ಏಪ್ರಿಲ್ 1ರಿಂದ 2024-25ರ ಸಾಲಿನ ಹೊಸ ಹಣಕಾಸು ವರ್ಷ ಆರಂಭವಾಗಲಿದೆ. ಇದೇ ದಿನದಿಂದ ವಿತ್ತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಕೇಂದ್ರ ಬಜೆಟ್​ನಲ್ಲಿ ಘೋಷಿಸಲಾದ ಕ್ರಮಗಳು ಜಾರಿಗೆ ಬರಲಿವೆ. ಜನಸಾಮಾನ್ಯರ ಮೇಲೆ ಪರಿಣಾಮ ಬೀರುವಂತಹ ಈ ಬದಲಾವಣೆಗಳ ಕುರಿತಾದ ಮಾಹಿತಿ ಇಲ್ಲಿದೆ.
ಟೋಲ್​ಗಳಲ್ಲಿ ಉದ್ದದ ಸರತಿ ಸಾಲು, ದೀರ್ಘ ಕಾಯುವಿಕೆಯನ್ನು ಫಾಸ್ಟ್ ಟ್ಯಾಗ್ ವ್ಯವಸ್ಥೆ ಬಹುತೇಕ ಕೊನೆಗೊಳಿಸಿದ್ದು, ಪ್ರಯಾಣವನ್ನು ಸುಗಮಗೊಳಿಸಿದೆ. ಟೋಲ್​ಗಳಲ್ಲಿ ಹಿಂದೆ ಇದ್ದ ನಗದು ಪಾವತಿಯ ವ್ಯವಸ್ಥೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಆಗಾಗ ಕಂಡುಬರುವ ಕೆಲ ತಾಂತ್ರಿಕ ಸಮಸ್ಯೆ ಹೊರತುಪಡಿಸಿದರೆ ಫಾಸ್ಟ್​ಟ್ಯಾಗ್ ಯಶಸ್ವಿಯಾಗಿ ಅನುಷ್ಠಾನಕ್ಕೆ ಬಂದಿದೆ ಎನ್ನಬಹುದು. ದೇಶದಲ್ಲಿ 2021ರ ಫೆಬ್ರವರಿಯಿಂದ ಫಾಸ್ಟ್​ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಅಂದರೆ, ಜಾರಿಗೆ ಬಂದು ಮೂರು ವರ್ಷಗಳು ಪೂರ್ಣಗೊಂಡಿವೆ. ಇದೀಗ ಫಾಸ್ಟ್​ಟ್ಯಾಗ್​ನ ಕೆವೈಸಿಯನ್ನು (ನೋ ಯೂವರ್ ಕಸ್ಟ್ ಮರ್) ಅಪ್​ಡೇಟ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಮಾರ್ಚ್ 31 ಕೊನೆಯ ದಿನವಾಗಿದೆ. ಅಪ್​ಡೇಟ್ ಆಗದಿದ್ದರೆ ಬ್ಯಾಂಕ್​ಗಳು ನಿಮ್ಮ ಫಾಸ್ಟ್​ಟ್ಯಾಗ್ ಅನ್ನು ಡೀ ಆಕ್ಟಿವೇಟ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕೆವೈಸಿ ಅಪ್​ಡೇಟ್ ಆಗದ ಫಾಸ್ಟ್​ಟ್ಯಾಗ್​ನ ಖಾತೆಯಲ್ಲಿ ಹಣ ಇದ್ದರೂ ಅದು ಏಪ್ರಿಲ್ 1ರಿಂದ ಕೆಲಸ ಮಾಡುವುದಿಲ್ಲ. ಆದರೆ, ಕೂಡಲೇ ಅಪ್​ಡೇಟ್ ಮಾಡಿಕೊಂಡರೆ ಯಾವುದೇ ಸಮಸ್ಯೆ ಉದ್ಭವಿಸದು.
ಹೀಗೆ ಮಾಡಿ ಕೆವೈಸಿ ಅಪ್​ಡೇಟ್
ಎನ್​ಪಿಎಸ್ ಸುರಕ್ಷಿತ
ಹೆಚ್ಚಿನ ಭದ್ರತೆಯನ್ನು ಒದಗಿಸಲು ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಚಂದಾದಾರರ ಹಿತಾಸಕ್ತಿಗಳನ್ನು ಕಾಪಾಡಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಹೆಚ್ಚು ಸುರಕ್ಷಿತವಾದ ವಿಧಾನವನ್ನು ಘೊಷಿಸಿದೆ. ಇದಕ್ಕಾಗಿ ಎರಡು ಅಂಶಗಳ ಆಧಾರ್ ದೃಢೀಕರಣವನ್ನು ಪರಿಚಯಿಸಿದೆ. ಇನ್ನು ಮುಂದೆ ಪಾಸ್​ವರ್ಡ್​ನೊಂದಿಗೆ ಆಧಾರ್ ದೃಢೀಕರಣವನ್ನೂ ಪೂರ್ಣಗೊಳಿಸಬೇಕು. ಆಗ ಮಾತ್ರ ಲಾಗಿನ್ ಯಶಸ್ವಿಯಾಗುತ್ತದೆ. ಇದರಿಂದ ಅನಧಿಕೃತ ಎನ್​ಪಿಎಸ್ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಈ ನಿಯಮ ಏ.1ರಿಂದಲೇ ಜಾರಿಗೆ ಬರಲಿದೆ.
ಇಂದು, ನಾಳೆ ಎಲ್​ಐಸಿ ಕಚೇರಿ ಓಪನ್
ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನಗಳಾದ ಮಾರ್ಚ್ 30 ಮತ್ತು 31ರಂದು ಬ್ಯಾಂಕ್​ಗಳು ಹಾಗೂ ಭಾರತೀಯ ಜೀವ ವಿಮಾ ನಿಗಮದ (ಎಲ್​ಐಸಿ) ಕಚೇರಿಗಳು ಕಾರ್ಯನಿರ್ವಹಿಸಲಿವೆ. ಸಾಮಾನ್ಯವಾಗಿ ಕಚೇರಿಗಳಿಗೆ ಭಾನುವಾರ ರಜೆ ಇರುತ್ತದೆ. ಆದರೆ, ಗ್ರಾಹಕರಿಗೆ ಮತ್ತು ತೆರಿಗೆದಾರರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ವಿತ್ತೀಯ ವರ್ಷದ ಕೊನೆಯ ಎರಡೂ ದಿನಗಳಂದು ಆದಾಯ ತೆರಿಗೆ ಇಲಾಖೆಯ ಕಚೇರಿಗಳು ಕೂಡ ತೆರೆದಿರಲಿವೆ. ‘2023-24ರ ಹಣಕಾಸು ವರ್ಷದಲ್ಲಿ ತೆರಿಗೆ ವಹಿವಾಟುಗಳನ್ನು ಲೆಕ್ಕಹಾಕಲು ಮಾರ್ಚ್ 31ರಂದು ಬ್ಯಾಂಕುಗಳ ಎಲ್ಲ ಶಾಖೆಗಳನ್ನು ತೆರೆಯಲು ಭಾರತ ಸರ್ಕಾರ ವಿನಂತಿಸಿದೆ’ ಎಂದು ತಿಳಿಸಿದ್ದ ಆರ್​ಬಿಐ, ಶನಿವಾರ ಮತ್ತು ಭಾನುವಾರ ಸಾಮಾನ್ಯ ಕೆಲಸದ ಅವಧಿವರೆಗೆ ಶಾಖೆಗಳನ್ನು ತೆರೆಯುವಂತೆ ನಿರ್ದೇಶನ ನೀಡಿತ್ತು.
ತೆರಿಗೆ ಪದ್ಧತಿಗೂ ನವರೂಪ
ಕೇಂದ್ರ ಸರ್ಕಾರ 2023-24ರ ಹಣಕಾಸು ವರ್ಷದಿಂದ ಹಳೆಯ ತೆರಿಗೆ ಪದ್ಧತಿ ಜತೆಗೆ ಹೊಸ ಆದಾಯ ತೆರಿಗೆ ಪದ್ಧತಿಯನ್ನೂ ಸೇರಿಸಿದೆ. ಹೊಸ ತೆರಿಗೆ ಪದ್ಧತಿ ಡೀಫಾಲ್ಟ್ ಆಗಿರಲಿದೆ. ನೀವು ಈಗಾಗಲೇ ಹಳೆಯ ತೆರಿಗೆ ಪದ್ಧತಿಯಲ್ಲಿದ್ದರೆ (ಓಲ್ಡ್ ಟ್ಯಾಕ್ಸ್ ರೆಜಿಮೆ) ಹೊಸ ಹಣಕಾಸು ವರ್ಷಕ್ಕೂ ಅದರಲ್ಲೇ ಮುಂದುವರಿಸಬಹುದು. ಒಂದು ವೇಳೆ ಣ್ಝಛ ಖಚ್ಡ ್ಕಜಜಿಞಛಿ ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಹೊಸ ತೆರಿಗೆ ಪದ್ಧತಿಯೇ ಡೀಫಾಲ್ಟ್ ಆಗಿರುತ್ತದೆ. ಒಮ್ಮೆ ಹೊಸ ತೆರಿಗೆ ಪದ್ಧತಿಯಲ್ಲಿ ರಿಟರ್ನ್ ಫೈಲ್ ಮಾಡಿದರೆ ಅದರಲ್ಲೇ ಮುಂದುವರಿಯಬೇಕು. ಹಳೆಯ ಅಥವಾ ಹೊಸ ತೆರಿಗೆ ಪದ್ಧತಿ ಈ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಮಾರ್ಚ್ 31 ಕೊನೇ ದಿನ ಎಂಬುದು ನೆನಪಿನಲ್ಲಿ ಇರಲಿ. 31ರೊಳಗೆ ಒಂದನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಏಪ್ರಿಲ್ 1ರಿಂದ ಹೊಸ ತೆರಿಗೆ ಪದ್ಧತಿಯಲ್ಲೇ ಮುಂದುವರಿಯಬೇಕಾಗುತ್ತದೆ.
ಸ್ಲ್ಯಾಬ್​ಗಳು ಐದಕ್ಕೆ ಇಳಿಕೆ
ಹೊಸ ವ್ಯವಸ್ಥೆಯಲ್ಲಿ ಅಳವಡಿಸಿರುವ ಐದು ಸ್ಲ್ಯಾಬ್​ಗಳಿಂದಾಗಿ ತೆರಿಗೆದಾರರಿಗೆ ಅನುಕೂಲವಾಗಲಿದೆ. ವಾರ್ಷಿಕ 9 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರು ನೀಡಬೇಕಿರುವ ತೆರಿಗೆ 45,000 ರೂಪಾಯಿ ಮಾತ್ರ. ಇದು ಆದಾಯದ ಕೇವಲ ಶೇಕಡ 5 ತೆರಿಗೆ ಆಗುತ್ತದೆ. ಈಗ ಕೊಡುತ್ತಿರುವ ತೆರಿಗೆಗಿಂತ ಶೇಕಡ 25ರಷ್ಟು ಕಡಿಮೆಯಾಗಿದೆ. ಅದೇ ರೀತಿ 15 ಲಕ್ಷ ರೂಪಾಯಿ ಆದಾಯ ಹೊಂದಿರುವವರು 1.5 ಲಕ್ಷ ರೂ. ತೆರಿಗೆ ನೀಡಬೇಕಾಗುತ್ತದೆ. ಈಗ ಅದು 1,87,500 ರೂ. ಆಗಿದೆ.
ಸರ್ಚಾರ್ಜ್ ದರ ಇಳಿಕೆ
ಭಾರತದಲ್ಲಿ ಶೇಕಡ 42.74 ಅತ್ಯಧಿಕ ವೈಯಕ್ತಿಕ ಆದಾಯ ತೆರಿಗೆ ದರವಾಗಿದೆ. ಇದು ಜಗತ್ತಿನಲ್ಲೇ ಹೆಚ್ಚಿನ ದರಗಳಲ್ಲಿ ಒಂದಾಗಿದೆ. ಹಾಗಾಗಿ, ಅತ್ಯಧಿಕ ಸರ್ಚಾರ್ಜ್ ದರವನ್ನು (ವಾರ್ಷಿಕ 5 ಕೋಟಿಗಿಂತ ಅಧಿಕ ಆದಾಯ ಇರುವವರಿಗೆ) ಶೇಕಡ 37ರಿಂದ ಶೇಕಡ 25ಕ್ಕೆ ಇಳಿಸಲಾಗಿದ್ದು, ಏಪ್ರಿಲ್ 1ರಿಂದ ಅನ್ವಯವಾಗಲಿದೆ. ಇದರಿಂದ ಗರಿಷ್ಠ ತೆರಿಗೆ ದರ ಶೇಕಡ 39ಕ್ಕೆ ಇಳಿಯಲಿದೆ.
ಕೆಲಸ ಬದಲಿಸಿದರೂ ಚಿಂತೆ ಇಲ್ಲ
ನೌಕರರ ಭವಿಷ್ಯ ನಿಧಿ (ಇಪಿಎಫ್​ಒ) ಹೊಸ ಹಣಕಾಸು ವರ್ಷದ ಆರಂಭದ ದಿನ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ. ಹೊಸ ನಿಯಮದ ಪ್ರಕಾರ, ಉದ್ಯೋಗವನ್ನು ಬದಲಾಯಿಸಿದರೆ, ನಿಮ್ಮ ಹಳೆಯ ಪಿಎಫ್ ಅಕೌಂಟ್ ಅನ್ನು ಆಟೋಮೋಡ್​ಗೆ ವರ್ಗಾಯಿಸಲಾಗುತ್ತದೆ. ಇದರಿಂದ ಉದ್ಯೋಗ ಬದಲಾಯಿಸಿದಾಗ ಪಿಎಫ್ ಮೊತ್ತವನ್ನು ವರ್ಗಾಯಿಸಲು ವಿನಂತಿಸುವ ಅಗತ್ಯವಿಲ್ಲ.
ಅಮೃತ್ ಕಲಶ್ ಎಫ್​ಡಿ
ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎಸ್​ಬಿಐಯ ವಿಶೇಷ ಯೋಜನೆ ಅಮೃತ್ ಕಲಶ್ ಎಫ್​ಡಿ ಡೆಪಾಸಿಟ್ ಸ್ಕೀಮ್ ಅವಧಿ ಮಾರ್ಚ್ 31ಕ್ಕೆ ಮುಕ್ತಾಯವಾಗಲಿದೆ. 400 ದಿನಗಳ ಈ ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೖೆಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಗೆ ನೀಡುವ ವ್ಯವಸ್ಥೆ ಇದೆ. ದೇಶೀಯ ಹಾಗೂ ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು. ರೆಗ್ಯುಲರ್ ಗ್ರಾಹಕರಿಗೆ 7.1% ಮತ್ತು ಹಿರಿಯ ಗ್ರಾಹಕರಿಗೆ 7.6% ಬಡ್ಡಿ ಸಿಗುತ್ತದೆ.

ಕ್ರೆಡಿಟ್ ಕಾರ್ಡ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 1ರಿಂದ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ ತರುತ್ತಿದೆ. ಏಪ್ರಿಲ್ 1ರಿಂದ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿ ಮಾಡಿದರೆ ನಿಮಗೆ ಯಾವುದೇ ರಿವಾರ್ಡ್ ಪಾಯಿಂಟ್ ಲಭಿಸುವುದಿಲ್ಲ. ಕೆಲವು ಕ್ರೆಡಿಟ್ ಕಾರ್ಡ್​ಗಳಿಗೆ ಈ ನಿಯಮ ಏಪ್ರಿಲ್ 15ರಿಂದ ಅನ್ವಯವಾಗಲಿದೆ.
ಹೊಸ ಪದ್ಧತಿ ಯಾರಿಗೆ ಸೂಕ್ತ?
ವಾರ್ಷಿಕವಾಗಿ 3.75 ಲಕ್ಷ ರೂ.ಗಿಂತ ಕಡಿಮೆ ಡಿಡಕ್ಷನ್ ಮತ್ತು ವಿನಾಯಿತಿ ಕ್ಲೈಮ್ಳನ್ನು ಹೊಂದಿರುವ ತೆರಿಗೆದಾರರು ಹೊಸ ಆದಾಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದು ತಜ್ಞರ ಸಲಹೆ. ಈ ಮೂಲಕ ಅವರು ಕಡಿಮೆ ತೆರಿಗೆ ಸ್ಲಾ್ಯಬ್ ಹೊಂದಬಹುದಾಗಿದೆ. ವರ್ಷಕ್ಕೆ 3.75 ಲಕ್ಷ ರೂಪಾಯಿ ಅಥವಾ ಇದಕ್ಕಿಂತ ಹೆಚ್ಚಿನ ಹೂಡಿಕೆಗಳು, ಕ್ಲೈಮ್ ಇದ್ದರೆ ಹೊಸ ತೆರಿಗೆ ಪದ್ಧತಿಯಲ್ಲಿ ಹೆಚ್ಚಿನ ಅನುಕೂಲ ಆಗುವುದಿಲ್ಲ. ಹೊಸ ಪದ್ಧತಿಯಲ್ಲಿ ತೆರಿಗೆ ರಿಟರ್ನ್ ಸಲ್ಲಿಸುವಾಗ ಜನರು ಹೆಚ್ಚಿನ ದಾಖಲೆಗಳು ಮತ್ತು ಪುರಾವೆಗಳನ್ನು ಸಂಗ್ರಹಿಸಬೇಕಾಗಿಲ್ಲ.
ರಜೆ ನಗದೀಕರಣ ಮಿತಿ ಏರಿಕೆ
ಕಡಿಮೆ ರಜೆ ಪಡೆದುಕೊಳ್ಳುವ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ. ರಜೆ ತೆರಿಗೆಗೆ ಅರ್ಹವಾದ ರಜೆ ನಗದೀಕರಣ ಮಿತಿಯನ್ನು ಈಗಿರುವ 3 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿಗೆ ಏರಿಸಲಾಗುವುದೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್​ನಲ್ಲೇ ಘೋಷಿಸಿದ್ದರು. ಅದು ಈಗ ಅನುಷ್ಠಾನಕ್ಕೆ ಬರಲಿದೆ. ಸರ್ಕಾರೇತರ ನೌಕರರು ನಿವೃತ್ತಿಯಾದಾಗ ಪಡೆಯುವ ರಜೆ ನಗದೀಕರಣ ಮೊತ್ತಕ್ಕೆ ಇದು ಅನ್ವಯವಾಗುತ್ತದೆ.
ಸ್ಟಾಂಡರ್ಡ್ ಡಿಡಕ್ಷನ್ ಲಾಭ ವಿಸ್ತರಣೆ
ಹೊಸ ವ್ಯವಸ್ಥೆಯನ್ವಯ ಸ್ಟಾಂಡರ್ಡ್ ಡಿಡಕ್ಷನ್ ಲಾಭವನ್ನು ವಿಸ್ತರಿಸಲಾಗಿದೆ. ಇದರಿಂದಾಗಿ 15.5 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಅಧಿಕ ಆದಾಯದ ವೇತನದಾರರಿಗೆ 52,500 ರೂಪಾಯಿ ಲಾಭ ಸಿಗುತ್ತದೆ. 2020-21ರ ಬಜೆಟ್ ಮೂಲಕ ಸರ್ಕಾರ ಐಚ್ಛಿಕ (ಆಪ್ಷನಲ್) ತೆರಿಗೆ ವ್ಯವಸ್ಥೆ ಜಾರಿಗೆ ತಂದಿತ್ತು. ಅದರನ್ವಯ, ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳು (ಎಚ್​ಯುುಎಫ್) ನಿರ್ದಿಷ್ಟ ವಿನಾಯಿತಿಗಳು ಮತ್ತು ಕಡಿತಗಳನ್ನು ಪಡೆಯದಿದ್ದರೆ ಕಡಿಮೆ ತೆರಿಗೆ ದರ ವಿಧಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 10 =
Remember me
