ಬೆಂಗಳೂರು:ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತಿ ನಂತರವೂ ಬೇರೆ ಬೇರೆ ಹುದ್ದೆಗಳನ್ನು ಗಿಟ್ಟಿಸಿ ಸೌಲಭ್ಯ ಪಡೆಯುತ್ತಿರುವವರಿಗೆ ಗೇಟ್​ಪಾಸ್ ನೀಡಲು ಕೈಗೊಂಡಿರುವ ತೀರ್ಮಾನ ನೌಕರರು ಮತ್ತು ಸಾರ್ವತ್ರಿಕ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಪ್ರತಿ ತಿಂಗಳು ಸರ್ಕಾರಕ್ಕೆ ಲಕ್ಷಾಂತರ ರೂ. ಗಳಷ್ಟು ಮೊತ್ತವನ್ನು ತಮ್ಮಪಿಂಚಣಿಯ ಜತೆಗೆ ಪಡೆಯುತ್ತ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿರುವುದನ್ನು ತಡೆಯುವ ಪ್ರಯತ್ನ ಈಗ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಆದೇಶ ಹೊರಡಿಸುತ್ತಿದ್ದಂತೆ ಸರ್ಕಾರಿ ಸೇವೆಗಳಲ್ಲಿ ಎಲ್ಲೆಲ್ಲಿ ನಿವೃತ್ತರು ಇದ್ದಾರೆ? ಎಷ್ಟು ವರ್ಷದಿಂದ ಇದ್ದಾರೆ? ಇದರಿಂದ ಬೊಕ್ಕಸಕ್ಕೆ ಹೊರೆ ಹೇಗೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಸರ್ಕಾರ ನಿಜಕ್ಕೂ ನಿವೃತ್ತರಿಗೆ ಗೇಟ್​ಪಾಸ್ ನೀಡುವುದೇ ಅಥವಾ ಆದೇಶ ಕಪಾಟು ಸೇರಿ ಧೂಳು ಹಿಡಿಯುವುದೇ ಎಂಬ ಬಗ್ಗೆ ನೌಕರರ ವಲಯದಲ್ಲಿ ಅನುಮಾನವೂ ಕಾಡಲಾರಂಭಿಸಿದೆ.
ಎಷ್ಟು ಜನರು ಇರಬಹುದು?:ಸರ್ಕಾರದ ವಿವಿಧ ಹಂತಗಳಲ್ಲಿ ಎಷ್ಟು ಜನ ನಿವೃತ್ತರು ಇರಬಹುದೆಂಬ ಪ್ರಶ್ನೆ ಕಾಡಲಾರಂಭಿಸಿದೆ. ಸರ್ಕಾರದ ಮೂಲವೊಂದರ ಪ್ರಕಾರ ಸಚಿವಾಲಯದಲ್ಲಿಯೇ ಅಂದಾಜು ಮೂನ್ನೂರು ಜನ ವಿವಿಧ ಹುದ್ದೆಗಳಲ್ಲಿ ನಿವೃತ್ತಿಯ ನಂತರವೂ ಬೇರೆ ಬೇರೆ ಹುದ್ದೆಯ ಹೆಸರಿನಲ್ಲಿ ಸೇವೆ ಸಲ್ಲಿಸುತ್ತ ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದಾರೆ. ವಿವಿಧ ನಿಗಮಗಳು, ಸ್ವಾಯತ್ತ ಸಂಸ್ಥೆಗಳು, ಕೆಳಹಂತದ ಕಚೇರಿಗಳು, ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಹೀಗೆ ಎಲ್ಲೆಡೆ ಸೇರಿದರೆ ಎರಡು ಸಾವಿರಕ್ಕೂ ಅಧಿಕ ಜನ ಇರಬಹುದೆಂದು ಹೇಳಲಾಗುತ್ತಿದೆ. ನಿಖರ ಮಾಹಿತಿ ಸರ್ಕಾರಕ್ಕೆ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಸಿಎಸ್​ಗೆ ಸಿಎಂ ಬರೆದಿರುವ ಪತ್ರದಲ್ಲಿಯೇ ನಮೂದಾಗಿದೆ. ಕೈಗಾರಿಕಾಭಿವೃದ್ಧಿ ಮಂಡಳಿಯಲ್ಲಿಯೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತರು ಅವಕಾಶ ಗಿಟ್ಟಿಸಿದ್ದಾರೆ.
ಸಿಎಂ, ಸಚಿವರ ಬಳಿಯೂ ‘ಸೇವೆ’:ಇಲಾಖೆಗಳಲ್ಲಿ ಮಾತ್ರವಲ್ಲ, ಮುಖ್ಯಮಂತ್ರಿ ಸಚಿವಾಲಯದಲ್ಲಿ ಮೂವರು ಅಧಿಕಾರಿಗಳು ಪ್ರಮುಖ ಹುದ್ದೆಯಲ್ಲಿದ್ದಾರೆ. ಉಪ ಮುಖ್ಯಮಂತ್ರಿ ಸಚಿವಾಲಯದಲ್ಲಿಯೂ ಇಬ್ಬರು ನಿವೃತ್ತರು ಪ್ರಮುಖ ಹುದ್ದೆ ಗಿಟ್ಟಿಸಿದ್ದಾರೆ. ಕೆಲ ಸಚಿವರಿಗೆ ನಿವೃತ್ತ ಅಧಿಕಾರಿಯೇ ಆಪ್ತ ಕಾರ್ಯದರ್ಶಿ ಅಥವಾ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಲ್ಲಿದ್ದಾರೆ. ಇದೀಗ ಮುಖ್ಯ ಕಾರ್ಯದರ್ಶಿ ಆದೇಶವು ಸಚಿವರ ಕಚೇರಿಗಳಲ್ಲಿರುವವರನ್ನು ಏನು ಮಾಡಲಿದೆ ಎಂಬ ಪ್ರಶ್ನೆ ಕಾಡುತ್ತಿದೆ.
ಭರ್ತಿಯಾಗದ ಹುದ್ದೆಗಳು?:ಸರ್ಕಾರದಲ್ಲಿ ಅಂದಾಜು 2.58 ಲಕ್ಷ ಹುದ್ದೆಗಳು ಖಾಲಿ ಇವೆ. ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ ಇರುವುದರಿಂದ ನಿರುದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ. ಇದರ ಜತೆಗೆ ನಿವೃತ್ತರ ಮುಂದುವರಿಕೆ ಸಹ ಮತ್ತೊಂದು ರೂಪದ ಅನ್ಯಾಯವೆಂದೇ ವ್ಯಾಖ್ಯಾನಿಸಲಾಗುತ್ತಿದೆ. ನಿವೃತ್ತರಿಗೆ ಪಿಂಚಣಿ ಜತೆ ನೀಡುವ ಭತ್ಯೆಗಳಿಗೆ ಹೋಲಿಕೆ ಮಾಡಿದರೆ ಒಬ್ಬರಿಗೆ ಮಾಡುವ ವೆಚ್ಚಕ್ಕೆ ಮೂರು ಜನರನ್ನು ಸರ್ಕಾರ ನೇಮಕ ಮಾಡಬಹುದಾಗಿದೆ. ಅಷ್ಟರ ಮಟ್ಟಿಗೆ ನಿರುದ್ಯೋಗಿಗಳಿಗೆ ಸಹಾಯವಾಗುತ್ತದೆ ಎಂಬುದು ನೌಕರರ ವರ್ಗದಲ್ಲಿ ನಡೆದಿರುವ ಚರ್ಚೆಯಾಗಿದೆ.
ಹಣ ಉಳಿತಾಯದ ಮಾರ್ಗ:ನೌಕರರ ವೇತನ ಹೆಚ್ಚಳದ ವಿಚಾರದ ಸರ್ಕಾರದ ಮುಂದಿದೆ. ಅದರ ನಡುವೆ ಆಡಳಿತ ಸುಧಾರಣಾ ಆಯೋಗದ ವರದಿಯೂ ಕೈಸೇರಿದೆ. ನೌಕರರ ವೇತನ ಹೆಚ್ಚಳಕ್ಕೆ ಹಣ ಹೊಂದಾಣಿಕೆ ಮಾಡಬೇಕಾಗಿದೆ. ಸಂಪನ್ಮೂಲ ಕ್ರೋಡೀಕರಣ ಮಾಡಲು ಹಾಗೂ ಸೋರಿಕೆ ತಪ್ಪಿಸಲು ಸರ್ಕಾರ ಪ್ರಯತ್ನ ನಡೆಸಿದೆ. ಅದರ ಭಾಗವೇ ನಿವೃತ್ತರನ್ನು ತೆಗೆದು ಹಣ ಉಳಿತಾಯ ಮಾಡುವ ಪ್ರಯತ್ನವೆನ್ನಲಾಗಿದೆ.
80ರ ಸಮಾಲೋಚಕ?:ನಿಗಮವೊಂದರಲ್ಲಿ ಸಮಾಲೋಚಕರಾಗಿರುವ ನಿವೃತ್ತರೊಬ್ಬರಿಗೆ 80ಕ್ಕೂ ಹೆಚ್ಚು ವರ್ಷವಾಗಿದೆ. ಅವರು ಕಚೇರಿಗೆ ಬಂದು ಹೋಗುವುದೇ ಕಷ್ಟ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಹಳಷ್ಟು ವರ್ಷಗಳಿಂದ ನಿವೃತ್ತ ಐಎಎಸ್ ಅಧಿಕಾರಿ ಸಲಹೆಗಾರರಾಗಿದ್ದಾರೆ. ಇಲಾಖೆಯೊಂದರ ಕಾರ್ಯದರ್ಶಿಯಾಗಿ ನಿವೃತ್ತಿ ನಂತರ 2 ವರ್ಷಕ್ಕೂ ಹೆಚ್ಚು ಕಾಲ ಅದೇ ಹುದ್ದೆಯಲ್ಲಿದ್ದು, ಇದೀಗ ಅದೇ ಇಲಾಖೆಯ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದಾರೆ. ಇಂತಹ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಯಾವಾಗ ಎಂಬ ಪ್ರಶ್ನೆ ಕೇಳಿ ಬಂದಿದೆ.
ಬೊಕ್ಕಸಕ್ಕೆ ಹೊರೆ ಎಷ್ಟು?:ಅಧಿಕಾರಿ ವರ್ಗದವರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಕೆಎಎಸ್, ಐಎಎಸ್ ನಂತಹ ಹುದ್ದೆಯಲ್ಲಿದ್ದವರು ನಿವೃತ್ತಿಯ ನಂತರ ಸಮಾಲೋಚಕರು, ಸಲಹೆಗಾರರು ಆಗಿದ್ದಾರೆ. ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳ ಆಪ್ತ ಸಹಾಯಕರಾಗಿದ್ದವರು ನಿವೃತ್ತಿಯ ನಂತರ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಉನ್ನತ ಅಧಿಕಾರಿಯೊಬ್ಬರು ನಿವೃತ್ತಿ ನಂತರ ಮುಂದುವರಿಯುತ್ತಿದ್ದಂತೆ ಅವರ ಕೈಕೆಳಗೆ ವಿವಿಧ ವಿಭಾಗಗಳ ಮುಖ್ಯಸ್ಥರು, ತಜ್ಞರ ‘ಸೇವೆ’ಯೂ ನಿರಾತಂಕವಾಗಿ ಮುಂದುವರಿಯುತ್ತದೆ. ನಿವೃತ್ತಿಯ ನಂತರ ಸಿಗುವ ಪಿಂಚಣಿಯ ಜತೆಗೆ ಮುಂದುವರಿದ ಹುದ್ದೆಗೆ ನಿಗದಿಯಾಗಿರುವ ಗೌರವಧನ, ಭತ್ಯೆ, ವಾಹನ ವ್ಯವಸ್ಥೆ, ಸಿಬ್ಬಂದಿ ಹೀಗೆ ವಿವಿಧ ಸೌಲಭ್ಯಗಳಿಂದ ಕನಿಷ್ಠ ಒಬ್ಬರಿಗೆ ಒಂದು ಲಕ್ಷ ರೂ.ಗಳ ತನಕ ಹಣ ಲಭ್ಯವಾಗುತ್ತದೆ. ಅಷ್ಟರ ಮಟ್ಟಿಗೆ ಅದು ಸರ್ಕಾರಕ್ಕೆ ಹೊರೆಯೇ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
