ಲೋಕಸಮರದ ಮತಬೇಟೆಗಾಗಿ ಮೂರನೇ ಬಾರಿ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಎದುರಾಳಿ ಇಂಡಿ ಒಕ್ಕೂಟದ ವಿರುದ್ಧ ಸಿಡಿಲಬ್ಬರದ ವಾಕ್​ಪ್ರಹಾರ ನಡೆಸಿದರು. ಬೆಂಗಳೂರಿನಲ್ಲಿ ಸಂಜೆ ತಣ್ಣಗೆ ಶುರುವಾಗಿದ್ದ ಮಳೆಯಲ್ಲಿ ವಿಪಕ್ಷಗಳ ವಿರುದ್ಧ ಅಬ್ಬರಿಸಿದ ಪ್ರಧಾನಿಗೆ ಚಿಕ್ಕಬಳ್ಳಾಪುರ ಸಮಾವೇಶದ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಸಾಥ್ ನೀಡಿದರು. ಯುಪಿಎ ಸರ್ಕಾರದ ವೈಫಲ್ಯ, ಹಗರಣಗಳನ್ನು ಪ್ರಸ್ತಾಪಿಸಿ ದೊಡ್ಡ ಗೌಡರು ಗುಡುಗಿದ್ದು ವಿಶೇಷ.
ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳು ಹಾಗೂ ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಮೋದಿ, ಹತ್ತು ವರ್ಷದ ರಿಪೋರ್ಟ್ ಕಾರ್ಡ್ ಅನ್ನು ಮತದಾರರ ಮುಂದಿಟ್ಟಿದ್ದಲ್ಲದೇ, ಇಂಡಿ ಒಕ್ಕೂಟಕ್ಕೆ ನಾಯಕರೇ ಇಲ್ಲ, ದೂರದೃಷ್ಟಿಯೂ ಇಲ್ಲ. ಅವರದು ಹಗರಣಗಳ ಚರಿತ್ರೆ ಎಂದು ಚಾಟಿ ಬೀಸಿದರು.
ಇಂಡಿ ಒಕ್ಕೂಟದ್ದು ಮೋದಿಯನ್ನು ಅಧಿಕಾರದಿಂದ ದೂರ ಇಡುವ ಒಂದಂಶದ ಅಜೆಂಡಾ ಆಗಿದೆ. ಆದರೆ ಎನ್​ಡಿಎಯದ್ದು ಜನರ ಕನಸು ನನಸು ಮಾಡುವ ಹಾಗೂ ವಿಕಸಿತ ಭಾರತದ ಸಂಕಲ್ಪ ಎಂದರು. ಜತೆಗೆ ದೇಶ ವಿದೇಶದ ದೊಡ್ಡ ಶಕ್ತಿಗಳು ಮೋದಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ಪ್ರಯತ್ನ ನಡೆಸಿವೆ. ನಾರಿ ಶಕ್ತಿ, ಮಾತೃಶಕ್ತಿಯ ಆಶೀರ್ವಾದ, ಜನರ ಸುರಕ್ಷಾ ಕವಚ ಇರುವಾಗ ಎಂತಹ ಸವಾಲನ್ನಾದರೂ ಮೆಟ್ಟಿ ನಿಲ್ಲುವೆ ಎಂದು ಎದುರಾಳಿಗೆ ಸಂದೇಶ ಕಳಿಸಿದರು.
ಹಗಲಿರುಳೆನ್ನದೆ ನಿಮಗಾಗಿ ಶ್ರಮಿಸಿದ್ದೇನೆ. ನಿಮ್ಮ ಕನಸುಗಳೇ ಮೋದಿಯ ಸಂಕಲ್ಪ. 24/7 ಕೆಲಸ ಮಾಡುವುದರ ಜತೆಗೆ 2047ವರೆಗೆ ಯೋಚಿಸುವ ನಾನು, ಕೇವಲ ಯೋಜನೆಗಳನ್ನು ರೂಪಿಸುವುದಿಲ್ಲ, ಅವುಗಳನ್ನು ಜಾರಿಗೊಳಿ ಸುವ ಗ್ಯಾರಂಟಿ ಸಹ ನೀಡುತ್ತೇನೆ ಎಂದರು

ಬೆಂಗಳೂರು:ರಾಜ್ಯದಲ್ಲಿ ಇತ್ತೀಚಿಗೆ ಸಂಭವಿಸಿದ ಅಹಿತಕರ ಘಟನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಪ್ರಸ್ತಾಪಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಇಂತಹ ಮಾನಸಿಕತೆ ಉಂಟಾಗಿ ಅಪಾಯಕಾರಿ ಸ್ಥಿತಿ ತಂದೊಡ್ಡಿದೆ ಎಂಬ ದಿಗಿಲು ವ್ಯಕ್ತಪಡಿಸಿದರು.
ಅರಮನೆ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ‘ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಬೀದಿಯಲ್ಲಿ ಬಾಂಬ್ ಸ್ಪೋಟವಾಗುತ್ತದೆ. ನಮ್ಮ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದು, ಹತ್ಯೆ ಮಾಡಲಾಗುತ್ತದೆ. ಭಜನೆ ಮಾಡಿದವರನ್ನು ಥಳಿಸಲಾಗುತ್ತದೆ. ದೇವರ ನಾಮ ಜಪಿಸಲು ಅಡ್ಡಿಪಡಿಸಿ ಬೆದರಿಕೆ ಹಾಕಲಾಗುತ್ತದೆ ಎಂದು ಪ್ರಸ್ತಾಪಿಸಿದರು. ಕರ್ನಾಟಕ, ಬೆಂಗಳೂರಿನಲ್ಲಿ ಸಂಭವಿಸಿದ ಈ ಘಟನೆಗಳೆಲ್ಲ ಸಾಮಾನ್ಯದವಲ್ಲ. ಕಾಂಗ್ರೆಸ್ ಪಕ್ಷದ ಬಗ್ಗೆ ಬೆಂಗಳೂರು ಹಾಗೂ ಕರ್ನಾಟಕ ಜನರು ಎಚ್ಚರಿಕೆಯಿಂದಿರಬೇಕು ಎಂದು ಮೋದಿ ಸಲಹೆ ನೀಡಿದರು.
ಟೆಕ್ ಸಿಟಿ ಅಲ್ಲ, ಟ್ಯಾಂಕರ್ ಸಿಟಿ:ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯಿಂದ ಪ್ರೇರಣೆ ಪಡೆದು, ಬೆಂಗಳೂರು ಟೆಕ್ ಸಿಟಿ ಮಾಡಲು ನಾವು ಪ್ರಯತ್ನಿಸಿದರೆ, ಕಾಂಗ್ರೆಸ್ ಸರ್ಕಾರ 11 ತಿಂಗಳಲ್ಲಿ ಹಾಳುಗೆಡವಿದೆ. ಬೆಂಗಳೂರು ಟೆಕ್ ಸಿಟಿ ಹೋಗಿ, ಟ್ಯಾಂಕರ್ ಸಿಟಿಯಾಗಿದೆ. ವಾಟರ್ ಮಾಫಿಯಾ ತಲೆ ಎತ್ತಿದೆ ಎಂದು ಚಾಟಿ ಬೀಸಿದರು. ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿ ಭ್ರಷ್ಟಾಚಾರದೆಡೆ ಅಧಿಕಾರ ಕೇಂದ್ರಿತವಾಗಿದೆ. ಇಂತಹ ದುರವಸ್ಥೆ ಮಧ್ಯೆಯೂ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ನಿರಂತರವಾಗಿ ಸಾಗಿವೆ. ಬೆಂಗಳೂರಿಗೆ ಬುಲೆಟ್ ಟ್ರೖೆನ್ ಬರಲಿದೆ. ಮೆಟ್ರೋ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಶೀಘ್ರವೇ ಆರಂಭವಾಗಲಿದೆ. ಉಪನಗರ ಹೊರ ವರ್ತಲ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿದ್ದು, ಉಪನಗರ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದೆ. ಬೆಂಗಳೂರಿನ ಯುವಶಕ್ತಿ, ಪ್ರತಿಭಾ ಸಂಪತ್ತು ಬಳಸಿಕೊಂಡು ಉದ್ಯೋಗ ಸೃಷ್ಟಿಸಲಾಗುತ್ತಿದೆ. ಎಐ, ಡಿಜಟೀಕರಣಕ್ಕೆ ಒತ್ತು ನೀಡಲಾಗಿದೆ. ಎಚ್​ಎಎಲ್ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಸುವ ಘಟಕ ಹೊಂದಿದೆ. ವಿಮಾನಗಳು ದೇಶದಲ್ಲಿಯೇ ತಯಾರಾಗಬೇಕೆಂಬ ಕನಸು ಬೆಂಗಳೂರು ನನಸು ಮಾಡುವ ಸಾಮರ್ಥ್ಯ ಪಡೆಯಲಿದೆ ಎಂದು ಮೋದಿ ಭರವಸೆ ನೀಡಿದರು.
ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳಾದ ಡಾ.ಸಿ.ಎನ್.ಮಂಜುನಾಥ್, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ತೇಜಸ್ವಿಸೂರ್ಯ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಲು ಮನವಿ ಮಾಡಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ತೇಜಸ್ವಿ ಸೂರ್ಯ ಮಾತನಾಡಿದರು.
ಕರಗದ ಶಾಲು, ನಾರಿಶಕ್ತಿ ಸನ್ಮಾನ: ಮೋದಿಯವರಿಗೆ ಬೆಂಗಳೂರು ಕರಗದ ಶಾಲು ಹೊದಿಸಿ, ಶ್ರೀರಾಮನ ವಿಗ್ರಹದ ಸ್ಮರಣಿಕೆ ಬಿಜೆಪಿ ನಾಯಕರು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ‘ನಾರಿಶಕ್ತಿ’ ಫಲಾನುಭವಿಗಳು ಸತ್ಕರಿಸಿ ಸಂತಸ ಹಂಚಿಕೊಂಡರು.
ಬೆಂಗಳೂರು:ತೆರಿಗೆ ಪಾಲು ಹಂಚಿಕೆ, ಅನುದಾನ ನೆರವಿನ ಬಗ್ಗೆ ಕಾಂಗ್ರೆಸ್ ಸರ್ಕಾರ ಸುಳ್ಳು ಅಂಕಿ-ಅಂಶಗಳನ್ನು ನೀಡಿ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.
ಹಲವು ದೇಶಗಳ ಸಂಕಷ್ಟಕ್ಕೆ ಸ್ಪಂದಿಸಿದ ಮೋದಿ ನೆರವಿನ ಹಸ್ತಚಾಚಿದ್ದಾರೆ. ವಿಶ್ವಕ್ಕೆ ಅವರ ಕಾಳಜಿ, ಮಾನವೀಯತೆ ಕಳಕಳಿ ಗೊತ್ತಿದೆ. ಮೋದಿಯವರ ವರ್ಚಸ್ಸು, ಏಳಿಗೆ ಸಹಿಸಲಾಗದೆ ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ 10 ವರ್ಷಗಳಿಂದ ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷದ ಅರ್ಹತೆಗೆ ಬೇಕಾದಷ್ಟು ಸ್ಥಾನಗಳನ್ನು ಗಳಿಸಿಲ್ಲ. ಎನ್​ಡಿಎ ಈ ಬಾರಿ ನಾನ್ನೂರು ಮೀರಲಿದೆ ಎಂದು ಜನ ಬೆಂಬಲದ ವಿಶ್ವಾಸದಿಂದ ಹೇಳುತ್ತಿದ್ದು, ಕಾಂಗ್ರೆಸ್ ಪಕ್ಷ 52 ಸೀಟ್​ಗಳನ್ನು ಗೆಲ್ಲುವ ತಾಕತ್ತು ತೋರಿಸಲಿ ಎಂದು ಯಡಿಯೂರಪ್ಪ ತಿವಿದರು.
ಚಿಕ್ಕಬಳ್ಳಾಪುರ:ಇಂಡಿ ಮೈತ್ರಿಕೂಟದಲ್ಲಿ ಸಮರ್ಥ ನಾಯಕರೇ ಇಲ್ಲ. ದೇಶದ ಭವಿಷ್ಯದ ದೂರದೃಷ್ಟಿಯಂತೂ ಇಲ್ಲವೇ ಇಲ್ಲ. ಅವರೆಲ್ಲರ ಇತಿಹಾಸ ಬರೀ ಅವ್ಯವಹಾರಗಳನ್ನೇ ಹೇಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
ತಾಲೂಕಿನ ಚೊಕ್ಕಹಳ್ಳಿ ಸಮೀಪದಲ್ಲಿ ಶನಿವಾರ ವಿಜಯ ಸಂಕಲ್ಪ ಯಾತ್ರೆಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಭಾರತೀಯರೇ ನನ್ನ ಕುಟುಂಬ. ಎಂದೆಂದಿಗೂ ಅವರ ಕನಸು ನನಸು ಮಾಡುವುದೇ ಮೋದಿ ಸಂಕಲ್ಪ. ಮುಂಬರುವ ದಿನಗಳಲ್ಲಿ 24/7 ಪರಿಶ್ರಮದಿಂದ 2047 ಯೋಜನೆಯ ಭಾರತ ಗುರಿ ಸಾಧನೆಗೆ ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಒಬ್ಬ ಮೋದಿಯನ್ನು ಸೋಲಿಸಲು ದೊಡ್ಡ ದೊಡ್ಡ ಶಕ್ತಿಗಳು ಒಂದಾಗಿವೆ. ಆದರೆ, ಭಾರತೀಯರು, ಅದರಲ್ಲೂ ಮಹಿಳೆಯರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರೂ ಏನೂ ಮಾಡಲು ಆಗುವುದಿಲ್ಲ ಎಂದರು.

ದೇವೇಗೌಡರ ಗುಣಗಾನ:ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರ ಉತ್ಸುಕತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. 91 ವರ್ಷ ವಯಸ್ಸಿನಲ್ಲೂ ದೇವೇಗೌಡರ ಉತ್ಸಾಹ, ಬದ್ಧತೆಯು ಎಲ್ಲರಿಗೂ ಪ್ರೇರಣಾದಾಯಕ. ಕರ್ನಾಟಕದ ಉಜ್ವಲ ಭವಿಷ್ಯದ ಕಳಕಳಿಯು ಸದಾ ಅವರ ಮಾತಿನಲ್ಲಿ ಕಾಣುತ್ತದೆ ಎಂದು ಹೇಳಿದರು.
ಸ್ಥಳೀಯ ದೈವಗಳಿಗೆ ನಮನ:ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ತಾವು ಮಾಡಿದ ಎಲ್ಲ ಭಾಷಣಗಳು ಕನ್ನಡದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಆಗಿವೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಇದು ಸಾಧ್ಯವಾಗಿದ್ದು, ಕನ್ನಡಿಗರು ಆಲಿಸಿ ಪ್ರತಿಕ್ರಿಯಿಸಬೇಕು ಎಂದು ಕೋರಿದರು. ಅಲ್ಲದೆ, ಬೆಂಗಳೂರಿನ ಅಣ್ಣಮ್ಮ ದೇವಿ, ಬನಶಂಕರಿ, ದೊಡ್ಡ ಗಣಪತಿ ಹಾಗೂ ದೊಡ್ಡಬಸವಣ್ಣ ಚರಣಗಳಿಗೆ ನಮಿಸುವೆ ಎಂದು ಮೋದಿ ಹೇಳಿದರು.
ಚೊಂಬು ಈಗ ಅಕ್ಷಯಪಾತ್ರೆ!:ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮಾಜಿ ಪ್ರಧಾನಿ ದೇವೇಗೌಡ ಮೋದಿ ವಿರುದ್ಧ ರಾಜ್ಯ ಸರ್ಕಾರ ನೀಡಿದ್ದ ಚೊಂಬು ಜಾಹೀರಾತನ್ನು ಖಮಡಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮವರು ಸಂಪತ್ತು ಲೂಟಿ ಮಾಡಿ ಬರಿ ಚೊಂಬು ನೀಡಿದ್ದರು. 10 ವರ್ಷ ದೇಶವಾಳಿದ ಮೋದಿಯವರು ದೇಶದ ಬಡವರು,ಪರಿಶಿಷ್ಟ ಸಮುದಾಯ, ಹಿಂದುಳಿದವರು, ಸಣ್ಣ ಸಣ್ಣ ಸಮಾಜವನ್ನು ಮೇಲೆತ್ತುವ ಕೆಲಸವನ್ನು ಮಾಡಿ ಅದನ್ನು ಅಕ್ಷಯಪಾತ್ರೆಯನ್ನಾಗಿಸಿದ್ದಾರೆ ಎಂದು ಕಿವಿ ಹಿಂಡಿದರು. ಡಾ. ಮನಮೋಹನ್ ಸಿಂಗ್ 10 ವರ್ಷ ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ. ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷೆ ಆಗಿದ್ದಾಗ ಕ್ರೀಡೆ, 2 ಜಿ ಸೇರಿ ಅದೆಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಕುಟುಕಿದರು. ಇನ್ನು ಮೋದಿ, ದೇವೇಗೌಡರ ಜುಗಲ್​ಬಂದಿ ಪ್ರಚಾರ ಮೈತ್ರಿಯಲ್ಲಿ ಹೊಸತನ ತರಿಸಿದೆ. ಇಷ್ಟು ದಿನಗಳವರೆಗಿನ ಪ್ರಚಾರ ಸಭೆ ಮೋದಿ ಮೇನಿಯಾಗೆ ಸೀಮಿತವಾಗುತ್ತಿತ್ತು.ಆದರೆ ಈಗ ತೊಂಬತ್ತರ ಹರೆಯದ ಗೌಡರ ಸದ್ದು ಹೆಚ್ಚು ಮಾರ್ದನಿಸುತ್ತಿದೆ.
1. ಸ್ಥಳೀಯ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ
2. ಕಾಂಗ್ರೆಸ್ ಬೆಂಗಳೂರನ್ನು ಹಾಳುಮಾಡಿದೆ
3. ಬೀದಿ ಬೀದಿಗಳಲ್ಲಿ ಬಾಂಬ್ ಸಿಡಿಯುತ್ತಿವೆ
4. ಭಜನೆ ಹೇಳಿದವರ ಮೇಲೆ ಹಲ್ಲೆಯಾಗಿದೆ
5. ನಮ್ಮ ಹೆಣ್ಣು ಮಕ್ಕಳ ಮೇಲೆ ದಾಳಿ ಆಗ್ತಿದೆ
6. ಪರೋಕ್ಷವಾಗಿ ನೇಹಾ ಹತ್ಯೆಯ ಪ್ರಸ್ತಾಪ
7. ಟೆಕ್ ಸಿಟಿ ಟ್ಯಾಂಕರ್ ಸಿಟಿ ಆಗಿ ಬದಲಾಗಿದೆ
8. ಕಾಂಗ್ರೆಸ್​ನ ನೀತಿಗಳು ಈಗ ಅಪಾಯಕಾರಿ
9. ಜನರು ಕಾಂಗ್ರೆಸ್​ನಿಂದ ದೂರ ಇರಬೇಕು
10. ಚುನಾವಣೆಯಲ್ಲಿ ಮೈತ್ರಿಯನ್ನು ಬೆಂಬಲಿಸಿ
2. ಪರಿಶಿಷ್ಟರಿಗೆ ರಾಷ್ಟ್ರಪತಿ ಅವಕಾಶ: ಚಿಕ್ಕಬಳ್ಳಾಪುರದಲ್ಲಿ ಎಸ್ಸಿ, ಎಸ್ಟಿ, ಒಬಿಸಿಗೆ ಆದ್ಯತೆ ನೀಡಿರುವ ಅಂಶ ಪ್ರಸ್ತಾಪ; ಕೋವಿಂದ್, ಮುಮುಗೆ ರಾಷ್ಟ್ರಪತಿಯಾಗುವ ಅವಕಾಶ ಮಾಡಿಕೊಟ್ಟಿದ್ದರ ಉಲ್ಲೇಖ
3. ಮತದಾನದಲ್ಲಿ ಮೇಲುಗೈ ಉತ್ಸಾಹ: ಮೊದಲ ಹಂತದ ಓಟಿಂಗ್​ನಲ್ಲಿ ಉತ್ಸಾಹ ಹೆಚ್ಚಿದ್ದು, ಎನ್​ಡಿಎ ಪಕ್ಷಗಳ ಪರವಾಗಿ ಬಂದಿದೆ. ಚಿಕ್ಕಬಳ್ಳಾಪುರದಲ್ಲೂ ನನಗೆ ಅನುಭವಕ್ಕೆ ಬಂದಿದೆ. ವಿಕಸಿತ ಭಾರತದ ಸುಳಿವು ಸಿಕ್ಕಿದೆ
4. ಬೆಂಗ್ಳೂರಲ್ಲೇ ವಿಮಾನ ನಿರ್ವಣ: ಮೇಡ್​ಇನ್ ಇಂಡಿಯಾ ವಿಮಾನ ಆಗಬೇಕು. ಅದಕ್ಕೆ ಬೆಂಗಳೂರಿಗೇ ಭೂಮಿಕೆಯಾಗಬೇಕೆಂದು ಆಶಯ
ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ದೇಶವನ್ನು ವಿಶ್ವದಲ್ಲಿ ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ಹೋದ ಪ್ರಧಾನಿ ಮೋದಿಯವರನ್ನು ಬೆಂಬಲಿಸೋಣ.
| ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × 3 =
Remember me
