|ಮೃತ್ಯುಂಜಯ ಕಪಗಲ್ಬೆಂಗಳೂರು
ಕರೊನಾ ಕಂಟಕದಿಂದ ಜನರ ಜೀವ-ಜೀವನ ಉಳಿಸಲೆಂದು ಜಾರಿಗೊಳಿಸಿದ ಕಠಿಣ ನಿರ್ಬಂಧಗಳು ಮಕ್ಕಳ ಶಿಕ್ಷಣದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಸಕ್ತ ಶೈಕ್ಷಣಿಕ ವರ್ಷ (2021-22)ದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಆರರಿಂದ 14 ಹಾಗೂ 14ರಿಂದ 16ರ ವಯೋಮಿತಿಯ ಒಟ್ಟು 34,411 ಮಕ್ಕಳು ಶಾಲೆಗೆ ಅರ್ಧಕ್ಕೆ ಗುಡ್​ಬೈ ಹೇಳಿದ್ದಾರೆ.
ಸರ್ಕಾರದ ನಿರ್ದೇಶನ, ಇಲಾಖೆ ಉನ್ನತಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ, ಜಿಲ್ಲಾಮಟ್ಟದ ಅಧಿಕಾರಿಗಳ ಒತ್ತಡ ಶಿಕ್ಷಕರ ಶ್ರಮದಿಂದ ಶಾಲೆ ತೊರೆದವರ ಪೈಕಿ 15,552 ಮಕ್ಕಳನ್ನು ಮರಳಿ ಕರೆ ತರಲು ಸಾಧ್ಯವಾಗಿದೆ. ಶಾಲೆ ಅರ್ಧಕ್ಕೆ ಬಿಟ್ಟವರ ಪೈಕಿ 14 ರಿಂದ 16ರ ವಯೋಮಿತಿ ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸುವುದೇ ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿದೆ.
ಬರೆಯಿಟ್ಟ ಕರೊನಾ:ಡ್ರಾಪ್​ಔಟ್ ಬಿಕ್ಕಟ್ಟು ನಗರ-ಪಟ್ಟಣ, ಕೊಳಚೆ ಪ್ರದೇಶ, ಹಳ್ಳಿ-ಕುಗ್ರಾಮವೆನ್ನದೆ ಏಕರೂಪವಾಗಿ ಬಾಧಿಸುತ್ತಿದ್ದು, ಸಾಮಾಜಿಕ-ಆರ್ಥಿಕ ಸಮಸ್ಯೆ ತಳುಕು ಹಾಕಿಕೊಂಡಿದೆ. ಸರ್ಕಾರದ ಜಾಗೃತಿ ಆಂದೋಲನ, ಶಿಕ್ಷಣ ಮಹತ್ವದ ಕುರಿತು ಇಲಾಖೆ, ಶಿಕ್ಷಕರು, ಸಂಘ-ಸಂಸ್ಥೆಗಳ ಅರಿವು ಮೂಡಿಸುವ ಕಾರ್ಯಕ್ರಮಗಳು ಸ್ವಲ್ಪಮಟ್ಟಿಗೆ ಫಲ ನೀಡಿದ್ದವು. ಆದರೆ ಬಡತನ, ಹಸಿವು ಸಾಲದೆಂಬಂತೆ ಕರೊನಾ ಇಟ್ಟ ಬರೆ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದ್ದು, ದುಡಿಯಲು ವಲಸೆ ಹೋದ ಕುಟುಂಬಗಳು ತಮ್ಮ ಜತೆ ಮಕ್ಕಳನ್ನು ಕರೆದೊಯ್ದಿದ್ದಾರೆ.
ಹೊಟ್ಟೆ ಚೀಲ ತುಂಬಿಸಿಕೊಳ್ಳಲು ಊರು ಬಿಟ್ಟವರನ್ನು ಹುಡುಕುವುದು ಸಮಸ್ಯೆಯಾಗಿದ್ದರೆ, ದಿನದ ದುಡಿಮೆಗೆ ಆಧಾರವಾದ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪದ ಪಾಲಕರು/ ಪೋಷಕರನ್ನು ಒಪ್ಪಿಸುವುದು ಸವಾಲಾಗಿದೆ. ಇಲಾಖೆ ಒತ್ತಡ, ಗುರಿಮುಟ್ಟಬೇಕೆಂಬ ತಾಕೀತು ಶಿಕ್ಷಕರು, ಸಿಆರ್​ಪಿ, ಬಿಆರ್​ಪಿಗಳನ್ನು ಫಜೀತಿಗೆ ಸಿಲುಕಿಸಿದ್ದು, ಜನಪ್ರತಿನಿಧಿಗಳು, ಎಸ್​ಡಿಎಂಸಿ, ಅಂಗನವಾಡಿ ಸಹಭಾಗಿತ್ವದಿಂದ ಸ್ವಲ್ಪಮಟ್ಟಿಗೆ ಒತ್ತಡ ತಗ್ಗಿಸಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕನ್ನಡಿಯೊಳಗಿನ ಗಂಟು:ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್​ಟಿಇ) ಜಾರಿಗೆ ಬಂದು 11 ವರ್ಷಗಳಾಗಿವೆ. ಖಾಸಗಿ ಶಾಲೆಗಳಲ್ಲಿ ಬಡವರು, ಶೋಷಿತರು, ದುರ್ಬಲರ ಮಕ್ಕಳಿಗೆ ಸೀಟು ಕಾದಿಡುವುದು ಎಂಬಂತೆ ಬಿಂಬಿತವಾಗಿದೆ. ಪರಿಣಾಮಕಾರಿ ಅನುಷ್ಠಾನದಲ್ಲಿ ಸರ್ಕಾರದ ವೈಫಲ್ಯ, ಇಲಾಖೆ ಉದಾಸೀನತೆ ಯಿಂದ ಕಾಯ್ದೆ ಉದ್ದೇಶ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲವೆಂಬ ಟೀಕೆಗಳಿವೆ.
ಆರರಿಂದ 14ರ ವಯೋಮಿತಿ ಎಲ್ಲ ಮಕ್ಕಳಿಗೆ ಶಿಕ್ಷಣ, ಅದರಲ್ಲೂ 8ನೇ ತರಗತಿವರೆಗೆ ಶಿಕ್ಷಣ ಕಡ್ಡಾಯ ಎನ್ನುವ ಪ್ರಧಾನ ಅಂಶ ಕಾಗದದಲ್ಲೇ ಉಳಿದುಕೊಂಡಿದೆ. ಕಾಯ್ದೆಯಲ್ಲಿನ ಮೂಲ ಸವಲತ್ತುಗಳ ಅಭಿವೃದ್ಧಿ, ಜನಪ್ರತಿನಿಧಿಗಳು, ಬಲವರ್ಧನೆ, ಎಸ್​ಡಿಎಸಿಗಳು, ಸಮುದಾಯದ ಪಾಲುಗಾರಿಕೆ ನಗಣ್ಯವಾಗಿದ್ದರ ಜತೆಗೆ ಕರೊನಾ ನಿರ್ಬಂಧ ಸೇರಿಕೊಂಡು ಮಕ್ಕಳ ಶಿಕ್ಷಣ ವ್ಯವಸ್ಥೆ ದುಃಸ್ಥಿತಿಗೆ ತಳ್ಳಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶಾಲೆ ಅರ್ಧಕ್ಕೆ ಬಿಟ್ಟ ಮಕ್ಕಳ ಸಂಖ್ಯೆ ಪ್ರಕಾರ ಬೆಂಗಳೂರು ದಕ್ಷಿಣ ಮತ್ತು ಉತ್ತರ ಶೈಕ್ಷಣಿಕೆ ಜಿಲ್ಲೆ (ಬಿಬಿಎಂಪಿ)ಗಳು ಮೊದಲ ಸ್ಥಾನದಲ್ಲಿವೆ. ಆರರಿಂದ 14ರ ವಯೋಮಿತಿಯ 2143 ಹಾಗೂ 14 ರಿಂದ 16ರ ವಯೋಮಿತಿಯ 4,465 ಸೇರಿ ಒಟ್ಟು 6,608 ಮಕ್ಕಳಿದ್ದಾರೆ. ಎರಡನೇ ಸ್ಥಾನದಲ್ಲಿರುವ ಬೀದರ್ ಜಿಲ್ಲೆಯಲ್ಲಿ ಆರರಿಂದ 14ರ ವಯೋಮಿತಿಯ 1908 ಮತ್ತು 14 ರಿಂದ 16ರ ವಯೋಮಿತಿಯ 701 ಸೇರಿದಂತೆ ಒಟ್ಟು 2,609 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ.
ಕರೊನಾ ನಿರ್ಬಂಧ ಇನ್ನಿತರ ಕಾರಣಗಳಿಂದ ಶಾಲೆ ಅರ್ಧಕ್ಕೆ ಬಿಟ್ಟ ಮಕ್ಕಳನ್ನು ಮರಳಿ ಕರೆ ತರುವ ಪ್ರಯತ್ನ ನಿರಂತರ. ಮುಖ್ಯವಾಹಿನಿಗೆ ಸೇರಿಸುವಲ್ಲಿ ಸಮುದಾಯ ಹಾಗೂ ಪಾಲಕರ ನೆರವು ಪಡೆಯಲಾಗುತ್ತಿದೆ. ವಲಸೆ ಹೋದವರ ಮಕ್ಕಳನ್ನು ಕರೆ ತರುವುದೇ ಸಮಸ್ಯೆ.
|ಡಾ.ಎಸ್.ಸೆಲ್ವಕುಮಾರ್ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ ಇಲಾಖೆ
ಸರ್ಕಾರದ ಈ ಅಂಕಿ-ಅಂಶಗಳು ಅದೆಷ್ಟು ವಾಸ್ತವಿಕ, ನಿಖರ ಗೊತ್ತಿಲ್ಲ. ಶಾಲೆ ಬಿಟ್ಟವರೊಂದಿಗೆ ಬಾರದವರನ್ನು ಸೇರಿಸಿದರೆ ನಾಲ್ಕುಪಟ್ಟು ಹೆಚ್ಚಾಗುತ್ತದೆ. ಮಕ್ಕಳಿಗೆ ಶಿಕ್ಷಣದಲ್ಲಿ ಸರ್ಕಾರ, ಇಲಾಖೆಯ ಪ್ರಾಮಾಣಿಕ ಪ್ರಯತ್ನ, ಎಸ್​ಡಿಎಂಸಿ, ಎನ್​ಜಿಒ, ಪಾಲಕರ ಕಾಳಜಿ ಮುಖ್ಯ.
|ವಿ.ಪಿ.ನಿರಂಜನಾರಾಧ್ಯಅಭಿವೃದ್ಧಿ ಶಿಕ್ಷಣ ತಜ್ಞ
ರಾಯಚೂರು, ಚಿತ್ರದುರ್ಗದಲ್ಲಿ ಉತ್ತಮ ಪ್ರಗತಿ
ಸಮುದಾಯದ ಸಹಭಾಗಿತ್ವ, ಜನಪ್ರತಿನಿಧಿಗಳ ನೆರವಿನಿಂದ ಪಾಲಕರ/ ಪೋಷಕರ ಮನವೊಲಿಸಿ ಶಾಲೆ ಅರ್ಧಕ್ಕೆ ಬಿಟ್ಟ ಮಕ್ಕಳನ್ನು ಪುನಃ ಮುಖ್ಯವಾಹಿನಿಗೆ ಸೇರಿಸುವಲ್ಲಿ ಉತ್ತಮ ಪ್ರಗತಿ ಸಾಧಿಸಿದ ಜಿಲ್ಲೆಗಳ ಪಟ್ಟಿಗೆ ರಾಯಚೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಕ್ರಮವಾಗಿ ಮೊದಲ, ಎರಡನೇ ಸ್ಥಾನದಲ್ಲಿವೆ.
ರಾಯಚೂರು ಜಿಲ್ಲೆ:6-14 ವಯೋಮಿತಿ 1390ರಲ್ಲಿ 1,373 ಮತ್ತು 14-16 ವಯೋಮಿತಿ 576ರಲ್ಲಿ 272 ಮಕ್ಕಳು ಶಾಲೆಗೆ ಸೇರಿದ್ದಾರೆ. ಒಟ್ಟು 1966ರಲ್ಲಿ 1645 ಮಕ್ಕಳು ಮುಖ್ಯವಾಹಿನಿಗೆ ಸೇರಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆ:6-14 ವಯೋಮಿತಿ 955 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು ಎಂದು ದಾಖಲಾಗಿದ್ದರೆ, ಮರಳಿದವರು 1,202. 14 ರಿಂದ 16ರ ವಯೋಮಿತಿ 632ರಲ್ಲಿ 334 ಮಕ್ಕಳು ಶಾಲೆಗೆ ವಾಪಸ್ಸಾಗಿದ್ದಾರೆ. ಶಾಲೆ ಬಿಟ್ಟಿದ್ದ ಒಟ್ಟು 1587ರಲ್ಲಿ 1536 ಮಕ್ಕಳು ಮುಖ್ಯವಾಹಿನಿಗೆ ಸೇರಿದ್ದಾರೆ.
‘ಜೇಮ್ಸ್’ಗೆ ದಾರಿ ಮಾಡಿಕೊಟ್ಟ ರಾಜಮೌಳಿ: ‘ಅದೂ ಅಲ್ಲ, ಇದೂ ಅಲ್ಲ’ ಎಂದು ‘ಆರ್​ಆರ್​ಆರ್’​​ ಬಿಡುಗಡೆಗೆ ಹೊಸ ದಿನಾಂಕ ನಿಗದಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − twelve =
Remember me
