|ಜಗನ್ ರಮೇಶ್ಬೆಂಗಳೂರು
ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಕೊಲೆಗೈದ ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮೊದಲೇ ಆರೋಪಿಗೆ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿರುವ ಹೈಕೋರ್ಟ್, ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರಿಗೆ ‘ನ್ಯಾಯಾಂಗ ವಿವೇಚನೆ’ಯ ಬಗ್ಗೆ ತರಬೇತಿ ನೀಡಲು ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.
ವರದಕ್ಷಿಣೆಗಾಗಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮೈಸೂರಿನ ಹಿಟ್ಟನಹಳ್ಳಿ ಗ್ರಾಮದ ಮಂಜು ಎಂಬಾತನಿಗೆ ಮೈಸೂರಿನ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ಜಾಮೀನು ರದ್ದುಪಡಿಸುವಂತೆ ಕೋರಿ ಮೃತ ಮಹಿಳೆಯ ಸಹೋದರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಹೇಯ ಅಪರಾಧ ಕೃತ್ಯವೆಸಗಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಮುನ್ನ ಅನುಸರಿಸಬೇಕಾದ ನ್ಯಾಯಾಂಗ ವಿವೇಚನೆಯ ಕುರಿತು ಜಡ್ಜ್​ಗೆ ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ಕೊಡಿಸಬೇಕಿದೆ. ಈ ನಿಟ್ಟಿನಲ್ಲಿ ರಿಜಿಸ್ಟ್ರಿ, ಮುಖ್ಯ ನ್ಯಾಯಮೂರ್ತಿಗಳಿಂದ ಸೂಕ್ತ ಆದೇಶ ಪಡೆದುಕೊಳ್ಳಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಈ ಆದೇಶವನ್ನು ವಿಚಾರಣಾ ನ್ಯಾಯಾಧೀಶರಿಗೂ ಕಳುಹಿಸುವಂತೆ ನಿರ್ದೇಶಿಸಿದೆ. ಜತೆಗೆ, 2021ರ ಮಾ.3 ಹಾಗೂ ಏ.5ರಂದು ಆರೋಪಿಯ ಪಾಲಕರಿಗೆ ಮಂಜೂರು ಮಾಡಲಾಗಿದ್ದ ನಿರೀಕ್ಷಣಾ ಜಾಮೀನು ಹಾಗೂ ಅದೇ ವರ್ಷ ಏ.17ರಂದು ಆರೋಪಿಗೆ ನೀಡಿದ್ದ ಜಾಮೀನು ರದ್ದುಪಡಿಸಿರುವ ಹೈಕೋರ್ಟ್, ಕೂಡಲೇ ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.
ಆರೋಪಿಯ ಪತ್ನಿ ಸಾಯುವ ದಿನ (2021ರ ಫೆ.14) ನೆರೆಮನೆಯವರಿಗೆ ವಾಯ್್ಸ ಮೆಸೇಜ್ (ಧ್ವನಿ ಸಂದೇಶ) ಕಳುಹಿಸಿ, ನನಗೆ ಯಾವುದೇ ರೀತಿಯ ಅಪಾಯವಾದರೂ ಅದಕ್ಕೆ ನನ್ನ ಪತಿಯೇ ಹೊಣೆ ಎಂದು ತಿಳಿಸಿದ್ದರು. ಅದೇ ದಿನ ಮಹಿಳೆ ಸುಟ್ಟಗಾಯಗಳಿಂದ ಮೃತಪಟ್ಟಿದ್ದರು. ಘಟನೆಯ ಬಳಿಕ ವಾಯ್್ಸ ಮೆಸೇಜ್ ವಿಚಾರ ತಿಳಿದ ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ, ತನಿಖೆ ಕೈಗೊಂಡಿದ್ದರು. ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ಸೆಷನ್ಸ್ ನ್ಯಾಯಾಲಯ, ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವಂತಹ ಆರೋಪ ಆರೋಪಿಗಳ ಮೇಲಿಲ್ಲ. ವಾಯ್್ಸ ಮೆಸೇಜ್ ಕುರಿತು ತಿಳಿದ ನಂತರವಷ್ಟೇ ದೂರು ದಾಖಲಿಸಲಾಗಿದೆ. ಆದರೆ, ಆ ಧ್ವನಿ ಸಂದೇಶವನ್ನು ಮೃತ ಮಹಿಳೆಯೇ ಕಳುಹಿಸಿದ್ದಾಳೆಯೇ ಹಾಗೂ ಮೊಬೈಲ್ ಮೃತ ಮಹಿಳೆಗೇ ಸೇರಿದ್ದೇ ಎನ್ನುವುದನ್ನು ತನಿಖೆಯ ನಂತರ ನಿರ್ಧರಿಸಬಹುದಾಗಿದೆ ಎಂಬ ತೀರ್ವನಕ್ಕೆ ಬಂದಿತ್ತು.
ಹೈಕೋರ್ಟ್ ಹೇಳಿದ್ದೇನು?:ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮೊದಲೇ ವಿಚಾರಣಾ ನ್ಯಾಯಾಲಯ, ಸಿಆರ್​ಪಿಸಿ ಸೆಕ್ಷನ್ 438ರ ಅಡಿ ಅಧಿಕಾರ ಬಳಸಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ತನಿಖಾ ಅವಧಿ ಪೂರ್ಣಗೊಳ್ಳುವವರೆಗೂ ಕಾಯದೆ ಧ್ವನಿ ಸಂದೇಶದ ಸತ್ಯಾಸತ್ಯತೆಯನ್ನು ವಿಚಾರಣೆ ಸಂದರ್ಭದಲ್ಲಿ ನಿರ್ಧರಿಸಬಹುದಾಗಿದೆ ಎಂಬ ತೀರ್ವನಕ್ಕೆ ಬಂದಿರುವ ವಿಚಾರಣಾ ನ್ಯಾಯಾಲಯದ ಆದೇಶ ದೋಷಪೂರಿತವಾಗಿದೆ. ಹೇಯ ಕೃತ್ಯವೊಂದರ ಗಂಭೀರತೆ ಪರಿಗಣಿಸಲು ವಿಚಾರಣಾ ನ್ಯಾಯಾಲಯ ವಿಫಲವಾಗಿದೆ. ಮದುವೆಯಾದ ಕೇವಲ ಒಂದೇ ವರ್ಷದಲ್ಲಿ ತನ್ನ ಪತಿ ಮನೆಯವರ ಕ್ರೌರ್ಯದಿಂದಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಆರೋಪಿಗಳಿಗೆ ಜಾಮೀನು ನೀಡಿರುವ ಆದೇಶ ನ್ಯಾಯಕ್ಕೆ ವ್ಯತಿರಿಕ್ತವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತನಿಖೆ ಮುಗಿಯುವವರೆಗೆ ಕಾಯಬೇಕಿತ್ತು:ಸಾಯುವ ಮುನ್ನ ತನ್ನ ಪತಿಯ ಮೊಬೈಲ್​ನಿಂದ ನೆರೆಮನೆಯವರಿಗೆ ಮಹಿಳೆ ಧ್ವನಿ ಸಂದೇಶ ಕಳುಹಿಸಿದ್ದಾಳೆ ಎಂದಾಗ ಅದು ಡೈಯಿಂಗ್ ಡಿಕ್ಲರೇಷನ್ (ಸಾಯುವ ಮುನ್ನ ನೀಡಿದ ಹೇಳಿಕೆ) ಎನಿಸಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯ ತನಿಖೆ ಪೂರ್ಣಗೊಳ್ಳುವವರೆಗೆ ಕಾಯಬೇಕಿತ್ತು. ತನಿಖೆಯಲ್ಲಿ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗದಿದ್ದರೆ ಮಾತ್ರ ವಿವೇಚನಾನುಸಾರ ಜಾಮೀನು ಮಂಜೂರು ಮಾಡಬಹುದಿತ್ತು ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣವೇನು?:ಮೃತ ಮಹಿಳೆಯ ಸಹೋದರ 2021ರ ಫೆ.16ರಂದು ಮೈಸೂರಿನ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ಮಂಜು ಜತೆಗೆ ತನ್ನ ಸಹೋದರಿಯನ್ನು 2020ರ ಫೆ.16ರಂದು ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ ಚಿನ್ನಾಭರಣ, 3.5 ಲಕ್ಷ ರೂ. ನಗದು ಕೊಡಲಾಗಿತ್ತು. ಮದುವೆಯಾದ ಎರಡೇ ತಿಂಗಳಿಗೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಜಗಳ ಆರಂಭಿಸಿದ್ದ. ಇದೇ ವಿಚಾರವಾಗಿ ಆರೋಪಿ ಮತ್ತವನ ಪಾಲಕರು ಸಹೋದರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಮಧ್ಯೆ, 2021ರ ಫೆ.14ರಂದು ಸಹೋದರಿ ಮೃತಪಟ್ಟಿದ್ದಳು. ಆಕೆಯದ್ದು ಆಕಸ್ಮಿಕ ಸಾವು ಎಂದು ಗ್ರಾಮಸ್ಥರು ಹೇಳಿದ್ದರಿಂದ, ಪೊಲೀಸ್ ಠಾಣೆಗೆ ಈ ಸಂಬಂಧ ಲಿಖಿತ ಹೇಳಿಕೆ ನೀಡಲಾಗಿತ್ತು. ಅಂತ್ಯಕ್ರಿಯೆಯ ನಂತರ, ನೆರೆ ಮನೆಯವರ ಮೊಬೈಲ್​ಗೆ ಫೆ.14ರಂದು ಸಹೋದರಿ ಕಳುಹಿಸಿದ್ದ ವಾಯ್್ಸ ಮೆಸೇಜ್ ವಿಚಾರ ತಿಳಿಯಿತು. ಪತಿಯ ಮೊಬೈಲ್ ಮೂಲಕ ಕಳುಹಿಸಿದ್ದ ವಾಯ್್ಸ ಮೆಸೇಜ್​ನಲ್ಲಿ ‘ನನಗೆ ಯಾವುದೇ ಅಪಾಯವಾದರೆ ಪತಿ ಮತ್ತವರ ಪಾಲಕರೇ ಹೊಣೆ’ ಎಂದು ಹೇಳಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಕಬ್ಬು ತಿನ್ನುವ ಆಸೆಯಿಂದಾಗಿ ಪ್ರಾಣ ಕಳ್ಕೊಂಡ ಬಾಲಕ; ಟ್ರ್ಯಾಕ್ಟರ್​ ಅಡಿಗೆ ಸಿಲುಕಿ ಸಾವು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − five =
Remember me
