯಾದ ಡಾ. ಯೂನುಸ್ ‘ಅಮೆರಿಕದ ಮನುಷ್ಯ’ ಎಂಬ ಸಂಗತಿಗಳನ್ನೂ ಗಮನಿಸಿದರೆ ಸಂಚಿನ ಆಳ ಮತ್ತು ಅಗಲದ ಒಂದು ಚಿತ್ರ ದೊರೆಯುತ್ತದೆ. ಹಸೀನಾ ಸರ್ಕಾರ ಪದ್ಮಾ (ಗಂಗಾ) ನದಿಯ ಮೇಲೆ ಕಟ್ಟಬಯಸಿದ ಸೇತುವೆಗೆ ಐಎಂಎಫ್​ನಿಂದ ಧನಸಹಾಯ ಸಿಗದಂತೆ ಡಾ. ಯೂನುಸ್ ತಮ್ಮ ‘ಅಮೆರಿಕ ಸಂಪರ್ಕ’ದ ಮೂಲಕ ಪ್ರಭಾವ ಬಳಸಿದರು ಎಂಬ ಆರೋಪ 2011ರಲ್ಲಿ ಎದ್ದಾಗ ತಮ್ಮ ಬಂಧನವಾಗುತ್ತದೆಂದು ಆತಂಕಗೊಂಡ ಡಾ. ಯೂನುಸ್ ಢಾಕಾದಲ್ಲಿನ ಅಮೆರಿಕನ್ ದೂತಾವಾಸದಲ್ಲಿ ಆಶ್ರಯ ಪಡೆದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಆದರೆ ಈಗ ‘ಸಂಚು’ ಪೂರ್ಣವಾಗಿ ಯಶಸ್ವಿಯಾಗಿ ‘ಸಂಚುಗಾರರೆಲ್ಲರೂ ತಂತಮ್ಮ ಪಾಲನ್ನು ಪಡೆದುಕೊಂಡು, ಆಮೇಲೆ ಅವರೆಲ್ಲರೂ ಬಹುಕಾಲ ಸುಖವಾಗಿ ಬಾಳಿದರು’ ಎಂಬ ಚಂದಮಾಮ ಕಥೆಯಂತೆ ಇನ್ನು ಅನುಗಾಲವೂ ನೆಮ್ಮದಿಯಿಂದ ಇರುತ್ತಾರೆಂದು ಹೇಳಬಹುದೇ?
ಈ ಪ್ರಶ್ನೆಗೆ ಉತ್ತರ ಹುಡುಕಲು ನಮಗೆ ಸಹಾಯಕವಾಗುವುದು ಡಾ. ಯೂನುಸ್ ಹೇಳುವ ‘ಪ್ರಮುಖ ಸುಧಾರಣೆಗಳು’ ಏನಾಗಿರಬಹುದು ಎನ್ನುವುದು. ಕಳೆದ ಕೆಲವು ತಿಂಗಳುಗಳಿಂದಲೂ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ನಾಟಕದಲ್ಲಿನ ಪಾತ್ರಧಾರಿಗಳು ‘ಎತ್ತು ಏಳಿಗೆಳೆದರೆ ಕೋಣ ನೀರಿಗೆಳೆಯಿತು’ ಎಂಬ ಗಾದೆಗೆ ಸೂಕ್ತವಾಗಿ ಹೊಂದಿಕೊಳ್ಳುವಂತಹವರು, ಅವರಲ್ಲಿ ಕಂಡುಬಂದ ಹೊಂದಾಣಿಕೆ ಕೇವಲ ಒಂದು ‘ಅನುಕೂಲಸಿಂಧು ವಿವಾಹ’, ಅದು ಯಾವ ಗಳಿಗೆಯಲ್ಲಾದರೂ ಮುರಿದುಬೀಳುವಂತಹದು. ಇದನ್ನು ನೇರವಾಗಿ ಹೇಳುವುದಾದರೆ, ಜಿಹಾದಿಗಳನ್ನು ಬಳಸಿಕೊಂಡು ಅಮೆರಿಕ ಹಸೀನಾರನ್ನು ಓಡಿಸಿ ಸೈಂಟ್ ಮಾರ್ಟಿನ್ ದ್ವೀಪವನ್ನು ಗೆಬರಿಕೊಳ್ಳಲು ನೋಡಿತು, ಅಮೆರಿಕವನ್ನು ಬಳಸಿಕೊಂಡು ಧರ್ಮನಿರಪೇಕ್ಷ ಹಸೀನಾ ಸರ್ಕಾರವನ್ನು ಕೆಡವಿ ತಮ್ಮ ಮೂಲಭೂತವಾದಿ ಸರ್ಕಾರವನ್ನು ಸ್ಥಾಪಿಸಿಕೊಳ್ಳಲು ಜಿಹಾದಿಗಳು ಲೆಕ್ಕ ಹಾಕಿದ್ದರು. ಆ ಲೆಕ್ಕಾಚಾರಗಳೇ ಈಗ ಬಿರುಕುಗಳನ್ನುಂಟುಮಾಡುತ್ತಿವೆ. ಇದು ಕಳ್ಳರ ಕೂಟದಂತೆ. ಕನ್ನ ಹಾಕಿ ದೋಚುವವರೆಗಷ್ಟೇ ಅವರಲ್ಲಿ ಒಗ್ಗಟ್ಟು. ನಂತರ ಲೂಟಿಯ ಹಂಚಿಕೆಯಾಗುವಾಗ ಎಲ್ಲರ ಮುಖವಾಡಗಳೂ ಕಳಚಿಬೀಳುತ್ತವೆ. ಬಾಂಗ್ಲಾದೇಶದಲ್ಲಿ ಈಗ ನಡೆಯುತ್ತಿರುವುದು ಅದೇ. ಎಲ್ಲರಿಗೂ ಸಮ್ಮತವಾಗುವ ನೀತಿಗಳು ರೂಪಿತವಾಗುವವರೆಗೆ ಅಥವಾ ಸಮ್ಮತಿಸದವರನ್ನು ಹೊರಗಿಡುವ ಕೆಲಸ ಸಾಧ್ಯವಾಗುವವರೆಗೆ ಅಂದರೆ ಡಾ. ಯೂನುಸ್ ಹೇಳುವ ‘ಪ್ರಮುಖ ಸುಧಾರಣೆಗಳು’ ನಡೆಯುವವರೆಗೆ ಬಹಳ ಕಾಲ ಹಿಡಿಯುತ್ತದೆ. ಅಲ್ಲಿಯವರೆಗೆ ಬಾಂಗ್ಲಾದೇಶದಲ್ಲಿ ಶಾಂತಿ ಇರುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಬಲಿಯಾಗುವವರು ಖುದ್ದು ಡಾ.ಮೊಹಮ್ಮದ್ ಯೂನುಸ್. ದೂರದ ಶ್ವೇತಭವನದ ಅಧಿಪತಿಗಳು ಕನ್ನ ಹಾಕುವುದರಲ್ಲಿ ನಿಸ್ಸೀಮರು, ಎಷ್ಟಾದರೂ ಅವರು ಅಮೆರಿ‘ಕನ್ನ’ರು, ಅವರಿಗೆ ಬೇಕಾದ್ದು ಅವರಿಗೆ ಕೊಟ್ಟು ನಾನೊಂದಿಷ್ಟು ಕಾಲ ರಾಜ್ಯಭಾರ ನಡೆಸಬಹುದು ಎಂದು ತಿಳಿದಿರಬಹುದಾದ ಅರ್ಥಶಾಸ್ತ್ರಜ್ಞ. ಯೂನುಸ್​ರ ಲೆಕ್ಕಾಚಾರಗಳು ಹೇಗಿರಬಹುದು? ಯಶಸ್ವಿಯಾಗಿ ಹಸೀನಾರನ್ನು ಓಡಿಸಿದ ನಂತರ ಢಾಕಾದಲ್ಲಿನ ದೂತಾವಾಸವನ್ನೇ ಮುಚ್ಚಿ ಓಡಿಹೋದ ಅಮೆರಿಕದ ಲೆಕ್ಕಾಚಾರ ಅಥವಾ ಆತಂಕ ಏನಿರಬಹುದು? ನಮ್ಮ ಪೂರ್ವ ಗಡಿಯಲ್ಲಿ ಇನ್ನು ಕಾಲ ವೇಗವಾಗಿ ಸರಿಯುತ್ತದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
1992ರ ಅಜ್ಮೀರ್ ಸಾಮೂಹಿಕ ಅತ್ಯಾಚಾರ ಪ್ರಕರಣ: 6 ಮಂದಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 20 =
Remember me
