ಬೆಂಗಳೂರು:ಮೊಟ್ಟೆ, ನಾಟಿಕೋಳಿ ಚರ್ಚೆಯ ಬೆನ್ನಲ್ಲೇ, ‘ಕಮಿಷನ್’ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಇದು ಆಡಳಿತ ಯಂತ್ರದ ವರ್ಚಸ್ಸಿಗೆ ಕಳಂಕ ಮೆತ್ತುವ ಯತ್ನ ಎಂದು ಕಿಡಿಕಾರಿರುವ ರಾಜ್ಯ ಸರ್ಕಾರ, ದಾಖಲೆಸಹಿತ ತಿರುಗೇಟು ನೀಡಿದೆ.
ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಗುತ್ತಿಗೆದಾರರು 40 ಪರ್ಸೆಂಟ್ ಕಮಿಷನ್ ಆರೋಪವನ್ನು ಪುನರುಚ್ಚರಿಸಿದರು. ಇದಕ್ಕೆ ಸರ್ಕಾರ ತೀಕ್ಷ್ಣ ಉತ್ತರ ನೀಡಿದ್ದು, ಆರೋಪ ಮಾಡುವ ಬದಲು ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ಸವಾಲು ಹಾಕಿದೆ. ಹಾಗೆಯೇ ಈ ಹಿಂದೆ ಆರೋಪ ಮಾಡಿದ ಬಳಿಕ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಜನರ ಮುಂದಿಟ್ಟು, ಸರ್ಕಾರ ಪಾರದರ್ಶಕವಾಗಿದೆ ಎಂದು ಸಾರಲು ಪ್ರಯತ್ನಿಸಿದೆ. ಇದೇ ವೇಳೆ, ಕೆಲ ಸಚಿವರು ಆರೋಪ ಮಾಡಿದವರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸುವ ಎಚ್ಚರಿಕೆ ನೀಡಿದ್ದು, ಕಾನೂನು ತಜ್ಞರ ಜತೆಗೆ ಸಮಾಲೋಚನೆಯನ್ನೂ ಮಾಡಿದ್ದಾರೆ.
ಈ ವಿಷಯದ ಮೊದಲ ಚರಣದಲ್ಲಿ ಸರ್ಕಾರ ದೋಷವನ್ನು ಮೈಮೇಲೆ ಎಳೆದು ಕೊಂಡಂತೆ ವರ್ತಿಸಿದ್ದರಿಂದ ಪಕ್ಷದ ವರಿಷ್ಠರ ಕೆಂಗಣ್ಣಿಗೂ ಗುರಿಯಾಗಿತ್ತು. ಮೊದಲ ತಪ್ಪಿನಿಂದ ಪಾಠ ಕಲಿತ ಸರ್ಕಾರ ಪುನರಾವರ್ತನೆಯಾಗಿರುವ 40 ಪರ್ಸೆಂಟ್ ಆರೋಪಕ್ಕೆ ತಿರುಗೇಟು ನೀಡಿ, ಆಧಾರಸಹಿತ ಗುತ್ತಿಗೆದಾರರ ಸಂಘಕ್ಕೆ ಮತ್ತು ತೆರೆಮರೆಯ ಸೂತ್ರಧಾರರಿಗೆ ಬಿಸಿಮುಟ್ಟಿಸುವ ಉತ್ತರ ನೀಡಿದೆ.
ದಾಖಲೆ ಬಿಡುಗಡೆ:ಗುತ್ತಿಗೆದಾರರ ಸಂಘದ ಸಭೆ ಕರೆದು ಅಲ್ಲಿ ಚರ್ಚೆ ನಡೆಸಿದಂತೆ ಕಾರ್ಯಸಾಧುವಾದ ಕ್ರಮಗಳನ್ನು ಕೈಗೊಳ್ಳಲು ನಿರ್ಣಯ ಮಾಡಿ, ಆ ಪ್ರಕಾರ ಮೇ 11 ರಂದು ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಪ್ರಮುಖವಾಗಿ ಲೋಕೋಪಯೋಗಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮತ್ತು ಬಿಲ್​ಗಳ ಪಾವತಿಗೆ ಸಂಬಂಧಿಸಿದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೇ ಪಾರದರ್ಶಕ ಟೆಂಡರ್ ಪ್ರಕ್ರಿಯೆ ಮತ್ತು ಕಾಮಗಾರಿಗಳ ಅನುಷ್ಠಾನ, ಬಿಲ್​ಗಳ ಜ್ಯೇಷ್ಠತೆಯನುಸಾರ ಪಾವತಿಸಲು ತಂತ್ರಾಂಶ ಒಳಗೊಂಡ ವ್ಯವಸ್ಥೆಯೂ ರೂಪುಗೊಳ್ಳುತ್ತಿದೆ. ಈ ನಡುವೆ ಗುತ್ತಿಗೆದಾರರು ಸಿದ್ದರಾಮಯ್ಯ ನಿವಾಸಕ್ಕೆ ಬುಧವಾರ ಭೇಟಿ ಕೊಟ್ಟು ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಮತ್ತೆ ಚರ್ಚೆ ಮಾಡಿ ಕೆಲ ಮಾಹಿತಿ ಕೊಟ್ಟಿದ್ದಾರೆ.
ಪಿಎಂಗೆ ಮತ್ತೆ ಪತ್ರ:ದೇಶಕ್ಕೆ ಭ್ರಷ್ಟಾಚಾರ ಮಾರಕ ಶತ್ರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮಾತನ್ನೇ ಉಲ್ಲೇಖಿಸಿ ಅಭಿನಂದನೆ ಪತ್ರ ಬರೆಯುತ್ತಿದ್ದೇವೆ, ಒಂದೂವರೆ ವರ್ಷವಾದರೂ ಗುತ್ತಿಗೆದಾರರು ನೀಡಿರುವ ದೂರಿಗೆ ಯಾವ ಕ್ರಮಕೈಗೊಂಡಿದ್ದೀರಿ ಎಂಬುದನ್ನೂ ಪ್ರಶ್ನಿಸಲಿದ್ದೇವೆ ಎಂದು ಕೆಂಪಣ್ಣ ಹೇಳಿದ್ದಾರೆ. ಕೆಲವು ಕಡೆ ಶೇ.100 ಭ್ರಷ್ಟಾಚಾರ ಇದೆ. ಕೆಲವು ಕಡೆ ಒಂದು ಪೈಸೆ ಕೆಲಸ ಮಾಡದೇ 100 ಪರ್ಸೆಂಟ್ ತಿಂದಿಲ್ಲವೇ? ಎಂದು ಪ್ರಶ್ನಿಸಿದ ಕೆಂಪಣ್ಣ, ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. ಟೆಂಡರ್ ಪ್ರಕ್ರಿಯೆ ಬದಲಾಯಿಸಲು ಸಿಎಂ ಹೇಳಿದ್ದರು. ಆದರೆ, ಅಧಿಕಾರಿಗಳು ಸಿಎಂ ಮಾತೇ ಕೇಳುತ್ತಿಲ್ಲ. ಪಿಡಬ್ಲುಡಿ ಹಾಗೂ ಇತರ ಸಚಿವರು ನಮ್ಮ ಸಂಘಟನೆ ಒಡೆಯಲು ಪ್ರಯತ್ನ ಮಾಡಿದ್ದರು ಎಂದು ದೂರಿದರು.
ನ್ಯಾಯಾಂಗ ತನಿಖೆಗೆ ಆಗ್ರಹ:ಈ ಪ್ರಕರಣದಲ್ಲಿ ನಾವು ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಡ ಹಾಕುತ್ತೇವೆ. ಸರ್ಕಾರ ಸಮ್ಮತಿಸದಿದ್ದರೆ ಈ ವಿಚಾರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸರ್ಕಾರ ಯಾವ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳುತ್ತಿದೆ. ಭ್ರಷ್ಟಾಚಾರ ಸಾಬೀತಾಗದಿದ್ದರೆ ನಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಗುತ್ತಿಗೆದಾರರ ಸಂಘದವರು ಹೇಳುತ್ತಿದ್ದಾರೆ. ಹಾಗಾದರೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಇರುವ ಸಮಸ್ಯೆಯೇನು? ಎಂದರು.
ಗುತ್ತಿಗೆದಾರರು ಮುನಿರತ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ, ಇದರ ಜತೆಗೆ ನೀರಾವರಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ, ಬೆಂಗಳೂರು ನಗರಾ ಭಿವೃದ್ಧಿ ಇಲಾಖೆಗಳಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯು ತ್ತಿದೆ ಎಂದು ಹೇಳಿದ್ದಾರೆ.
|ಸಿದ್ದರಾಮಯ್ಯವಿಪಕ್ಷ ನಾಯಕ
ಗುತ್ತಿಗೆದಾರರ ಅಹವಾಲು ಆಲಿಸಿ ಸಕಾರಾತ್ಮಕವಾಗಿ ಸಿಎಂ ಸ್ಪಂದಿಸಿದ್ದಾರೆ. ಗುತ್ತಿಗೆದಾರರ ಆರೋಪದ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್ ಕೆಂಪಣ್ಣರನ್ನು ಬಲಿಪಶು ಮಾಡುತ್ತಿದೆ.
|ಕೆ.ಸುಧಾಕರ್ಆರೋಗ್ಯ ಸಚಿವ
ಇದೆಲ್ಲ ಸಿದ್ದರಾಮಯ್ಯ ಮಾರ್ಗದರ್ಶನದಂತೆ ನಡೆಯುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಗಾಳಿಯಲ್ಲಿ ಗುಂಡು ಹೊಡೆಯೋದೆ ಆಗಿದೆ. ಆರೋಪ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕಾಗಿ ವಕೀಲರ ಜತೆ ಚರ್ಚೆ ಮಾಡಿದ್ದೇನೆ.
|ಮುನಿರತ್ನತೋಟಗಾರಿಕೆ ಸಚಿವ
ಗುತ್ತಿಗೆದಾರ ಕೆಂಪಣ್ಣ ಮಾಡಿರುವ ಆರೋಪ ಆಧಾರರಹಿತವಾಗಿದ್ದು, ಅದಕ್ಕೆ ಮಹತ್ವ ಕೊಡಬೇಕಿಲ್ಲ, ಪ್ರತಿನಿತ್ಯ ಸಾವಿರಾರು ಪತ್ರಗಳು ಪ್ರಧಾನಿ ಕಚೇರಿಗೆ ಹೋಗುತ್ತವೆ. ಕರಿಯಣ್ಣ, ಬಿಳಿಯಣ್ಣ ಎಲ್ಲರ ಪತ್ರವೂ ಹೋಗುತ್ತದೆ. ಕೆಂಪಣ್ಣನ ಪತ್ರವೂ ಹೋಗಲಿ.
|ಎನ್. ರವಿಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
1. ಲೋಕೋಪಯೋಗಿ ಇಲಾಖೆ ಸಂಹಿತೆ, ಜ್ಯೇಷ್ಠತೆ ಆಧಾರದಲ್ಲಿ ಗುತ್ತಿಗೆದಾರರ ಬಿಲ್​ಗಳ ಪಾವತಿ ಕಡ್ಡಾಯ.
2. ಟೆಂಡರ್ ಮತ್ತು ಅಂದಾಜುಗಳ ಪೂರ್ವ ಪರಿಶೀಲನೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪರಿಣಿತರನ್ನೊಳಗೊಂಡ ಸಮಿತಿ ರಚನೆ.
3. ವಿವಿಧ ನೀರಾವರಿ ನಿಗಮಗಳಡಿ ಒಟ್ಟಾರೆ ಸಣ್ಣ ಗುತ್ತಿಗೆದಾರರಿಗೆ (28.07.2021 ಪ್ರಕಾರ) 940 ಕೋಟಿ ರೂ. ಮೊತ್ತದ 3,700 ಬಿಲ್ ಬಾಕಿ ಇತ್ತು, 31.03.2022ರ ವರೆಗೆ ಸಣ್ಣ ಗುತ್ತಿಗೆದಾರರ 1,940 ಕೋಟಿ ರೂ. ಮೊತ್ತದ 9,800 ಬಿಲ್ ಪಾವತಿ.
4. ಟೆಂಡರ್ ಮತ್ತು ಅಂದಾಜು ಪರಿಶೀಲನೆಗೆ ನಿವೃತ್ತ ಕಾರ್ಯದರ್ಶಿ ಮತ್ತು ತಾಂತ್ರಿಕ ನಿಪುಣರು, ಆರ್ಥಿಕ ಇಲಾಖೆ ಸದಸ್ಯರನ್ನೊಳಗೊಂಡ ತಾಂತ್ರಿಕ ಪರಿಶೀಲನಾ ಸಮಿತಿ ರಚನೆ.
5. ತಾಲೂಕುಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಪ್ಯಾಕೇಜ್ ಮೊತ್ತ ಗರಿಷ್ಠ 100 ಲಕ್ಷ ರೂ.ಗೆ ಸೀಮಿತ.
6. ಪಾರದರ್ಶಕ ಅಧಿನಿಯಮದ ಪ್ರಕಾರ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಪ್ರಾಧಿಕಾರ ರಚಿಸಿ ಆಯಾ ಸಂಗ್ರಹಣೆಗಳ ಟೆಂಡರ್​ಗೆ ಕ್ರಮ
7. ಟೆಂಡರ್ ಪ್ರಕ್ರಿಯೆಗೆ ನಿಗದಿತ ಷರತ್ತುಗಳ ಪೈಕಿ ಒಂದಕ್ಕೆ ವಿನಾಯಿತಿ ನೀಡಿ, 300 ಲಕ್ಷ ರೂ.ವರೆಗಿನ ಕಾಮಗಾರಿಗೆ ಸೀಮಿತವಾಗಿ ಪರಿಷ್ಕರಿಸಲಾಗಿದೆ.
8. ಟೆಂಡರ್ ಪ್ರಕ್ರಿಯೆಯನ್ನು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಲ್ಲಿನ ಅವಕಾಶಗಳ ಅನ್ವಯ ಕೈಗೊಳ್ಳುವುದು.
9. ಟೆಂಡರ್ ಪ್ರಕ್ರಿಯೆ, ಕಾಮಗಾರಿ ಅನುಷ್ಠಾನ ಹಾಗೂ ಬಿಲ್​ಗಳ ಜ್ಯೇಷ್ಠತೆಯ ಅನುಸಾರ ಪಾವತಿಗೆ ತಂತ್ರಾಂಶ ಒಳಗೊಂಡ ವ್ಯವಸ್ಥೆ.
10. ಜಲಸಂಪನ್ಮೂಲ ಇಲಾಖೆಯಡಿ 50 ಕೋಟಿ ರೂ. ಮೇಲ್ಪಟ್ಟ ಟೆಂಡರ್ ಮತ್ತು ಅಂದಾಜುಗಳ ಪೂರ್ವ ಪರಿಶೀಲನೆಗೆ ಸಮಿತಿ ರಚನೆ.
11. ಪ್ರಸ್ತುತ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ನಿವೃತ್ತ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ತಾಂತ್ರಿಕ ಪರಿಶೀಲನಾ ಸಮಿತಿ ಪುನರ್ ರಚಿಸಿ, ತೃತೀಯ ತಂಡದಿಂದ ಪರಿಶೋಧನೆ.
12. ಆರ್ಥಿಕ ಶಿಸ್ತು ತರುವ ಉದ್ದೇಶದಿಂದ ನಾಲ್ಕು ಅಂಶದ ಕಾರ್ಯಕ್ರಮ
ದಾಖಲೆ ಸಲ್ಲಿಸಲಿ:ಕೋಲಾರ ಉಸ್ತುವಾರಿ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಡಿ. ಕೆಂಪಣ್ಣ ದಾಖಲೆ ಜತೆಗೆ ಲೋಕಾಯುಕ್ತರಿಗೆ ದೂರು ನೀಡಲಿ. ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ. ಆರೋಪ ಮಾಡಿದ ಎಲ್ಲದಕ್ಕೂ ಸರ್ಕಾರ ಕ್ರಮ ಜರುಗಿಸಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪರಿಶೀಲಿಸಿದ್ದೇವೆ. ಇದನ್ನು ಬೇರೆ ಯಾವ ರಾಜ್ಯದಲ್ಲೂ ಮಾಡಿಲ್ಲ ಎಂದರು. ಪ್ರಧಾನಿಯವರಿಗೆ ಪತ್ರ ಬರೆಯುವ ಅವಕಾಶ ಎಲ್ಲರಿಗೂ ಇದೆ, ಏನಾದರೂ ತೊಂದರೆ ಇದ್ದರೆ ದೂರು ಕೊಡುವ ವ್ಯವಸ್ಥೆ ಇದೆ ಎಂದು ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಮಾತಿಗೂ ಬೆಲೆ ಇಲ್ಲ:ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು, ವಿಧಾನಸಭೆ ಅಧಿವೇಶನದಲ್ಲಿ ಕಮೀಷನ್ ವಿಷಯ ಪ್ರಸ್ತಾಪಿಸಬೇಕೆಂದು ಕೆಲ ಮಾಹಿತಿ ಹಂಚಿಕೊಂಡರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, 40 ಪರ್ಸೆಂಟ್ ಕಮಿಷನ್ ವಿರುದ್ಧ ಒಂದು ವರ್ಷ ಎರಡು ತಿಂಗಳಿಂದ ಹೋರಾಟ ಮಾಡುತ್ತಿದ್ದೇವೆ. ಸಿಎಂ ಕೊಟ್ಟ ಮಾತಿಗೂ ಬೆಲೆ ಇಲ್ಲದಂತಾಗಿದೆ ಎಂದು ಟೀಕಿಸಿದರು.ಇನ್ನೂ 22 ಸಾವಿರ ಕೋಟಿ ರೂ. ಬಿಲ್ ಪೆಂಡಿಂಗ್ ಇದೆ. ಕೆಲವು ಗುತ್ತಿಗೆದಾರರದ್ದು ಮೂರು ವರ್ಷಗಳಿಂದ ಬಾಕಿ ಇದೆ. ನನ್ನ ಜೀವನದಲ್ಲಿ ನೋಡಿದ ಅತ್ಯಂತ ಭ್ರಷ್ಟ ಸರ್ಕಾರವಿದು ಎಂದು ಆರೋಪಿಸಿದರು. ‘ಸಿದ್ದರಾಮಯ್ಯಗೆ ನಾವು ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಸದನದಲ್ಲಿ ಅದನ್ನು ಪ್ರಸ್ತಾಪಿಸುತ್ತೇನೆಂದು ಭರವಸೆ ನೀಡಿದ್ದಾರೆ. ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ಮಾತ್ರ ದಾಖಲೆ ಕೊಡುತ್ತೇವೆ. ದಾಖಲೆ ಬಹಿರಂಗಪಡಿಸಿದರೆ ಗುತ್ತಿಗೆದಾರರಿಗೆ ತೊಂದರೆ ಆಗುತ್ತದೆ ಎಂಬ ಭಯವಿದೆ’ ಎಂದರು.
ಕುಂದಾಪುರದ ಫ್ಲೈಓವರ್​ನಲ್ಲಿ ಕೈ ಇಟ್ಟಲ್ಲೆಲ್ಲ ಕರೆಂಟ್!; ವಿದ್ಯುತ್ ಸೋರಿಕೆ, ಸಂಪರ್ಕ ಕಡಿತಗೊಳಿಸಿದ ಮೆಸ್ಕಾಂ

ಸರ್ಕಾರದಿಂದ ಮತ್ತೊಂದು ಎಡವಟ್ಟು!; ಜೀವಂತ ಇರದವರಿಗೂ ಸದಸ್ಯ ಸ್ಥಾನ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 8 =
Remember me
