ಬೆಂಗಳೂರು:ಕರೊನಾ ಮೂರನೇ ಅಲೆಯ ಆತಂಕದ ಕಾರಣಕ್ಕೆ ಈ ಬಾರಿಯೂ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ನಿರ್ಬಂಧ ವಿಧಿಸಿದೆ. ಆದರೆ, ನಿರ್ಬಂಧ ಸಡಿಲಿಸಬೇಕೆಂಬ ಒತ್ತಡ ವಿಪಕ್ಷ, ಸ್ವಪಕ್ಷೀಯರ ಸಹಿತ, ಪರಿವಾರದ ಸಂಘಟನೆಗಳಿಂದಲೂ ಹೆಚ್ಚುತ್ತಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೋವಿಡ್ ಆತಂಕದ ಸಂದರ್ಭದಲ್ಲಿ ಸರ್ಕಾರ ಯಾವುದೇ ದುಸ್ಸಾಹಸಕ್ಕೆ ಕೈಹಾಕಬಾರದೆಂಬುದು ತಜ್ಞರ ವಾದವಾದರೆ, ಹೋಟೆಲ್, ಮಾಲ್​ಗಳಿಗೆ ಇಲ್ಲದ ನಿರ್ಬಂಧ, ನಿಷೇಧ ಗಣೇಶೋತ್ಸವಕ್ಕೆ ಏಕೆ ಎಂಬುದು ಗಣೇಶೋತ್ಸವ ಸಮಿತಿಗಳ ಪ್ರಶ್ನೆ. ಈ ಬೆಳವಣಿಗೆಗಳಿಂದ ಸಂದಿಗ್ಧತೆಗೆ ಸಿಲುಕಿ ರುವ ಸರ್ಕಾರ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಸಮಿತಿಗಳಿಗೆ ಆಘಾತ:ಸಾರ್ವಜನಿಕ ಆಚರಣೆ ನಿಷೇಧ ವಿದ್ದರೂ ರಾಜ್ಯದ ಹಲವೆಡೆ ಮೊಹರಂ ಹಬ್ಬದ ನಿಮಿತ್ತ ಆಲಂಗಳು/ಪಂಜಾಗಳ ಸ್ಥಾಪನೆ, ಕೆಂಡದ ಕೊಂಡ ಹಾಯುವ, ಮೆರವಣಿಗೆಗಳು, ಪ್ರಾರ್ಥನಾ ಸಭೆಗಳು ನಡೆದಿವೆ. ಈಗ ಗಣೇಶೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು 2-3 ತಿಂಗಳಿಂದ ಸಿದ್ಧತೆ ಮಾಡಿಕೊಳ್ಳುತ್ತಿವೆ. ಹಿಂದಿನ 2 ವರ್ಷಗಳಂತೆಯೇ ಸರಳ, ಸಾಂಪ್ರದಾಯಿಕವಾಗಿ ಆಚರಣೆ ನಿರೀಕ್ಷೆಯಲ್ಲಿದ್ದ ಸಮಿತಿಗಳಿಗೆ ಸರ್ಕಾರ ಹೇರಿರುವ ನಿರ್ಬಂಧ ಆಘಾತ ಉಂಟುಮಾಡಿದೆ.
ವ್ಯತಿರಿಕ್ತ ಪರಿಣಾಮದ ಭೀತಿ:ಸೋಂಕು ನಿಯಂತ್ರಣದ ಜತೆಗೆ ಜನ-ಜೀವನ, ಸಾಮಾಜಿಕ-ಆರ್ಥಿಕ ಚಟುವಟಿಕೆ ಸಹಜ ಸ್ಥಿತಿಗೆ ಮರಳಬೇಕು ಎನ್ನುವ ಸರ್ಕಾರ ಗಣೇಶ ಹಬ್ಬ ವಿಚಾರದಲ್ಲಿ ತದ್ವಿರುದ್ಧ ನಿಲುವು ತಳೆದಿದೆ. ಜನರು ಗುಂಪುಗೂಡುವಂತಹ ಹೋಟೆಲ್-ಮಾಲ್, ಚಿತ್ರೀಕರಣ, ಚಿತ್ರಮಂದಿರಗಳಿಗೆ ವಿನಾಯಿತಿ ನೀಡಿದ್ದು, ಸಾರ್ವಜನಿಕ ಗಣೇಶ ಉತ್ಸವ ನಿಷೇಧ ಸರಿಯಲ್ಲ ಎನ್ನುವುದು ಸಮಿತಿಗಳ ವಾದವಾಗಿದೆ. ನಿರ್ಬಂಧ ಸಡಿಲಿಸದಿದ್ದರೆ ವ್ಯಾಪಾರ-ವಹಿವಾಟು ಕುಸಿದು, ಅವಲಂಬಿತ ಕುಟುಂಬಗಳು ಮತ್ತು ಸರ್ಕಾರದ ಆದಾಯಕ್ಕೂ ಹೊಡೆತ ಬೀಳಲಿದೆ ಎಂಬ ಆತಂಕ ವ್ಯಕ್ತಪಡಿಸಿವೆ. ಸಮಾಜದ ಎಲ್ಲ ಚಟುವಟಿಕೆಗಳಲ್ಲಿ ಚೈತನ್ಯ ತುಂಬಿ, ಕೌಟುಂಬಿಕ ಮತ್ತು ಆರ್ಥಿಕವಾಗಿ ನೆಮ್ಮದಿ ತರುವಲ್ಲಿ ಸಾರ್ವಜನಿಕ ಗಣೇಶೋತ್ಸವ ಮಹತ್ವದ ಪಾತ್ರವಹಿಸುತ್ತದೆ. ಗಣೇಶ ವಿಗ್ರಹಗಳನ್ನು ತಯಾರಿ ಸುವ ಕಲಾವಿದರು, ಕಲಾ ತಂಡಗಳು ವರ್ಷಪೂರ್ತಿ ಜೀವನಕ್ಕೆ ಬೇಕಾದಷ್ಟು ಸಂಪಾದನೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ. ಕಾರ್ಪೆಂಟರ್, ಪೇಂಟರ್, ಹೋಟೆಲ್-ವಸತಿ ಗೃಹಗಳು, ಸಾರಿಗೆ, ಡೆಕೋರೇಷನ್, ಶಾಮಿಯಾನ, ಹೂ ಮಾರಾಟಗಾರರು, ಅಲಂಕಾರಿಕ ವಸ್ತುಗಳ ಭರಾಟೆಯಿರುತ್ತದೆ.
ಇದಲ್ಲದೆ ದಾಸೋಹ, ಸಾಂಸ್ಕೃತಿಕ, ಸೇವಾ ಕಾರ್ಯಕ್ರಮದಂತಹ ಹತ್ತು-ಹಲವು ಚಟುವಟಿಕೆಗಳ ಕಾರಣ ಜೀವನೋತ್ಸಾಹ ಹಾಗೂ ಮಾನಸಿಕ ಆರೋಗ್ಯ ಹೆಚ್ಚಿಸುತ್ತದೆ. ದುಡಿಯುವ ವರ್ಗಗಳಿಗೆ ಅನುಕೂಲ ಜತೆಗೆ ಹಣ ಪ್ರಸರಣದಿಂದ ತೆರಿಗೆ ರೂಪದಲ್ಲಿ ಸರ್ಕಾರದ ಖಜಾನೆ ತುಂಬುತ್ತದೆ ಎಂದು ಸಮಿತಿಗಳು ತಮ್ಮ ನಿಲುವು ಸಮರ್ಥಿಸಿಕೊಂಡಿವೆ.
ಶಾಸಕರ ಒತ್ತಾಸೆ:ಕರೊನಾ ಮೊದಲ ಮತ್ತು ಎರಡನೇ ಅಲೆ ಉಪಟಳವಿದ್ದಾಗ್ಯೂ ಸಾರ್ವಜನಿಕ ಸ್ಥಳಗಳಲ್ಲಿ ಸಣ್ಣ ಪ್ರಮಾಣದ ಚಪ್ಪರ ಹಾಕಿ ವಿಘ್ನೇಶ್ವರನ ಆರಾಧನೆ ನಿರ್ವಿಘ್ನವಾಗಿ ನೆರವೇರಿಸಲು ಅವಕಾಶ ನೀಡಲಾಗಿತ್ತು. ಸೋಂಕು ಪ್ರಮಾಣ ತಗ್ಗಿರುವ ಕಾರಣ ಈ ಬಾರಿಯೂ ಹಿಂದಿನಂತೆ ವಿನಾಯಿತಿ ನೀಡಬೇಕೆಂಬ ಆಗ್ರಹಕ್ಕೆ ಆಡಳಿತ ಪಕ್ಷದ ಅನೇಕ ಶಾಸಕರು ಒತ್ತಾಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕರೊನಾ ನಿಯಂತ್ರಣ ಕಾರಣದಿಂದ ಸಾರ್ವಜನಿಕ ಗಣೇಶ ಹಬ್ಬ ನಿಷೇಧಿಸಿದ ಸರ್ಕಾರದ ಕ್ರಮಕ್ಕೆ ಸ್ವಪಕ್ಷದ ಶಾಸಕರು, ಪರಿವಾರದ ಸಂಘಟನೆಗಳಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಸಾರ್ವಜನಿಕರು, ಭಕ್ತರ ಭಾವನೆಗಳ ವಿರೋಧಿ ನಿಲುವು ಸಹಿಸುವುದಿಲ್ಲ. ಸಾರ್ವಜನಿಕ ಗಣೇಶ ಆಚರಿಸಿಯೇ ತೀರುತ್ತೇವೆ ಎಂದು ಕೆಲವರು ಸರ್ಕಾರಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಧ್ವನಿ ಎತ್ತಿದ್ದಾರೆ. ಸಂಘ-ಪರಿವಾರದ ಮುಖಂಡರೂ ಸಾರ್ವಜನಿಕ ಆಚರಣೆ ನಿಷೇಧಿಸಿರುವ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದೆಲ್ಲೆಡೆ ಸಾವಿರಾರು ಸಂಖ್ಯೆಯಲ್ಲಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ವಿವಿಧ ಸಂಘಟನೆಗಳ ಮೂಲಕ ಸಚಿವರು, ಶಾಸಕರ ದುಂಬಾಲು ಬಿದ್ದಿವೆ.
ಕೋವಿಡ್ ಪರಿಸ್ಥಿತಿ ನೋಡಿಕೊಂಡು ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದು ಕೊಳ್ಳಬೇಕು. ಬೇರೆ ಬೇರೆ ಕಾರ್ಯಕ್ರಮ ಗಳಿಗೆ ಸರ್ಕಾರ ಎಸ್​ಒಪಿ ಮಾಡಿದೆ. ಅದೇ ಮಾದರಿ ಅನುಸರಿಸುವುದು ಒಳ್ಳೆಯದು. ಕೋವಿಡ್ ಜಾಸ್ತಿ ಇರುವ ಜಿಲ್ಲೆಗಳಲ್ಲಿ ಕೆಲವೊಂದು ನಿರ್ಬಂಧ ವಿಧಿಸಿ, ಸೋಂಕು ಕಡಿಮೆ ಇರುವ ಕಡೆ ಅವಕಾಶ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವುದು ಒಳ್ಳೆಯದು.
|ಸಿ.ಟಿ. ರವಿರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ
ಸಾರ್ವಜನಿಕ ಗಣೇಶೋತ್ಸವಕ್ಕೆ ದೊಡ್ಡ ಇತಿಹಾಸವಿದೆ. ನಿಯಮ ರೂಪಿಸಿ ಆಚರಣೆಗೆ ಅವಕಾಶ ನೀಡುವುದು ಸೂಕ್ತ. ಇನ್ನೂ ಎಷ್ಟು ವರ್ಷ ಹೀಗೆ ನಿಯಂತ್ರಿಸುತ್ತೀರಿ? ಜನರು ಕೂಡ ಮುನ್ನೆಚ್ಚರಿಕೆ ನಿಯಮ ಪಾಲಿಸಿ ಸೋಂಕು ಹತೋಟಿಗೆ ಸಹಕರಿಸಬೇಕು.
|ರಾಮಲಿಂಗಾರೆಡ್ಡಿಕೆಪಿಸಿಸಿ ಕಾರ್ಯಾಧ್ಯಕ್ಷ.
ಯಾರನ್ನೋ ಓಲೈಸಲು ಜನರು ಸೇರುವುದಕ್ಕೆ ಅವಕಾಶ ನೀಡಬಾರದು. ಈಗಾಗಲೇ ಮಾರುಕಟ್ಟೆಗಳಲ್ಲಿ ಜನರು ಸೇರುವ ರೀತಿ ನೋಡಿದ್ದೇವೆ. ಜನರ ಆರೋಗ್ಯ, ಮಾರ್ಗಸೂಚಿ ಪಾಲನೆ ದೃಷ್ಟಿಯಿಂದ ಗಣೇಶ ಹಬ್ಬದ ರಿಯಾಯಿತಿ ಮನವಿಗಳನ್ನು ರಾಜ್ಯ ಸರ್ಕಾರ ಪುರಸ್ಕರಿಸಬಾರದು.
|ಎಚ್.ಕೆ.ಕುಮಾರಸ್ವಾಮಿಜೆಡಿಎಸ್ ರಾಜ್ಯಾಧ್ಯಕ್ಷ
ಕರೊನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸಾರ್ವಜನಿಕ ಪೆಂಡಾಲುಗಳಲ್ಲಿ ಗಣೇಶೋತ್ಸವ ಆಚರಣೆಗೆ ಕಳೆದ ವರ್ಷ ಅವಕಾಶ ನೀಡಲಾಗಿತ್ತು. ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ, ಪರಂಪರಾಗತ ಗಣೇಶನ ಉತ್ಸವಕ್ಕೆ ಸಾರ್ವಜನಿಕ ಪೆಂಡಾಲುಗಳಲ್ಲಿ ನಿಯಮಬದ್ಧವಾಗಿ ಆಚರಿಸಲು ಈ ವರ್ಷವೂ ಮುಕ್ತ ಅವಕಾಶ ನೀಡಬೇಕು.
|ಕೇಶವ ಹೆಗಡೆಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, ವಿಶ್ವ ಹಿಂದು ಪರಿಷದ್
ಕಳೆದ ಎರಡು ವರ್ಷಗಳಂತೆಯೇ ಈ ಬಾರಿಯೂ ಸರಳವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕು. ಇದೇ ನಿರೀಕ್ಷೆಯಲ್ಲಿ ಉತ್ಸವ ಸಮಿತಿಗಳು ತಯಾರಿ ಮಾಡಿಕೊಂಡಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ನಿಯಮಗಳನ್ನು ಪಾಲಿಸುವೆವು.
|ಅಮರೇಶ ಹಿಪ್ಪರಗಿಕಾರ್ಯದರ್ಶಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಹುಬ್ಬಳ್ಳಿ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × two =
Remember me
