ಬೆಂಗಳೂರು:ಸರ್ಕಾರಿ ಗ್ರಾಮೀಣ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರವೇಶಕ್ಕೆ 7.5 ಶೇ. ಮೀಸಲಾತಿ, ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಲು ಸರ್ಕಾರಿ ಶಾಲೆಗಳ ವಿಲೀನ, ಕೆಪಿಎಸ್​ಸಿ ಸದಸ್ಯರ ಸಂಖ್ಯೆ ಕಡಿತಗೊಳಿಸುವುದು ಸೇರಿದಂತೆ ಹಲವು ಮಹತ್ವದ ಸಲಹೆ, ಶಿಫಾರಸುಗಳನ್ನು ನಿವೃತ್ತ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಎರಡನೇ ಆಡಳಿತ ಸುಧಾರಣಾ ಆಯೋಗ ಸರ್ಕಾರದ ಮುಂದಿಟ್ಟಿದೆ.
ಶುಕ್ರವಾರ ಸಿಎಂ ಅಧಿಕೃತ ನಿವಾಸ ‘ರೇಸ್​ವ್ಯೂ ಕಾಟೇಜ್’ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿದ ಆಯೋಗದ ಅಧ್ಯಕ್ಷ ವಿಜಯಭಾಸ್ಕರ್, ಆಡಳಿತ ಸಾಮರ್ಥ್ಯ ಸುಧಾರಣೆ, ಕಾರ್ಯವಿಧಾನ ಸರಳೀಕರಣ, ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಯೋಗ ಸಿದ್ಧಪಡಿಸಿರುವ ಶಿಫಾರಸುಗಳನ್ನು ಒಳಗೊಂಡ 4 ಮತ್ತು 5ನೇ ವರದಿಗಳನ್ನು ಸಲ್ಲಿಸಿದರು. ಮೊದಲ ಮೂರು ವರದಿಗಳಲ್ಲಿ ಆಡಳಿತ ಇಲಾಖೆಗಳು, ರಾಜ್ಯಮಟ್ಟದಲ್ಲಿ ಕೈಗೊಳ್ಳಬೇಕಾದ ಸುಧಾರಣೆ, ಕಡತ ವಿಲೇವಾರಿ ಹಂತ ಇನ್ನಿತರ ಕ್ರಮಗಳಿಗೆ ಒತ್ತು ನೀಡಿದ್ದರು.
4 ಮತ್ತು 5ನೇ ವರದಿಯಲ್ಲಿ ಮುಂಚೂಣಿ ಸಂಸ್ಥೆಗಳಲ್ಲಿ ನಾಗರಿಕ ಸೇವೆ ಸುಧಾರಣೆ ಒಳಗೊಂಡು ಹಲವು ಮಹತ್ವದ ಶಿಫಾರಸು ಮಾಡಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಸಬಲಗೊಳಿಸಿ ಹಲವು ಅಧಿಕಾರಗಳ ಪ್ರತ್ಯಾಯೋಜನೆಗೆ ಆಯೋಗ ಸೂಚಿಸಿದೆ. ಗ್ರೂಪ್ ಸಿ ಮತ್ತು ಡಿ ವೃಂದ ಸಿಬ್ಬಂದಿ ನೇಮಕ ಅಧಿಕಾರ, ಸೇವಾ ವಿಷಯಗಳ ಇತ್ಯರ್ಥ ಮುಂತಾದ ಅಧಿಕಾರಗಳನ್ನು ನೀಡಲು ಎಲ್ಲ ಇಲಾಖೆಗಳ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ತಿಳಿಸಿದೆ.
ಶಾಲೆಗಳ ವಿಲೀನ:ಶಾಲೆಯಿಂದ ಹೊರಗುಳಿಯುವವರ ಪ್ರಮಾಣ ತಗ್ಗಿಸಲು 100 ಮೀಟರ್ ಅಂತರದ 3,457 ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳನ್ನು 1,667 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಲೀನಗೊಳಿಸಬಹುದು. ಅಲ್ಲದೆ, 2,460 ಸ.ಕಿ.ಪ್ರಾ., ಹಿ.ಪ್ರಾ. ಹಾಗೂ ಪ್ರೌಢಶಾಲೆಗಳನ್ನು 1,135 ಸಂಯುಕ್ತ/ ಕ್ಲಸ್ಟರ್ ಪ್ರೌಢಶಾಲೆ ಅಥವಾ ಕರ್ನಾಟಕ ಪಬ್ಲಿಕ್ ಸ್ಕೂಲ್​ಗಳಾಗಿ ವಿಲೀನ, 879 ಕಿ.ಪ್ರಾ., ಹಿ.ಪ್ರಾ.ಶಾ., ಪ್ರೌ.ಶಾ ಮತ್ತು ಪದವಿಪೂರ್ವ ಕಾಲೇಜುಗಳನ್ನು 359 ಕರ್ನಾಟಕ ಪಬ್ಲಿಕ್ ಸ್ಕೂಲ್​ಗಳಾಗಿ ವಿಲೀನ ಮಾಡಲು ಆಯೋಗ ಸಲಹೆಯಿತ್ತಿದೆ.
ಮೊಟ್ಟೆ ಹೆಚ್ಚಳ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ ವಿಭಜಿಸಿ ಪ್ರತ್ಯೇಕ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ ಸ್ಥಾಪನೆ. ಅಪೌಷ್ಟಿಕತೆ ಹೆಚ್ಚಿರುವ ಮಕ್ಕಳಿಗೆ ವಾರದಲ್ಲಿ ಎರಡು ಬದಲು ಐದು ಮೊಟ್ಟೆಗೆ ಹೆಚ್ಚಿಸಬೇಕು. ಸಾಮಾನ್ಯ ಮಕ್ಕಳಿಗೆ ಎರಡು ಮೊಟ್ಟೆ ವಿತರಿಸಬೇಕು ಎಂದು ಹೇಳಿದೆ. ತಾಯಿ, ಶಿಶುಮರಣ ಪ್ರಮಾಣ ತಗ್ಗಿಸಲು ಶಾಲೆಯಿಂದ ಹೊರಗುಳಿದ ಬಾಲಕಿಯರಿಗೆ ಹದಿಹರೆಯದ ಬಾಲಕಿಯರ ಯೋಜನೆ ವಿಸ್ತರಿಸಿದರೆ ಒಟ್ಟು 7.50 ಲಕ್ಷ ಹೆಣ್ಣು ಮಕ್ಕಳಿಗೆ ತಲಾ 3,000 ರೂ.ನಂತೆ ವಾರ್ಷಿಕ 180 ಕೋಟಿ ರೂ. ಖರ್ಚಿನ ಹೊರಬೀಳಬಹುದು.
ಪಶು ಚಿಕಿತ್ಸಾಲಯಗಳ ಸ್ಥಳಾಂತರ:25 ಜಿಲ್ಲೆಗಳಲ್ಲಿ 737 ಹೆಚ್ಚುವರಿ ಚಿಕಿತ್ಸಾಲಯಗಳಿವೆ. ಈ ಪೈಕಿ 154 ಪಶು ಚಿಕಿತ್ಸಾಲಯಗಳನ್ನು ಕೊರತೆಯಿರುವ ಬೆಳಗಾವಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಸ್ಥಳಾಂತರ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿರುವ ಆರೋಗ್ಯ ರಕ್ಷಾ ಸಮಿತಿ ಮಾದರಿಯಲ್ಲಿ ಪ್ರಾಣಿ ವೈದ್ಯ ಸಮಿತಿಗಳು ಅಥವಾ ಪ್ರಾಣಿ ರಕ್ಷಾ ಸಮಿತಿಗಳನ್ನು ಪ್ರತಿ ಪ್ರಾಥಮಿಕ ಪಶುವೈದ್ಯ ಕೇಂದ್ರ, ಪಶು ಚಿಕಿತ್ಸಾಲಯ, ತಾಲೂಕು ಪಶುವೈದ್ಯ ಆಸ್ಪತ್ರೆ ಮತ್ತು ಪಶುವೈದ್ಯ ಪಾಲಿಕ್ಲಿನಿಕ್​ಗಳಲ್ಲಿ ಸ್ಥಾಪಿಸಬಹುದು ಎಂದು ವರದಿ ಹೇಳಿದೆ.
ಬಿಬಿಎಂಪಿಗೆ 30 ಉಪ ಆಯುಕ್ತರ ಹುದ್ದೆಗಳ ಸೃಜನೆ:ಬಿಬಿಎಂಪಿಯ 30 ಕಂದಾಯ ವಿಭಾಗಗಳ ವಿಕೇಂದ್ರೀಕರಣ, ಹೆಚ್ಚಿನ ಸಮನ್ವಯ ಸಾಧಿಸಲು ಗ್ರೂಪ್-ಎ ಹಿರಿಯ ಶ್ರೇಣಿಯ 30 ಉಪ ಆಯುಕ್ತರ ಹುದ್ದೆಗಳ ಸೃಜನೆಗೆ ಆಯೋಗ ಸಲಹೆ ನೀಡಿದೆ. ಈ ಅಧಿಕಾರಿಗಳು ಕಾರ್ಯನಿರ್ವಾಹಕ ಇಂಜಿನಿಯರ್, ವಿಭಾಗೀಯ ಆರೋಗ್ಯಾಧಿಕಾರಿಗಳು, ಮತ್ತಿತರ ಕೇಂದ್ರ-ರಾಜ್ಯ ಸರ್ಕಾರದ ಇಲಾಖೆಗಳು/ ಸಂಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸಲು ಸಾಧ್ಯವಾಗುತ್ತದೆ. ಭಾಗಶಃ ರಾಜ್ಯ ಸರ್ಕಾರದ ಮೂಲಕ, ಉಳಿದರ್ಧ ಬಿಬಿಎಂಪಿ ಕಂದಾಯ ಅಧಿಕಾರಿಗಳಿಗೆ ಬಡ್ತಿ ನೀಡಿ ಈ ಹುದ್ದೆಗಳನ್ನು ತುಂಬಬಹುದು ಎಂದು ವಿವರಿಸಿದೆ.
ಗ್ರಾಮೀಣ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವೈದ್ಯ ಸೀಟು:ಪದವಿ ವೈದ್ಯಕೀಯ ಪ್ರವೇಶಕ್ಕೆ ಶೇಕಡ 7.5 ಸೀಟುಗಳನ್ನು ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮೀಸಲಿಡುವಂತೆ ಶಿಫಾರಸು ಮಾಡಲಾಗಿದೆ. ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಗ್ರಾಮೀಣ ಸೇವೆ ಸಲ್ಲಿಸಿದ ವೈದ್ಯರಿಗೆ ಗರಿಷ್ಠ 30 ಕೃಪಾಂಕ ಪರಿಗಣಿಸಲು ಸಲಹೆ ಮಾಡಿದೆ. ಕೆಲಸದ ಹೊರೆ ಹೊಂದಿರುವ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಗಳಲ್ಲಿ ಜಿಎನ್​ಎಂ ಅಥವಾ ಬಿಎಸ್​ಸಿ ನರ್ಸಿಂಗ್ 20 ಸೀಟುಗಳೊಂದಿಗೆ ಕೋರ್ಸ್ ಕಾಲೇಜು ಸ್ಥಾಪನೆ. 10 ಸೀಟುಗಳ ಪ್ಯಾರಾ ಮೆಡಿಕಲ್ ಕೋರ್ಸ್ ಆರಂಭಿಸುವುದು. ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ವ್ಯವಸ್ಥಾಪಕರ ನೇಮಕ, ಆಸ್ಪತ್ರೆ ಮ್ಯಾನೇಜ್​ವೆುಂಟ್ ವ್ಯಾಸಂಗ ಮಾಡಿದವರಿಗೆ ಅವಕಾಶ, ವೈದ್ಯಕೀಯ ಸ್ನಾತಕೋತ್ತರ ಸರ್ಕಾರಿ ವೈದ್ಯರ ಖಾಸಗಿ ವೃತ್ತಿ ನಿಷೇಧ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಜೆ ಹೊರರೋಗಿಗಳ ವಿಭಾಗ ಪ್ರಾರಂಭ ಇತರ ಪ್ರಮುಖ ಶಿಫಾರಸುಗಳಾಗಿವೆ.
ಕೆಪಿಎಸ್​ಸಿ ಸದಸ್ಯ ಬಲ ಇಳಿಕೆ:ಉತ್ತರಪ್ರದೇಶ ಸೇರಿ ಇತರ ರಾಜ್ಯಗಳಲ್ಲಿ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆ ಎಂಟು ಅಥವಾ ಅದಕ್ಕಿಂತ ಕಡಿಮೆಯಿದೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ)ದ ಅಧ್ಯಕ್ಷ ಸೇರಿ ಸದಸ್ಯಬಲ ವನ್ನು 14 ರಿಂದ ಎಂಟಕ್ಕೆ ಇಳಿಸಲು ಶಿಫಾರಸು ಮಾಡಿದೆ.
ಪ್ರತಿ ಸರ್ಕಾರಿ ಕಚೇರಿಯಲ್ಲಿ ಕಾರ್ಯಸುಧಾರಣಾ ತಂಡ:ನಿರಂತರ ಸುಧಾರಣಾ ಕ್ರಮಗಳಿಗಾಗಿ ಪ್ರತಿ ಸರ್ಕಾರಿ ಕಚೇರಿಯಲ್ಲಿ ‘ಕಾರ್ಯ ಸುಧಾರಣಾ ತಂಡ’ಗಳನ್ನು ರಚಿಸುವುದು. ರೈತ ಸಂಪರ್ಕ ಕೇಂದ್ರದಲ್ಲಿ ಚುನಾಯಿತ ಪ್ರತಿನಿಧಿಗಳು, ಪ್ರಗತಿಪರ, ಪುರಸ್ಕೃತ ರೈತರು, ಕಂದಾಯ, ತೋಟಗಾರಿಕೆ, ಸಂಪರ್ಕ ವಿಜ್ಞಾನಿಗಳು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ರೈತ ಸಲಹಾ ಸಮಿತಿ ಸ್ಥಾಪನೆ
ಪ್ರಮುಖ ಅಂಶಗಳು:ಕೌಶಲ್ಯ ಮಿಷನ್​ನಡಿ ಸಿಬ್ಬಂದಿ, ಸವಲತ್ತು ಸಹಿತ ಉದ್ಯೋಗ ಸೇವಾ ಇಲಾಖೆಯಲ್ಲಿ ವಿಲೀನ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗೆ ಕೈಗಾರಿಕಾ ತರಬೇತಿ ಇಲಾಖೆ ಎಂದು ಮರು ನಾಮಕರಣ; ಸಹಕಾರ ಚುನಾವಣಾ ಪ್ರಾಧಿಕಾರ ರದ್ದು, ಹಿಂದಿನಂತೆ ಅಪರ ನಿಬಂಧಕರ ನೇತೃತ್ವದಲ್ಲಿ ಪ್ರತ್ಯೇಕ ಚುನಾವಣಾ ಕೋಶ ಸೃಜನೆ; ಸಹಕಾರ ಸಂಸ್ಥೆಗಳಲ್ಲಿ ಗಂಭೀರ ವಂಚನೆ ತಡೆಗೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧೀನದಲ್ಲಿ ಗಂಭೀರ ವಂಚನೆ ತನಿಖಾಧಿಕಾರಿ ನೇಮಕಕ್ಕೆ ಕಾಯ್ದೆಗೆ ತಿದ್ದುಪಡಿ; ಕರ್ನಾಟಕ ಅಪಾರ್ಟ್​ವೆುಂಟ್ ಮಾಲೀಕತ್ವ ಕರಡು ಮಸೂದೆ-2020ಅನ್ನು ತ್ವರಿತವಾಗಿ ಅಂತಿಮಗೊಳಿಸುವುದು; ಸ್ವತ್ತುಗಳ ಮೋಸ, ನೋಂದಣಿಯಲ್ಲಿ ವಂಚನೆಯಿಂದ ಬಾಧಿತರಿಗೆ ಪರಿಹಾರ, ಸಿವಿಲ್ ಕೋರ್ಟ್​ಗಳ ಮೇಲಿನ ಹೊರೆ ತಗ್ಗಿಸಲು 1908ರ ನೋಂದಣಿ ಕಾಯ್ದೆಗೆ ತಿದ್ದುಪಡಿಯನ್ನು ಕಂದಾಯ ಇಲಾಖೆ ಪ್ರಸ್ತಾಪಿಸಬಹುದು; ಅಮೆರಿಕ, ನ್ಯೂಜಿಲೆಂಡ್, ಕೆನಡಾ ಇನ್ನಿತರ ದೇಶಗಳ ಮಾದರಿಯಲ್ಲಿ ಇ-ಆಡಳಿತ ಇಲಾಖೆಯಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿ ಹುದ್ದೆ ಸೃಜನೆ;  ತೋಟಗಾರಿಕೆ ಇಲಾಖೆಯಲ್ಲಿ ಕೊಯ್ಲೋತ್ತರ ಕೋಶ ಸ್ಥಾಪನೆ; ರಾಜ್ಯ ಸಾರ್ವಜನಿಕ ಉದ್ದಿಮೆಗಳಲ್ಲಿ ಅಪ್ರೆಂಟಿಶಿಪ್ ಹುದ್ದೆಗಳ ಪ್ರಮಾಣ ಶೇ.15ರಷ್ಟು ಹೆಚ್ಚಳ; ಗ್ರಾಮೀಣ ವ್ಯಾಸಂಗ, ಹೈ.ಕ ಅರ್ಹತಾ, ಕನ್ನಡಮಾಧ್ಯಮ ಪ್ರಮಾಣಪತ್ರಗಳನ್ನು ಜೀವಿತಾವಧಿ ಅಥವಾ ಸಿಂಧುತ್ವ ರದ್ದುಗೊಳಿಸುವ ತನಕ ವಿಸ್ತರಣೆ.
ದೇವಸ್ಥಾನಕ್ಕೆ ಹೊರಟಿದ್ದವರ ವಾಹನ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಮೂವರ ಪರಿಸ್ಥಿತಿ ಗಂಭೀರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 13 =
Remember me
