ಕೋಲಾರ:ಪ್ರವಾಹದ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಮೂರು, ನಾಲ್ಕು ಪಟ್ಟು ಅಧಿಕ ಪರಿಹಾರ ನೀಡಿತ್ತು. ಇದೇ ಮಾನದಂಡದಲ್ಲಿ ಈಗ ಸರ್ಕಾರ ಪರಿಹಾರ ನೀಡಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಶ್ ಆಗ್ರಹಿಸಿದ್ದಾರೆ.
ಕೋಲಾರದಲ್ಲಿ ಬಿಜೆಪಿ ವತಿಯಿಂದ ನಡೆದ ‘ರೈತರಿಗೆ ಹಣ ಕೊಡಿ, ಇಲ್ಲ ಕುರ್ಚಿ ಖಾಲಿ ಮಾಡಿ’ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಭಾಗವಹಿಸಿ ಮಾತನಾಡಿದ ಅಶೋಕ್,
ಬರಗಾಲ ಬಂದು ಏಳು ತಿಂಗಳಾದರೂ ರೈತರಿಗೆ ಪರಿಹಾರ ನೀಡಿಲ್ಲ. ಬೆಳಗಾವಿ ಅಧಿವೇಶನ ಮುಗಿದು ತಿಂಗಳಾದರೂ ಪರಿಹಾರ ಕೊಟ್ಟಿಲ್ಲ. ರೈತರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರು, ಮೇವಿನ ಸಮಸ್ಯೆ ಇದೆ. ಆದರೂ ಒಂದೇ ಒಂದು ಗೋಶಾಲೆ ತೆರೆದಿಲ್ಲ. ಅಲ್ಪಸಂಖ್ಯಾತ ಇಲಾಖೆ ಸಚಿವರು ಮನವಿ ಕೊಟ್ಟ ಮೂರು ದಿನಗಳಲ್ಲಿ ಮುಸ್ಲಿಮರಿಗೆ ಒಂದು ಸಾವಿರ ಕೋಟಿ ರೂ. ನೀಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವಾಹ ಬಂದಾಗ ಮಾನದಂಡಕ್ಕಿಂತ ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಮೂರು ಸಾವಿರ ಕೋಟಿ ರೂ.ಗೂ ಅಧಿಕ ಪರಿಹಾರವನ್ನು ಒಂದೇ ತಿಂಗಳಲ್ಲಿ ನೀಡಿದ್ದೆವು. ಆದರೆ ಕೇಂದ್ರ ಸರ್ಕಾರದ ಪರಿಹಾರ ಆಗಲೂ ತಡವಾಗಿತ್ತು. ಕೇಂದ್ರ ಸರ್ಕಾರ ದೇಶವ್ಯಾಪಿ ಪರಿಹಾರ ನೀಡುತ್ತದೆ. ಅದು ನಿಗದಿತ ಪ್ರಕ್ರಿಯೆ ಪ್ರಕಾರವೇ ಆಗುತ್ತದೆ. ಹೀಗಾಗಿ ಯಾವುದೇ ಪಕ್ಷವಿದ್ದರೂ ಸಹಜವಾಗಿಯೇ ತಡವಾಗುತ್ತದೆ ಎಂದರು.
ರಾಜ್ಯ ಸರ್ಕಾರ ವಿದ್ಯುತ್ ಕಡಿತ ಮಾಡುತ್ತಿದ್ದು, ಅದನ್ನು ರಿಪೇರಿ ಕೆಲಸ ಎಂದು ತೇಪೆ ಹಚ್ಚಲಾಗುತ್ತಿದೆ. ಹಣವಿಲ್ಲ ಎಂದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲಾಗುತ್ತಿದೆ ಎಂದು ಅಶೋಕ್ ಕುಟುಕಿದರು.
ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿಗಳು ಗೋವಿಂದ ಆಗಲಿವೆೆ. ತಿರುಗಿಬಿದ್ದ ಕಾಂಗ್ರೆಸ್ ಶಾಸಕರ ಮೂಗಿಗೆ ತುಪ್ಪ ಸವರಲಾಗುತ್ತಿದೆ. ಕೆಲವು ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ತಿಳಿದು ಬಂದಿರುವುದರಿಂದ ಹೈಕಮಾಂಡ್ ಈ ರೀತಿ ನಾಟವಾಡುತ್ತಿದೆ ಎಂದರು.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಹಾರಿಸಲು ಪಂಚಾಯಿತಿಯಿಂದ ಅನುಮತಿ ಪಡೆಯಲಾಗಿದೆ. ರಾಮ ಸೇವಾ ಸಮಿತಿಯವರು ಹಣ ಸಂಗ್ರಹಿಸಿ ಸ್ತಂಭ ಅಳವಡಿಸಿದ್ದಾರೆ. ಇದನ್ನು ಸರ್ಕಾರ ಮಾಡಿಕೊಟ್ಟಿಲ್ಲ ಎಂದರು. ಕಾಂಗ್ರೆಸ್ ಸರ್ಕಾರ ಎಟಿಎಂ ಆಗಿ ಲೂಟಿ ಮಾಡುತ್ತಿದೆ. ಅಧಿಕಾರಿಗಳು ಲಂಚ ತಿನ್ನುತ್ತಿದ್ದು, ನಮಗೆ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಕೊಟ್ಟರೆ ಇಂಥವರನ್ನು ಐದು ನಿಮಿಷದಲ್ಲಿ ಎತ್ತಂಗಡಿ ಮಾಡುತ್ತೇವೆ ಎಂದರು.

ಭಿಕ್ಷೆ ತಗೊಳಿಪ್ರತಿ ರೈತರಿಗೆ ಸರ್ಕಾರ 25 ಸಾವಿರ ರೂ. ಪರಿಹಾರ ನೀಡಬೇಕು. ಪಾಪರ್ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ನಾವೇ ಹಣ ಕೊಡುತ್ತೇವೆ. ನಮ್ಮ ರೈತರಿಂದಲೇ ನೀವು ಭಿಕ್ಷೆ ಪಡೆಯಿರಿ. ಎಲ್ಲ ರೈತರೂ ಸರ್ಕಾರಕ್ಕೆ 2 ಸಾವಿರ ರೂ. ನೀಡುತ್ತಾರೆ. ಇಂತಹ ಸ್ಥಿತಿಗೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆರ್.ಅಶೋಕ್ ಆಕ್ರೋಶ ಹೊರಹಾಕಿದರು.
ಬಿಜೆಪಿ ಸರ್ಕಾರದಿಂದ ದುಪ್ಪಟ್ಟು ಪರಿಹಾರ2022ನೇ ಸಾಲಿನಲ್ಲಿ 13,09,421 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 14,62,841 ರೈತರ ಬ್ಯಾಂಕ್ ಖಾತೆಗೆ 2,031.15 ಕೋಟಿ ರೂ. ಪರಿಹಾರವನ್ನು ಪರಿಹಾರ ತಂತ್ರಾಂಶದ ಮೂಲಕ ನೇರವಾಗಿ ಜಮೆ ಮಾಡಲಾಗಿತ್ತು.
ಬಹಿರಂಗ ಸವಾಲುಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಇದ್ದಾಗ ಎಷ್ಟು ಕಿಲೋಮೀಟರ್ ರೈಲ್ವೆ ಬಂದಿದೆ, ಹೆದ್ದಾರಿ ನಿರ್ವಣವಾಗಿದೆ ಎಂದು ಕಾಂಗ್ರೆಸ್​ನವರು ತಿಳಿಸಲಿ, ನಾನು ನರೇಂದ್ರ ಮೋದಿಯವರ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂದು ತಿಳಿಸುತ್ತೇನೆ ಎಂದು ಆರ್.ಅಶೋಕ್ ಸವಾಲು ಹಾಕಿದರು. ರಾಮ ಮಂದಿರ ಕಟ್ಟುವುದು ಬಿಜೆಪಿಯ ಪ್ರಣಾಳಿಕೆಯಲ್ಲೇ ಇತ್ತು. ಕಾಂಗ್ರೆಸ್​ಗೆ ರಾಮ ಆಗಿದೆ, ಈಗ ಆಂಜನೇಯನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಅಭಿವೃದ್ಧಿಯನ್ನೇ ಹೇಳುತ್ತೇವೆ ಎಂದರು.
ಸರ್ಕಾರಕ್ಕೆ 2000 ರೂ. ಚೆಕ್ ಕಳುಹಿಸಿದ ರೈತರುರೈತರಿಗೆ ಬರ ಪರಿಹಾರ ಕೊಡಲು ಸರ್ಕಾರಕ್ಕೆ ಹಣದ ಕೊರತೆಯಿದೆ, ಇದರಿಂದಾಗಿ ರೈತರ 2 ಸಾವಿರ ರೂ. ಚೆಕ್​ಗಳನ್ನು ಸರ್ಕಾರಕ್ಕೆ ನೀಡಲಾಗುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮೀ ಮೂಲಕ ಸುಮಾರು 100ಕ್ಕೂ ಹೆಚ್ಚು ರೈತರು ಚೆಕ್​ಗಳನ್ನು ಸರ್ಕಾರಕ್ಕೆ ವಿತರಿಸಿದರು. ಮುಖ್ಯಮಂತ್ರಿಗಳು, ಸರ್ಕಾರ ದಿವಾಳಿಯಾಗಿದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಹೆಸರಿಗೆ ಚೆಕ್​ಗಳನ್ನು ಕಳುಹಿಸಿಕೊಡಲಾಗಿದೆ ಎಂದು ರೈತ ಎಸ್.ವಿ.ಚಲಪತಿ ಹೇಳಿದರು.
ಗ್ಯಾರಂಟಿಗೆ ರಾಜ್ಯ ದಿವಾಳಿಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುದಿನ ಉಳಿಯುವುದಿಲ್ಲ. ಗ್ಯಾರಂಟಿಗಳಿಂದ ದಿವಾಳಿಯಾಗಿದ್ದು, ಜನತೆಯನ್ನು ವಂಚಿಸಿಕೊಂಡು ಬರುತ್ತಿದೆ. ಜನರನ್ನು ಯಾಮಾರಿಸುವ ಉದ್ದೇಶದಿಂದ ಶೋಷಿತರ ಜಾಗೃತಿ ಸಮಾವೇಶ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಜನ ಸಹ ಸಂಕಷ್ಟಕ್ಕೆ ಒಳಗಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಸಾಲದ ಹೊರೆ ಹಾಕುತ್ತಿದೆ ಎಂದರು. ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಮಾಡುವಾಗ ಬ್ಯಾನರ್, ಫ್ಲೆಕ್ಸ್ ಅಳವಡಿಸಲು ಸರ್ಕಾರ ಅನುಮತಿ ಕಡ್ಡಾಯ ಮಾಡಿತ್ತು, ಕೆಲ ಕಡೆ ಅಡ್ಡಿಪಡಿಸಿತು. ಕಾಶ್ಮೀರದಲ್ಲಿ 370 ಆರ್ಟಿಕಲ್ ರದ್ದುಗೊಳಿಸುವುದೂ ಬಿಜೆಪಿ ಪ್ರಣಾಳಿಕೆಯಲ್ಲಿತ್ತು. ಶಾಪ ಯಾರಿಗೆ ತಟ್ಟುತ್ತದೆ ಎಂಬುದನ್ನು ಲೋಕಸಭಾ ಚುನಾವಣೆಯಲ್ಲಿ ಜನ ತೀರ್ಮಾನ ಮಾಡುತ್ತಾರೆ ಎಂದರು.
ರಾಜ್ಯ ಸರ್ಕಾರ ದುಂದು ವೆಚ್ಚದಲ್ಲಿ ತೊಡಗಿಸಿಕೊಂಡು ಪಾಪರ್ ಆಗಿದೆ. ಅಂದಂದಿನ ನಿರ್ವಹಣೆಗೂ ದುಡ್ಡಿಲ್ಲ. 20 ವರ್ಷಗಳಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡು ಬಂದಿದ್ದನ್ನು ಧೂಳಿಪಟ ಮಾಡಿದೆ. 34 ಮಂದಿಗೆ ಕ್ಯಾಬಿನೇಟ್ ದರ್ಜೆಯ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅವರಿಗೆ ವರ್ಷಕ್ಕೆ 150 ಕೋಟಿ ರೂ.ಗೂ ಹೆಚ್ಚು ಹಣ ಕೊಡಬೇಕು. ಅವರಿಗೇ ಅನುದಾನ ಕೊಡುವುದಕ್ಕೆ ಇಲ್ಲದಿದ್ದಾಗ ಕಾರ್ಯಕರ್ತರಿಗೆ ಬಿರಿಯಾನಿ ಕೊಡಿ ಅಂಥ ಹೇಳ್ತೀರಾ ಎಂದು ಪ್ರಶ್ನಿಸಿದರು.
ಟೀಕೆ ಮಾಡುವವರಿಗೆ ಶಾಪ ತಟ್ಟಲಿ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ರಾಮನ ಅಸ್ತಿತ್ವ ಇಲ್ಲ ಅಂದಿದ್ದರು. ರಾಮನೇ ಕಾಲ್ಪನಿಕ ಎನ್ನುತ್ತ ಜನ್ಮ ಪ್ರಮಾಣ ಪತ್ರ ಕೇಳಿದ್ದರು. ಹೆಸರಿನಲ್ಲೇ ರಾಮ ಇದ್ದಾನೆ ಎಂದು ಸಿದ್ದರಾಮಯ್ಯ ಹೇಳಬಹುದು, ಆದರೆ ಅವರು ಹೃದಯದಲ್ಲಿ ಇಟ್ಟುಕೊಂಡಿರುವುದು ಟಿಪು್ಪ ಸುಲ್ತಾನನನ್ನು. ಎಷ್ಟು ದಿನ ಓಲೈಸುತ್ತಾರೆ, ಇದಕ್ಕೆಲ್ಲ ಜನರೇ ಉತ್ತರ ಕೊಡುವ ಸಮಯ ಬಂದಿದೆ. ರಾಮನ ಶಾಪ ತಟ್ಟಿಯೇ ತಟ್ಟುತ್ತದೆ ಎಂದು ಕಿಡಿಕಾರಿದರು.
ಹಳೇ ಕೆಲಸಗಳಿಗೆ ಭೂಮಿಪೂಜೆ: ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಬಿಡುಗಡೆ ಮಾಡಿದ್ದ ಕಾಮಗಾರಿಗೆ ಕಾಂಗ್ರೆಸ್ ಸಚಿವರು, ಶಾಸಕರು ಟೇಪ್ ಕಟ್ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಅಧಿಕಾರಕ್ಕೆ ಬಂದು 9 ತಿಂಗಳು ಕಳೆದರೂ ಅಭಿವೃದ್ಧಿ ಕೆಲಸಗಳಿಗೆ ನಯಾ ಪೈಸೆ ಮಂಜೂರು ಮಾಡಿಲ್ಲ ಎಂದರು.
ವಂಚನೆ ಆರೋಪ, ಡ್ರೋನ್ ಪ್ರತಾಪ್ ವಿರುದ್ಧ ದೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
