| ರುದ್ರಣ್ಣ ಹರ್ತಿಕೋಟೆ ಬೆಂಗಳೂರುರಾಜ್ಯವನ್ನು ಆವರಿಸಿರುವ ಬರವನ್ನು ನಿರ್ವಹಿಸಲು ಅಲ್ಪಾವಧಿ ಮತ್ತು ದೀಘಾವಧಿ ಯೋಜನೆಗಳನ್ನು ಪ್ರತ್ಯೇಕವಾಗಿಯೇ ರೂಪಿಸುವಂತೆ ಸರ್ಕಾರ ವಿವಿಧ ಇಲಾಖೆಗಳಿಗೆ ಸೂಚಿಸಿದ್ದು, ತಕ್ಷಣಕ್ಕೆ 900 ಕೋಟಿ ರೂ.ಗಳ ಅಗತ್ಯ ಬೀಳಬಹುದೆಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ. ನೆರವಿಗಾಗಿ ಕೇಂದ್ರದತ್ತ ಮುಖ ಮಾಡಲಿದೆ. ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಸ್ವರೂಪದ ಬರ ಹಾಗೂ 34 ತಾಲೂಕುಗಳಲ್ಲಿ ಸಾಧಾರಣ ಬರವೆಂದು ವಿಭಜನೆ ಮಾಡುವ ಮೂಲಕ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಇನ್ನು ಮುಂದೆ ಬರವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ.
ಒಂದೇ ತಾಲೂಕಿನಲ್ಲಿಯೇ ಕೆಲವೆಡೆ ಮಳೆಯಾಗಿದ್ದರೆ, ಇನ್ನೂ ಕೆಲವೆಡೆ ಮಳೆಯೇ ಬಿದ್ದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದು ಸರ್ಕಾರಕ್ಕೆ ಕಾಡುತ್ತಿರುವ ಯಕ್ಷಪ್ರಶ್ನೆಯಾಗಿದೆ. ರಾಜ್ಯ ಸರ್ಕಾರ ಸಲ್ಲಿಸುವ ಮನವಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕಾಗುತ್ತದೆ. ಆ ನಂತರ ಅಧ್ಯಯನ ತಂಡ ಬಂದು ಪರಿಶೀಲನೆ ಮಾಡಬೇಕು. ತಂಡ ನೀಡುವ ವರದಿಯ ಆಧಾರದಲ್ಲಿ ಪರಿಹಾರ ಸಿಗಬಹುದು. ಆದ್ದರಿಂದಲೇ ಸರ್ಕಾರಕ್ಕೆ ಕೇಂದ್ರದಿಂದ ಸಿಗುವುದೆಷ್ಟು ಎಂಬ ಅಂದಾಜು ಸಿಗದೆ ಆತಂಕವೂ ಇದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಮುಂದಿನ ಲೆಕ್ಕಾಚಾರದಲ್ಲಿ ತೊಡಗಿದೆ. ಈ ವರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಇನ್ನೂ ಹಣ ಬಂದಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಗೆ 3857 ಕೋಟಿ ರೂ. ನಿಗದಿಯಾಗಿದೆ. ಕಂದಾಯ ಇಲಾಖೆಗೆ 497 ಕೋಟಿ ರೂ., ನೀರಾವರಿಗೆ 2341 ಕೋಟಿ ರೂ.ಗಳು ಬರಬೇಕಿದೆ.
94 ಪಂಚಾಯಿತಿಯಲ್ಲಿ ನೀರಿನ ಸಮಸ್ಯೆ:ರಾಜ್ಯದ 94 ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಸದ್ಯಕ್ಕೆ ನೀರಿನ ಸಮಸ್ಯೆ ಇದೆ. ನಗರಗಳ ಪೈಕಿ ಬೆಂಗಳೂರು ಹಾಗೂ ತುಮಕೂರಿನ ತಲಾ ಒಂದೊಂದು ವಾರ್ಡ್​ಗಳಲ್ಲಿ ಸಮಸ್ಯೆ ಇದೆ.
ಹಿಂಗಾರು ಆಶಾದಾಯಕವೇ?:ಮುಂಗಾರು ಈಗ ಮುಗಿಲು ಸೇರಿದೆ. ಆದರೂ ಮುಂದಿನ ವಾರ ಉತ್ತಮ ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಸರ್ಕಾರ ಇದೆ. ಹವಾಮಾನ ಇಲಾಖೆ ಆ ನಿಟ್ಟಿನಲ್ಲಿ ಮುನ್ಸೂಚನೆ ನೀಡಿದೆ ಎನ್ನಲಾಗಿದೆ. ಆದರೆ ಮುಂಗಾರಿನಂತೆ ಹಿಂಗಾರು ಸಹ ಕೈಕೊಟ್ಟರೆ ಗತಿ ಏನು ಎಂಬ ಆತಂಕ ಸರ್ಕಾರವನ್ನು ಕಾಡುತ್ತಿದೆ. ಸೆಪ್ಟೆಂಬರ್ ನಂತರ ಹಿಂಗಾರು ಆರಂಭವಾಗಬೇಕಿದೆ. ಆ ನಂತರ ಪರಿಸ್ಥಿತಿ ನೋಡಿಕೊಂಡು ಪ್ರತ್ಯೇಕ ಯೋಜನೆ ರೂಪಿಸಲಾಗುತ್ತದೆ.
ಗುಳೆ ಪರಿಸ್ಥಿತಿ ಇಲ್ಲ:ರಾಜ್ಯದಲ್ಲಿ ಗ್ಯಾರಂಟಿಗಳ ಅನುಷ್ಠಾನ ಆಗಿರುವುದರಿಂದ ಬರ ಇದ್ದರೂ ನೆರೆ ರಾಜ್ಯಗಳಿಗೆ ಕಾರ್ವಿುಕರು ಗುಳೇ ಹೋಗುವ ಪರಿಸ್ಥಿತಿ ಇನ್ನೂ ನಿರ್ವಣವಾಗಿಲ್ಲವೆಂದು ಸರ್ಕಾರದ ಮೂಲಗಳು ಸ್ಪಷ್ಟನೆ ನೀಡುತ್ತವೆ.
ಬರ ಘೋಷಣೆಗೆ ಸಂಬಂಧಿಸಿದಂತೆ ಇರುವ ಕೇಂದ್ರದ ನಿಯಮಗಳಲ್ಲಿ ಏನೇನು ಬದಲಾವಣೆಗಳಾಗಬೇಕು ಎಂಬ ಕುರಿತು ತಜ್ಞರಿಂದಲೇ ವರದಿಯೊಂದನ್ನು ಸಿದ್ಧಪಡಿಸಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ. ಕೃಷಿ ವಿಶ್ವವಿದ್ಯಾಲಯದ ತಜ್ಞರು, ಆರ್ಥಿಕ ತಜ್ಞರನ್ನು ಒಳಗೊಂಡ ಸಮಿತಿ ಇದೇ ವಾರದಲ್ಲಿ ರಚನೆಯಾಗಲಿದೆ. ಮೂರು ವಾರ ಮಳೆ ಇರಬಾರದು, ಒಣ ಹವೆ ಇದ್ದರೂ ತೇವಾಂಶ ಶೇ.60 ರಷ್ಟು ಇರಬಾರದು, ಸೆಟಲೈಟ್ ಚಿತ್ರದಲ್ಲಿ ಹಸಿರು ಕಂಡರೆ ಬರ ಅಲ್ಲವೆಂದು ನಿರ್ಧರಿಸುವುದನ್ನು ತೆಗೆದು ಹಾಕಬೇಕು ಎಂಬುದು ಸೇರಿದಂತೆ ಅನೇಕ ನಿಯಮಗಳನ್ನು ಬದಲಾವಣೆ ಮಾಡಬೇಕಾಗಿದೆ. ಮುಖ್ಯಮಂತ್ರಿ ಅವರೇ ಪತ್ರ ಬರೆದರೂ ಕೇಂದ್ರ ಸ್ಪಂದಿಸಿಲ್ಲ. ಹಾಗಾಗಿ ಯಾವ ಕಾರಣಕ್ಕೆ ಏನೇನು ಬದಲಾವಣೆ ಆಗಬೇಕಿದೆ ಎಂಬ ಬಗ್ಗೆ ತಜ್ಞರಿಂದಲೇ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ.
ಬರ ನಿರ್ವಹಣೆಗೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಎನ್​ಡಿಆರ್​ಎಫ್ ಮತ್ತು ಎಸ್​ಡಿಆರ್​ಎಫ್ ಮಾರ್ಗಸೂಚಿಯ ಪ್ರಕಾರ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ ಎಂದರು. ಕೇಂದ್ರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಕೇಂದ್ರ ಸರ್ಕಾರ ಹಣ ನೀಡಬೇಕು. ರಾಜ್ಯ ಸರ್ಕಾರ ಬರ ನಿರ್ವಹಣೆ ಮಾಡಲಿದೆ. ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಬೆಳೆ ಸಮೀಕ್ಷೆ: ಬರ ಘೋಷಣೆಗೆ ಸಂಬಂಧಿಸಿದಂತೆ ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದೆ. ಕೇಂದ್ರಕ್ಕೆ ಮನವಿ ಸಲ್ಲಿಸಲು ಅಂತಿಮ ಸಮೀಕ್ಷೆ ನಡೆದಿದೆ. ವಿವಿಧ ಇಲಾಖೆಗಳ ಅಧಿಕಾರಿ ಗಳು ರಾಜ್ಯದಲ್ಲಿರುವ 2.25 ಕೋಟಿ ಪ್ಲಾಟ್​ಗಳಿಗೆ ಹೋಗಿ ಸಮೀಕ್ಷೆ ಮಾಡಲಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಸರಾಸರಿಗಿಂತ ಸ್ವಲ್ಪ ಬಿತ್ತನೆ ಕಡಿಮೆಯಾಗಿದೆ. ಆದರೆ ಆನಂತರ ತೇವಾಂಶದ ಕೊರತೆಯಾಗಿ ಬೆಳೆ ಹಾನಿಯಾಗಿದೆ. ಮುಂಗಾರಿನಲ್ಲಿ 82.35 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಗೆ 69.84 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಭತ್ತ, ರಾಗಿ, ಜೋಳ, ಸಜ್ಜೆ, ತೊಗರಿ, ಹುರುಳಿ, ಉದ್ದು, ಅವರೆ, ಶೇಂಗಾ, ಸೂರ್ಯಕಾಂತಿ ಸೇರಿ ಬಹುತೇಕ ಬೆಳೆಗಳು ತೇವಾಂಶ ಕೊರತೆ ಯಿಂದ ಒಣಗಿವೆ. ಮಾರ್ಗಸೂಚಿ ಪ್ರಕಾರವೇ ಒಣಭೂಮಿಯಲ್ಲಿ ಹೆಕ್ಟೇರ್​ಗೆ 8500, ನೀರಾವರಿಯಲ್ಲಿ ಹೆಕ್ಟೇರ್​ಗೆ 13,500 ಹಾಗೂ ತೋಟಗಾರಿಕೆ ಬೆಳೆಗಳಲ್ಲಿ 18,500 ರೂ. ಪರಿಹಾರ ನೀಡಬೇಕಾಗುತ್ತದೆ.
ಯಾವ ರೈತರು ವಿಮೆ ಮಾಡಿಸಿ ದ್ದಾರೋ ಅದನ್ನು ಕೊಡಿಸುವ ಕಡೆ ಸರ್ಕಾರ ಪ್ರಯತ್ನ ಮಾಡಿದೆ. ವಿಮೆ ಮಾಡಿಸಿದ್ದು ಬಿತ್ತನೆಯಾಗದಿದ್ದರೆ ಶೇ.25 ರಷ್ಟು ಹಾಗೂ ಬಿತ್ತನೆಯಾಗಿದ್ದು ಮೊಳಕೆಯೊಡೆಯದಿದ್ದರೆ ಶೇ.50 ರಷ್ಟು ವಿಮೆ ಪರಿಹಾರ ಸಿಗಲಿದೆ. ಈ ನಿಟ್ಟಿನಲ್ಲಿ ವಿಮೆ ಕಂಪನಿಗಳ ಜತೆ ಸರ್ಕಾರ ಮಾತುಕತೆ ನಡೆಸಿ ಮನವೊಲಿಸಿದೆ. ವಾರದೊಳಗೆ ಸುಮಾರು 35 ಸಾವಿರ ರೈತರಿಗೆ 50 ಕೋಟಿ ರೂ. ಪರಿಹಾರ ಮೊತ್ತ ಸಿಗಲಿದೆ ಎನ್ನಲಾಗಿದೆ.
ಬರ ಘೋಷಣೆಯಾಗುತ್ತಿದ್ದಂತೆ ಬೆಳೆಹಾನಿಗೆ ಪರಿಹಾರ ನೀಡಬೇಕಾಗುತ್ತದೆ. ಕುಡಿಯುವ ನೀರು ಅಡ್ಡಿಯಾಗದಂತೆ ನೋಡಿಕೊಳ್ಳಬೇಕಾಗಿದೆ. ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ. ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ಆರು ತಿಂಗಳ ಬರ ನಿರ್ವಹಣೆಗೆ 900 ರಿಂದ 1000 ಕೋಟಿ ರೂ.ವರೆಗೆ ಅಗತ್ಯ ಬೀಳಬಹುದು ಎಂದು ಸರ್ಕಾರದ ಮೂಲಗಳು ಹೇಳುತ್ತವೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಈಗ 491.78 ಕೋಟಿ ರೂ. ಹಣ ಇದೆ. ಅದರಲ್ಲಿ ಕುಡಿಯುವ ನೀರು ಹಾಗೂ ಇತರೆ ಕಾರ್ಯಕ್ರಮಗಳಿಗೆ ತಕ್ಷಣದ ಬಳಕೆಗೆ ಅಡ್ಡಿ ಇಲ್ಲ ಎಂದು ಹೇಳಲಾಗುತ್ತಿದೆ.
ಬರ ಪೀಡಿತ ತಾಲೂಕುಗಳ ಘೊಷಣೆಯಲ್ಲಿ ಗೊಂದಲ ವಿಲ್ಲ. ಕೇಂದ್ರ ಸರ್ಕಾರದ ನಿರ್ದೇಶಿತ ಮಾನದಂಡಗಳಿಗೆ ಅನುಗುಣವಾಗಿ ಬರಪೀಡಿತ ತಾಲೂಕುಗಳನ್ನು ಘೊಷಣೆ ಮಾಡಿದ್ದೇವೆ. ಈ ತಿಂಗಳ ಅಂತ್ಯಕ್ಕೆ ಮತ್ತೊಮ್ಮೆ ಬೆಳೆ ಹಾನಿ ಸಮೀಕ್ಷೆ ನಡೆಸಿ ಮುಂದಿನ ಸೂಕ್ತ ಪ್ರಕ್ರಿಯೆ ಜರುಗಿಸುತ್ತೇವೆ.
| ಕೃಷ್ಣ ಬೈರೇಗೌಡ ಕಂದಾಯ ಸಚಿವ
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:nineteen − 5 =
Remember me
