ಬೆಂಗಳೂರು:ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಆಯೋಗ ರಚನೆ, ವಸತಿ ಯೋಜನೆಗಳ ಆದಾಯ ಮಿತಿ ಹೆಚ್ಚಳ, ನಕಲಿ ಬಿತ್ತನೆ ಬೀಜ ತಡೆಗೆ ಪ್ರಯತ್ನ, ಅರಿವು ವ್ಯಾಪ್ತಿಗೆ ಎಲ್ಲ ಪದವಿಗಳ ಸೇರ್ಪಡೆ, ಎಲ್ಲ ವಿದ್ಯಾರ್ಥಿ ವೇತನಗಳ ಮುಂದುವರಿಕೆ, ಬೆಂಗಳೂರು ಶಾಸಕರ ಅನುದಾನ ಹಂಚಿಕೆ ತಾರತಮ್ಯ ನಿವಾರಣೆ, ಗಂಗಾ ಕಲ್ಯಾಣ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ..
ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಈ ಎಲ್ಲ ಘೋಷಣೆಗಳ ಮೂಲಕ ಸಮಾಜದ ವಿವಿಧ ವರ್ಗಗಳಿಗೆ ಖುಷಿ ಹಂಚಿದರು. ಬಜೆಟ್ ಮೇಲೆ 19 ಶಾಸಕರು 24 ಗಂಟೆ ನಡೆಸಿದ ಚರ್ಚೆಗೆ ಸಿಎಂ ಸುದೀರ್ಘ ಉತ್ತರ ನೀಡುವುದರೊಂದಿಗೆ ತಮ್ಮ ಆಯವ್ಯಯ ಸಮರ್ಥಿಸಿಕೊಳ್ಳುತ್ತಲೇ ರಾಜ್ಯವನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮಾಡುವ, ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಆಯವ್ಯಯ ಎಂದು ಬಣ್ಣಿಸಿದರು. ಡಬಲ್ ಇಂಜಿನ್ ಸರ್ಕಾರ ಪ್ರಗತಿಯ ಹಾದಿಯಲ್ಲಿದೆ ಎಂದು ಪ್ರತಿಪಕ್ಷಗಳ ಟೀಕೆಗೆ ಎದಿರೇಟು ನೀಡುವ ಅವಕಾಶವನ್ನು ಬಲವಾಗಿಯೇ ಬಳಸಿಕೊಂಡರು.
ಹೊರ ಗುತ್ತಿಗೆ ನಿಲ್ಲಿಸಿ:ಈ ವೇಳೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಗುತ್ತಿಗೆ ಆಧಾರದ ಮೇಲೆ ನೌಕರರ ನೇಮಕ ಮಾಡುವುದನ್ನು ತಡೆಹಿಡಿಯಬೇಕು. ಗುತ್ತಿಗೆ ಮೇಲೆ ತೆಗೆದುಕೊಂಡವರನ್ನು ಬೇರೆ, ಬೇರೆ ಒತ್ತಡಗಳಿಂದ ಕಾಯಂ ಮಾಡಿಕೊಳ್ಳಬೇಕಾಗುತ್ತದೆ. ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಾಗ ಮೀಸಲಾತಿ ಇರುವುದಿಲ್ಲ. ಇದರಿಂದ ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ನಮ್ಮ ಕಾಲದಲ್ಲೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿತ್ತು. ಅದು ಬೇರೆ ವಿಚಾರ. ಆದರೆ, ಇದನ್ನೇ ನೀವು ಮುಂದುವರಿಸುತ್ತ ಹೋದರೇ ಮೀಸಲಾತಿ ಇರಲ್ಲ ಎಂದರು.
ಹೊರಗುತ್ತಿಗೆ ನೇಮಕಾತಿಯಿಂದ ಸರ್ಕಾರಕ್ಕೆ ಹೊರೆ ಹೆಚ್ಚಾಗಲಿದೆ. ಅವರಿಗೆ ಸಂಬಳ ಕೊಡಬೇಕಲ್ಲ. ಯಾವನೋ ಗುತ್ತಿಗೆದಾರ ಇರುತ್ತಾನೆ. ಆತನೇ ಜೇಬು ತುಂಬಿಸಿಕೊಳ್ಳುತ್ತಾನೆ. ಪಾಪ ಕೆಲಸಗಾರರಿಗೆ ಪೂರ್ಣ ಸಂಬಳ ಸಿಗಲ್ಲ. ಸಮಾನ ಕೆಲಸ, ಸಮಾನ ವೇತನ ಸಿಗುವುದಿಲ್ಲ. ಇತ್ತ ಮೀಸಲಾತಿ ಪಾಲಿಸಲು ಆಗುವುದಿಲ್ಲ. ಹಾಗಾಗಿ ಹೊರಗುತ್ತಿಗೆ ನಿಲ್ಲಿಸುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು. ಸಿಎಂ ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದರು.
ಬೀಜ ಉತ್ಪಾದನೆ:ನಕಲಿ ಬಿತ್ತನೆ ಬೀಜ ಹಾವಳಿಗೆ ತಡೆ ಹಾಕಲು ಸರ್ಕಾರದಿಂದಲೇ ಬಿತ್ತನೆ ಬೀಜ ಉತ್ಪಾದನೆ ಹೆಚ್ಚಿಸಲಾಗುವುದು. ಇದರಿಂದ ಸ್ವಾವಲಂಬಿಯಾಗಲು ಸಾಧ್ಯ. ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವುದಕ್ಕೂ ಸಹಾಯವಾಗುತ್ತದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ವಿದ್ಯಾರ್ಥಿ ವೇತನ ನಿಲ್ಲಿಸುವುದಿಲ್ಲ:ಮಕ್ಕಳ ಶಿಕ್ಷಣ ಮುಂದುವರಿಸುವುದಕ್ಕೆ ಪೂರಕವಾಗಿ ಜಾರಿಯಲ್ಲಿರುವ ಯಾವುದೇ ವಿದ್ಯಾರ್ಥಿ ವೇತನವನ್ನು ನಿಲ್ಲಿಸುವುದಿಲ್ಲ. ವಿದ್ಯಾಸಿರಿ ಯೋಜನೆಯನ್ನೂ ಮುಂದುವರಿಸಲಾಗುವುದು. ಅರಿವು ಯೋಜನೆಯ ವ್ಯಾಪ್ತಿಗೆ ಎಲ್ಲ ಪದವಿ ಸೇರಿಸಲಾಗುವುದು. ಗಂಗಾ ಕಲ್ಯಾಣ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ನೇರ ಪಾವತಿ ಮಾಡಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ತಾರತಮ್ಯ ನಿವಾರಣೆ:ಬೆಂಗಳೂರಿನ ಶಾಸಕರು ಅನುದಾನದ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂಬ ದೂರು ಹೇಳಿದ್ದಾರೆ. ಕೂಡಲೇ ತಾರತಮ್ಯ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಬೊಮ್ಮಾಯಿ ತಿಳಿಸಿದರು.
ಸರಿಯಾದ ದಾರಿಯಲ್ಲಿ ಆರ್ಥಿಕತೆ:ರಾಜ್ಯದ ಡಬಲ್ ಇಂಜಿನ್ ಸರ್ಕಾರ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಬಜೆಟ್ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ. ರಾಜ್ಯ ಪ್ರಗತಿಯ ದಾರಿಯಲ್ಲಿದ್ದು ಇನ್ನಷ್ಟು ಶಕ್ತಿಶಾಲಿಯನ್ನಾಗಿ ರೂಪಿಸಲು ಸಹಕಾರಿಯಾಗುತ್ತದೆ ಎಂದು ಬೊಮ್ಮಾಯಿ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.
ಕೇಂದ್ರದಿಂದ ಬರುವ ಅನುದಾನ ಕಡಿಮೆಯಾಗಿಲ್ಲ. 2009-14 ರ ತನಕ 39828 ಕೋಟಿ ರೂ. ಬಂದಿದ್ದರೆ, 2014-19ರ ತನಕ 74373 ಕೋಟಿ ರೂ., 2019 ರಿಂದ ಇಲ್ಲಿಯ ತನಕ 52761 ಕೋಟಿ ರೂ. ಬಂದಿದೆ. 15ನೇ ಹಣಕಾಸು ಆಯೋಗ 24079 ಕೋಟಿ ರೂ.ಗಳಿಗೆ ಶಿಫಾರಸು ಮಾಡಿದ್ದರೂ ಕೇಂದ್ರ 27145 ಕೋಟಿ ರೂ. ನೀಡಿದೆ. ಎಲ್ಲ ಸಂದರ್ಭದಲ್ಲಿಯೂ ಕೇಂದ್ರದಿಂದ ಸಹಕಾರ ಸಿಕ್ಕಿದೆ ಎಂದು ವಿವರಿಸಿದರು. ಸಾಲ ಮರುಪಾವತಿ, ರಾಜಸ್ವ ಕೊರತೆಯಾಗದಂತೆ ಎಚ್ಚರ ವಹಿಸಿದ್ದೇವೆ. ಕೇಂದ್ರ ಸರ್ಕಾರದಿಂದ 12,909 ಕೋಟಿ ರೂ. ಬರಬೇಕಾಗಿದ್ದು, ಅದನ್ನು ಸಹ ಮುಂದಿನ ದಿನಗಳಲ್ಲಿ ನೀಡುವುದಾಗಿ ಭರವಸೆ ಸಿಕ್ಕಿದೆ ಎಂದು ಬೊಮ್ಮಾಯಿ ತಿಳಿಸಿದರು.
ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2022-23ನೆ ಸಾಲಿನ ಚೊಚ್ಚಲ ಆಯವ್ಯಯಕ್ಕೆ ವಿಧಾನಸಭೆ ಅನುಮೋದನೆ ನೀಡಿತು. ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆಯೂ 2,65,720 ಕೋಟಿ ರೂ.ಗಳ ಬಜೆಟ್ ಪಾಸು ಮಾಡಲಾಯಿತು. ಬಿಜೆಪಿ ಸದಸ್ಯರ ಜೈಕಾರದೊಂದಿಗೆ ಒಪ್ಪಿಗೆ ನೀಡಲಾಯಿತು. ಮಾ.4 ರಂದು ಬೊಮ್ಮಾಯಿ ಬಜೆಟ್ ಮಂಡಿಸಿದ್ದರು. ‘ಇದೊಂದು ಸರ್ವರ್ಸ³, ಸರ್ವವ್ಯಾಪಿ ಬಜೆಟ್. ವಿನೂತನ ಚಿಂತನೆ, ಅಭಿವೃದ್ಧಿ ಪರ ನೀತಿಗಳು ಈ ಬಜೆಟ್​ನಲ್ಲಿವೆ. ಜನತೆಯ ಬದುಕಿಗೆ ಭರವಸೆ ಕೊಡುವ ಬಜೆಟ್ ಇದಾಗಿದೆ. ಸಭೆ ಅನುಮೋದನೆ ನೀಡಬೇಕು’ ಎಂದು ಬೊಮ್ಮಾಯಿ ಕೇಳಿದರು.
ಕೇಂದ್ರ ಮಾದರಿ ವೇತನ ಪರಿಷ್ಕರಣೆಗೆ ಆಯೋಗ ರಚನೆ ಘೋಷಣೆ ಸ್ವಾಗತಿಸುತ್ತೇವೆ. ಕೂಡಲೇ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಿ. ಜುಲೈನಿಂದಲೇ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಮಾಡಬೇಕು.
|ಪಿ. ಗುರುಸ್ವಾಮಿಅಧ್ಯಕ್ಷ, ಸಚಿವಾಲಯ ನೌಕರರ ಸಂಘ
ಬಿಎಸ್​ವೈ ಪಟ್ಟಿಗೆ ಮಣಿದ ಸಿಎಂ:ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ 7ನೇ ವೇತನ ಆಯೋಗದ ಅನ್ವಯ ಸಂಬಳ ಏರಿಕೆ ಮಾಡುವಂತೆ ಬಜೆಟ್​ಗೆ ಮುನ್ನವೇ ಸಿಎಂಗೆ ಪತ್ರ ಬರೆದು ಸರ್ಕಾರಿ ನೌಕರರ ಪರವಾಗಿ ಒತ್ತಡ ಹೇರಿದ್ದರು. ಆದರೆ ಬಜೆಟ್​ನಲ್ಲಿ ಘೋಷಣೆಯಾಗದ ಕಾರಣ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ದರಿಂದ ಉತ್ತರ ನೀಡುವ ಸಂದರ್ಭದಲ್ಲಿ ಸಿಎಂ ಘೋಷಣೆ ಮಾಡಿದ್ದಾರೆ.
ಆದಾಯ ಮಿತಿ ಏರಿಕೆ:ವಸತಿ ಯೋಜನೆಗಳ ಆದಾಯ ಮಿತಿ ಹೆಚ್ಚಿಸಲಾಗುವುದೆಂದು ಸಿಎಂ ಘೋಷಿಸಿದರು. ಗ್ರಾಮೀಣ ಭಾಗದಲ್ಲಿ 32 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗಳಿಗೆ, ನಗರ ಪ್ರದೇಶದಲ್ಲಿ 87,600 ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ವಿವರಿಸಿದರು.
2.58 ಲಕ್ಷ ಹುದ್ದೆ ಖಾಲಿ!:ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮೂರೂವರೇ ಲಕ್ಷ ಹುದ್ದೆ ಖಾಲಿ ಇವೆ. ನಾಲ್ಕೂವರೆ ಲಕ್ಷ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ನ ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಆದರೆ, ಒಟ್ಟು 2,58,709 ಹುದ್ದೆ ಖಾಲಿ ಇವೆ. ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ 91043 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ 77 ಸಾವಿರ ಮಂದಿ ಅನ್​ಸ್ಕಿಲ್ಡ್ ಗ್ರೂಪ್ ಡಿ ನೌಕರರು ಇದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದರು. ದೊಡ್ಡ ಪ್ರಮಾಣದಲ್ಲಿ ಹೊರಗುತ್ತಿಗೆ ಇಲ್ಲ. ಎರಡೂವರೆ ಲಕ್ಷ ಹುದ್ದೆ ಖಾಲಿ ಇದ್ದು ಕೆಲಸದ ಒತ್ತಡ ಇದ್ದರೂ ನೌಕರರು ಕೆಲಸ ಮಾಡುತ್ತಿದ್ದಾರೆ. ಇದನ್ನು ಮನಗಂಡು ವೇತನ ಪರಿಷ್ಕರಣೆಗೆ ಆಯೋಗ ರಚಿಸಲಾಗುತ್ತಿದೆ ಎಂದರು.
ಕೇಂದ್ರ ಮಾದರಿ ವೇತನ ಪರಿಷ್ಕರಣೆಗಾಗಿ ಸಮಿತಿ ರಚಿಸುವ ಭರವಸೆ ನೀಡಿರುವ ಸಿಎಂಗೆ ನೌಕರರ ಪರವಾಗಿ ಅಭಿನಂದನೆಗಳು. ಈ ಬೇಡಿಕೆ ಈಡೇರಿದರೆ ನೌಕರರ 40 ವರ್ಷಗಳ ಬೇಡಿಕೆ ಈಡೇರಿದಂತಾಗುತ್ತದೆ. ಸಿಎಂ ಮೇಲೆ ಒತ್ತಡ ತಂದ ಯಡಿಯೂರಪ್ಪ ಸೇರಿದಂತೆ ಎಲ್ಲ ಶಾಸಕರಿಗೂ ಧನ್ಯವಾದಗಳು.
|ಸಿ.ಎಸ್. ಷಡಾಕ್ಷರಿಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ
ಹೋಳಿಗೆ ಬದಲು ರೊಟ್ಟಿ ತಿನ್ನುವೆ…:ಯುಗಾದಿಗೆ ಮುನ್ನವೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಪ್ರಕಟಿಸಿದ ಬೊಮ್ಮಾಯಿ, ನೌಕರರ ಬಹುದಿನಗಳ ಬೇಡಿಕೆಯಂತೆ ಕೇಂದ್ರ ಸರ್ಕಾರಿ ನೌಕರರ ಸಮಾನಾಂತರವಾಗಿ ವೇತನ ಪರಿಷ್ಕರಿಸಲು ಆಯೋಗ ರಚಿಸುವುದಾಗಿ ಘೋಷಿಸಿದರು. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಶೀಘ್ರ ಆಯೋಗ ರಚಿಸುತ್ತೇವೆ. ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ನೀಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ವಿಸõತ ಅಧ್ಯಯನ ಮಾಡಿ, ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ವರದಿ ತಯಾರಿಸಲು ಶೀಘ್ರವೇ ವೇತನ ಆಯೋಗ ರಚನೆ ಮಾಡಲಾಗುವುದು ಎಂದರು. ಸಾಲ ಮಾಡಿ ಹೋಳಿಗೆ ತಿನ್ನದಿದ್ದರೂ ನಾನು ರೊಟ್ಟಿ ತಿನ್ನುವವ ಎಂದು ಇದೇ ವೇಳೆ ವಿಪಕ್ಷಗಳಿಗೆ ಸಿಎಂ ತಿರುಗೇಟು ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
