ಶ್ರುತಿ ರಾಜಣ್ಣಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಸತತ 17 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿರುವ ಪದ್ಮಶ್ರೀ ಪುರಸ್ಕೃತ ಡಾ. ಸಿ.ಎನ್. ಮಂಜುನಾಥ್ ಜ. 31ರಂದು ನಿವೃತ್ತಿ ಹೊಂದಲಿದ್ದಾರೆ. 1988ರಲ್ಲಿ ಜಯದೇವ ಆಸ್ಪತ್ರೆಯಲ್ಲಿ ಉಪನ್ಯಾಸಕರಾಗಿ ಸೇರಿದ ಡಾ. ಮಂಜುನಾಥ್​ರ ಸಾಧನೆ ಇಂದು ವಿಶ್ವದ ಭೂಪಟದಲ್ಲಿ ಕಾಣುತ್ತಿದೆ. ಸಾಮಾನ್ಯ ಕುಟುಂಬದಿಂದ ಬಂದ ಅವರು ಬಡವರ, ನಿರ್ಗತಿಕರ ಧ್ವನಿಯಾಗಿದ್ದಾರೆ.
ಡಾ. ಮಂಜುನಾಥ್ ಸೌಮ್ಯ ಸ್ವಭಾವದ ವ್ಯಕ್ತಿ. ಬಡವರ ಅಂತರಾಳವನ್ನು ಕಣ್ಣಲ್ಲೇ ತಿಳಿಯುವ ಸಾಮರ್ಥ್ಯ ಅವರಿಗಿದೆ. ಕಡತಕ್ಕಿಂತ ಜೀವ ಮುಖ್ಯ, ಚಿಕಿತ್ಸೆ ಮೊದಲು-ಹಣ ಪಾವತಿ ನಂತರ ಎನ್ನುವುದು ಅವರ ಧ್ಯೇಯವಾಕ್ಯ. ಹಲವು ಅವಮಾನ, ಸವಾಲುಗಳನ್ನು ಎದುರಿಸಿ, 125 ಹಾಸಿಗೆ ಸಾಮರ್ಥ್ಯವಿದ್ದ ಸಾಮಾನ್ಯ ಆಸ್ಪತ್ರೆಯನ್ನು ವಿಶ್ವವೇ ಹಿಂತಿರುಗಿ ನೋಡುವಂತೆ ಕಟ್ಟಿ ಬೆಳೆಸಿದ್ದಾರೆ. ಹಾಸನ ಜಿಲ್ಲೆ ಚೋಳೇನಹಳ್ಳಿಯಲ್ಲಿ 1957ರ ಸೆ. 23ರಂದು ನಂಜಪ್ಪ, ಸೊಂಬಮ್ಮ ದಂಪತಿಯ ಮಗನಾಗಿ ಜನಿಸಿದ ಮಂಜುನಾಥ್, ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಮುಗಿಸಿ, ಶಾರದಾ ವಿಲಾಸ್​ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಬೆಂಗಳೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪಿಯುಸಿ ಮಾಡಿದರು. ಮೈಸೂರು ಮೆಡಿಕಲ್ ಕಾಲೇಜ್​ನಲ್ಲಿ ಎಂಬಿಬಿಎಸ್ ಮುಗಿಸಿ, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಮಾಡಿ, ಮಣಿಪಾಲದಲ್ಲಿ ಡಿಎಂ ಕಾರ್ಡಿಯಾಲಜಿ ಪೂರೈಸಿದರು. ವಿದ್ಯಾಭ್ಯಾಸದ ವೇಳೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ರಿ ಡಾ. ಅನುಸೂಯ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳು- ಮಗ ಡಾ. ಸಾತ್ವಿಕ್ ಮತ್ತು ಮಗಳು ಡಾ. ನಮ್ರತಾ.
ವಿದ್ಯಾಭ್ಯಾಸದ ಬಳಿಕ ಜಯದೇವ ಆಸ್ಪತ್ರೆಯ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇರಿ, ಉಪಪ್ರಾಧ್ಯಾಪಕ, ಪ್ರಾಧ್ಯಾಪಕ ಹುದ್ದೆಗೇರಿದರು. ಮೊದಲು ಜಯದೇವ ಆಸ್ಪತ್ರೆ ಇದ್ದದ್ದು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ. ನಂತರ ಬನ್ನೇರುಘಟ್ಟ ರಸ್ತೆಗೆ ಸ್ಥಳಾಂತರವಾಯಿತು. 2006ರಲ್ಲಿ ಡಾ. ಮಂಜುನಾಥ್ ಅದರ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಾಗ, ಅದು ಅವ್ಯವಸ್ಥೆಯ ತಾಣವಾಗಿತ್ತು. ಬ್ಯಾಂಕಲ್ಲಿ 5 ಕೋಟಿ ನಿಧಿ ಇದ್ದರೆ, 6 ಕೋಟಿ ರೂ. ಸಾಲ ಇತ್ತು! ಬಡವರ ಆರೋಗ್ಯ ನಿಧಿಯಲ್ಲಿ ಕೇವಲ 5 ಲಕ್ಷ ರೂ. ಇತ್ತು. ಪ್ರಸ್ತುತ ಆ ನಿಧಿಯಲ್ಲಿ 150 ಕೋಟಿ ರೂ. ಇದೆ. ಅದರಿಂದ ಬರುವ ಬಡ್ಡಿಯಿಂದ ಬಡ ಹೃದ್ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಅಥವಾ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯ ವಿಸ್ತರಣೆ:ಡಾ. ಮಂಜುನಾಥ್ 2007ರಿಂದ ಈವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದು ಐತಿಹಾಸಿಕ ಸಾಧನೆ. ಇವರ ಆಡಳಿತಾವಧಿಯಲ್ಲಿ ಆಸ್ಪತ್ರೆ ಶೇ. 500ರಷ್ಟು ಪ್ರಗತಿ ಸಾಧಿಸಿದೆ. 300 ಇದ್ದ ಹಾಸಿಗೆ ವ್ಯವಸ್ಥೆ ಪ್ರಸ್ತುತ 1250ಕ್ಕೇರಿದೆ. ಮೈಸೂರಿನಲ್ಲಿ 400, ಕಲಬುರಗಿಯಲ್ಲಿ 130 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇವೆ. ಬೆಂಗಳೂರಿನ ಆಸ್ಪತ್ರೆ ಆವರಣದಲ್ಲೇ ಇನ್ಪೋಸಿಸ್ ಫೌಂಡೇಶನ್​ನಿಂದ 350 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ವಿುಸಲಾಗಿದೆ. ಮಲ್ಲೇಶ್ವರಂನ ಕೆ.ಸಿ. ಜನರಲ್, ರಾಜಾಜಿನಗರದ ಇಎಸ್​ಐ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆಯ ಶಾಖೆಗಳಿವೆ. ಕಲ್ಯಾಣ ಕರ್ನಾಟಕದಲ್ಲಿ ಒತ್ತಡ ಹೆಚ್ಚಿದ್ದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ 371 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಉದ್ಘಾಟನೆಗೆ ಸಜ್ಜಾಗಿದೆ. ಹುಬ್ಬಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣ ನಡೆದಿದೆ. ಎಲ್ಲಾ ಶಾಖೆಗಳನ್ನು ಪರಿಗಣಿಸಿದರೆ 2000ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯದ ಹೃದ್ರೋಗ ಆಸ್ಪತ್ರೆ ಇದಾಗಿದೆ. ಈ ಆಸ್ಪತ್ರೆಯ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಡಾ. ಮಂಜುನಾಥ್. ಜಯದೇವ ಆಸ್ಪತ್ರೆಗೆ 45 ಸಂಘ-ಸಂಸ್ಥೆಗಳು ನೆರವಾಗಿವೆ. ದಾನಿಗಳ ಸಹಕಾರದಿಂದ ರಾಜ್ಯಾದ್ಯಂತ ವಿಸ್ತರಿಸಿ, ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್​ದಾರರಿಗೂ ಉಚಿತ ಶಸ್ತ್ರಚಿಕಿತ್ಸೆ ದೊರೆಯುತ್ತಿದೆ. ಹಿಂದೆ 50 ಸಾವಿರ ರೂ. ಇದ್ದ ಡೊನೇಷನ್ ಇಂದು 50 ಕೋಟಿ ರೂ. ತಲುಪಿದೆ. ಡಾ. ಮಂಜುನಾಥ್ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ದಾನಿಗಳು ಆಸ್ಪತ್ರೆಗೆ ನೆರವಾಗುತ್ತಿದ್ದಾರೆ. ಡಾ. ಮಂಜುನಾಥ್ ದೇವೇಗೌಡರ ಅಳಿಯನಾದರೂ ಒಮ್ಮೆಯೂ ಅವರ ಹೆಸರು ಹೇಳಿಲ್ಲ. ಕಾಯಕವೇ ಕೈಲಾಸ ಎಂಬಂತೆ ಕೆಲಸವನ್ನು ಪ್ರೀತಿಸಿದ್ದಾರೆ.
ಮಂಜುನಾಥ್ ಟೆಕ್ನಿಕ್:ಮೈಟ್ರಲ್ ಕವಾಟ ಸಂಕುಚಿತಗೊಂಡಾಗ ರಕ್ತ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಹೃದಯ ಅನೇಕ ತೊಂದರೆಗಳಿಗೆ ಒಳಗಾಗುತ್ತಿತ್ತು. ಇದನ್ನು ತಪ್ಪಿಸಲು ಸಂಶೋಧನೆ ನಡೆಸಿ ಬಲೂನ್ ಮೈಟ್ರಲ್ ವಾಲ್ವುಲೋಪ್ಲಾ್ಯಸ್ಟಿ ಕ್ರಮದಿಂದ ಆ ಸಮಸ್ಯೆಯನ್ನು ಶಸ್ತ್ರ ಚಿಕಿತ್ಸೆಯಿಲ್ಲದೇ ಸರಿಪಡಿಸಲಾಗುತ್ತಿತ್ತು. ಬಲೂನ್ ಮೈಟ್ರಲ್ ವಾಲ್ವುಲೋ ಪ್ಲಾ್ಯಸ್ಟಿ ಆಧರಿಸಿ ಅದಕ್ಕೆ ಇನ್ನೂ ಅತಿ ಸಣ್ಣ ತಂತಿ ಬಳಸಿ, ನವೀಕರಿಸಿ (ಮಾಡಿಫೈಡ್ ಓವರ್ ದಿ ವೈರ್) ಹೊಸ ತಂತ್ರ ಕಂಡುಹಿಡಿದರು. ಇದು ವಿಶ್ವದಲ್ಲೆಲ್ಲಾ ಮಂಜುನಾಥ್ ಟೆಕ್ನಿಕ್ ಎಂದೇ ಹೆಸರುವಾಸಿಯಾಗಿದೆ. ಎರಡೂವರೆ ಘಂಟೆ ತೆಗೆದುಕೊಳ್ಳುತ್ತಿದ್ದ ಚಿಕಿತ್ಸೆ ಈ ವಿಧಾನದಿಂದ ಅರ್ಧ ಘಂಟೆಗೆ ಇಳಿದಿದೆ. ಅರ್ಧದಷ್ಟು ವೆಚ್ಚವೂ ಕಡಿಮೆ ಆಗಿದೆ. ಇದು ಶೇ. 99 ಜನರಲ್ಲಿ ಯಶಸ್ವಿಯಾಗಿದ್ದು, ಫ್ರಾನ್ಸ್ ವೈದ್ಯರ ತಂಡ ಇವರ ಬಳಿ ಬಂದು ತರಬೇತಿಯನ್ನೂ ಪಡೆದಿದೆ.
ರಾಷ್ಟ್ರಮನ್ನಣೆ:ಜಯದೇವ ಆಸ್ಪತ್ರೆಗೆ ಕರ್ನಾಟಕದ ಜನ ಮಾತ್ರವಲ್ಲ, ದೇಶದ ಬೇರೆ ಬೇರೆ ಭಾಗದಿಂದ, ವಿದೇಶಗಳಿಂದ ರೋಗಿಗಳು ಬರುತ್ತಾರೆ. ಡಾ. ಮಂಜುನಾಥ್ ಅವಧಿಯಲ್ಲಿ 75 ಲಕ್ಷಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡಿದ್ದಾರೆ. ಅದರಲ್ಲಿ 8 ಲಕ್ಷ ಜನರಿಗೆ ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ, ಸ್ಟೆ್ಟಂಟ್ ಅಳವಡಿಕೆಯಾಗಿದೆ. ಇಂದಿಗೂ ಪ್ರತಿದಿನ 1200-1500 ಹೊರರೋಗಿಗಳು ಆಗಮಿಸುತ್ತಾರೆ. ಕಳೆದ ವರ್ಷ 6.55 ಲಕ್ಷಕ್ಕೂ ಹೆಚ್ಚು ಜನ ಹೊರರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. 68,902 ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದಾರೆ. 5500 ಜನರಿಗೆ ತೆರೆದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 3.78 ಲಕ್ಷ ಜನರಿಗೆ ಎಕೋ ಟೆಸ್ಟ್ ಮಾಡಲಾಗಿದೆ.
ಗಣ್ಯರ ಶ್ಲಾಘನೆ:ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜಯದೇವ ಆಸ್ಪತ್ರೆಯ ಉತ್ತಮ ಕಾರ್ಯವನ್ನು ಶ್ಲಾಘಿಸಿ ಪತ್ರ ಬರೆದಿದ್ದಾರೆ. ಸಂಸದೀಯ ಸ್ಥಾಯಿ ಸಮಿತಿ ಕೂಡ ‘ಡಾ. ಮಂಜುನಾಥ್ ಕಾರ್ಯವೈಖರಿ ದೇಶಕ್ಕೆ ಮಾದರಿ, ಈ ಆಸ್ಪತ್ರೆಯನ್ನು ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳು ಅನುಸರಿಸಬೇಕು’ ಎಂದು ಹೇಳಿದೆ. ಅನೇಕ ಗಣ್ಯರು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಐಐಎಂ ಬೆಂಗಳೂರು, ಲೀಡರ್​ಶಿಪ್ ಸ್ಕೂಲ್ ಆಫ್ ಸಿಂಗಾಪೂರ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಯೇಲ್ ಯುನಿರ್ವಸಿಟಿ ಮುಂತಾದವು ಕೂಡ ಜಯದೇವ ಆಸ್ಪತ್ರೆಯ ಕಡಿಮೆ ವೆಚ್ಚದ ಚಿಕಿತ್ಸಾ ವಿಧಾನವನ್ನು ಪ್ರಶಂಸಿಸಿವೆ.
350 ಹೃದಯ ತಜ್ಞರ ಕೊಡುಗೆ:ಜಯದೇವ ಆಸ್ಪತ್ರೆಯಲ್ಲಿ ಪ್ರಸ್ತುತ 120 ಜನ ನುರಿತ ಹೃದ್ರೋಗ ತಜ್ಞರಿದ್ದಾರೆ. 48 ಜನ ಕಾರ್ಡಿಯೋ ಥೋರಾಸಿಕ್ ಸರ್ಜನ್ಸ್ ಇದ್ದಾರೆ. ಹಾಗೆ 40 ಜನ ಅನಸ್ತೇಷಿಯಾ ತಜ್ಞರು, 6 ಜನ ವಾಸ್ಕು್ಯಲರ್ ಸರ್ಜನ್ಸ್ ಇದ್ದಾರೆ. ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಜಯದೇವ ಆಸ್ಪತ್ರೆಯಲ್ಲೇ ತರಬೇತಿ ಪಡೆದ 350ಕ್ಕೂ ಹೆಚ್ಚು ಹೃದ್ರೋಗ ತಜ್ಞರನ್ನು ಕೊಡುಗೆಯಾಗಿ ನೀಡಲಾಗಿದೆ. ದೇಶದಲ್ಲೇ ಅತಿಹೆಚ್ಚು ಕಾರ್ಡಿಯಾಲಜಿ ಸ್ನಾತಕೋತ್ತರ ಸೀಟ್​ಗಳು ಲಭ್ಯವಿರುವುದು ಇಲ್ಲೇ. ಇದರ ಕೀರ್ತಿ ಡಾ. ಮಂಜುನಾಥ್ ಅವರಿಗೆ ಸಲ್ಲಬೇಕು.
ಮೆಟ್ರೋದಿಂದ ಆಸ್ಪತ್ರೆಯ ರಕ್ಷಣೆ:ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ರೈಲು ಸಂಪರ್ಕಕ್ಕೆ ಇಂಟರ್ ಚೇಂಜ್ ಮೆಟ್ರೋ ಸ್ಟ್ರೇಷನ್ ನಿರ್ವಣದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಯ ಕಾಂಪೌಂಡ್ ಒಳಗೆ ಮೆಟ್ರೋ ಸ್ಟೇಷನ್ ಮಾಡುವ ಪ್ರಸ್ತಾವನೆಯನ್ನು ಬಿಎಂಆರ್​ಸಿಎಲ್ ಹೊಂದಿತ್ತು. ಇದರಿಂದ ಜಯದೇವ ಆಸ್ಪತ್ರೆಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿತ್ತು. ಮೆಟ್ರೋ ನಿರ್ವಣಕ್ಕಾಗಿ ಆಸ್ಪತ್ರೆಯನ್ನು ಸ್ಥಳಾಂತರಿಸಲು ಸರ್ಕಾರ ಯೋಜಿಸಿತ್ತು. ಡಾ. ಮಂಜುನಾಥ್ ನಿರಂತರ ಹೊರಾಡಿ, ಅಧಿಕಾರಿಗಳ ಮನವೊಲಿಸಿ ಆಸ್ಪತ್ರೆಯನ್ನು ಉಳಿಸಿಕೊಂಡರು.
ಪ್ರಶಸ್ತಿಗಳು:ಡಾ.ಮಂಜುನಾಥ್ 2007ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಪ್ರಧಾನಿ ಮೋದಿ 103ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್​ನಲ್ಲಿ ಡಾ. ಮಂಜುನಾಥ್ ಸಾಧನೆಯನ್ನು ಪ್ರಶಂಸಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ನಾಡೋಜ, ಏಷ್ಯಾ ಪೆಸಿಫಿಕ್ ವ್ಯಾಸ್ಕೂ್ಯಲರ್ ಸಮಾವೇಶದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ, ರಾಜೀವ್ ಗಾಂಧಿ ಆರೋಗ್ಯ ವಿವಿ ಗೌರವ ಡಾಕ್ಟರೇಟ್, ಸ್ಕಾಟ್ಲೆಂಡ್​ನ ರಾಯಲ್ ಕಾಲೇಜ್ ಫಿಜಿಶಿಯನ್ಸ್ ಫೆಲೋಶಿಪ್ ಸೇರಿದಂತೆ ಅನೇಕ ಪುರಸ್ಕಾರಗಳು ಇವರಿಗೆ ಸಿಕ್ಕಿವೆ.
ವಿಶ್ವದಾಖಲೆ:ಪ್ರತಿ ವರ್ಷ ಇಂಡೋ- ಅಮೆರಿಕನ್ ಶಿಬಿರ ಆಯೋಜಿಸಲಾಗುತ್ತದೆ. 5 ದಿನದಲ್ಲಿ 200 ಜನರಿಗೆ ಉಚಿತವಾಗಿ ಆಂಜಿಯೋಪ್ಲಾಸ್ಟಿ, ಸ್ಟ್ಟೆಂಟ್ ಅಳವಡಿಕೆ. 13 ವರ್ಷಗಳಿಂದ ಈ ಕಾರ್ಯಾಗಾರ ನಡೆಯುತ್ತಿರುವುದು ವಿಶ್ವದಾಖಲೆ. ದೇಶದಲ್ಲೇ ಅತಿ ಹೆಚ್ಚು ಆಂಜಿಯೋಪ್ಲಾಸ್ಟಿ ಮಾಡುವ ಸಂಸ್ಥೆ ಎಂದು ನ್ಯಾಶನಲ್ ಇಂಟರ್​ವೆನ್ಶನಲ್ ಕೌನ್ಸಿಲ್ ಮೆಚ್ಚುಗೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − seven =
Remember me
