| ಮಂಡಗದ್ದೆ ಪ್ರಕಾಶ್​ಬಾಬು ಕೆ.ಆರ್.
ಮೈಸೂರು ನಗರವನ್ನು ಚಾಮುಂಡಾಂಬೆಯ ಕೃಪಾವರ್ಷದಲ್ಲಿ ನಿತ್ಯ ನಿರಂತರ ಮಿಂದು ಮಿನುಗುತ್ತಿರುವ ಯದುವಂಶದ ನೆನಪಿನ ಊರೆಂದು ಕರೆದರೆ ತಪ್ಪಿಲ್ಲ. ಏಕೆಂದರೆ ಚಾಮುಂಡಿ ಬೆಟ್ಟಕ್ಕೂ ಮೈಸೂರಿಗೂ ಮಾಂತ್ರಿಕ ಸದೃಶ ಸಂಬಂಧವಿದೆ. ಪ್ರಸ್ತುತ ಈ ನಗರ ಚಾಮುಂಡೇಶ್ವರಿಯ ಪ್ರಭಾವದಿಂದ ನಿತ್ಯವೂ ಬೆಳಗುತ್ತಿದೆ. ಯಾರು ಚಾಮುಂಡೇಶ್ವರಿ? ದುರ್ಗಾ ಸಪ್ತಷತಿ ಅಥವಾ ದೇವಿ ಭಾಗವತದ ಉಲ್ಲೇಖದಂತೆ ಈಕೆ ಶತಮಾನಗಳ ಆರಾಧನಾ ಪರಂಪರೆಯನ್ನು ಹೊಂದಿರುವ ಸಪ್ತಮಾತೃಕೆಯಲ್ಲಿ ಒಬ್ಬಳು.
ಸ್ತುತಿ ಸ್ತೋತ್ರಗಳಲ್ಲಿ ಈ ಚಾಮುಂಡೇಶ್ವರಿಯನ್ನು ದುರ್ಗಾ, ಪರಾಶಕ್ತಿ, ಮಹಿಷಾಸುರ ಮರ್ಧಿನಿ ಎಂದು ಕೊಂಡಾಡಿದೆ. ಮಹಿಷಾಸುರ, ಭಂಡಾಸುರ, ಶುಂಭ ನಿಶುಂಭರಂಥ ರಾಕ್ಷಸರ ನಿರ್ನಾಮ ಕಾರ್ಯಕ್ಕಾಗಿ ದೇವತೆಗಳು, ಋಷಿಗಳು ತಳಮಳದ ಚಿದಗ್ನಿಕುಂಡದಿಂದ ಉದ್ಭವಿಸಿದವಳು ಇವಳು. ತಾಮಸ ಶಕ್ತಿಗಳ ದಮನಕ್ಕೆ ತಾಮಸ್ವರೂಪದ ದಮನ ಕಾರ್ಯದಲ್ಲಿ ಮದ್ದೆಂದು ಲೋಕಕ್ಕೆ ತೋರಿಸಿಕೊಟ್ಟವಳು.
ಶಿವನ ಶಕ್ತಿ ಮತ್ತು ಹೃದಯೇಶ್ವರಿ ಪಾರ್ವತಿ. ಈ ಪಾರ್ವತಿ ದೇವಿಯು ಅಸಂಖ್ಯಾತ ನಾಮಗಳಿಂದ ಪೂಜಿಸಲ್ಪಡುವಳು. ಇವಳು ಅನೇಕ ಹೆಸರುಗಳಿಂದ ಕೂಡಿರುವಳು. ಹೈಮವತಿ, ಗಿರಿಜೆ, ದಾಕ್ಷಾಯಣಿ, ಮೃಡಾನಿ, ರುದ್ರಾಣಿ, ಶರ್ವಾಣಿ ಹಾಗೂ ಚಾಮುಂಡೇಶ್ವರಿ. ಪುರಾಣಗಳ ಅನುಸಾರ ದೇವಿಯ ಮೊಟ್ಟಮೊದಲ ಅವತಾರ ದಕ್ಷಪ್ರಜಾಪತಿಯ ಮತ್ತು ಪ್ರಸೂತಿಯ ಮಗಳಾಗಿ ದಾಕ್ಷಾಯಣಿಯಾಗಿ ಇವಳು ಮಹಾಶಿವನನ್ನು ವರಿಸುತ್ತಾಳೆ. ಒಂದು ಸಾರಿ ದಕ್ಷನು ಮಹಾ ಯಾಗವನ್ನು ಕೈಗೊಂಡಾಗ ಶಿವನನ್ನು ಆಮಂತ್ರಿಸಲಿಲ್ಲ. ದಾಕ್ಷಾಯಣಿಯು ಶಿವನ ಬುದ್ಧಿವಾದವನ್ನು ಅಲಕ್ಷಿಸಿ ಆಮಂತ್ರಣವಿಲ್ಲದಿದ್ದರೂ ದಕ್ಷಯಜ್ಞಕ್ಕೆ ಹೋದಳು. ದಕ್ಷನ ಉಪೇಕ್ಷೆಯಿಂದ, ಶಿವನಿಂದೆಯಿಂದ ಕುಪಿತಳಾಗಿ ಯೋಗಾಗ್ನಿಯಿಂದ ತನ್ನನ್ನು ತಾನೇ ದಹಿಸಿಕೊಂಡಳು. ಮತ್ತೆ ದೇವಿಯು ಪುನರ್ಜನ್ಮ ಪಡೆದು ಹಿಮವಂತನ ಮತ್ತು ಮೇನಾದೇವಿಯ ಪುತ್ರಿಯಾಗಿ ‘ಪಾರ್ವತಿ’ ಎಂಬ ನಾಮದಿಂದ ಕರೆಯಲ್ಪಟ್ಟಳು. ಕಠೋರ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡು ಪುನಃ ಅವನ ಪತ್ನಿಯಾದಳು.
ಮಹಿಷಾಸುರ ಮರ್ದಿನಿ:ಮಹಿಷಾಸುರ ಎಂಬ ರಕ್ಕಸನು ದೇವತೆಗಳಿಗೆ ತೊಂದರೆಯನ್ನು ಕೊಡುತ್ತಿದ್ದನು. ದೇವತೆಗಳೆಲ್ಲಾ ದೇವಿಗೆ ಮೊರೆಹೋದರು. ಈ ದಾನವನಿಂದ ದೇವತೆಗಳೆಲ್ಲರಿಂದ ಕಿರುಕುಳ, ಅನ್ಯಾಯಗಳನ್ನು ಕೇಳಿ, ದೇವತ್ರಯರಾದ ಬ್ರಹ್ಮ ವಿಷ್ಣು ಹಾಗೂ ಮಹೇಶ್ವರರು ಕುಪಿತರಾದರು. ಅವರ ಕ್ರೋಧದಿಂದ ಹೊರಬಿದ್ದ ತೇಜಸ್ಸು ಹಾಗೂ ಇತರ ದೇವತೆಗಳ ತೇಜಸ್ಸಿನಿಂದ ಒಡಗೂಡಿ ದೇವಿ ರೂಪವನ್ನು ತಾಳಿ ಎಲ್ಲ ದೇವತೆಗಳ ಶಕ್ತಿಯಿಂದ ದೇವಿಯ ಅವಯವಗಳು ಮೂಡಿದವು ಹಾಗೂ ಆಯುಧಗಳು ದೇವಿಯ ಕೈ ಸೇರಿದವು. ದೇವಿಯು ಘೊರ ಶಸ್ತ್ರಾಸ್ತ್ರಗಳಿಂದ ಕೂಡಿ ಸಿಂಹವನ್ನೇರಿ ಮಹಿಷಾಸುರರನ್ನು ಸಂಹರಿಸಿ ಹಾಗೂ ಅವನ ಸೈನ್ಯವನ್ನು ಸಹ ನಾಶ ಮಾಡಿದಳು. ಮಹಿಷಾಸುರನ್ಕನ್ನು ಸಂಹರಿಸಿದ್ದರಿಂದ ದೇವಿಯು ‘ಮಹಿಷಾಸುರ ಮರ್ದಿನಿ’ಯಾದಳು. ಮೈಸೂರಿನ ಚಾಮುಂಡಿ ದೇವಾಲಯಕ್ಕೆ ಹೋದಾಗ ಬೃಹತ್ತಾದ ಮಹಿಷಾಸುರನ ವಿಗ್ರಹವನ್ನು ನೋಡಬಹುದು.
ಚಂಡಮುಂಡರ ಸಂಹಾರ:ಚಂಡ ಮತ್ತು ಮುಂಡ ಎಂಬ ರಾಕ್ಷಸರು ಅಣ್ಣತಮ್ಮಂದಿರು. ಇವರೂ ದೇವತೆಗಳಿಗೆ ತೊಂದರೆಯನ್ನು ಕೊಡುತ್ತಿದ್ದರು. ದೇವತೆಗಳು ಬೇರೆ ದಾರಿಕಾಣದೆ ದೇವಿಯನ್ನು ಪ್ರಾರ್ಥಿಸಿದರು. ಆಗ ದೇವಿಯು ಪ್ರತ್ಯಕ್ಷಳಾಗಿ ಚಂಡಮುಂಡರೊಡನೆ ಸಾವಿರಾರು ವರ್ಷಗಳವರೆಗೆ ಯುದ್ಧವನ್ನು ಮಾಡಿ ಅವರಿಬ್ಬರನ್ನು ಕಾಳಿಯರೂಪ ಧರಿಸಿ ಸಂಹರಿಸಿದಳು. ಚಂಡನನ್ನು ಸಂಹಾರ ಮಾಡಿದ್ದರಿಂದ ದೇವಿಗೆ ‘ಚಂಡಿ’ ಎಂಬ ಹೆಸರಾಯಿತು. ಚಂಡಮುಂಡರಿಬ್ಬರನ್ನು ಸಂಹರಿಸಿದ್ದರಿಂದ ದೇವಿಯು ‘ಚಾಮುಂಡಿ’ ಎಂಬ ಹೆಸರು ಪಡೆದು ವಿಶ್ವದಲ್ಲಿ ಖ್ಯಾತಳಾದಳು. ನಂತರ ಮೈಸೂರಿನ ಒಂದು ಬೆಟ್ಟದಲ್ಲಿ ನೆಲೆಸಿದಳು. ಇವಳೇ ‘ಚಾಮುಂಡೇಶ್ವರಿ ದೇವಿ’ಯಾಗಿ ಎಲ್ಲ ಭಕ್ತರ ಕಷ್ಟಗಳನ್ನು ನೆರವೇರಿಸುತ್ತ ಬಂದಿರುವಳು. ಮೈಸೂರಿನ ರಾಜಮನೆತನದವರಿಗೆ ಮನೆದೇವರಾಗಿ ಅವರ ಇಷ್ಟಾರ್ಥವನ್ನು ಪೂರೈಸುತ್ತಾ ಬಂದಿರುವಳು.
ಮೈಸೂರಿನ ಚಾಮುಂಡೇಶ್ವರಿ ದೇವಿಯ ವರ್ಧಂತಿಯು ಪ್ರತಿವರ್ಷ ಆಷಾಢಮಾಸದ ರೇವತಿ ನಕ್ಷತ್ರದ ದಿನ ಬರುವುದು. ಅಂದು ದೇವಿಗೆ ವಿಶೇಷ ಪೂಜೆ, ಅಲಂಕಾರ, ಅಷ್ಟವಧನ ಸೇವೆ ನಡೆಯುವುದು. ಈ ಸಮಯದಲ್ಲಿ ನಾಡಿನ ಭಕ್ತರಲ್ಲದೆ ಹೊರ ರಾಜ್ಯಗಳಿಂದಲೂ ಬಂದು ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ. ಈ ಬಾರಿ ಶ್ರೀ ಚಾಮುಂಡೇಶ್ವರಿ ವರ್ಧಂತಿಯು ಜುಲೈ 10ರಂದು ಅದ್ಧೂರಿಯಿಂದ ನಡೆಯುವುದು. ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ದೇವಿ ಉತ್ಸವ ಮೂರ್ತಿಯನ್ನು ಆಷಾಢ ಮಾಸದಲ್ಲಿ ಸ್ಥಾಪಿಸಿದ್ದರಿಂದ ಆ ದಿನವನ್ನು ‘ಶ್ರೀಚಾಮುಂಡೇಶ್ವರಿ ವರ್ಧಂತಿ’ ಎಂದು ಆಚರಿಸಲು ಪ್ರಾರಂಭಿಸಲಾಯಿತು.
(ಲೇಖಕರು ಆಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)
ಹಿಂದೂಗಳು ಪೂಜೆ ಮಾಡಲು ಪೊಲೀಸ್​-ಬಿಬಿಎಂಪಿ ಅನುಮತಿ ಬೇಕೇ?: ವಿವಾದ ಸೃಷ್ಟಿಸಿದ್ದ ಪೊಲೀಸರ ನೋಟಿಸ್​​​ಗೆ ಯತ್ನಾಳ್​ ಪ್ರಶ್ನೆ

ಕೈಗೆಟುಕದ ಟೊಮ್ಯಾಟೋಗೆ ಹುಣಸೆ ಪರ್ಯಾಯ: ಆರೋಗ್ಯ ವೃದ್ಧಿ, ತ್ವಚೆಯ ಸೌಂದರ್ಯಕ್ಕೂ ಹುಣಸೆ ಸೂಕ್ತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 2 =
Remember me
