ಇಂದು ಜನ್ಮದಿನ
ಸಂಗೀತ ಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ಲ (1913-2009) ಕರ್ನಾಟಕದ ಹಿಂದೂಸ್ಥಾನಿ ಗಾಯಕರಲ್ಲಿ ಪ್ರಮುಖರು. ವಿದ್ಯಾಕಾಶಿ ಧಾರವಾಡದಲ್ಲಿ (1913 ಮಾರ್ಚ್ 5) ಜನನ. ಗಂಗೂಬಾಯಿಯವರ ತಾಯಿ ಅಂಬಾಬಾಯಿ.
ಅವರು ಸ್ವತಃ ಉತ್ತಮ ಕರ್ನಾಟಕ ಸಂಗೀತ ಪಟು. ಆರಂಭದಲ್ಲಿ ಗಂಗೂಬಾಯಿ ತಾಯಿಯ ಹಾಡುಗಾರಿಕೆಯನ್ನು ಅನುಸರಿಸಿ ಸೊಗಸಾಗಿ ಕೀರ್ತನೆ, ಜಾವಡಿಗಳನ್ನು ಹಾಡುತ್ತಿದ್ದರು. ಇದನ್ನು ನೋಡಿ ಅಂಬಾಬಾಯಿ ತಾವು ಸಂಗೀತ ಕಾರ್ಯಕ್ರಮಗಳನ್ನು ನೀಡುವುದನ್ನೇ ನಿಲ್ಲಿಸಿಬಿಟ್ಟರು. ಇದು ತಾಯಿಯಾದವಳು ಮಗಳಿಗಾಗಿ ಮಾಡಿದ ಅಪೂರ್ವ ತ್ಯಾಗ. ಅಂಬಾಬಾಯಿಗೆ ಮಗಳು ಹಿಂದೂಸ್ಥಾನಿ ಸಂಗೀತವನ್ನು ಕಲಿಯಲಿ ಎಂದಾಸೆ. ಅದಕ್ಕಾಗಿ ಧಾರವಾಡವನ್ನು ಬಿಟ್ಟು ಹುಬ್ಬಳ್ಳಿಗೆ ಬಂದು ಮಗಳಿಗೆ ಸಂಗೀತವನ್ನು ಕಲಿಸಿದರು. ಶಾಲಾಭ್ಯಾಸ ಐದನೆಯ ತರಗತಿಗೆ ಮುಕ್ತಾಯವಾದರೂ, ಗಂಗೂಬಾಯಿ ಸಂಗೀತ ಸಾಧನೆಯನ್ನು ಮುಂದುವರಿಸಿ, ಸಾಧನೆಯ ಒಂದೊಂದೇ ಮೆಟ್ಟಿಲನ್ನು ಏರುತ್ತ ಕರ್ನಾಟಕ ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ ಮುಂತಾದ ಮಹೋನ್ನತ ವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿ ಪಡೆದರು. ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಜೊತೆಗೆ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾದರು. 97 ವರ್ಷಗಳ ತುಂಬು ಜೀವನವನ್ನು ನಡೆಸಿದ ಗಂಗೂಬಾಯಿ ಹಾನಗಲ್ಲ ಮರಣೋತ್ತರ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದು ಅವರ ಮಾನವೀಯ ಗುಣದ ಪ್ರತೀಕವಾಗಿದೆ.
ಗಾಯನ ಸಮಾಜದ 17ನೆಯ ವಾರ್ಷಿಕ ಸಂಗೀತ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಅವರು, ‘ನನಗೆ ಸಂಗೀತವೇ ದೇವರು. ಆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕು. ಅಂದರೆ ಕಲೆಯಲ್ಲಿ ಪರಿಣತಳಾಗಬೇಕು ಎಂಬುದೊಂದೇ ನನ್ನ ಮಹದಾಸೆಯಾಗಿರುವುದು. ನನ್ನ ಗಾಯನವನ್ನು ಶೋತೃಗಳು ಕೇಳಿ ಮನಸಾರೆ ಮೆಚ್ಚಿದರೆ, ಅದು ಅವರ ಹೃದಯವನ್ನು ಮುಟ್ಟಿದರೆ ನನಗೆ ಮೋಕ್ಷ ಸಿಕ್ಕ ಹಾಗೆ’ ಎಂದು ನುಡಿದಿದ್ದರು.
ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ 1954ರಲ್ಲಿ ಎಂದರೆ ತಮ್ಮ ಇಪ್ಪತ್ತರಲ್ಲಿ-ಮೈಸೂರಿನಲ್ಲಿ ತಾವು ಪ್ರಥಮ ಸಲ ಗಂಗೂಬಾಯಿ ಅವರ ಸಂಗೀತವನ್ನು ಒಬ್ಬ ದಾರಿಹೋಕನಾಗಿ, ರಾತ್ರಿ ಹೊತ್ತು ಅಚಾನಕ್ ಆಗಿ ಕೇಳಿ ಕರಗಿಹೋದ ಅನುಭವವನ್ನು ಹೀಗೆ ಬಣ್ಣಿಸಿದ್ದಾರೆ. ‘ದಟ್ಟ ಕಾರಿರುಳಿನಲ್ಲಿ ದನ ಕಾಯುವವನು ತನ್ನ ದೊಡ್ಡಿಯ ದನಗಳಿಗೆ ಅರ್ಥವಾಗುವ ರೀತಿಯಲ್ಲಿ ದೀರ್ಘವಾಗಿ ಹಸುಗಳು ಗಟ್ಟಿಯಾಗಿ ಮಾರುತ್ತರ ಕೊಡುವ ತುಂಬು ಭಾವದ ರೀತಿಯದು. ಯಾವ ಅರ್ಥವೂ ಇಲ್ಲದ, ಆದರೆ ನನ್ನ ಕಲ್ಪನೆಯ ಭಾವ ತುಂಬಿ ಅರ್ಥದ ಮಳೆಯನ್ನೇ ಗರೆಯುತ್ತ ಬಾನಿನೆತ್ತರದಲ್ಲಿ ಸ್ಪುಟಗೊಳ್ಳುವಂತೆ ಪ್ರಚೋದಿಸುವ ಜಾತಿಯದು, ರಸ್ತೆಯಲ್ಲೇ ಮೂಕನಾಗಿ ನಿಂತುಬಿಟ್ಟೆ. ಗಾಯಕಿ ಕರುಳಿನಿಂದ ಹುಟ್ಟಿ ಹೊಮ್ಮುವಷ್ಟು ನಿಗೂಢ ಭಾವವನ್ನು ಸುರಿಯುತ್ತಿದ್ದರು. ಅಳುತ್ತ ರಚ್ಚೆ ಹಿಡಿದ ನನ್ನನ್ನು ಸಮಾಧಾನ ಪಡಿಸುವಂತೆ ನನ್ನ ಗತಿಸಿದ ತಾಯಿ ಹಾಡುತ್ತಿದ್ದಾಳೆಂಬ ಭಾವ ನನ್ನನ್ನು ತುಂಬಿಕೊಂಡಿತು. ಅಲ್ಲಿ ಸೇರಿದ್ದ ನೂರಾರು ಜನರಲ್ಲಿ ಎಲ್ಲರನ್ನೂ ಬಿಟ್ಟು ನನಗೊಬ್ಬನಿಗೇ, ನನ್ನನ್ನು ಲಾಲಿಸಿ ತಣಿಸುವುದಕ್ಕೆ ಮಾತ್ರವೇ ಹಾಡುತ್ತಿದ್ದಾರೆ ಎನಿಸಿತು. ಅದೊಂದು ಬಗೆಯ ಅರ್ಥವಿಲ್ಲದ, ಸ್ವಾರ್ಥವಿಲ್ಲದ ಬರಿಯ ಭಾವ ತುಂಬಿದ ಗಾಯನ.
ಆ ಒಂದೇ ರಾಗವನ್ನು ಎಷ್ಟು ಹೊತ್ತು, ಹಾಡಿದರೋ ನನಗೆ ಹೇಗೆ ಗೊತ್ತಾಗಬೇಕು? ನನ್ನ ಕಾಲದ ಅರಿವು ಸತ್ತು ಹೋಗಿತ್ತು. ಬೆಳಗ್ಗೆ ನಾಲ್ಕೂವರೆವರೆಗೆ ಹಾಡಿದರು’.
ಪಂಡಿತ ರವಿಶಂಕರರಂತೂ ಐದು ದಶಕಗಳ ಕಾಲ ಗಂಗೂಬಾಯಿ ಮೆಚ್ಚಿನ ಬಂಧುವಾಗಿ, ಆತ್ಮೀಯತೆಯಿಂದ ನಡೆದುಕೊಂಡರು. ಹುಬ್ಬಳ್ಳಿಗೆ ಬಂದಾಗಲೆಲ್ಲ ದೇವರ ಗುಡಿಗೆ ಹೋಗುವಂತೆ ದೇಶಪಾಂಡೆ ನಗರದ ಗಂಗಾಲಹರಿಗೆ ಭೇಟಿ ಕೊಟ್ಟು ಸಂಗೀತ ಬಾಂಧವ್ಯದ ಹಬ್ಬದೂಟ ಮಾಡಿ ಬಂದಿದ್ದಾರೆ. ಕಲಾವಿದರ ನಡುವಿನ ಬಂಗಾರದ ಬಾಂಧವ್ಯ ಇದು.
‘ಇದು ಗುರುವಿನ ಗುಣಗೌರವ ಎನ್ನಬೇಕೋ, ತಮ್ಮ ಶ್ಲಾಘನೆಯವನ್ನು ಕಮ್ಮಿ ಎತ್ತರಕ್ಕೇರಿದರೂ ಅವರು ಎಂದೂ ಜಂಭದ ಮುಖದಿಂದ ನಡೆದವರಲ್ಲ’ ಎಂದು ವಿಜಯಾ ಮುಳೆ ಹೇಳಿದ್ದಾರೆ. 1946ರಲ್ಲಿ ಎಂದರೆ ಸ್ವಾತಂತ್ರ್ಯ ಪ್ರಾಪ್ತಿಗಿಂತ ಒಂದು ವರ್ಷ ಪೂರ್ವ ಸವಾಯಿ ಗಂಧರ್ವರ ಷಷ್ಟ್ಯಬ್ಧಿ ಪೂರ್ತಿ ಸಮಾರಂಭ ಸಮಯಕ್ಕೆ ಹೊರತಂದ ಗುರುಗಳ ಗೌರವ ಗ್ರಂಥಕ್ಕೆ ಆಗಿನ ಶ್ರೇಷ್ಠ ಸಂಗೀತಕಾರರಾದ ಗೋವಿಂದರಾವ್ ಟೇಂಬೆ, ಮಾಸ್ತರ್ ಕೃಷ್ಣರಾವ್, ಹೀರಾಬಾಯಿ ಬಡೋದೆಕರ್, ಕಪಿಲೇಶ್ವರಿ ಬುವಾ ಇಂಥವರು ಸವಾಯಿ ಗಂಧರ್ವರ ಸಂಗೀತ ಗುಣಗಾನ ಮಾಡಿರುವುದೇ ಒಂದು ನಿದರ್ಶನವೆಂಬುದು ಗಂಗೂಬಾಯಿ ಅವರ ಅಭಿಮತ.
ಗಂಗೂಬಾಯಿ ಗಾಯನ ಸಭೆಗಳನ್ನು ಮುಂಬಯಿಯಲ್ಲಿ ಬಿಟ್ಟೂ ಬಿಡದ ಕೇಳುತ್ತ ಬಂದ ಖ್ಯಾತ ಸಂಗೀತತಜ್ಞ, ಮೋಹನ ನಾಡಕರ್ಣಿ ಅವರು, ಜಗದ್ವಿಖ್ಯಾತ ವಾದ್ಯವಿಶಾರದ ಪಿಟೀಲುಪಟು ಯಹೂದಿ ಮೆನೂಹಿನ್ ಅವರ ಒಂದು ಮಾತನ್ನು ಗಂಗೂಬಾಯಿ ಅವರ ಸಂಗೀತಶೈಲಿಯನ್ನು ವಿವರಿಸುವಾಗ ಉಲ್ಲೇಖಿಸುತ್ತಾರೆ. ಅದೆಂದರೆ ‘ಸಂಗೀತವನ್ನು ಭಾವವಿಲ್ಲದೆ ಪ್ರದರ್ಶಿಸಲಾಗದು’ ಎಂದು. ಈ ಮಾತು ಎಲ್ಲ ಹೆಸರಾಂತ ಗಾಯಕರಿಗೆ ಅನ್ವಯಿಸುವಂತೆ ಕಿರಾನಾ ಗಾಯಕಿ ಗಂಗೂಬಾಯಿ ಅವರಿಗಂತೂ ಅಕ್ಷರಶಃ ಆತ್ಮನಿಷ್ಠವಾಗಿ ಅನ್ವಯಿಸುತ್ತದೆ. ಮುಂಬಯಿಯ ಪ್ರತಿಷ್ಠಿತ ಸಂಗೀತ ಸಂಘಗಳು ಏರ್ಪಡಿಸಿದ ಕಾರ್ಯಕ್ರಮಗಳೆಲ್ಲ ಬಹು ಸಂಖ್ಯೆಯಲ್ಲಿ ಶ್ರೋತೃಗಳನ್ನು ಆಕರ್ಷಿಸುವುದಕ್ಕೆ ಕಾರಣ ಗಂಗೂಬಾಯಿ ಅವರ ಭಾವತನ್ಮಯತೆ! ರಾಗ ಚೀಜುಗಳ ಸ್ವರಭಾವಗಳನ್ನು ಅಂತರ್ಯದಲ್ಲಿ ಅನುಭವಿಸಿ ಹಾಡುವುದು ಅವರ ಗಾನಧರ್ಮವಾಗಿದೆ.
ಗಂಗೂಬಾಯಿ ಘನತೆ, ಸಿದ್ಧಿ, ಸಾಧನೆಗಳನ್ನು ಅವರ ಪದವಿ, ಪ್ರಶಸ್ತಿ, ಪುರಸ್ಕಾರಗಳಿಂದ ಅಳೆಯತಕ್ಕದ್ದಲ್ಲ, ಏಕೆಂದರೆ ಅವರ ಸಂಗೀತದ ಹಿರಿಮೆಯನ್ನ ಅನುಸರಿಸಿ ಈ ಸನ್ಮಾನಗಳೆಲ್ಲ ಸಾಲುಗಟ್ಟಿಕೊಂಡು ಬಂದವು. ಸಿದ್ಧಿ ಎಂಬುದು ಪ್ರಥಮಃ ಪ್ರಸಿದ್ಧಿ ಅದರ ಪರಿಣಾಮ. ಅವರ ಪ್ರಸಿದ್ಧಿ ಸ್ವಾತಂತ್ರ್ಯಪೂರ್ವದಲ್ಲಿಯೇ ಎಂದರೆ 1940ರಿಂದ ಭಾರತದ ತುಂಬ ವ್ಯಾಪಕವಾಗಿತ್ತು.

(ಲೇಖಕರು ಕರ್ನಾಟಕ ಸಂಸ್ಕೃತ ವಿವಿಯ ಡೆಪ್ಯೂಟಿ ಡೈರೆಕ್ಟರ್)

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + eight =
Remember me
