ಬೆಂಗಳೂರು:ಅನ್ನದಾತರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಭಾರಿ ಗೋಲ್ಮಾಲ್ ನಡೆದಿರುವ ಅನುಮಾನ ಮೂಡಿದೆ. ದೊಡ್ಡ ರೈತರಿಂದ ರಾಗಿ ಖರೀದಿಸಲು ನಿರಾಕರಣೆ, ಸರ್ವರ್ ಡೌನ್ ಸಮಸ್ಯೆಯಂತಹ ಗೊಂದಲಗಳ ನಡುವೆ ಮೂರೇ ದಿನಕ್ಕೆ ನೋಂದಣಿ ಸ್ಥಗಿತವಾಗಿದೆ.
ಆರಂಭದಿಂದಲೇ ರಾಜ್ಯ ಸರ್ಕಾರ ಇಬ್ಬಗೆಯ ನೀತಿ ಜಾರಿಗೆ ತಂದು ಸಣ್ಣ, ಮಧ್ಯಮ ರೈತರಿಂದ ಮಾತ್ರ ರಾಗಿ ಖರೀದಿಗೆ ಅವಕಾಶ ಕೊಟ್ಟು ದೊಡ್ಡ ರೈತರನ್ನು ಯೋಜನೆಯಿಂದ ಹೊರಗೆ ಇಟ್ಟಿರುವುದು ಅನ್ನದಾತರನ್ನು ಕೆರಳಿಸಿದೆ. 2021-22ನೇ ಸಾಲಿನ ಮುಂಗಾರು ಬೆಳೆಗಳನ್ನು ಎಂಎಸ್​ಪಿ ಅನ್ವಯ 2ನೇ ಸುತ್ತಿನಲ್ಲಿ 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಏ.25ರಿಂದ ಅವಕಾಶ ಕಲ್ಪಿಸಲಾಗಿತ್ತು. ಮೊದಲನೇ ದಿನ ಮತ್ತು ಎರಡನೇ ದಿನ ಸಂಪೂರ್ಣ ವೆಬ್​ಸೈಟ್ ಸರ್ವರ್ ಡೌನ್ ಇದ್ದ ಕಾರಣ ರೈತರು ನೋಂದಣಿ ಮಾಡಿಸಲು ಸಾಧ್ಯವಾಗಲಿಲ್ಲ. ಇದರಿಂದ ರಾಜ್ಯದ ವಿವಿಧೆಡೆ ಪ್ರತಿಭಟನೆಗಳೂ ನಡೆದವು.
|ಕುರುಬೂರು ಶಾಂತಕುಮಾರ್ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ
ಮುಖ್ಯಾಂಶಗಳು:
ದಾವಣಗೆರೆ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 3,466 ಮೆ. ಟನ್, ಬೇಸಿಗೆ ಹಂಗಾಮಿನಲ್ಲಿ 821 ಮೆ.ಟನ್ ರಾಗಿ ಬೆಳೆಯಲಾಗಿದೆ. ಮಾರ್ಚ್ ಅಂತ್ಯಕ್ಕೆ ಖರೀದಿ ಕೇಂದ್ರಗಳ ಮೂಲಕ 628 ರೈತರಿಂದ 11,601 ಕ್ವಿಂಟಾಲ್ ರಾಗಿ ಖರೀದಿಸಲಾಗಿತ್ತು. 3 ದಿನದಲ್ಲಿ 1420 ಮಂದಿ ನೋಂದಣಿ ಆಗಿದ್ದಾರೆ. ತುರ್ತು ಹಣಕ್ಕಾಗಿ ಕೆಲವರು ಖಾಸಗಿಯಾಗಿ ಮಾರಾಟ ಮಾಡಿದ್ದಾರೆ. ಮಧ್ಯವರ್ತಿಗಳ ಹಾವಳಿ, ಬೆಳೆ ದೃಢೀಕರಣದಲ್ಲಿ ಲೋಪವಾದ ಆರೋಪವಿದೆ. ಸಕಾಲಕ್ಕೆ ಅರ್ಜಿ ಸಲ್ಲಿಸದ ಅರ್ಹ ರೈತರು ಖರೀದಿ ಕೇಂದ್ರಗಳ ವ್ಯಾಪ್ತಿಯಿಂದ ಹೊರಗೆ ಉಳಿದಿದ್ದಾರೆ.
ಮಂಗಳವಾರ ಮಧ್ಯಾಹ್ನದಿಂದ ರಾತ್ರಿವರೆಗೂ ನೋಂದಣಿ ಮತ್ತು ಬುಧವಾರ ನೋಂದಣಿ ಪ್ರಕ್ರಿಯೆ ನಡೆದಿದೆ. ಗುರುವಾರ ಬೆಳಗ್ಗೆ ಬಂದ ರೈತರಿಗೆ ವೆಬ್​ಸೈಟ್ ಓಪನ್ ಆಗುತ್ತಿಲ್ಲ. ಅಷ್ಟರಲ್ಲಾಗಲೇ 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮುಗಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಬಹುತೇಕ ರೈತರಿಗೆ ನೋಂದಣಿಯೇ ಸಾಧ್ಯವಾಗದಿದ್ದರೂ ಟಾರ್ಗೆಟ್ ಮುಗಿದಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ರಾಗಿ ಖರೀದಿಯಲ್ಲಿ ಗೋಲ್ಮಾಲ್ ನಡೆದಿರುವ ಶಂಕೆ ಉಂಟಾಗಿದೆ.
2.11 ಲಕ್ಷ ರೈತರಿಂದ ಖರೀದಿ:2020-21ನೇ ಸಾಲಿನಲ್ಲಿ ಪ್ರತಿ ರೈತನಿಂದ ಗರಿಷ್ಠ 75 ಕ್ವಿಂಟಾಲ್ ಖರೀದಿ ನಿಯಮದಡಿ ಒಟ್ಟು 2.06 ಲಕ್ಷ ರೈತರಿಂದ 4.7 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲಾಗಿತ್ತು. ಪ್ರತಿ ಕ್ವಿಂಟಾಲ್​ಗೆ 3,295 ರೂ. ಬೆಂಬಲ ಬೆಲೆ ಘೋಷಿಸಲಾಗಿತ್ತು. ಈ ಬಾರಿ ಕ್ವಿಂಟಾಲ್​ಗೆ 3,377 ರೂ. ನಿಗದಿ ಮಾಡಿದ್ದರೂ, 20 ಕ್ವಿಂಟಾಲ್​ಗಳ ಗರಿಷ್ಠ ಮಿತಿ ವಿಧಿಸಲಾಗಿದೆ. ಮೊದಲ ಕಂತಿನಲ್ಲಿ 1.36 ಲಕ್ಷ ರೈತರಿಂದ 2.10 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲಾಗಿದೆ. ಇದೀಗ 74.76 ಸಾವಿರ ರೈತರಿಂದ 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಮಾರಾಟಕ್ಕೆ ನೋಂದಣಿಯಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ರಾಗಿ ಮಾರಾಟಕ್ಕೆ ಕಾಡಿದ ಸರ್ವರ್:ಚಿಕ್ಕಮಗಳೂರು ಜಿಲ್ಲೆಯ ರಾಗಿ ಖರೀದಿ ಕೇಂದ್ರಗಳಲ್ಲಿ ಬುಧವಾರವೇ ನೋಂದಣಿ ಅಂತ್ಯವಾಗಿದೆ. ಸರ್ವರ್ ಸಮಸ್ಯೆಯಿಂದ ನೋಂದಣಿ ವಿಳಂಬವಾದ ಹಿನ್ನೆಲೆಯಲ್ಲಿ ರೈತರು ಅಧಿಕಾರಿಗಳ ವಿರುದ್ಧ ಸೋಮವಾರ ಪ್ರತಿಭಟನೆ ಸಹ ನಡೆಸಿದ್ದರು. ಕಡೂರು ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದ ಮುಂದೆ ಬೆಳಗ್ಗೆಯೇ ಸರತಿ ಸಾಲಿನಲ್ಲಿ ನಿಂತಿದ್ದರು. ಅಜ್ಜಂಪುರದಲ್ಲಿ ಒಂದೇ ಕಂಪ್ಯೂಟರ್​ನಲ್ಲಿ ನೋಂದಣಿ ಮಾಡುತ್ತಿದ್ದ ಕಾರಣ ಅನೇಕ ರೈತರಿಗೆ ಅವಕಾಶ ಸಿಗಲಿಲ್ಲ. ಜನರ ಪ್ರತಿಭಟನೆ ಬಳಿಕ ಅಧಿಕಾರಿಗಳು ಮತ್ತಷ್ಟು ಕಂಪ್ಯೂಟರ್ ಅಳವಡಿಸಿ ನೋಂದಣಿಗೆ ಅವಕಾಶ ಕಲ್ಪಿಸಿದ್ದರು.
ಭ್ರಷ್ಟಾಚಾರಕ್ಕೆ ದಾರಿ:ಮೈಸೂರು ಜಿಲ್ಲೆಯಲ್ಲಿ ತೆರೆದಿರುವ 9 ಖರೀದಿ ಕೇಂದ್ರದಲ್ಲಿ ಪ್ರಕ್ರಿಯೆ ಶುರುವಾಗುವ ಮುನ್ನವೇ ಶೇ.80 ರೈತರು ರಾಗಿ ಮಾರಾಟ ಮಾಡಿದ್ದಾರೆ. ಕೃಷಿ ಇಲಾಖೆಯ ಫ್ರೂಟ್ಸ್ (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ) ವೆಬ್​ಸೈಟ್​ನಲ್ಲಿ ನೋಂದಣಿಗೆ ರೈತರು ಅಲೆಯುವಂತಾಗಿದೆ. ಇದಲ್ಲದೆ, ರಾಗಿ ಗುಣಮಟ್ಟ, ಗ್ರೇಡರ್​ಗಳು ಪರಿಶೀಲಿಸಿ ದೃಢೀಕರಿಸಿದ ನಂತರವೇ ಖರೀದಿಸಲಾಗುತ್ತಿದೆ. ಇದು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ಅನುಮಾನ ಏಕೆ?:ರೈತರಿಂದ ಕ್ವಿಂಟಾಲ್​ಗೆ 2,500 ರೂ.ರಂತೆ ರಾಗಿ ಖರೀದಿಸಿ ದಲ್ಲಾಳಿಗಳು ಬೆಂಬಲ ಬೆಲೆಗೆ 3,377 ರೂ.ಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೃಷಿ ಇಲಾಖೆಯಿಂದ ಎಫ್​ಐಡಿ ನಂಬರ್ ಪಡೆದು ಬೇರೆಯವರ ಹೆಸರಿನಲ್ಲಿ ರಾಗಿ ಮಾರಾಟ ದಂಧೆ ನಡೆಯುತ್ತಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿವೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದವು. 2021-22ನೇ ಸಾಲಿನ ಮುಂಗಾರು ಬೆಳೆಗಳನ್ನು ಎಂಎಸ್​ಪಿ ಅನ್ವಯ ರಾಗಿ, ಭತ್ತ, ಬಿಳಿಜೋಳ ಸೇರಿ 8.2 ಲಕ್ಷ ಮೆಟ್ರಿಕ್ ಟನ್ ಕೃಷಿ ಉತ್ಪನ್ನ ಖರೀದಿಗೆ ಕೇಂದ್ರ ಅವಕಾಶ ಕಲ್ಪಿಸಿತ್ತು. ಅಂತೆಯೇ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ರೈತರಿಗೆ ತಾಲೂಕು ಕಚೇರಿಗಳಲ್ಲಿ ಮಾರ್ಚ್ ಅಂತ್ಯದವರೆಗೆ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿತ್ತು. ಆದರೆ, ಜ.24ಕ್ಕೆ ರಾಗಿ ನೋಂದಣಿ ಸ್ಥಗಿತಗೊಂಡಿತ್ತು. ನಿಗದಿತ 2.10 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಟಾರ್ಗೆಟ್ ಮುಗಿದಿದೆ ಎಂದು ಹಾರಿಕೆ ಉತ್ತರ ನೀಡಲಾಗಿತ್ತು. ಇದೀಗ ಮತ್ತೆ ಮೂರೇ ದಿನಕ್ಕೆ ಟಾರ್ಗೆಟ್ ಮುಗಿದಿದೆ ಎಂದು ಹೇಳುತ್ತಿದ್ದಾರೆ.
ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಮಂಗಳೂರು ರೌಡಿಶೀಟರ್ ಕಕ್ಕೆ ರಾಹುಲ್ ಬರ್ಬರ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
