ಹಾವೇರಿ:ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದರೂ ಅನುದಾನ ಪಡೆದುಕೊಳ್ಳುವಲ್ಲಿ ಹಾಗೂ ಅನುಷ್ಠಾನ ಮಾಡುವ ವಿಚಾರದಲ್ಲಿ ಹಿಂದೆ ಬಿದ್ದಿದ್ದೇವೆ ಎಂಬ ಕೂಗು ಕೊನೆಗಾಣಿಸಲು ಸರ್ಕಾರ ಹಿರಿಯ ಸಾಹಿತಿಗಳ ಮಾರ್ಗದರ್ಶನ ಪಡೆಯಲು ತೀರ್ಮಾನಿಸಿದೆ. ಹಾವೇರಿ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ. ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಒಟ್ಟು 13.30 ಕೋಟಿ ರೂ. ನೆರವು ಬಂದಿದೆ. ಮೈಸೂರು ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡು ಅಲ್ಲಿಯ ಕಟ್ಟಡವೊಂದರಲ್ಲಿ ಅಧ್ಯಯನ ಕೇಂದ್ರ ತೆರೆಯಲಾಗಿದೆ. ಶಾಸ್ತ್ರೀಯ ಭಾಷೆ ಕುರಿತ ಸಂಶೋಧನೆ, ಗ್ರಂಥಾಲಯ, ಚರ್ಚೆ, ಮಾರ್ಗದರ್ಶನ ಪಡೆಯಲು ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದರು. ಸಮಿತಿ ಸೂಚಿಸುವ ಕಾರ್ಯಗಳಿಗೆ ಎಷ್ಟು ಅನುದಾನ ಬೇಕಾದರೂ ಸರ್ಕಾರ ಒದಗಿಸಲಿದೆ ಎಂದು ಇದೇ ವೇಳೆ ವಾಗ್ದಾನ ಮಾಡಿದರು. ಸಮ್ಮೇಳನಾಧ್ಯಕ್ಷರೂ ಸಹ ತಮ್ಮ ಭಾಷಣದಲ್ಲಿ ಈ ಬಗ್ಗೆ ದನಿ ಎತ್ತಿದ್ದರು. ಸಮಾರೋಪದಲ್ಲಿ ಮುಖ್ಯಮಂತ್ರಿಯವರು ಇದಕ್ಕೆ ಪ್ರತಿಕ್ರಿಯೆ ನೀಡಿ, ಪರಿಹಾರ ಕಂಡುಕೊಳ್ಳಲು ಸಾಹಿತಿಗಳ ನೆರವು ಪಡೆಯುವುದಾಗಿ ತಿಳಿಸಿದರು.
ಸಂವಿಧಾನ ಕವಚ:ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ಮಾತೃಭಾಷೆಗಳಿಗೆ ಸಂವಿಧಾನದ ಸಂರಕ್ಷಣೆ ಅಗತ್ಯ. ಈ ಹಿನ್ನೆಲೆಯಲ್ಲಿ ಕೇಂದ್ರದ ತಜ್ಞರೊಂದಿಗೆ ರ್ಚಚಿಸಿ, ಕನ್ನಡ ಭಾಷೆಗೆ ಸಂವಿಧಾನ ರಕ್ಷಣೆ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಸಿಎಂ ತಿಳಿಸಿದರು.
ಕಾರ್ಯ ಅನುಸರಣೆ ವರದಿ ಕೊಡಿ:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬರುವ ಆಗ್ರಹಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮತ್ತು ಕಸಾಪ ಕಾರ್ಯೋನ್ಮುಖವಾಗಬೇಕು. ಒಂದು ಸಮಿತಿ ರಚಿಸಿ, ಕಾರ್ಯ ಅನುಸರಣೆ ವರದಿ (ಎಟಿಆರ್) ಪಡೆಯಬೇಕು. ಎಷ್ಟು ಬೇಡಿಕೆ ಈಡೇರಿವೆ ಎಂಬುದನ್ನು ಮುಂದಿನ ಸಮ್ಮೇಳನದಲ್ಲಿ ಮಂಡಿಸಬೇಕು. ಇದರಿಂದ ಕಸಾಪದ ಮೇಲೆ ವಿಶ್ವಾಸ ಹೆಚ್ಚಲಿದೆ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಹೇಳಿದರು.
ಕಸಾಪ ನಡೆಸುವ ಸಾಹಿತ್ಯ ಸಮ್ಮೇಳನದಲ್ಲಿ ತುಳು, ಕೊಡವ, ಕೊಂಕಣಿ, ಬ್ಯಾರಿ ಭಾಷೆಗಳಿಗೂ ಅವಕಾಶ ಕಲ್ಪಿಸಬೇಕು. 100 ವರ್ಷ ಮೀರಿದ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ವಿವೇಕ ರೈ ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಆಶಯ ನುಡಿಗಳನ್ನಾಡಿದರು. ಸಚಿವರಾದ ಬಿ.ಸಿ. ಪಾಟೀಲ, ಬಿ.ಸಿ. ನಾಗೇಶ, ಸಂಸದ ಶಿವಕುಮಾರ ಉದಾಸಿ, ಮಾಜಿ ಸಂಸದರಾದ ಪ್ರೊ. ಐ.ಜಿ. ಸನದಿ, ಮಂಜುನಾಥ ಕುನ್ನೂರ, ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ವಿಧಾನಪರಿಷತ್ ಸದಸ್ಯ ಆರ್. ಶಂಕರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಡಿ.ಎಂ. ಸಾಲಿ ಇತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಯೋಜನೆ ಘೋಷಣೆ ಶೀಘ್ರ:ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಎಂದು ತೀರ್ವನಿಸುವ ಸಂಬಂಧ ಕೇಂದ್ರ ಸರ್ಕಾರವು ಸಚಿವ ಸಂಪುಟದಲ್ಲಿ ರ್ಚಚಿಸಿ ಶೀಘ್ರವೇ ಪ್ರಕಟಿಸುವ ಸಾಧ್ಯತೆ ಇದೆ. ಇದರಿಂದ 13 ಸಾವಿರ ಕೋಟಿ ರೂ. ಅನುದಾನ ಲಭಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಸರಿಸುಮಾರು ಎರಡು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಈ ಯೋಜನೆಯಿಂದ ನೀರು ಲಭಿಸಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿ ಬಚಾವತ್ ಆಯೋಗದ ತೀರ್ಪು ಬಂದು 11 ವರ್ಷ ಆಗಿದೆ. ಸುಪ್ರೀಂಕೋರ್ಟ್​ನಲ್ಲಿ ವಾದ ನಡೆದಿದೆ. ಶೀಘ್ರವೇ ಅಂತಿಮ ಹಂತಕ್ಕೆ ಬಂದರೆ ಆಲಮಟ್ಟಿ ಜಲಾಶಯ ಎತ್ತರಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಕಳಸಾ-ಬಂಡೂರಿ ಯೋಜನೆಗೆ ಅನುಷ್ಠಾನಕ್ಕೆ ಕೇಂದ್ರದ ಒಪ್ಪಿಗೆ ಸಿಕ್ಕಿದೆ. ಶೀಘ್ರವೇ ಕಾರ್ಯಾರಂಭ ಮಾಡಲಾಗುವುದು. ವ್ಯಾಜ್ಯವೆಲ್ಲ ಮುಗಿದು ಮೇಕೆದಾಟು ಯೋಜನೆಯೂ ಜಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿರೋಧಿ ಸಾಹಿತಿಗಳೇ ಕಸಾಪಕ್ಕೆ ಬನ್ನಿ:ಎಲ್ಲರಲ್ಲೂ ಅಭಿಪ್ರಾಯ ಭೇದ ಇರುತ್ತದೆ. ಒಟ್ಟಾಗಿ ಕುಳಿತು ಬಗೆಹರಿಸಿಕೊಳ್ಳೋಣ. ಕನ್ನಡ ಒಂದು. ನಾವೆಲ್ಲರೂ ಒಂದು. ಕಸಾಪಕ್ಕೆ ಬಂದು ಬಿಡಿ, ರ್ಚಚಿಸೋಣ. ಚರ್ಚೆಯಿಂದ ನಿರ್ಣಯ ಆಗುತ್ತದೆ. ಟೀಕೆಯಿಂದ ಪ್ರಯೋಜನ, ಪುನರುಜ್ಜೀವನ ಆಗುವುದಿಲ್ಲ ಎಂದು ಅಚ್ಚರಿಯ ಕರೆಯೊಂದನ್ನು ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಅವರು ನೀಡಿದರು. ಸಾಹಿತ್ಯಕ್ಕಿರುವ ತಂತ್ರ ಶಕ್ತಿಯೂ ಮನುಷ್ಯತ್ವ ಬೆಸೆಯುವುದು. ಹೃದಯ-ಹೃದಯ ಸಮ್ಮಿಲನವಾಗಬೇಕು ಎಂದು ಬುದ್ಧಿವಾದ ಹೇಳಿದರು.
ಹಾವೇರಿ ಜಿಲ್ಲಾ ಕಸಾಪಕ್ಕೆ 3 ಕೋಟಿ ರೂ.:ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣಾರ್ಥ ಹಾವೇರಿ ಜಿಲ್ಲಾ ಕಸಾಪ ಭವನ ನಿರ್ವಿುಸಿ, ಜಾನಪದ ವಿವಿಯೊಂದಿಗೆ ಸಂಶೋಧನಾ ಕೇಂದ್ರ ಸ್ಥಾಪಿಸಲು 3 ಕೋಟಿ ರೂ.ಗಳನ್ನು ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.
ಸ್ಥಳೀಯ ಭಾಷೆಗಳಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ದೊರೆಯಬೇಕು ಎಂಬ ಚರ್ಚೆಗಳು ನಡೆದಾಗ ಕೆಲವರು ಸಂಶೋಧನೆ ಮತ್ತು ಅಭಿವೃದ್ಧಿಗೆ ವ್ಯತ್ಯಯವಾಗಲಿದೆ ಎಂದಿದ್ದರೂ, ಹೊಸ ಶಿಕ್ಷಣ ನೀತಿಯಡಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ.
|ಪ್ರಲ್ಹಾದ ಜೋಶಿಕೇಂದ್ರ ಸಚಿವ
ರಾಜಕೀಯದಲ್ಲಿ ಜಾತಿ-ಧರ್ಮ, ಭ್ರಷ್ಟಾಚಾರ ಬೆರೆತು ಹೋಗಿದೆ. ಸಾಹಿತಿಗಳು ರಾಜಕಾರಣಿಗಳಿಗೆ ಬುದ್ದಿ ಹೇಳಿ ತಿದ್ದುವ ಕಾರ್ಯ ಮಾಡಬೇಕು. ಆದರೆ ವಿಧಾನಸೌಧವನ್ನು ಮೀರಿಸುವ ರೀತಿಯಲ್ಲಿ ಸಾಹಿತ್ಯ ಸಂಘಟನೆಗಳ ಚುನಾವಣೆಗಳು ನಡೆಯುತ್ತಿವೆ.
|ಬಿ.ಕೆ. ಹರಿಪ್ರಸಾದ್ವಿಧಾನ ಪರಿಷತ್ ಪ್ರತಿಪಕ್ಷ ನಾಯಕ
ಸಾಹಿತಿಗಳು ನಮ್ಮ ನಾಡಿನ ಹಿರಿಮೆಯನ್ನು ಸಾಹಿತ್ಯದ ಮೂಲಕ ಜಗತ್ತಿಗೆ ಸಾರಿದ್ದಾರೆ. ಸಾಹಿತ್ಯ ಮನುಷ್ಯರನ್ನು ಬೆಸೆಯಬೇಕು. ಭಾರತದ ಸಂಸ್ಕೃತಿ, ಪರಂಪರೆಗೆ ಧಕ್ಕೆ ತರುವವರಿಗೆ ಸಾಹಿತ್ಯ ಕ್ಷೇತ್ರ ಎಚ್ಚರಿಕೆ ನೀಡಬೇಕು.
|ವಿಶ್ವೇಶ್ವರ ಹೆಗಡೆ ಕಾಗೇರಿವಿಧಾನಸಭಾಧ್ಯಕ್ಷ
5 ಲಕ್ಷಕ್ಕೂ ಅಧಿಕ ಜನ ಭಾಗಿ:ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಮೂರು ದಿನದಲ್ಲಿ ಒಟ್ಟು 5 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ಮೂಲಕ ದಾಖಲೆ ಸೃಷ್ಟಿಯಾಗಿದೆ. ಮೊದಲ ದಿನ 60ರಿಂದ 80 ಸಾವಿರ ಜನ, ಎರಡನೇ ದಿನ 1.80 ರಿಂದ 2 ಲಕ್ಷ ಹಾಗೂ ಮೂರನೇ ದಿನ ಎರಡು ಲಕ್ಷಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ನಿರ್ವಹಣೆ ಕೊರತೆ:ರಾತ್ರಿ ಗೋಷ್ಠಿಗಳು ಮುಗಿದ ನಂತರ ವೇದಿಕೆ ಹಾಗೂ ಮುಂಭಾಗದ ಸ್ವಚ್ಛತೆಗೆ ಆಯೋಜಕರು ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ಭಾನುವಾರ ಬೆಳಗ್ಗೆ 9ಕ್ಕೆ ಗೋಷ್ಠಿ ಇದ್ದರೂ ಹಾನಗಲ್ಲ ಕುಮಾರ ಶಿವಯೋಗಿಗಳ ವೇದಿಕೆ ಮುಂದಿನ ಕಸ ಹಾಗೆಯೇ ಇತ್ತು. 9.30ರ ಹೊತ್ತಿಗೆ ಕಸ ಗುಡಿಸುವವರು ಬಂದರು. ಇದರಿಂದಾಗಿ 9ರ ಗೋಷ್ಠಿ 10 ಗಂಟೆಗೆ ಆರಂಭವಾಯಿತು.
ಗಮನ ಸೆಳೆದ ವಿಶೇಷ ಕರ್ನಾಟಕ:ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮ್ಮೇಳನದ ಆವರಣದಲ್ಲಿ ವಿಶೇಷ ಕರ್ನಾಟಕ ಹೆಸರಿನ ಮಳಿಗೆಯಲ್ಲಿ ತೆರೆದಿದ್ದ ಪ್ರದರ್ಶಿನಿ ನೋಡುಗರ ಗಮನ ಸೆಳೆಯಿತು. ಕನ್ನಡ ನಾಡಿನ ವೈಶಿಷ್ಟ್ಯಗಳು, ಭೌಗೋಳಿಕ ಗುರುತು, ಕನ್ನಡಿಗರು ಆಳಿದ ನೆನಪು, ಕಟ್ಟಿಸಿದ ಸ್ಮಾರಕಗಳ ಇತಿಹಾಸ, ವೈಭವವನ್ನು ಪ್ರದರ್ಶಿನಿಯಲ್ಲಿ ಸಾರಲಾಗಿತ್ತು.
ಮಧ್ಯರಾತ್ರಿವರೆಗೆ ಜನವೋ ಜನ:ಸಮ್ಮೇಳನದ ಮೂರನೇ ದಿನ ತಡರಾತ್ರಿ 1 ಗಂಟೆವರೆಗೆ ರಸ್ತೆ ತುಂಬ ಜನ, ವಾಹನ ದಟ್ಟಣೆ ಉಂಟಾಗಿತ್ತು. ಜಿಎಚ್ ಕಾಲೇಜುವರೆಗೆ ವಾಹನಗಳು ತೆವಳುತ್ತ ಹೋದಂತೆ ಸಾಗುತ್ತಿದ್ದವು. ಬಸ್ ನಿಲ್ದಾಣ ಹಾಗೂ ಹೊಸಮನಿ ಸಿದ್ದಪ್ಪ ವೃತ್ತದವರೆಗೂ ಜನ ಸಾಗುತ್ತಿದ್ದ ದೃಶ್ಯ ಕಂಡು ಬಂತು.
ಸಿದ್ಧೇಶ್ವರ ಶ್ರೀ ಅಪ್ಪು ಸ್ಮರಣೆ:ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖ್ಯ ವೇದಿಕೆಯಲ್ಲಿ ಮೂರು ದಿನ ಸಿದ್ಧೇಶ್ವರ ಶ್ರೀಗಳ ಭಾವಚಿತ್ರ ಇಟ್ಟು ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಯಿತು. ಅದೇ ರೀತಿ ವೇದಿಕೆ ಮೇಲೆ ಪುನೀತ ರಾಜ್​ಕುಮಾರ್ ಭಾವಚಿತ್ರ ಅಳವಡಿಸುವ ಮೂಲಕ ಸ್ಮರಿಸಲಾಯಿತು. ಸಮ್ಮೇಳನದ ಮುಖ್ಯ ವೇದಿಕೆ ಎದುರು ಇಡಲಾಗಿದ್ದ ಅಪ್ಪು ಪ್ರತಿಮೆ ಎದುರು ಜನ ಸೆಲ್ಪೀ ತೆಗೆದುಕೊಳ್ಳಲು ಮುಗಿಬೀಳುವುದು ಸಾಮಾನ್ಯವಾಗಿತ್ತು. ಕೆಲ ಮಳಿಗೆಗಳಲ್ಲಿ ಅಪ್ಪು ಫೋಟೋಗಳನ್ನು ಮಾರಾಟಕ್ಕೆ ಇಡಲಾಗಿತ್ತು.
ಕಾಣೆಯಾದ 300ಕ್ಕೂ ಅಧಿಕ ಮಕ್ಕಳು ಪತ್ತೆ:ಸಮ್ಮೇಳನಕ್ಕೆ ಸಾಗರೋಪಾದಿಯಲ್ಲಿ ಜನ ಸೇರಿದ್ದರಿಂದ ಮಕ್ಕಳ ನಾಪತ್ತೆ ಪ್ರಕರಣಗಳು ಸಾಮಾನ್ಯವಾಗಿದ್ದವು. ಸಮ್ಮೇಳನದ ಮೂರೂ ದಿನದಲ್ಲಿ ಬರೋಬ್ಬರಿ 300ಕ್ಕೂ ಅಧಿಕ ಮಕ್ಕಳು ನಾಪತ್ತೆಯಾಗಿದ್ದರು.
ಸಮ್ಮೇಳನ ವೀಕ್ಷಿಸಲು ಜನ ಮಕ್ಕಳು, ವೃದ್ಧರಾದಿಯಾಗಿ ಕುಟುಂಬಸಮೇತರಾಗಿ ಆಗಮಿಸಿದ್ದರು. ಈ ವೇಳೆ ಅನೇಕ ಮಕ್ಕಳು ಪಾಲಕರ ಕೈತಪ್ಪಿಸಿಕೊಂಡು ಕಣ್ಮರೆಯಾಗಿದ್ದರು. ಪೊಲೀಸರು ಹಾಗೂ ಸಾರ್ವಜನಿಕರು ಧ್ವನಿವರ್ಧಕದ ಮೂಲಕ ಘೋಷಣೆ ಮಾಡಿ ಪಾಲಕರನ್ನು ಪತ್ತೆ ಹಚ್ಚಿದರು. ಬಳಿಕ ಖಚಿತಪಡಿಸಿಕೊಂಡು ಪಾಲಕರಿಗೆ ಬಾಲಕ-ಬಾಲಕಿಯರನ್ನು ಒಪ್ಪಿಸಿದರು.
ನಿತ್ಯ ಸುಮಾರು ನೂರು ಮಕ್ಕಳು ಪಾಲಕರರಿಂದ ತಪ್ಪಿಸಿಕೊಂಡಿದ್ದರು. ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಮೂಲಕ ಪಾಲಕರನ್ನು ಹುಡುಕಿಕೊಡಲಾಗಿದೆ ಎಂದು ಸಮ್ಮೇಳನದ ಪೊಲೀಸ್ ಹೊರಠಾಣೆ ಸಿಬ್ಬಂದಿ ತಿಳಿಸಿದರು. ಊಟದ 200 ಕೌಂಟರ್​ಗಳಲ್ಲೂ ಅನೇಕ ಮಕ್ಕಳು ಕಾಣೆಯಾಗಿದ್ದರು. ಈ ಬಗ್ಗೆ ಆಹಾರ ಸಮಿತಿ ಸದಸ್ಯರು ಮೈಕ್​ನಲ್ಲಿ ಮಾಹಿತಿ ನೀಡುವ ಮೂಲಕ ಅನೇಕ ಮಕ್ಕಳನ್ನು ಅವರ ಪಾಲಕರಿಗೆ ಹಸ್ತಾಂತರಿಸಿದರು.
ಜನ ಹೆಚ್ಚಾಗಿದ್ದರಿಂದ ಸಮ್ಮೇಳನದಲ್ಲಿ ನನ್ನ ಮಗಳು ತಪ್ಪಿಸಿಕೊಂಡು ಹೋಗಿದ್ದಳು. ಇದರಿಂದ ತೀವ್ರವಾಗಿ ಬೇಸರಗೊಂಡಿದ್ದೆ. ನನ್ನ ಮಗಳು ಪೊಲೀಸರ ಬಳಿ ಇರುವುದು ಧ್ವನಿವರ್ಧಕದ ಮೂಲಕ ಗೊತ್ತಾದಾಗ ಸಮಾಧಾನವಾಯ್ತು. ಪೊಲೀಸರಿಗೆ ಧನ್ಯವಾದ ಅರ್ಪಿಸುತ್ತೇನೆ.
|ಶಂಕರಮ್ಮ ಕಪಾಲಿಹರಿಹರ ನಿವಾಸಿ
|ಬಸವರಾಜ ಇದ್ಲಿಹಾವೇರಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೇ ದಿನವಾದ ಭಾನುವಾರವೂ ಲಕ್ಷಾಂತರ ಸಂಖ್ಯೆಯಲ್ಲಿ ಜನಸಾಗರ ಹರಿದು ಬಂದಿತು. 150ಕ್ಕೂ ಹೆಚ್ಚು ಎಕರೆ ಜಾಗದಲ್ಲಿ ನಿರ್ವಿುಸಲಾಗಿದ್ದ ಸಮ್ಮೇಳನ ವೇದಿಕೆ, ಸಮಾನಾಂತರ ವೇದಿಕೆ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ ಸೇರಿ ಆವರಣದ ಎಲ್ಲ ಕಡೆ ಜನವೋ ಜನ. ಅಕ್ಕಪಕ್ಕದ ರಸ್ತೆಗಳಲ್ಲಿ ಪ್ರವಾಹ ಉಕ್ಕಿಬಂದಂತೆಯೇ ಜನಸಂಚಾರದ ಕಂಡುಬಂತು.
ಮೂರು ದಿನಗಳಲ್ಲಿ ರಾಜ್ಯವಷ್ಟೆ ಅಲ್ಲ, ದೇಶ-ವಿದೇಶದಿಂದಲೂ ಬಂದ ಕನ್ನಡಾಭಿಮಾನಿಗಳು ನುಡಿಜಾತ್ರೆಗೆ ಸಾಕ್ಷಿಯಾದರು. ಹಲವು ಗೋಷ್ಠಿಗಳಲ್ಲಿ ಪಾಲೊಂಡು ವಿವಿಧ ಚರ್ಚೆಗೆ ಕಿವಿಯಾದರು. ಹೊರಗಡೆಯ ಆಕರ್ಷಣೆಗೆ ಕಣ್ಣಾದರು. ಕನ್ನಡಕ್ಕಾಗಿ ಜೈ ಎಂದರು.
ಅಕ್ಷರ ಜಾತ್ರೆಯಲ್ಲಿ ನಿತ್ಯ ಬಳಕೆಯ ಅನೇಕ ವಸ್ತುಗಳ ಮಾರಾಟವೂ ಭರ್ಜರಿಯಾಗಿ ನಡೆಯಿತು. ಅನೇಕರು ಖರೀದಿಯಲ್ಲಿ ತೊಡಗಿದ್ದರು. ಮುಖದ ಮೇಲೆ ಕನ್ನಡ ಧ್ವಜದ ಬಣ್ಣ ಬಳಿದುಕೊಳ್ಳಲು ಜನರು ತಾಮುಂದು ನಾಮುಂದು ಎಂದು ನಿಂತಿದ್ದರು. ಕನ್ನಡ ಧ್ವಜ, ಟೋಪಿ ಇತ್ಯಾದಿ ಹಾಕಿಕೊಂಡು ಸೆಲ್ಪಿ ತೆಗೆದುಕೊಂಡರು. ಕನ್ನಡ ಭುವನೇಶ್ವರಿ, ಕನ್ನಡ ರಥದ ಫೋಟೋ ಕ್ಲಿಕ್ಕಿಸಿಕೊಂಡರು. ಸಾವಿರಾರು ಜನರ ಮುಖದ ಮೇಲೆ ಧ್ವಜ ಮೂಡಿಸಿದ ಕಲಾವಿದರು ಕನ್ನಡ ಹೆಮ್ಮೆಯಿಂದ ಬೀಗಿದರು. ಕಂಬಳಿ, ಮಿರ್ಚಿ ಮಂಡಕ್ಕಿ, ಸ್ವೀಟ್ ಕಾರ್ನ್, ಅಲಂಕಾರಿಕ ವಸ್ತುಗಳು, ಆಟಿಕೆ ಸಾಮಗ್ರಿಗಳ ವ್ಯಾಪಾರ ಎಲ್ಲೆಡೆ ಕಂಡು ಬಂತು.
ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

6 ತಿಂಗಳ ಕಾಲ ಒಂದೊಂದಾಗಿ ಕಾಣೆಯಾಗಿದ್ದವು ಮನೆಯೊಳಗಿದ್ದ ಆಭರಣಗಳು!; ಕೊನೆಗೂ ಬಯಲಾಯ್ತು ಅಸಲಿಯತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
