ಯಡೂರ (ಬೆಳಗಾವಿ):ರಾಜ್ಯದ ಕೆಲವು ಪೀಠಗಳಲ್ಲಿ ಅನಾರೋಗ್ಯ ಸ್ವಾಮೀಜಿಗಳಿದ್ದರೆ, ಕೆಲವಡೆ ಆಲಸ್ಯವಿರುವ ಸ್ವಾಮೀಜಿಗಳಿದ್ದಾರೆ. ಇನ್ನೂ ಕೆಲವೆಡೆ ಬುದ್ಧಿಮಾಂದ್ಯ ಸ್ವಾಮೀಜಿಗಳಿದ್ದಾರೆ.ಅಂತಹ ಸ್ವಾಮೀಜಿಗಳನ್ನು ಪೀಠದಿಂದ ಕೆಳಗಿಳಿಸಬೇಕಿದೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹೇಳಿದರು.
ಚಿಕ್ಕೋಡಿ ತಾಲೂಕಿನ ಶ್ರೀಕ್ಷೇತ್ರ ಯಡೂರಿನಲ್ಲಿ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವ ಅಂಗವಾಗಿ ಕಾಡದೇವರ ಮಠದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ, ಗೋ ಕೈಲಾಸ, ನೆರೆ ಸಂತ್ರಸ್ತರ ಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ಹಾಗೂ ನೂತನ ಯಾತ್ರಿ ನಿವಾಸದ ಅಡಿಗಲ್ಲು ಸಮಾರಂಭದಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಂದ ‘ವಿಶ್ವಚೇತನ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.
ಎಂಎ, ಪಿಎಚ್​ಡಿ ಮಾಡಿರುವ ವಿದ್ಯಾವಂತ ಅರ್ಹ ಹಾಗೂ ಧರ್ವಚರಣೆ ಮೈಗೂಡಿಸಿಕೊಂಡಿರುವ ಆಸಕ್ತ ಯುವಕರನ್ನು ಪೀಠಕ್ಕೆ ನೇಮಿಸಬೇಕು. ಈ ಬಗ್ಗೆ ವೀರಶೈವ-ಲಿಂಗಾಯತ ಸಮಾಜದ ಗಣ್ಯರು, ಚಿಂತಕರು ಗಮನ ಹರಿಸಬೇಕು ಎಂದು ಡಾ.ವಿಜಯ ಸಂಕೇಶ್ವರ ಸಲಹೆ ನೀಡಿದರು. ಇತ್ತೀಚೆಗೆ ಕಾವಿಧಾರಿಯೊಬ್ಬರು ಸಿಎಂ ಯಡಿಯೂರಪ್ಪರನ್ನು ಅವಮಾನಿ ಸುವಂತೆ ಮಾತನಾಡಿರುವುದು ಬೇಸರ ತಂದಿದೆೆ. ರಾಜಕೀಯ ನಾಯಕರನ್ನು ಧರ್ಮದ ಹೆಸರಲ್ಲಿ ಬೆದರಿಸುವುದು ಸರಿಯಲ್ಲ. ಹಿರಿಯ ಸ್ವಾಮೀಜಿಗಳ ಉಪಸ್ಥಿತಿಯಲ್ಲಿಯೇ ಈ ಪ್ರಮಾದ ಜರುಗಿರುವುದು ಅತ್ಯಂತ ದುರ್ದೈವ ಹಾಗೂ ಆ ಶ್ರೀಗಳಿಗೆ ಮಾಡಿದ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೀರಶೈವ ಸಮುದಾಯದ ಪೀಠಾಧಿಪತಿಯಾಗುವವರ ಪ್ರಬುದ್ಧತೆ, ಅರ್ಹತೆ, ಸಾಮರ್ಥ್ಯಗಳನ್ನು ಹಲವು ಪರೀಕ್ಷೆಗಳ ಮೂಲಕ ನಿರ್ಧರಿಸಿಯೇ ದೀಕ್ಷೆ ನೀಡಬೇಕು. ಜೈನ ಸಮುದಾಯದಲ್ಲಿ ಜೈನ ಮುನಿಗಳನ್ನು ನೇಮಕ ಮಾಡುವಾಗ ಈ ಪದ್ಧತಿ ಅನುಸರಿಸುತ್ತಾರೆ. ನಮ್ಮಲ್ಲೂ ಅಂತಹ ಕಾರ್ಯ ನಡೆದು ಪ್ರಬುದ್ಧ ಸ್ವಾಮೀಜಿಗಳನ್ನು ನೇಮಿಸುವಾಗ ಅವರ ಚಾರಿತ್ರ್ಯ ಬಗ್ಗೆಯೂ ಗಂಭೀರವಾಗಿ ಪರಿಗಣಿಸಿ, ಎಲ್ಲ ಅರ್ಹತೆಗಳಿದ್ದ ಯುವಕರನ್ನೇ ನೇಮಿಸಬೇಕು. ಬೇರೆ ಯಾರನ್ನೋ ಹಿಡಿದುಕೊಂಡು ಬಂದು ಪೀಠದ ಮೇಲೆ ಕೂರಿಸಿದರೆ ಆಗುವ ಅವಾಂತರಕ್ಕೆ ಇತ್ತೀಚೆಗೆ ಹರಿಹರದಲ್ಲಿ ನಡೆದ ದುರ್ದೈವದ ಘಟನೆಯೇ ಸಾಕ್ಷಿ ಎಂದರು.
ವಿಜಯೇಂದ್ರ ಭವಿಷ್ಯದ ನಾಯಕ
ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ನಮ್ಮ ಸಮಾಜದ ಭವಿಷ್ಯದ ನಾಯಕರಾಗಿ ಹೊರಹೊಮ್ಮುವ ಶಕ್ತಿಯಿದೆ. ನಮ್ಮ ಉದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನನ್ನ ಪುತ್ರ ಆನಂದ ಸಂಕೇಶ್ವರ ಅವರು ಈಗಾಗಲೇ ನನ್ನನ್ನೂ ಮೀರಿಸುವಷ್ಟು ಬೆಳೆದಿದ್ದಾರೆ. ಅದೇ ರೀತಿ, ಮುಂದಿನ ಕೆಲವೇ ವರ್ಷಗಳಲ್ಲಿ ವಿಜಯೇಂದ್ರ ಅವರೂ ಯಡಿಯೂರಪ್ಪ ಅವರನ್ನು ಮೀರಿಸುತ್ತಾರೆ ಎಂದು ಡಾ.ವಿಜಯ ಸಂಕೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ಜೈನರೂ ಹಿಂದು ಧರ್ಮಕ್ಕೆ ಸೇರಲಿ
ಲಿಂಗಾಯತರು ಸಹ ಹಿಂದುಗಳ ಒಂದು ಭಾಗ. ಜೈನರು ಸಹ ಹಿಂದು ಧರ್ಮದ ಅವಿಭಾಜ್ಯ. ಅತ್ಯಂತ ಕಟ್ಟುನಿಟ್ಟಿನ ಧರ್ವಚರಣೆ, ಅನುಷ್ಠಾನದಲ್ಲಿ ತಮ್ಮದೇ ಆದ ವೈಶಿಷ್ಟ್ಯ ಹೊಂದಿರುವ ಜೈನರು ಸಹ ಹಿಂದು ಧರ್ಮಕ್ಕೆ ಸೇರಲಿ ಎಂದು ಮನವಿ ಮಾಡುತ್ತೇನೆಂದು ಡಾ.ವಿಜಯ ಸಂಕೇಶ್ವರ ಹೇಳಿದರು.
ನೆರೆ ಸಂತ್ರಸ್ತರಿಗೆ 25 ಲಕ್ಷ ರೂ. ನೆರವು
ಶ್ರೀಶೈಲ ಶ್ರೀ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಅನೇಕ ಸಾಮ್ಯತೆಗಳಿವೆ. ಪ್ರಧಾನಿಯವರಂತೆಯೇ ಸ್ವಾಮೀಜಿ ಅವರು ತಮಗೆ ಬಂದಿರುವ ಚಿನ್ನ-ಬೆಳ್ಳಿಯ ಕೊಡುಗೆಗಳನ್ನು ವಿನಿಯೋಗಿಸಿ ನೆರೆ ಸಂತ್ರಸ್ತರಿಗೆ 100 ಮನೆಗಳನ್ನು ಕಟ್ಟುತ್ತಿರುವುದು ಸ್ವಾಗತಾರ್ಹ. ಈ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ವಿಆರ್​ಎಲ್ ಸಂಸ್ಥೆಯಿಂದ 5 ಮನೆಗಳನ್ನು ನಿರ್ವಿುಸುವುದಕ್ಕಾಗಿ 25 ಲಕ್ಷ ರೂ. ಅನ್ನು ಕೊಡುವುದಾಗಿ ಡಾ.ವಿಜಯ ಸಂಕೇಶ್ವರ ವಾಗ್ದಾನ ಮಾಡಿದರು.
ಪ್ರಧಾನಿ ಮೋದಿ ಶ್ಲಾಘನೆ
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಾಗ ವಿಆರ್​ಎಲ್ ಸಂಸ್ಥೆಯು ದೇಶದಲ್ಲಿ ಎಷ್ಟು ಪ್ರಧಾನ ಕಚೇರಿ ಹೊಂದಿದೆ ಎಂದು ಕೇಳಿದ್ದರು. ಅದಕ್ಕೆ ನಾನು ಪ್ರತಿಕ್ರಿಯಿಸಿ, ಸಂಖ್ಯೆಗಳನ್ನು ಹೇಳುವುದು ಕಷ್ಟ. ಆದರೆ, ಶ್ರೀನಗರ ಬಿಟ್ಟು ದೇಶದ ಎಲ್ಲೆಡೆ ನಮ್ಮ ಕಚೇರಿಗಳಿವೆ ಎಂದಾಗ ಅಭಿಮಾನ ವ್ಯಕ್ತಪಡಿಸಿದ ಮೋದಿಯವರು, ಶ್ರೀನಗರದಲ್ಲಿಯೂ ವಿಆರ್​ಎಲ್ ಕಚೇರಿ ಆರಂಭಿಸಿಬಿಡಿ ಎಂದು ಹೇಳಿದ್ದನ್ನು ಡಾ.ವಿಜಯ ಸಂಕೇಶ್ವರ ಸ್ಮರಿಸಿದರು.
ಬಿಎಸ್​ವೈ ಬೆನ್ನಿಗೆ ಚೂರಿ ಹಾಕುವ ರಾಜಕಾರಣಿಯಲ್ಲ
ಯಡಿಯೂರಪ್ಪ ಅವರು ಬೇರೆ ರಾಜಕಾರಣಿಗಳಂತೆ ಮತ್ತೊಬ್ಬರ ಬೆನ್ನಿಗೆ ಚೂರಿ ಹಾಕುವವರಲ್ಲ. ಈಗಾಗಲೇ ಪಕ್ಷ ತೊರೆದು ಬಂದಿರುವ 17 ಶಾಸಕರನ್ನು ಸಚಿವರನ್ನಾಗಿ ಮಾಡುವುದಾಗಿ ಹೇಳಿದ್ದಾರೆ. ಸೋತವರನ್ನು ಕಡೆಗಣಿಸುವರೇ ಹೆಚ್ಚು. ಇಂತಹ ರಾಜಕೀಯ ವ್ಯವಸ್ಥೆಯಲ್ಲಿ ಸೋತವರನ್ನೂ ಸಚಿವರನ್ನಾಗಿ ಮಾಡುತ್ತಿರು ವುದು ರಾಜ್ಯದ 70 ವರ್ಷದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು. ಬಿಎಸ್​ವೈ ಕೇವಲ ರಾಜಕಾರಣಿಯಲ್ಲ, ಅವರು ದೈವೀಪುರುಷರು. ತಮ್ಮ ಬೆಂಬಲಕ್ಕೆ ನಿಂತ ಬೆಂಬಲಿಗರು ಸೋತರೂ ಅವರಿಗೆ ಅನ್ಯಾಯ ಆಗದಂತೆ ರಾಜಕೀಯ ಸ್ಥಾನಮಾನ ಕೊಡಲು ಟೊಂಕಕಟ್ಟಿ ನಿಂತಿದ್ದಾರೆ. ಇದು ಅವರಲ್ಲಿನ ನಾಯಕತ್ವದ ಶಕ್ತಿ ಪ್ರದರ್ಶಿಸುತ್ತದೆ ಎಂದು ಡಾ.ವಿಜಯ ಸಂಕೇಶ್ವರ ಹೇಳಿದರು.
ಗೋಶಾಲೆಗೆ ಪ್ರಶಸ್ತಿ ಹಣ
ವಿಶ್ವಚೇತನ ಪ್ರಶಸ್ತಿ ಮೊತ್ತ 50 ಸಾವಿರ ರೂ.ಗಳಿಗೆ ಇನ್ನೂ ಒಂದು ಲಕ್ಷ ರೂ.ಸೇರಿಸಿ ಮಠದ ಗೋಶಾಲೆಗೆ ಶ್ರೀಮತಿ ಲಲಿತಾ ಸಂಕೇಶ್ವರ ಅವರು ಒಂದೂವರೆ ಲಕ್ಷ ರೂ.ಗಳನ್ನು ಅರ್ಪಿಸಿದರು.
ಡಾ.ವಿಜಯ ಸಂಕೇಶ್ವರ ಅವರಿಗೆ ‘ವಿಶ್ವಚೇತನ ಪ್ರಶಸ್ತಿ’ ವಿತರಿಸಿದ್ದರಿಂದ ಪ್ರಶಸ್ತಿಯ ಗೌರವವೂ ಹೆಚ್ಚಾಗಿದೆ. ಅವರ ಆರೋಗ್ಯ, ಆಯಸ್ಸು ವೃದ್ಧಿಸುವುದರ ಜತೆಗೆ ಸಂಸ್ಥೆಯು ಇನ್ನೂ ಲಾಭದಾಯಕವಾಗಿ ಬೆಳೆಯಲಿ. ಐವರು ನೆರೆ ಸಂತ್ರಸ್ತರ ಗೃಹ ನಿರ್ಮಾಣ ಕಾಮಗಾರಿಗೆ 25 ಲಕ್ಷ ರೂ. ನೀಡುವ ವಾಗ್ದಾನ ನೀಡುವ ಮೂಲಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದು ಇತರರಿಗೆ ಮಾದರಿ. ಇದೇ ಕಾಮಗಾರಿಗೆ ಯಡೂರು ಮಠದಿಂದ 25 ಲಕ್ಷ ರೂ. ನೀಡಲಾಗುವುದು.
| ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಶ್ರೀಶೈಲ ಜಗದ್ಗುರು
ವಿಆರ್​ಎಲ್ ಸಂಸ್ಥೆಯು ಇಷ್ಟೊಂದು ಬೃಹದಾಕಾರವಾಗಿ ಬೆಳೆಯಲು ಡಾ. ವಿಜಯ ಸಂಕೇಶ್ವರ ಅವರಿಗೆ ಹಿಂದಿನ ಪ್ರೇರಕ ಶಕ್ತಿಯಾಗಿ ಅವರ ಶ್ರೀಮತಿ ಲಲಿತಾ ಸಂಕೇಶ್ವರ ಅವರು ನೀಡಿರುವ ಬೆಂಬಲ, ಪ್ರೋತ್ಸಾಹ ಸಾಕಷ್ಟಿದೆ. ಅಲ್ಲದೆ, ಡಾ. ವಿಜಯ ಸಂಕೇಶ್ವರರ ಯಶಸ್ಸಿನಲ್ಲಿಯೂ ಲಲಿತಾ ಸಂಕೇಶ್ವರ ಅವರ ಪಾತ್ರ ಬಹಳ ದೊಡ್ಡದಿದೆ.
| ಪ್ರಶಾಂತ ರಿಪ್ಪನ್​ಪೇಟೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + fifteen =
Remember me
