ಬೆಂಗಳೂರು:ಹಾದಿತಪ್ಪುವ ಸರ್ಕಾರಿ ನೌಕರರಿಗೆ ಕಠಿಣ ಶಿಕ್ಷೆಗಳ ಮೂಲಕ ಬಿಗಿಯಾದ ಮೂಗುದಾರ ತೊಡಿಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ಸಂಬಂಧ ಕಾನೂನು ಜಾರಿಗೆ ಸಜ್ಜಾಗುತ್ತಿದೆ. ತಪು್ಪಗಳ ಆಧಾರದಲ್ಲಿ ಕೆಲಸದಿಂದಲೇ ತೆಗೆದುಹಾಕುವ, ವೇತನ ತಡೆಹಿಡಿಯುವ, ಕಡಿತ ಮಾಡುವ ಹಾಗೂ ಕಡ್ಡಾಯ ನಿವೃತ್ತಿ ಶಿಕ್ಷೆ ನೀಡುವಂತಹ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.
ಸರ್ಕಾರಿ ನೌಕರರು ವಿವಿಧ ವಿಚಾರಗಳಲ್ಲಿ ಆಕಸ್ಮಿಕವಾಗಲ್ಲದೆ, ಉದ್ದೇಶಪೂರ್ವಕ ಅಥವಾ ಒತ್ತಡಕ್ಕೆ ಸಿಲುಕಿಯೂ ತಪ್ಪೆಸಗುತ್ತಾರೆ. ಇಂಥ ತಪ್ಪುಗಳನ್ನು ನಿಯಂತ್ರಿಸುವ ಉದ್ದೇಶದಿಂದ ಪದೇಪದೆ ನಡೆಯುವ ಲೋಪಗಳಿಗೆ ಶಿಕ್ಷೆ ಪ್ರಮಾಣವನ್ನು ಕಠಿಣ ಗೊಳಿಸಲಾಗುತ್ತಿದೆ. ಸಾಮಾನ್ಯ ವಾಗಿ ಸರ್ಕಾರಿ ನೌಕರರು ಎಡವುವ 24 ವಿಚಾರಗಳಿಗೆ ಸೀಮಿತವಾಗಿ ಶಿಕ್ಷೆ ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ:ಪೆಟ್ರೋಲ್​, ಡೀಸೆಲ್​ಗಳನ್ನೂ ಜಿಎಸ್​ಟಿ ವ್ಯಾಪ್ತಿಗೆ ತನ್ನಿ: ಅಸೋಚಾಮ್ ಮನವಿ
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದವರು ಶಿಫಾರಸು ಬಳಸಿಯೋ ಅಥವಾ ವ್ಯವಸ್ಥೆಯ ದೋಷ ಬಳಸಿಕೊಂಡೋ ಶಿಕ್ಷೆಯಿಂದ ಪಾರಾಗುವುದು ನಡೆಯುತ್ತಲೇ ಇದೆ. ಹೀಗಾಗಿ ನೌಕರರನ್ನು ನಿಯಂತ್ರಿಸಲು ‘ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ’ಗಳ ತಿದ್ದುಪಡಿಗೆ ಸರ್ಕಾರ ತೀರ್ವನಿಸಿ ಕರಡು ಸಿದ್ಧಪಡಿಸಿದೆ. ಕಳೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದ ಕರಡನ್ನು ಇದೀಗ ಸಾರ್ವಜನಿಕವಾಗಿ ಪ್ರಕಟಿಸಿದ್ದು, 15 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೊಡಲಾಗಿದೆ.
ನಿಯಮಗಳಿಗೆ ತಿದ್ದುಪಡಿ:ಸರ್ಕಾರಿ ನೌಕರರು ಹೇಗಿರಬೇಕು, ಕಾರ್ಯನಿರ್ವಹಣೆ ಯಾವ ರೀತಿ ಇರಬೇಕೆಂಬುದನ್ನು ತಿಳಿಸುವ ಕರ್ನಾಟಕ ನಾಗರಿಕ ಸೇವಾ ನಿಯಮ ಮುಂಚಿನಿಂದಲೂ ಜಾರಿಯಲ್ಲಿದೆ. 1966ರಲ್ಲಿ ಜಾರಿಯಾದ ಹೊಸ ಕಾನೂನಿನ ಪ್ರಕಾರವೇ ಸರ್ಕಾರಿ ನೌಕರರು ನಿಯಂತ್ರಣಕ್ಕೊಳಪಟ್ಟಿದ್ದಾರೆ. ಈ ನಡುವೆಯೂ ತಪ್ಪಿತಸ್ಥರಿಗೆ ವಿಧಿಸುವ ನಿಯಮಗಳು ಪಾಲನೆಯಾಗದಂತೆ ನುಸುಳುವ ವ್ಯವಸ್ಥೆ ಮೊದಲಿಂದಲೂ ನಡೆದುಬಂದಿದೆ. ಹೀಗೆ ತಪ್ಪಿಸಿಕೊಳ್ಳುವ ಅವಕಾಶದ ದಾರಿಗಳನ್ನು ಗಮನದಲ್ಲಿಟ್ಟುಕೊಂಡೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿಯಮಗಳಿಗೆ ತಿದ್ದುಪಡಿ ಮಾಡುತ್ತಿದೆ.
ಇದನ್ನೂ ಓದಿ:500 ರೂಪಾಯಿಗೋಸ್ಕರ 30 ಕಿ.ಮೀ. ನಡೆದ ಮಹಿಳೆಗೆ ಸಮಾಜ ನೀಡಿತು ಭರಪೂರ ನೆರವು..
ಸ್ವಜನಪಕ್ಷಪಾತಕ್ಕೆ ದುಬಾರಿ ಶಿಕ್ಷೆ:ಸರ್ಕಾರಿ ಅಧಿಕಾರಿಗಳು ಕುಟುಂಬದ ಸದಸ್ಯರೊಬ್ಬರಿಗೆ ಯಾವುದೇ ಕಂಪನಿ ಅಥವಾ ಸಂಸ್ಥೆಯಲ್ಲಿ ಉದ್ಯೋಗ ಗಳಿಸಿಕೊಳ್ಳಲು ಅಧಿಕಾರ ಉಪಯೋಗಿಸಿಕೊಳ್ಳುವುದು ಮಾಡಿದರೆ ವೇತನ ಶ್ರೇಣಿಯಲ್ಲಿನ ಕೆಳಗಿನ ಹಂತಕ್ಕೆ ವೇತನ ಇಳಿಸಲಾಗುತ್ತದೆ. ನೌಕರ ಕುಟುಂಬದ ಸದಸ್ಯರ ಸ್ವಹಿತಾಸಕ್ತಿ ಒಳಗೊಂಡ ಯಾವುದೇ ಕಂಪನಿ ಅಥವಾ ಸಂಸ್ಥೆಗೆ ಸಂಬಂಧಿಸಿದಂತೆ ವ್ಯವಹರಿಸುವುದು, ಗುತ್ತಿಗೆಯನ್ನು ಕೊಡುವುದು, ಮಂಜೂರು ಮಾಡುವುದು ಸಾಬೀತಾದರೆ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳ್ಳಬೇಕಾಗುತ್ತದೆ.
ಯಾವ ತಪ್ಪಿಗೆ ಏನು ಶಿಕ್ಷೆ?
1. ಒಂದು ತಿಂಗಳಿಗೆ ಮೇಲ್ಪಟ್ಟು, ನಾಲ್ಕು ತಿಂಗಳಿಗಿಂತ ಕಡಿಮೆ ಅವಧಿಯ ಅನಧಿಕೃತ ಗೈರು ಹಾಜರಾದರೆ 3 ವಾರ್ಷಿಕ ವೇತನ ಬಡ್ತಿಗಳಿಗೆ ತಡೆ. 2. 4 ತಿಂಗಳು ಮೀರಿ ಅನಧಿಕೃತ ಗೈರುಹಾಜರಾದರೆ ಸೇವೆಯಿಂದ ವಜಾ 3. ಕಾರ್ಯ ವಿಧಾನದ ಲೋಪಮಾಡಿದರೆ ಮೊದಲ ಸಂದರ್ಭದಲ್ಲಿ ವಾಗ್ದಂಡನೆ, ಎರಡನೇ ಮತ್ತು ನಂತರದ ಸಂದರ್ಭದಲ್ಲಿ ವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಸುವುದು. 4. ಕಚೇರಿ ಕಾರ್ಯವಿಧಾನ ಕೈಪಿಡಿ ಇತ್ಯಾದಿಯಲ್ಲಿ ನಿರ್ದಿಷ್ಟಪಡಿಸಿರುವ ಕಾಲಮಿತಿಯ ಸಕಾರಣವಲ್ಲದ ವಿಳಂಬ ಮಾಡಿದಲ್ಲಿ ಮೊದಲ ಸಂದರ್ಭದಲ್ಲಿ ವಾಗ್ದಂಡನೆ, ಎರಡನೇ ಮತ್ತು ನಂತರದ ಸಂದರ್ಭದಲ್ಲಿ ಕನಿಷ್ಠ ಒಂದು ವಾರ್ಷಿಕ ವೇತನ ಬಡ್ತಿಗೆ ತಡೆ. 5. ಮೇಲಧಿಕಾರಿಗಳ ಲಿಖಿತ ಸೂಚನೆ ಪಾಲಿಸಲು ನಿರಾಕರಣೆ- ಎರಡು ವಾರ್ಷಿಕ ಬಡ್ತಿ ತಡೆ.6. ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 1966ರಲ್ಲಿನ ಉಪಬಂಧಗಳನ್ನು ಉಲ್ಲಂಘಿಸಿ ರಾಜಕೀಯ ಅಥವಾ ಚುನಾವಣೆಗಳಲ್ಲಿ ಭಾಗವಹಿಸಿದರೆ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿ. 7. ಕೆಸಿಎಸ್​ಆರ್ ಉಲ್ಲಂಘಿಸಿ ಮುಷ್ಕರ ಅಥವಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದು ಕಂಡುಬಂದರೆ ವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಸುವುದು. 8. ನಿಯಮ ಉಲ್ಲಂಘಿಸಿ ಆಕಾಶವಾಣಿ, ಪತ್ರಿಕೆ, ದೂರದರ್ಶನ ಮೊದಲಾದ ಮಾಧ್ಯಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಕನಿಷ್ಠ ಎರಡು ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯುವುದು. 9. ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 1966ರ ಉಪಬಂಧಗಳನ್ನು ಉಲ್ಲಂಘಿಸಿ ಸರ್ಕಾರವನ್ನು ಟೀಕಿಸಿದರೆ ಕನಿಷ್ಠ ಎರಡು ವಾರ್ಷಿಕ ವೇತನ ಬಡ್ತಿಗಳನ್ನು ತಡೆ ಹಿಡಿಯುವುದು. 10. ವಂತಿಗೆ ಸ್ವೀಕರಿಸುವುದು ಅಥವಾ ಬೇರೆ ರೀತಿಯಲ್ಲಿ ನಿಧಿ ಸಂಗ್ರಹಿಸಲು ನಿಧಿ ಸಂಗ್ರಹಣೆ ಕಾರ್ಯದಲ್ಲಿ ಪಾಲ್ಗೊಂಡರೆ ವೇತನವನ್ನು ಕೆಳಗಿನ ಹಂತಕ್ಕೆ ಇಳಿಸುವುದು. 11. ನಿಯಮ ಉಲ್ಲಂಘಿಸಿ ಯಾವುದೇ ವ್ಯವಹಾರ ಅಥವಾ ವ್ಯಾಪಾರಗಳಲ್ಲಿ ಅಥವಾ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದು ಸಾಬೀತಾದರೆ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿ. 12. ಬಂಡವಾಳ ಹೂಡಿಕೆ ಮಾಡುವುದು, ಸಾಲವನ್ನು ಕೊಡುವುದು ಅಥವಾ ತೆಗೆದುಕೊಂಡರೆ ವೇತನ ಶ್ರೇಣಿಯ ಕೆಳಗಿನ ಹಂತಕ್ಕೆ ವೇತನ ಇಳಿಸಲಾಗುತ್ತದೆ. 13. ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ ಸಲ್ಲಿಸದಿದ್ದರೆ ಕನಿಷ್ಠ ಒಂದು ವಾರ್ಷಿಕ ವೇತನ ಬಡ್ತಿಯನ್ನು ತಡೆ ಹಿಡಿಯುವುದು. 14. ನಿಯಮ ಬದಿಗಿಟ್ಟು ಚರ ಮತ್ತು ಸ್ಥಿರ ಆಸ್ತಿಗಳ ವ್ಯವಹಾರ ಮಾಡಿದಲ್ಲಿ ಒಂದು ವಾರ್ಷಿಕ ವೇತನ ಬಡ್ತಿಯನ್ನು ತಡೆ ಹಿಡಿಯಲಾಗುತ್ತದೆ. 15. ಸರ್ಕಾರದ ಸ್ಥಾಯಿ ಸೂಚನೆಗಳಿಗೆ ವಿರುದ್ಧವಾಗಿ ಸಿನಿಮಾ, ನಾಟಕ, ಮುಂತಾದವುಗಳಲ್ಲಿ ಭಾಗವಹಿಸುವುದು, ತೊಡಗಿಸಿಕೊಂಡರೆ ಎರಡು ವಾರ್ಷಿಕ ವೇತನ ಬಡ್ತಿಗಳನ್ನು ತಡೆ ಹಿಡಿಯಲಾಗುತ್ತದೆ. 16. ಕರ್ನಾಟಕ ಸಿವಿಲ್ ಸೇವಾ (ಕಾರ್ಯನಿರ್ವಹಣಾ ವರದಿ) ನಿಯಮಗಳು, 2000ರ ಉಪಬಂಧಗಳನ್ನು ಉಲ್ಲಂಘಿಸಿ, ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಬರೆಯಲು ವಿಫಲರಾದರೆ ವಾಗ್ದಂಡನೆ.
ಇದನ್ನೂ ಓದಿ:ಇಸಿಬಿಗೆ 3,584 ಕೋಟಿ ರೂ. ನಷ್ಟ? ಈ ವರ್ಷ ಕ್ರಿಕೆಟ್ ನಡೆಯದಿದ್ದರೆ ಭಾರಿ ಹೊಡೆತ
ಹಣ ಅಕ್ರಮಕ್ಕೆ ಬಡ್ತಿ ತಡೆ:ಸರ್ಕಾರಿ ನೌಕರರ ಮೇಲೆ ಸಾಮಾನ್ಯವಾಗಿ ಹಣ ದುರುಪಯೋಗ ಆರೋಪಗಳು ಹೆಚ್ಚಾಗಿ ಕೇಳಿಬರುತ್ತವೆ.10 ಸಾವಿರ ರೂ.ಗಿಂತ ಕಡಿಮೆ ಮೊತ್ತದ ತಾತ್ಕಾಲಿಕ ಹಣ ದುರುಪಯೋಗ ಮಾಡಿದರೆ ಸಂಬಂಧಪಟ್ಟ ನೌಕರನ 5 ವಾರ್ಷಿಕ ವೇತನ ಬಡ್ತಿ ತಡೆ ಹಿಡಿಯಲಾಗುತ್ತದೆ. 10 ಸಾವಿರಕ್ಕಿಂತ ಅಧಿಕ ಮೊತ್ತದ ತಾತ್ಕಾಲಿಕ ಹಣ ದುರುಪಯೋಗ ಮಾಡಿದಲ್ಲಿ ನೌಕರನ ಹಾಲಿ ಹುದ್ದೆಯ ಕೆಳಗಿನ ಹಂತದ ವೇತನ ಶ್ರೇಣಿ ನಿಗದಿ ಮಾಡಲಾಗುತ್ತದೆ. ಹಾಗೆಯೇ ದೊಡ್ಡ ಮಟ್ಟದಲ್ಲಿ ಸರ್ಕಾರಿ ಹಣದ ದುರುಪಯೋಗ ಅಥವಾ ತಪ್ಪು ಬಳಕೆ ಮಾಡಿದರೆ ಕಡ್ಡಾಯ ನಿವೃತ್ತಿಗೊಳಿಸಬಹುದಾಗಿದೆ.
ಲೈಂಗಿಕ ಕಿರುಕುಳಕ್ಕೆ ಡಿಮೋಷನ್:ಸರ್ಕಾರಿ ನೌಕರರು ನಿಯಮ ಉಲ್ಲಂಘಿಸಿ ಎರಡನೇ ಮದುವೆ ಮಾಡಿಕೊಂಡರೆ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳ್ಳುವ ಶಿಕ್ಷೆ ಸ್ವೀಕರಿಸಬೇಕಾಗುತ್ತದೆ. ಹಾಗೆಯೇ ಲೈಂಗಿಕ ಕಿರುಕುಳದ ಆರೋಪ ಸಾಬೀತಾದರೆ ಕೆಳಮಟ್ಟದ ಹುದ್ದೆಗೆ ಇಳಿಸುವ ದಂಡನೆ ನೀಡಲಾಗುತ್ತದೆ. ಸರ್ಕಾರಿ ನೌಕರ ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳುವುದು ಅಥವಾ ಕೊಡುವುದಕ್ಕೆ ಉತ್ತೇಜಿಸುವುದು ಕಂಡುಬಂದಲ್ಲಿ ಸೇವೆಯಿಂದ ತೆಗೆದು ಹಾಕಲಾಗುತ್ತದೆ.
ಸರ್ಕಾರ ಯಾವುದೇ ಕಾನೂನನ್ನು ಆಡಳಿತ ಸುಧಾರಣೆಗೆ ಮಾಡಬೇಕೆ ಹೊರತು ಶಿಕ್ಷೆ ಕೊಡುವುದಕ್ಕೆ ಅಲ್ಲ. ಇದು ಅಧಿಕಾರಿಗಳ ದಬ್ಬಾಳಿಕೆಗೆ ಕಾರಣವಾಗುತ್ತದೆ. ನಾವು ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ.
| ಪಿ. ಗುರುಸ್ವಾಮಿ
ಅಧ್ಯಕ್ಷ, ಕರ್ನಾಟಕ ಸಚಿವಾಲಯ ನೌಕರರ ಸಂಘ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 18 =
Remember me
