ನರೇಗಲ್ಲ:ಪಟ್ಟಣದ ಸ್ವಚ್ಛತೆಯ ಜವಾಬ್ದಾರಿ ಹೊತ್ತಿರುವ ಪಟ್ಟಣ ಪಂಚಾಯಿತಿ ಆವರಣವೇ ಹಾಳು ಕೊಂಪೆಯಂತಾಗಿದೆ.
ಪ್ರವೇಶ ದ್ವಾರದಲ್ಲಿಯೇ ಪುರಾತನ ಪಳಿಯುಳಿಕೆಯಂತೆ ನಿಂತಿರುವ ಜೆಸಿಬಿ, ತುಕ್ಕು ಹಿಡಿದ ಟ್ರ್ಯಾಕ್ಟರ್, ಮಿನಿ ಟಿಪ್ಪರ್ ಹಾಗೂ ಇತರೆ ವಾಹನಗಳು ಸ್ವಾಗತ ಕೋರುತ್ತವೆ. ಇದು ಪಟ್ಟಣ ಪಂಚಾಯಿತಿ ಕಚೇರಿಯೋ ಅಥವಾ ಗುಜರಿ ಅಂಗಡಿಯೋ ಎನ್ನುವ ಅನುಮಾನ ಮೂಡಿಸುತ್ತದೆ.
ಸ್ವಚ್ಛತೆಗಾಗಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಬೇಕಾದಷ್ಟು ಅನುದಾನ ನೀಡುತ್ತಿದೆ. ಇದನ್ನು ಸಮರ್ಪಕವಾಗಿ ಬಳಸುವಲ್ಲಿ ನರೇಗಲ್ಲ ಪಟ್ಟಣ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ಸ್ವಚ್ಛ ಭಾರತ ಯೋಜನೆಯಡಿ ಖರೀದೀಸಲಾಗಿರುವ ವಾಹನಗಳು ಪ.ಪಂ. ಆವರಣದಲ್ಲಿ ನಿರುಪಯುಕ್ತವಾಗಿ ನಿಂತಿವೆ.
2012ರಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗಿದ್ದ ಜೆಸಿಬಿ ವಾಹನ, ಎರಡು ಟ್ರ್ಯಾಕ್ಟರ್, ಕಸ ವಿಲೇವಾರಿಯ 5 ಟಂಟಂ ವಾಹನ, ಗಟಾರ ಸ್ವಚ್ಛಗೊಳಿಸುವ ಯಂತ್ರ ಹಾಗೂ ಇತರೆ ವಾಹನಗಳು ಅಧಿಕಾರಿಗಳ ನಿರ್ಲಕ್ಷ್ಯಂದ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಳಕೆಯಾಗಿ ಕೆಟ್ಟು ನಿಂತು 5 ವರ್ಷಗಳೇ ಕಳೆದಿವೆ. ಅವುಗಳ ದುರಸ್ತಿ ಮಾಡುವ ನೆಪದಲ್ಲಿ ಸಾವಿರಾರೂ ರೂ. ಖರ್ಚು ಮಾಡಲಾಗಿದೆ. ಆದರೆ, ಜೆಸಿಬಿ ಮಾತ್ರ ದುರಸ್ತಿಯಾಗಿಲ್ಲ. ಪ.ಪಂ. ಆವರಣದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕೆಟ್ಟು ನಿಂತಿರುವ ವಾಹನಗಳು, ಹಳೆಯ ಗುಜರಿ ಸಾಮಾನುಗಳು ಕಣ್ಣಿಗೆ ರಾಚುತ್ತವೆ. ಅವುಗಳನ್ನು ಟೆಂಡರ್ ಕರೆದು ವಿಲೇವಾರಿ ಮಾಡಬೇಕಿದ್ದ ಅಧಿಕಾರಿಗಳು ನಿತ್ಯ ಅವುಗಳ ಮುಂದೆಯೇ ಓಡಾಡುತ್ತ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಆಡಳಿತ ಮಂಡಳಿಯೂ ಇಲ್ಲ. ಅಧಿಕಾರಿಗಳು ಇಲ್ಲ:
ಪ.ಪಂ.ನಲ್ಲಿ ಅಧಿಕಾರಿಗಳ ಕೊರತೆ ಇದ್ದು, 8 ವರ್ಷಗಳಿಂದ ಕಾಯಂ ಇಂಜಿನಿಯರ್ ಇಲ್ಲ. ವರ್ಷದಲ್ಲಿ 5 ಜನ ಇಂಜಿನಿಯರ್ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ. ಅನೇಕ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದು ವರ್ಷಗಳೇ ಕಳೆದಿವೆ. ಪ್ರಭಾರಿಯಾಗಿ ನೇಮಿಸಲಾಗುವ ಇಂಜಿನಿಯರ್​ಗಳು ತಮಗೆ ಇಷ್ಟ ಬಂದಾಗ ಬಂದು ಹೋಗುತ್ತಾರೆ. ಕಳೆದ ಮೂರು ತಿಂಗಳಿನಿಂದ ಮುಖ್ಯಾಧಿಕಾರಿ ಹುದ್ದೆಯೂ ಖಾಲಿಯಿದ್ದು, ರೋಣ ಪುರಸಭೆಯ ಮುಖ್ಯಾಧಿಕಾರಿಗಳೇ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ತ ಆಡಳಿತ ಮಂಡಳಿಯೂ ಇಲ್ಲ, ಇತ್ತ ಅಧಿಕಾರಿಗಳೂ ಇಲ್ಲದೆ, ಪಟ್ಟಣದ ಅಭಿವೃದ್ಧಿ ಮರೀಚಿಕೆಯಾಗಿದೆ.
ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿ: ಯಾವ ವೇಳೆಯಲ್ಲೂ ಪ.ಪಂ.ಗೆ ಹೋದರೂ ಯಾವುದೇ ಅಧಿಕಾರಿಗಳು ಲಭ್ಯವಿರುವುದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಸಾರ್ವಜನಿಕರ ಗೋಳು ಕೇಳುವವರಿಲ್ಲದಾಗಿದೆ. ಈಗಾಗಲೇ ಪ.ಪಂ. ಅಧಿಕಾರಿಗಳ ಕೊರತೆಯ ಬಗ್ಗೆ ಶಾಸಕ ಕಳಕಪ್ಪ ಬಂಡಿ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಪ.ಪಂ.ಗೆ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ನೇಮಿಸಿ, ಇಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ನರೇಗಲ್ಲ ಪಟ್ಟಣಕ್ಕೆ ತನ್ನದೇ ಆದ ಇತಿಹಾಸವಿದೆ. ಒಂದು ಕಾಲದಲ್ಲಿ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಆದರೆ, ಇತ್ತೀಚೆಗೆ ಪಟ್ಟಣದ ಅಭಿವೃದ್ಧಿ ಶೂನ್ಯವಾಗಿದೆ. ಆಡಳಿತಾತ್ಮಕ ಕಾರ್ಯ ಚಟುವಟಿಕೆ ಸತ್ತು ಹೋಗಿವೆ. ಪಟ್ಟಣವೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ನೇರ ಜವಾಬ್ದಾರರಾಗಿದ್ದಾರೆ. ಇನ್ನಾದರೂ, ಪಟ್ಟಣದ ಅಭಿವೃದ್ಧಿಯ ಬಗ್ಗೆ ಗಂಭೀರವಾಗಿ ವಿಚಾರ ಮಾಡಿ, ಪಟ್ಟಣಕ್ಕೆ ಹೊಸ ರೂಪ ನೀಡುವ ಕಾರ್ಯಗಳಾಗಬೇಕು.ಡಾ. ಜಿ.ಕೆ. ಕಾಳೆ, ಹಿರಿಯ ನಾಗರಿಕರು, ನರೇಗಲ್ಲ
ನರೇಗಲ್ಲನ ಪಟ್ಟಣ ಪಂಚಾಯಿತಿಯ ವಾಹನ ಖರೀದಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ಆಗಿರುವ ಸಂಶಯವಿದ್ದು, ಜೆಸಿಬಿ ವಾಹನ ಹಾಗೂ ಇತರೆ ವಾಹನಗಳ ಖರೀದಿಯ ಬಗ್ಗೆ ತನಿಖೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕೆಲ ದಿನಗಳಲ್ಲಿ ವಾಹನ ಖರೀದಿಯ ಬಗ್ಗೆ ತನಿಖೆಯಾಗಲಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಆಗುವ ವಿಶ್ವಾಸವಿದೆ. ಹಳೆಯ ವಸ್ತುಗಳನ್ನು ಲಿಲಾವು ಮಾಡುವ ಮೂಲಕ ಮಾರಾಟ ಮಾಡಲಾಗುವುದು.| ಎಂ.ಎ. ನೂರುಲ್ಲಾಖಾನ್, ಪ್ರಭಾರಿ ಮುಖ್ಯಾಧಿಕಾರಿ
ಕೊರೊನಾ ವೈರಸ್ ಹಾವಳಿಯ ನಡುವೆ ಆವರಿಸಿತು ಹೋಳಿಯ ರಂಗು..
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 2 =
Remember me
