ಬೆಂಗಳೂರು:ರಾಜ್ಯದಲ್ಲಿ ಉಂಟಾಗಿರುವ ಕರೊನಾ ಲಸಿಕೆ ಕೊರತೆ ಇನ್ನು ಕೆಲ ದಿನಗಳಲ್ಲಿ ನಿವಾರಣೆಯಾಗುವ ಸುಳಿವು ಸಿಕ್ಕಿದೆ. ಎರಡು ಲಸಿಕೆಗಳು ರಾಜ್ಯದಲ್ಲೇ ಉತ್ಪಾದನೆಯಾಗಲಿದ್ದು, ಇದರಿಂದ ಪೂರೈಕೆ ಹೆಚ್ಚಳವಾಗಲಿದೆ. ಜತೆಗೆ ರಾಜ್ಯ ಸರ್ಕಾರ ಕೂಡ ಲಸಿಕೆ ಖರೀದಿ ಪ್ರಕ್ರಿಯೆ ಚುರುಕುಗೊಳಿಸಿದ್ದು, ಇನ್ನು 10 ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆಗಳು ಸಿಗುವ ಅಂದಾಜಿದೆ. ಇದರ ಜತೆಗೆ ರಷ್ಯಾದ ಸ್ಪುಟ್ನಿಕ್ ಲಸಿಕೆ ಬೆಂಗಳೂರಿನಲ್ಲಿ ಲಭ್ಯವಾಗಲಿದೆ. ಹೀಗಾಗಿ 18-44 ವಯೋಮಾನದವರಿಗೂ ಲಸಿಕೆ ಸಿಗುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಉಚಿತ ವಿತರಣೆಗಾಗಿ ಈವರೆಗೆ ರಾಜ್ಯಕ್ಕೆ 1.18 ಕೋಟಿ ಡೋಸ್ ಕಳಿಸಿಕೊಟ್ಟಿದೆ. ರಾಜ್ಯ ಸರ್ಕಾರ ಉಚಿತ ವಿತರಣೆಗಾಗಿ ಮೂರು ಕೋಟಿ ಲಸಿಕೆಗಾಗಿ ಕಂಪನಿಗಳಿಗೆ ಆರ್ಡರ್ ನೀಡಿದೆ. ಜಾಗತಿಕ ಟೆಂಡರ್ ಕೂಡ ಕರೆದಿದೆ. 3 ಕೋಟಿ ಆರ್ಡರ್ ನೀಡಿದ್ದರ ಪೈಕಿ 7 ಲಕ್ಷ ಡೋಸ್ ಮಾತ್ರ ಬಂದಿದೆ. ಉಳಿದದ್ದು ವಿವಿಧ ಕಂತುಗಳಲ್ಲಿ ಮುಂದಿನ ವಾರ ರಾಜ್ಯಕ್ಕೆ ಬರುವ ನಿರೀಕ್ಷೆ ಇದೆ. ಸದ್ಯದಲ್ಲೇ ಕೇಂದ್ರ ಸರ್ಕಾರದ ಮತ್ತೊಂದು ಕಂತಿನ ಲಸಿಕೆ ರಾಜ್ಯಕ್ಕೆ ತಲುಪಲಿದೆ. ಮೇ 1ರಿಂದ ಆರಂಭವಾದ ಲಸಿಕೆ ಅಭಿಯಾನ ಪ್ರಸ್ತುತ ಮಂದಗತಿಯಲ್ಲಿ ಸಾಗಿದ್ದು, ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಲಸಿಕೆ ಕೊರತೆ ಬಗ್ಗೆ ಆಗಿಂದಾಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಕೋರಿಕೆ ಸಲ್ಲಿಸುತ್ತಿದೆ. ಮುಂದಿನ ಹತ್ತು ದಿನದಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ರಾಜ್ಯಕ್ಕೆ ಬರಲಿದೆ ಎನ್ನಲಾಗಿದೆ. ಅಧಿಕಾರಿಗಳು ಲಸಿಕೆ ಕೇಂದ್ರಗಳನ್ನು ಗುರುತಿಸಿ, ಜಿಯೋ ಮ್ಯಾಪಿಂಗ್ ಮಾಡುವ ಪ್ರಯತ್ನದಲ್ಲಿದ್ದಾರೆ.
ಆರೋಗ್ಯ ಸಚಿವ ಡಾ. ಸುಧಾಕರ್ ಒತ್ತಡ ತಂತ್ರ:ಆರೋಗ್ಯ ಸಚಿವ ಡಾ. ಸುಧಾಕರ್ ಸೋಮವಾರ ಭಾರತ್ ಬಯೋಟೆಕ್​ನ ಮುಖ್ಯಸ್ಥ ಜಲ್ ಎಲ್ಲಾ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ್ದು, ಬೇಡಿಕೆ ಬಗ್ಗೆ ಚರ್ಚೆ ರ್ಚಚಿಸಿದ್ದಾರೆ. ಮಾಲೂರು ಘಟಕದ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಬೆಂಗಳೂರಿಗೆ ಸ್ಪುಟ್ನಿಕ್ ಲಸಿಕೆ:ಹೈದರಾಬಾದ್ ಮತ್ತು ವಿಶಾಖ ಪಟ್ಟಣಂ ನಗರಗಳ ನಂತರ ಬೆಂಗಳೂರು, ದೆಹಲಿ, ಮುಂಬೈ, ಅಹಮದಾಬಾದ್, ಚೆನ್ನೈ, ಕೋಲ್ಕತಾ ಮತ್ತು ಪುಣೆ ನಗರಗಳಲ್ಲೂ ಸ್ಪುಟ್ನಿಕ್ ಲಸಿಕೆ ಪ್ರಾಯೋಗಿಕ ವಿತರಣಾ ಕಾರ್ಯಕ್ರಮ ಆಯೋಜಿ ಸಲು ನಿರ್ಧರಿಸಲಾಗಿದೆ. ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಸಹಯೋಗದಲ್ಲಿ ಸ್ಪುಟ್ನಿಕ್ ವಿ ಲಸಿಕೆ ನೀಡಿಕೆಯ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಅಪೋಲೊ ಹಾಸ್ಪಿಟಲ್ಸ್ ಸೋಮವಾರ ಚಾಲನೆ ಕೊಟ್ಟಿದೆ. ಮೊದಲ ಹಂತವಾಗಿ ಹೈದರಾಬಾದ್​ನಲ್ಲಿ ಚಾಲನೆ ಸಿಕ್ಕಿದ್ದು, ಮಂಗಳವಾರ ವಿಶಾಖಪಟ್ಟಣಂನಲ್ಲಿ ಉದ್ಘಾಟನೆಯಾಗಲಿದೆ. ಮೊದಲ ಕಂತಿನಲ್ಲಿ 1.50 ಲಕ್ಷ ಲಸಿಕೆಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಆಯಾ ನಗರಗಳಲ್ಲಿರುವ ಅಪೋಲೊ ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ. ಕೋವಿನ್ ಪೋರ್ಟಲ್​ನಲ್ಲಿ ನೋಂದಣಿ ಮೂಲಕ ಲಸಿಕೆ ನೀಡಲಾಗುವುದು. ಸದ್ಯಕ್ಕೆ ದೇಶದಾದ್ಯಂತ ಇರುವ ಅಪೋಲೊ ಆಸ್ಪತ್ರೆಗಳು ಸೇರಿ ಒಟ್ಟಾರೆ 60 ಸ್ಥಳಗಳಲ್ಲಿ ಕೋವಿಡ್ ಲಸಿಕೆ ನೀಡುತ್ತಿದ್ದೇವೆ. ಕಾರ್ಪೆರೇಟ್ ಸಂಸ್ಥೆಗಳಲ್ಲಿ ಲಸಿಕೆ ನೀಡುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಅಪೋಲೋ ಆಸ್ಪತ್ರೆಯ ಡಾ.ಕೆ.ಹರಿ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಧಾರವಾಡದಲ್ಲಿ ಸ್ಪುಟ್ನಿಕ್:ರಾಯಚೂರಿನ ಶಿಲ್ಪಾ ಮೆಡಿಕೇರ್ ಧಾರವಾಡದಲ್ಲಿರುವ ತನ್ನ ಘಟಕದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಅವಕಾಶ ಪಡೆದುಕೊಂಡಿದೆ. ಈ ಸಂಬಂಧ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಜತೆಗೆ ಮುಂದಿನ ಮೂರು ವರ್ಷಕ್ಕೆ ಅನ್ವಯವಾಗುವಂತೆ ಒಡಂಬಡಿಕೆಯಾಗಿದೆ. ಒಂದು ವರ್ಷದಲ್ಲಿ ಐದು ಕೋಟಿ ಲಸಿಕೆ ಉತ್ಪಾದನೆ ಮಾಡುವ ಗುರಿ ಹಾಕಿಕೊಂಡಿದ್ದು, ಶಿಲ್ಪಾ ಮೆಡಿಕೇರ್ ಉತ್ಪಾದನಾ ಜವಾಬ್ದಾರಿ ಇದ್ದರೆ, ಡಾ. ರೆಡ್ಡಿಸ್ ಲ್ಯಾಬೊರೇಟರಿಯದ್ದು ಮಾರುಕಟ್ಟೆ ಹೊಣೆಗಾರಿಕೆ ನಿಗದಿಯಾಗಿದೆ. ಪ್ರಸ್ತುತ ಕರೊನಾಗೆ ಎರಡು ಡೋಸ್ ಪಡೆಯುವ ಪದ್ಧತಿ ಇದ್ದು, ಒಂದೇ ಡೋಸ್​ಗೆ ಸೀಮಿತಗೊಳಿಸುವ ಪ್ರಯತ್ನ ನಡೆದಿದೆ. ಅದೂ ಸಹ ಮುಂದಿನ ದಿನಗಳಲ್ಲಿ ಧಾರವಾಡದಲ್ಲಿ ಉತ್ಪಾದಿಸಲು ಅವಕಾಶವಿದೆ.
ಮಾಲೂರಲ್ಲಿ ಕೊವ್ಯಾಕ್ಸಿನ್ ಉತ್ಪಾದನೆ:ಮಾಲೂರಿನಲ್ಲಿ ಭಾರತ್ ಬಯೋಟೆಕ್​ನಿಂದ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಸದ್ಯದಲ್ಲೇ ಆರಂಭವಾಗಲಿದ್ದು, ಜೂನ್ ಅಂತ್ಯಕ್ಕೆ 1 ಕೋಟಿ ಲಸಿಕೆ, ಜುಲೈನಿಂದ 2-3 ಕೋಟಿ ಡೋಸ್ ಉತ್ಪಾದನೆಯಾಗುವ ಗುರಿ ಹಾಕಿಕೊಳ್ಳಲಾಗಿದೆ. ಆಗಸ್ಟ್​ನಿಂದ ಉತ್ಪಾದನೆ ಪ್ರಮಾಣ 5 ಕೋಟಿಗೆ ಏರಿಕೆಯಾಗಲಿದೆ. ರಾಜ್ಯ ಸರ್ಕಾರ ಭಾರತ್ ಬಯೋಟೆಕ್ ನಿರ್ದೇಶಕರೊಂದಿಗೆ ಸಂಪರ್ಕದಲ್ಲಿದ್ದು, ಕರ್ನಾಟಕಕ್ಕೆ ಆದ್ಯತೆ ನೀಡುವ ಭರವಸೆ ಪಡೆದುಕೊಂಡಿದೆ. ಜತೆಗೆ ಲಸಿಕೆ ಕೇಂದ್ರದೊಂದಿಗೆ ಸಮನ್ವಯ ಸಾಧಿಸಲು ಅಧಿಕಾರಿಗಳನ್ನು ನೇಮಕ ಮಾಡಲು ಉದ್ದೇಶಿಸಿದೆ. ಪ್ರಸ್ತುತ ಹೈದರಾಬಾದ್​ನಲ್ಲಿರುವ ಭಾರತ್ ಬಯೋಟೆಕ್​ನಲ್ಲಿ ನಾಲ್ಕು ಘಟಕಗಳಿದ್ದು ಪ್ರತಿ ತಿಂಗಳಿಗೆ ಒಂದು ಕೋಟಿ ಲಸಿಕೆ ಉತ್ಪಾದನೆಯಾಗುತ್ತದೆ.
ಸಾರ್ವಜನಿಕರಲ್ಲಿ ನಿಲ್ಲದ ಆತಂಕ:ಒಂದನೇ ಲಸಿಕೆ ಪಡೆಯುವವರ ಆತಂಕ ಒಂದು ಕಡೆಯಾದರೆ 2ನೇ ಡೋಸ್ ಪಡೆಯುವವರ ಕಳವಳ ಮತ್ತೊಂದು ಕಡೆ. ಒಂದನೇ ಲಸಿಕೆ ಪಡೆದು ಇಂತಿಷ್ಟೇ ದಿನದಲ್ಲಿ ಎರಡನೇ ಡೋಸ್ ಪಡೆಯಬೇಕೆಂದು ಹೇಳಿದ್ದ ಸರ್ಕಾರ ಈ ದಿನಗಳನ್ನು ವಿಸ್ತರಿಸಿದೆ. ಲಸಿಕೆ ಕೊರತೆಯ ನೆಪಕ್ಕೆ ಈ ರೀತಿ ದಿನಾಂಕ ಮರು ನಿಗದಿ ಮಾಡುತ್ತಿರುವುದರಿಂದ ಸಮಸ್ಯೆಯಾಗುವುದಿಲ್ಲವೇ ಎಂಬುದಕ್ಕೆ ಸರ್ಕಾರದಿಂದ ಸ್ಪಷ್ಟನೆ ಸಿಗುತ್ತಿಲ್ಲ ಎಂಬ ಕೂಗಿದೆ.
ಡಿಆರ್​ಡಿಒದ 2ಡಿಜಿ ಔಷಧ ಬಿಡುಗಡೆ:ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಭಿವೃದ್ಧಿಪಡಿಸಿರುವ ಕೋವಿಡ್ ತಡೆ 2ಡಿಜಿ ಔಷಧಯ ಮೊದಲ ಬ್ಯಾಚನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಸೋಮವಾರ ಬಿಡುಗಡೆ ಮಾಡಿದರು. ಪೌಡರ್ ರೂಪದ ಈ ಔಷಧ ಕರೊನಾ ವ್ಯಾಧಿ ಚಿಕಿತ್ಸೆಯಲ್ಲಿ ಒಂದು ಆಶಾಕಿರಣವಾಗಿದೆ. ಇದು ನಮ್ಮ ದೇಶದ ವೈಜ್ಞಾನಿಕ ಶಕ್ತಿಯ ಮಹಾನ್ ದೃಷ್ಟಾಂತವಾಗಿದೆ ಎಂದು ಸಿಂಗ್ ಹೇಳಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 14 =
Remember me
