ರವಿ ಗೋಸಾವಿ ಬೆಳಗಾವಿ
ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿರುವ ಸ್ಮಗ್ಲಿಂಗ್ ಚಿನ್ನ ಕಳ್ಳತನ ಪ್ರಕರಣದಲ್ಲಿ ಸಾಕ್ಷ್ಯಾಧಾರ ಸಮೇತ ಸಿಕ್ಕಿಬಿದ್ದಿರುವ ಕಿಂಗ್​ಪಿನ್ ಕಿರಣ್ ಕೈವಾಡ ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ.
ಪೊಲೀಸ್ ಅಧಿಕಾರಿ ಮಗನಾಗಿದ್ದರೂ ಕಿರಣ್ ಆರಂಭದಲ್ಲಿ ಹುಬ್ಬಳ್ಳಿಯ ಕಬ್ಬಿಣದ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಲೇ ಬ್ಲ್ಯಾಕ್ ಮಾರ್ಕೆಟ್ ಮತ್ತು ಪೊಲೀಸ್ ಅಧಿಕಾರಿಗಳ ನಂಟು ಬೆಳೆಸಿಕೊಂಡಿದ್ದ. 4.9 ಕೆಜಿ ಸ್ಮಗ್ಲಿಂಗ್ ಚಿನ್ನ ಕಳ್ಳತನ ಪ್ರಕರಣದ ನಡೆದ ಕೆಲವೇ ದಿನಗಳಲ್ಲಿ ಬಿಎಂಡಬ್ಲ್ಯು ಕಾರು ಖರೀದಿಸಿದ್ದು, ಪ್ರಕರಣದಲ್ಲಿ ಆತನ ಕೈವಾಡ ಇರುವುದು ಬಯಲಾಗಿದ್ದರಿಂದ ಇನ್ನೂ ರಿಜಿಸ್ಟ್ರೇಷನ್ ಮಾಡಿಕೊಂಡಿಲ್ಲ.
ಅಷ್ಟೇ ಅಲ್ಲದೆ, ಪರವಾನಗಿ ಪಡೆದ ಗನ್ ಇಟ್ಟುಕೊಂಡು ಚಿನ್ನಾಭರಣ ಸಾಗಿಸುತ್ತಿದ್ದ ವಾಹನಗಳ ಮೇಲೆ ತಾನೇ ಪೊಲೀಸ್ ಅಧಿಕಾರಿ ಎಂದು ಬಿಂಬಿಸಿಕೊಂಡು ದಾಳಿ ನಡೆಸುವಷ್ಟು ಪ್ರಭಾವ ಬೀರಿದ್ದ. ಹಣ ಮತ್ತು ಹೆಣ್ಣಿನ ಮೋಹದ ಹೊಂದಿರುವ ಅಧಿಕಾರಿಗಳನ್ನು ಹೈಜಾಕ್ ಮಾಡಿ, ಅವರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದ. ತನ್ನ ರಕ್ಷಣೆಗೆಂದೇ ರಾಜಕಾರಣಿಗಳನ್ನೂ ಒಳಗೊಂಡ ಸೇಫ್ ಝೋನ್ ಸೃಷ್ಟಿಸಿಕೊಂಡಿದ್ದಾನೆ. ಸಾಥ್ ನೀಡದ ಪಿಐ, ಪಿಎಸ್​ಐಗಳನ್ನು ಎತ್ತಂಗಡಿ ಮಾಡಿಸಿರುವ ಮಾಹಿತಿಯೂ ಇದೆ.
ವಾರ್ನಿಂಗ್ ಕೊಟ್ಟಿದ್ದ ಹು-ಧಾ ಆಯುಕ್ತ: ಆಗಾಗ ವರ್ಗಾವಣೆಯಾಗುವ ಅಧಿಕಾರಿಗಳಲ್ಲಿ ತನಗೆ ಹೊಂದಿಕೊಳ್ಳದವರಿದ್ದರೆ ದೊಡ್ಡ ದೊಡ್ಡ ಡೀಲ್​ಗಳಿಗೆ ಇಳಿಯದೇ ಡಿಎಸ್ಪಿ ಮತ್ತು ಸಿಪಿಐಗಳ ಮಟ್ಟದಲ್ಲಿಯೇ ಪ್ರತಿ ತಿಂಗಳು ಬಂದಷ್ಟು ಲಕ್ಷ ಬಾಚಿಕೊಂಡು ಕಿರಣ್ ಸುಮ್ಮನಾಗುತ್ತಿದ್ದ. ಇಂಥದ್ದೇ ಒಂದು ಪ್ರಕರಣದಲ್ಲಿ ಹು-ಧಾ ಆಯುಕ್ತರಾಗಿ ಎಂ.ಎನ್.ನಾಗರಾಜ ನಂತರ ಬಂದ ಅಧಿಕಾರಿ ಹೆಸರಿನಲ್ಲಿ ಕಿಲಾಡಿ ಕಿರಣ್ ಚಿನ್ನದ ವ್ಯಾಪಾರಿಗಳಿಂದ ಹಣ ಪಡೆಯುತ್ತಿದ್ದ. ಕೆಲವೇ ದಿನಗಳಲ್ಲಿ ಈತನ ಬಂಡವಾಳ ಅರಿತ ಆಯುಕ್ತರು ಖಡಕ್ ವಾರ್ನಿಂಗ್ ಕೊಟ್ಟು ದೂರ ಅಟ್ಟಿದ್ದು ಈಗಾಗಲೆ ಜಾಹೀರಾಗಿದೆ.
ನೂರರಲ್ಲಿ 3 ನಿದರ್ಶನ: 2018ರಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಡಿಸಿಪಿಯ ಇನ್ನೋವಾ ಕಾರಿನಲ್ಲೇ ತೆರಳಿದ್ದ ಕಿರಣ್, ಚಿನ್ನಾಭರಣ ಸಾಗಿಸುತ್ತಿದ್ದ ಸ್ವಿಫ್ಟ್ ಕಾರ್ ಜಪ್ತಿಪಡಿಸಿಕೊಂಡಿದ್ದ. ನಂತರ ನಾಲ್ವರು ಅಧಿಕಾರಿಗಳ ಜತೆ ಸೇರಿ ಲಕ್ಷಾಂತರ ರೂಪಾಯಿ ಡೀಲ್ ಕುದುರಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ, ಡಿಎಸ್ಪಿ ಜಾವೀದ್ ಇನಾಂದಾರ್ ಬ್ಯಾಚ್​ನ ರವಿ ನಾಯಕ ಹಾಗೂ ಸಿಪಿಐ ಕಮತಗಿ ಇತ್ತೀಚೆಗೆ ಧಾರವಾಡದಲ್ಲಿದ್ದಾಗ ಮತ್ತೊಂದು ವಾಹನ ಹಿಡಿದು 20 ಲಕ್ಷ ರೂ.ಗೂ ಅಧಿಕ ಹಣ ಕಬಳಿಸಿದ್ದಾರೆ ಎನ್ನಲಾಗಿದೆ. ಐಜಿಪಿ ವ್ಯಾಪ್ತಿಗೊಳಪಡುವ ಮತ್ತೊಂದು ಹೆದ್ದಾರಿ ಯಲ್ಲಾಪುರ-ಕಾರವಾರ ಮಾರ್ಗದಲ್ಲಿ ಕಲಘಟಗಿ ಠಾಣೆ ವ್ಯಾಪ್ತಿಯ ಅಧಿಕಾರಿಗಳನ್ನು ಬಳಸಿಕೊಂಡು ಭಟ್ಕಳದ 16 ಕೆ.ಜಿ ಚಿನ್ನದ ಸಾಗಣಿಕೆಯಲ್ಲೂ ಕಿರಣ್ ಜತೆಗೂಡಿ ಯಮಕನಮರಡಿಯಂತದ್ದೇ ಕರಾಮತ್ತು ನಡೆಸಿ, ಐಪಿಎಸ್ ಅಧಿಕಾರಿ ಸೇರಿ ಹಲವರು ಧನದಾಹ ತಗ್ಗಿಸಿಕೊಂಡಿರುವುದು ಈಗಾಗಲೆ ಬಯಲಾಗಿದೆ.
ತಜ್ಞರ ಜತೆ ರ್ಚಚಿಸಿ ಮುಂದಿನ ಕ್ರಮ
ಯಮಕನಮರಡಿ ಠಾಣೆಯಲ್ಲಿದ್ದ ವಾಹನದಲ್ಲಿನ ಚಿನ್ನ ಕಳ್ಳತನ ಪ್ರಕರಣದ ವಿಚಾರಣೆ ನಡೆಸಿರುವ ಸಿಐಡಿ ತಂಡ ಸೋಮವಾರ ಎಡಿಜಿಪಿ ಅವರಿಗೆ ಪ್ರಾಥಮಿಕ ವರದಿ ಸಲ್ಲಿಸಿದೆ. ಸ್ವತಃ ಗೃಹ ಸಚಿವರೇ ತನಿಖೆಗೆ ಆದೇಶಿಸಿದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸುವ ಮುನ್ನ ಕಾನೂನು ತಜ್ಞರ ಜತೆ ರ್ಚಚಿಸಲು ಮುಂದಾಗಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಬುಧವಾರ ಎಡಿಜಿಪಿ ಉಮೇಶಕುಮಾರ್ ಬೆಳಗಾವಿಗೆ ಬರುವ ಸಾಧ್ಯತೆ ಇದೆ.
ಚಿನ್ನದ ಮಾಲೀಕನ ವಿಚಾರಣೆ
ಮತ್ತೊಮ್ಮೆ ಚಿನ್ನದ ಮಾಲೀಕ ತಿಲಕ್ ಪೂಜಾರಿ ವಿಚಾರಣೆಗೆ ಸಿಐಡಿ ತಂಡ ಮುಂದಾಗಿದ್ದು, ಮಂಗಳವಾರ ಕೇಂದ್ರ ಕಚೇರಿಗೆ ಆಗಮಿಸುವಂತೆ ತಿಳಿಸಲಾಗಿದೆ. ಆ ನಂತರ ಮಾಲೀಕ ಎಫ್​ಆರ್​ಐ ದಾಖಲಿಸಲು ಒಪ್ಪದಿದ್ದರೆ ಆತನೇ ನೀಡಿರುವ ಪಿಟಿಷನ್ ಅನ್ನೇ ದೂರು ಎಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಳ್ಳುವುದು. ಒಂದು ವೇಳೆ ಕಿರಣ್ ಬಿಟ್ಟು ಐಪಿಎಸ್ ಅಧಿಕಾರಿಗಳನ್ನು ರಕ್ಷಿಸಬೇಕಾದರೇ ಪ್ರಿವೆನ್ಷನ್ ಆಫ್ ಕರಪ್ಶನ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲು ಮುಂದಾಗುವ ಮಾಹಿತಿ ಇದೆ.
ಶಸ್ತ್ರಾಸ್ತ್ರ ಹೊಂದಿದ್ದವರಿಂದ ವಸೂಲಿ?
ಹುಬ್ಬಳ್ಳಿ-ಧಾರವಾಡ ಆಯುಕ್ತ ಲಾಬೂರಾಮ್ ಅನಾರೋಗ್ಯದಲ್ಲಿದ್ದಾಗ ತಿಂಗಳ ಕಾಲ ಪ್ರಭಾರ ವಹಿಸಿಕೊಂಡಿದ್ದ ಉತ್ತರ ವಲಯದ ಐಜಿಪಿ, ಶಸ್ತ್ರಾಸ್ತ್ರಗಳ ಪರವಾನಗಿ ಪಡೆದು ಕ್ರಿಮಿನಲ್ ಹಿನ್ನೆಲೆ ಹೊಂದಿರುವರನ್ನು ಕರೆಯಿಸಿ ಗನ್​ಗಳನ್ನು ಜಪ್ತಿ ಪಡಿಸಿಕೊಂಡು ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಆದರೆ, ಮೂಲಗಳ ಪ್ರಕಾರ ಶಸ್ತ್ರಾಸ್ತ್ರ ಬಳಕೆದಾರರಿಂದ ಹಣ ವಸೂಲಿಗೆ ಸ್ವತಃ ಕಿರಣನೇ ಈ ಕ್ರಮಕ್ಕೆ ಸಲಹೆ ನೀಡಿದ್ದ ಎನ್ನಲಾಗಿದ್ದು, ತನಿಖೆಯಿಂದಲೇ ಸತ್ಯಾಂಶ ಹೊರಬರಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 7 =
Remember me
