ಬೆಂಗಳೂರು:ಐಪಿಎಲ್ ಬೆಟ್ಟಿಂಗ್ ಸೇರಿ ಆನ್​ಲೈನ್ ಗೇಮ್ಳಿಗೆ ಕಡಿವಾಣ ಹಾಕಲು ಕಠಿಣ ಕಾಯ್ದೆ ತಂದರೂ ಜಾರಿ ತರುವಲ್ಲಿ ಅಸಹಾಯಕನೆನಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಳಲು ತೋಡಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಸೋಮವಾರ ಕಾಂಗ್ರೆಸ್​ನ ರಮೇಶ್ ಕುಮಾರ್ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ವೇಳೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಈ ಹಿಂದೆ ಐಪಿಎಲ್ ಬೆಟ್ಟಿಂಗ್, ಆನ್​ಲೈನ್ ಕ್ರೀಡೆಗಳನ್ನು ನಿಯಂತ್ರಿಸಲು ರಾಜ್ಯದಲ್ಲಿ ಬಲಿಷ್ಠ ಕಾನೂನು ಇರಲಿಲ್ಲ. ಕಳೆದ ಅಧಿವೇಶನದಲ್ಲಿ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆ ತರುವ ಮೂಲಕ ಕಾನೂನು ಬಲ ಪಡಿಸಲಾಯಿತು. ಆದರೆ, ಈಗ ಹೈಕೋರ್ಟ್ ಆನ್​ಲೈನ್ ಕ್ರೀಡೆಗಳಿಗೆ ಅನುಮತಿ ನೀಡಿರುವುದು ನಿಸ್ಸಾಯಕರನ್ನಾಗಿಸಿದೆ ಎಂದರು.
ಐಪಿಎಲ್, ಆನ್​ಲೈನ್ ಗೇಮ್ಳಿಗೆ ನಿಯಂತ್ರಣ ಹೇರಲು ಕಠಿಣ ಕಾನೂನು ಜಾರಿ ತರುವ ಸಂದರ್ಭದಲ್ಲಿ ದೊಡ್ಡಮಟ್ಟದಲ್ಲಿ ಪ್ರಭಾವಬೀರಬಲ್ಲ ವ್ಯವಸ್ಥೆ ತಲೆಎತ್ತಿತ್ತು. ಬೇರೆಬೇರೆ ರೂಪದಲ್ಲೇ ನನ್ನ ಮೇಲೆ ಒತ್ತಡ ಹೇರಲಾಯಿತು. ಕರೊನಾ ಸಂದರ್ಭದಲ್ಲಿ ನನ್ನ ಕ್ಷೇತ್ರಕ್ಕೆ 1 ಲಕ್ಷ ಲಸಿಕೆ ಡೊಸ್ ನೀಡುವ ಆಮಿಷ ಒಡ್ಡಲಾಗಿತ್ತು. ಇದ್ಯಾವುದೇ ಆಮಿಷ, ಪ್ರಭಾವಕ್ಕೆ ಒಳಗಾಗದೇ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿ ತಂದೆವು ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಐಪಿಎಲ್​ನಿಂದ ಸರ್ವನಾಶ! ಹಳ್ಳಿಯಿಂದ ಬೆಂಗಳೂರಿನವರೆಗೆ ಐಪಿಎಲ್ ಬೆಟ್ಟಿಂಗ್ ದಂಧೆ ನಡೆಯಲಿದ್ದು ಇದರಲ್ಲಿ ಭಾಗಿಯಾಗುವರ ಕುಟುಂಬಗಳು ಸರ್ವನಾಶ ಆಗಲಿವೆ. ಕ್ರಿಕೆಟ್​ನಂತಹ ಕ್ರೀಡೆಯನ್ನು ರೇಸ್ ತರಾ ಮಾಡಿಕೊಂಡು ಜೂಜು ಕಟ್ಟಲಾಗುತ್ತಿದೆ. ಇನ್ನೂ ಸಿಎಸ್​ಆರ್ ನಿಧಿಯಡಿ ಅಭಿವೃದ್ಧಿ ಪಡಿಸುವ ಸರ್ಕಾರಿ ಶಾಲೆ ಅಂಗಳವನ್ನೇ ಕುಡಿತ, ಇಸ್ಪೀಟ್ ಅಡ್ಡೆಗಳನ್ನಾಗಿ ಪರಿವರ್ತಿಸಿಕೊಳ್ಳಲಾಗಿದೆ. ನಮ್ಮ ಸಂಸ್ಕೃತಿ ಎತ್ತಕಡೆ ಸಾಗಿದೆ. ಇದರಲ್ಲಿ ಆ ಪಾರ್ಟಿ, ಈ ಪಾರ್ಟಿ ಅಲ್ಲ, ಎಲ್ಲ ಪಾರ್ಟಿಯವರು ಇದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಶಕ್ತಿ ಇಲ್ಲವೇ ಎಂದು ರಮೇಶ್ ಕುಮಾರ್ ಸಭೆಯಲ್ಲಿ ಸಾತ್ವಿಕ ಆಕ್ರೋಶ ಹೊರಹಾಕಿದರು.
ಆಸ್ತಿ ವಿವರಗಳ ತನಿಖೆಯಾಗಲಿ:ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸುವ ಆಸ್ತಿ ವಿವರಗಳ ಪ್ರಮಾಣ ಪತ್ರಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಆದಾಯ ತೆರಿಗೆ ಇಲಾಖೆ ಮೂಲಕ ಪರಿಶೀಲನೆಗೆ ಒಳಪಡಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕು ಎಂದು ಕಾಂಗ್ರೆಸ್ ರಮೇಶ್ ಕುಮಾರ್ ಆಗ್ರಹಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಗಳಲ್ಲಿ ಅಭ್ಯರ್ಥಿ ಆಗ ಬಯಸುವರು ಆಸ್ತಿ-ಸಾಲ ಘೋಷಣೆಯ ಅಫಿಡವಿಟ್ ಸಲ್ಲಿಸುವುದನ್ನು ದೇಶದ ಚುನಾವಣಾ ಆಯೋಗ ಕಡ್ಡಾಯಗೊಳಿಸಿದೆ. ಆದರೆ, ಈವರೆಗೆ ಅಭ್ಯರ್ಥಿಗಳು ಸಲ್ಲಿಸಿರುವ ಆಸ್ತಿ ವಿವರಗಳ ಅಫಿಡವಿಟ್ ಸುಳ್ಳೊ, ಸತ್ಯವೋ ಎಂಬುದನ್ನು ಪರಿಶೀಲಿಸಲು ಇಡಿ, ಐಟಿಗೆ ಕಳುಹಿಸಿರುವ ಇತಿಹಾಸವೇ ಇಲ್ಲ. ಹಾಗಾಗಿ, ನಮ್ಮ ಚುನಾವಣಾ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಹೇಗೆ ಗೌರವ ಬರಲಿದೆ ಎಂದು ಬೇಸರಿಸಿದರು. ಒಮ್ಮೆ ಚುನಾವಣೆಯಲ್ಲಿ ಗೆದ್ದು ಬಂದರೆ 3-4 ತಲೆಮಾರಿಗೆ ಆಗುವಷ್ಟು ಮಾಡೋದು. ನಾನೇನು, ನೀನೇನು, ಅವನೇನು ಅನ್ನುವಂತಿಲ್ಲ. ಇಲ್ಲಿ ಎಲ್ಲರೂ ಒಂದೇ ಪಾರ್ಟಿ. ಸೌಮ್ಯಸ್ವಭಾವ, ಸರಳ, ಸಜ್ಜನರು, ಪ್ರಾಮಾಣಿಕರು ರಾಜಕೀಯ ಪಕ್ಷಗಳ ಪ್ರಥಮ ಪಂಕ್ತಿಯಲ್ಲಿ ಇರುತ್ತಿದ್ದರೂ. ನಿಜಲಿಂಗಪ್ಪ ಅಂತವರು ಸಿಎಂ ಆಗಿದ್ದಾಗ ತಮ್ಮ ಹೆಣ್ಣುಮಕ್ಕಳಿಗೆ ಒಳ್ಳೆಯ ಬಟ್ಟೆಗಳನ್ನು ಕೊಡಿಸಲಿಕ್ಕೆ ತನ್ನ ಬಳಿ ದುಡ್ಡು ಎಲ್ಲಿದೆ ಅಂತ ಹೇಳಿದ್ದ ನಿದರ್ಶನಗಳಿವೆ. ಆದರೆ ಈಗಿನ ಪರಿಸ್ಥಿತಿಯನ್ನೊಮ್ಮೆ ನೋಡಿದರೆ ಶಾಕ್ ಆಗುತ್ತೆ ಎಂದು ವ್ಯವಸ್ಥೆಯ ಹುಳುಕನ್ನು ಬಿಚ್ಚಿಟ್ಟರು.
ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸರ್ಕಾರ ಕೂಡಲೆ ಕ್ರಮ ಕೈಗೊಳ್ಳದೆ ಇದ್ದರೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾದೀತು ಎಂದು ಜೆಡಿಎಸ್​ನ ಕೆ.ಟಿ.ಶ್ರೀಕಂಠೇಗೌಡ ಎಚ್ಚರಿಕೆ ನೀಡಿದ್ದಾರೆ. ಮೇಲ್ಮನೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, 7ನೇ ವೇತನ ಆಯೋಗ ಮಾಡುವಂತೆ ಒತ್ತಾಯಿಸಿದ್ದರೂ, ಈ ಬಗ್ಗೆ ಒಂದು ಅಂಶವನ್ನು ಸಿಎಂ ಬಜೆಟ್​ನಲ್ಲಿ ಚಕಾರ ಎತ್ತಿಲ್ಲ. ಈ ವಿಚಾರದಲ್ಲಿ ಯಡಿಯೂರಪ್ಪ ನಮ್ಮ ಪರವಾಗಿ ಇರುವುದರಿಂದ ಅವರ ಮುಂದಾಳತ್ವದಲ್ಲಿಯೇ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಜಯದೇವ ಆಸ್ಪತ್ರೆ ಸೇವೆಗೆ ಶ್ಲಾಘನೆ:ಜಯದೇವ ಹೃದ್ರೋಗ ಆಸ್ಪತ್ರೆ ಖಾಸಗಿ ಆಸ್ಪತ್ರೆಗಳನ್ನು ಮೀರಿಸುವಂತೆ ಸೇವೆ ಸಲ್ಲಿಸುತ್ತಿದ್ದು, ಇಡೀ ಏಷ್ಯಾದಲ್ಲಿಯೇ ಉತ್ತಮ ಆಸ್ಪತ್ರೆ ಎಂದು ಗಮನ ಸೆಳೆದಿದೆ ಎಂದು ಶ್ರೀಕಂಠೇಗೌಡರು ಸದನದಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಇಡೀ ಸದನ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಸೇವೆ ಮುಕ್ತ ಕಂಠದಿಂದ ಶ್ಲಾಘಿಸಿತು.
ರಾಜ್ಯದಲ್ಲಿ ನಿರ್ಮಾಣ ಮಾಡುತ್ತಿರುವ ನಾಡ ಕಚೇರಿ ಅತೀ ಚಿಕ್ಕದಾಗಿದ್ದು, ಅದಕ್ಕೊಂದು ಸ್ಪಷ್ಟ ಸ್ವರೂಪಕೊಡುವ ಅಗತ್ಯವಿದೆ ಎಂಬ ಶಾಸಕರ ಒಕ್ಕೊರಲ ಆಗ್ರಹಕ್ಕೆ ಕಂದಾಯ ಸಚಿವ ಆರ್. ಅಶೋಕ್ ಒಪ್ಪಿಗೆ ಸೂಚಿಸಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಅನಿಲ್ ಚಿಕ್ಕಮಾದು ಪ್ರಶ್ನೆಗೆ ದನಿಗೂಡಿಸಿದ ಬಿಜೆಪಿಯ ಕುಮಾರ ಬಂಗಾರಪ್ಪ, ಜೆಡಿಎಸ್​ನ ವೆಂಕಟರಾವ್ ನಾಡಗೌಡ ಮತ್ತಿತರರು, ಹೊಸದಾಗಿ ನಿರ್ವಿುಸುತ್ತಿರುವ ನಾಡಕಚೇರಿಯಲ್ಲಿ ಎರಡು ಖುರ್ಚಿಯೂ ಹಾಕಲೂ ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ಗಮನ ಸೆಳೆದರು. ಸ್ಪೀಕರ್ ಸಹ ದನಿಗೂಡಿಸಿ, ಬೆಂಗಳೂರಿನಲ್ಲಿ ಕುಳಿತವರು ಏನು ಮಾಡಿ ಕಳಿಸುತ್ತಾರೋ ಅದನ್ನು ಉಳಿದವರೆಲ್ಲ ಒಪ್ಪಿಕೊಳ್ಳಬೇಕು ಎಂದು ಕುಟುಕಿದರು. ನಾಡಕಚೇರಿಗೆ ಒಂದು ನಿರ್ದಿಷ್ಟ ಡಿಸೈನ್ ಅಗತ್ಯವಿದೆ. ಮುಂದೆ ಈ ಕಚೇರಿಯಿಂದ ಇನ್ನಷ್ಟು ಸೇವೆ ಕೊಡಬೇಕಾಗಿ ಬರಬಹುದು. ಹೀಗಾಗಿ ವಿಶಾಲವಾಗಿರಲಿ, ಸಭೆ ನಡೆಸಲು ಸೂಕ್ತ ಸ್ಥಳಾವಕಾಶ ಇರಬೇಕು, ರ್ಪಾಂಗ್​ಗೆ ಜಾಗ ಇರಲಿ ಎಂದು ಸಲಹೆ ವ್ಯಕ್ತವಾಯಿತು. ಬಳಿಕ ಉತ್ತರ ನೀಡಿದ ಸಚಿವ ಆರ್.ಅಶೋಕ್, ನಮ್ಮ ಇಲಾಖೆ ಪ್ರತಿ ನಾಡ ಕಚೇರಿ ನಿರ್ವಣಕ್ಕೆ 18 ಲಕ್ಷ ರೂ. ನೀಡುತ್ತದೆ. ಲೋಕೋಪಯೋಗಿ ಇಲಾಖೆ ಕಟ್ಟಡ ನಿರ್ವಿುಸುತ್ತಿದೆ. ಇನ್ನು ಮುಂದೆ ನಿರ್ದಿಷ್ಟ ಡಿಸೈನ್ ಮಾಡುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ದೇವಸ್ಥಾನ ಖಾಸಗಿಗಿಲ್ಲ:ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಯಾವುದೇ ದೇವಸ್ಥಾನಗಳನ್ನು ಖಾಸಗಿಗೆ ಕೊಡುವ ಪ್ರಸ್ತಾವನೆ ಇಲ್ಲ ಎಂದು ಅಶೋಕ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಬಸವನಗೌಡ ದದ್ದಲ್ ಪ್ರಶ್ನೆಗೆ ಮುಜರಾಯಿ ಸಚಿವರ ಅನುಪಸ್ಥಿತಿಯಲ್ಲಿ ಉತ್ತರ ನೀಡಿದ ಅವರು, ದೇವಸ್ಥಾನಗಳ ಅಭಿವೃದ್ಧಿಗೆ ಬಜೆಟ್​ನಲ್ಲಿ ಅನುದಾನ ಮೀಸಲಿಟ್ಟಿದ್ದು, ನೆರವು ನೀಡಲಾಗುತ್ತದೆ ಎಂದರು.
ಹೊಸ ಉಪ ನೋಂದಣಾಧಿಕಾರಿ ಕಚೇರಿ:ರಾಜ್ಯದ ಕೆಲವು ಕಡೆ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಹೆಚ್ಚಿನ ಒತ್ತಡವಿದೆ. ಕೆಲವು ಕಡೆ ಜನರು ಕಾಯುವ ಸ್ಥಿತಿ ಇದ್ದು, ಹೀಗಾಗಿ ಅಗತ್ಯ ಇರುವ ಕಡೆ ಹೊಸ ಉಪ ನೋಂದಣಾಧಿಕಾರಿ ಕಚೇರಿ ತೆರೆಯುವ ಬಗ್ಗೆ ಸಿಎಂ ಜತೆ ಚರ್ಚೆ ನಡೆಸಲಾಗಿದೆ ಎಂದು ಅಶೋಕ್ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್​ನ ಎ.ಮಂಜುನಾಥ್ ಪ್ರಶ್ನೆಗೆ ಉತ್ತರಿಸಿದ ಅವರು, ಮಾಗಡಿ ತಾಲೂಕಿನ ಕುದೂರು ಮತ್ತು ಬಿಡದಿ ಪಟ್ಟಣದಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಪ್ರಾರಂಭಿಸಲು ಇಲಾಖೆ ಮಾನದಂಡಗಳನ್ವಯ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ನೋಂದಣಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ಜಾತಿ ಸೂಚಕ ಕೈಬಿಡಲು ನಿರ್ಧಾರ:ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ ವಾಗಿ ಪರಿವರ್ತಿಸುವಾಗ ಜಾತಿ ಸೂಚಕ ಹೆಸರು ಕೈಬಿಡಲು ಸರ್ಕಾರ ನಿರ್ಧರಿಸಿದೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್​ನ ರಮೇಶ್ ಕುಮಾರ್ ಜಾತಿ ಸೂಚಕ ಸೂಕ್ತವಲ್ಲವೆಂದು ಅಭಿಪ್ರಾಯಪಟ್ಟರು. ಬಳಿಕ ಉತ್ತರ ನೀಡಿದ ಅಶೋಕ್, ಇನ್ನು ಮುಂದೆ ಜಾತಿ ಸೂಚಕ ಬಳಕೆ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ಕೊಡುವುದಾಗಿ ತಿಳಿಸಿದರಲ್ಲದೇ, ಹಿಂದೆ ಆದೇಶ ಮಾಡಿದ್ದಲ್ಲಿ ಜಾತಿ ಸೂಚಕ ಇದ್ದರೆ ಕೈಬಿಡಲಾಗುತ್ತದೆ ಎಂದರು.
ಎಬಿಕೆಯಡಿ ಇನ್ನಷ್ಟು ಆಸ್ಪತ್ರೆಗಳ ಸೇರ್ಪಡೆ:ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ (ಎಬಿಕೆ) ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳ ಪಟ್ಟಿಗೆ ಇನ್ನಷ್ಟು ಆಸ್ಪತ್ರೆಗಳನ್ನು ಸೇರಿಸಲು ಕ್ರಮವಹಿಸಲಾಗುವುದು ಎಂದು ಸುಧಾಕರ್ ತಿಳಿಸಿದರು. ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್​ನ ಯು.ಬಿ.ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪುನರಾವರ್ತನೆ, ನಕಲು ತಪ್ಪಿಸುವ ಜತೆಗೆ ಜನಸಾಮಾನ್ಯರೂ ಸುಲಭವಾಗಿ ಅರ್ಥ ಮಾಡಿಕೊಳ್ಳಲೆಂದು ‘ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ’ಯನ್ನು ಎಬಿಕೆಯಲ್ಲಿ ವಿಲೀನ ಮಾಡಲಾಗಿದೆ ಎಂಬ ಸಮಜಾಯಿಷಿ ನೀಡಿದರು.
ರಾಜ್ಯದಲ್ಲಿ ಡಯಾಲಿಸಿಸ್ ಸೇವೆ ಒದಗಿಸುವ ಕೇಂದ್ರಗಳನ್ನು 57 ರಿಂದ 167ಕ್ಕೆ ವಿಸ್ತರಿಸಲಾಗಿದೆ. ಯಂತ್ರಗಳನ್ನು 252 ರಿಂದ 588ಕ್ಕೇರಿವೆ. ಸೈಕಲ್ಸ್​ಗಳು 3,92,311 ಆಗಿವೆ. ಎರಡುಪಟ್ಟು ಅಂದರೆ ಮಾಸಿಕ 30,000 ರಿಂದ 60,000 ಸೈಕಲ್ಸ್​ಗಳ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ ಎಂದರು. ಬಿಜೆಪಿಯ ಪ್ರದೀಪ್​ಶೆಟ್ಟರ್ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ತಾಲೂಕುಮಟ್ಟದ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆಗಳಾಗಿದ್ದು, ಧಾರವಾಡ ಜಿಲ್ಲೆ ಐದು, ಗದಗ ಏಳು, ಮತ್ತು ಹಾವೇರಿ ಜಿಲ್ಲೆಯಲ್ಲಿ 12 ಡಯಾಲಿಸಿಸ್ ಕೇಂದ್ರಗಳಿವೆ. ಕಾರ್ಯಭಾರ ಹೆಚ್ಚಿರುವ ಕಡೆ ಡಯಾಲಿಸಿಸ್ ಕೇಂದ್ರ, ಯಂತ್ರಗಳು ಮತ್ತು ಸೈಕಲ್ಸ್​ಗಳ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಮೂರು ತಿಂಗಳಲ್ಲಿ ಶಿಲಾನ್ಯಾಸ:ಬಿಜೆಪಿಯ ಅ.ದೇವೇಗೌಡ ಪ್ರಶ್ನೆಗೆ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿ, ರಾಮನಗರ ಜಿಲ್ಲೆಯ ಅರ್ಚಕಹಳ್ಳಿಯಲ್ಲಿ ರಾಜೀವ್​ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕ್ಯಾಂಪಸ್ ನಿರ್ವಣಕ್ಕಾಗಿ ಮೂರು ತಿಂಗಳೊಳಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ತಿಳಿಸಿದರು. ಕೊಡಗು ಜಿಲ್ಲಾ ಕೇಂದ್ರದ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯ 300 ರಿಂದ 450ಕ್ಕೆ ಹೆಚ್ಚಿಸಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಕಟ್ಟಡ ನಿರ್ವಿುಸಲಾಗುತ್ತಿದೆ. ಚಿಕಿತ್ಸಾ ವಿಧಾನ, ಕಾರ್ಯಭಾರದ ಆಧಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸುವ ಪ್ರಯತ್ನ ಮಾಡಲಾಗುವುದು ಎಂದು ಬಿಜೆಪಿಯ ಸುಜಾ ಕುಶಾಲಪ್ಪ ಅವರಿಗೆ ಉತ್ತರಿಸಿದರು.
ಕ್ಯಾನ್ಸರ್ ಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ರೆ:ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ತೆರೆದು ಚಿಕಿತ್ಸೆ ದೊರಕಿಸಿಕೊಡಲಾಗುತ್ತಿದೆ. ಜನರು ತಮ್ಮ ಜೀವನ ಶೈಲಿ ಬದಲು ಮಾಡಿಕೊಂಡು ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳಬೇಕೆಂದು ಸುಧಾಕರ್ ಹೇಳಿದರು. ಸೋಮವಾರ ಪರಿಷತ್ತಿನಲ್ಲಿ ಶೂನ್ಯವೇಳೆ ಕಾಂಗ್ರೆಸ್​ನ ಕೆ.ಹರೀಶ್ ಕುಮಾರ್, ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸರ್ಕಾರ ನಿಯಂತ್ರಿಸಲು ಹಾಗೂ ಬಂದವರಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್, ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಪತ್ತೆಗಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. 30 ವರ್ಷ ಮೇಲ್ಪಟ್ಟವರು ತಪಾಸಣೆಗೆ ಒಳಪಡಬೇಕು. ಕಿದ್ವಾಯಿ ಆಸ್ಪತ್ರೆಯಲ್ಲಿ ಪ್ರತಿನಿತ್ಯ 1,800 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರು, ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಮಾಡಿದ್ದೇವೆ. ಬೆಳಗಾವಿ, ಮೈಸೂರಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಮಂಡ್ಯದಲ್ಲಿ ಅಭಿವೃದ್ಧಿ ಮಾಡಿ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಿದ್ದೇವೆ. ಜನರು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು, ಉತ್ತಮ ಆರೋಗ್ಯ ಶೈಲಿ ರೂಪಿಸಿಕೊಂಡು ಕ್ಯಾನ್ಸರ್ ಬಾರದಂತೆ ಎಚ್ಚರವಹಿಸಬೇಕೆಂದರು.
ಸಬ್ ರಿಜಿಸ್ಟ್ರಾರ್ ಕಚೇರಿ ಸಮಸ್ಯೆ ನಿಜ:ರಾಜ್ಯದಲ್ಲಿ ಹಾಲಿ ಒಟ್ಟು 254 ಉಪ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಹವಾಮಾನ ವೈಪರಿತ್ಯದಿಂದ ಕೆಲವೊಮ್ಮೆ ಬಿಎಸ್​ಎನ್​ಎಲ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿ ನೆಟ್​ವರ್ಕ್​ನಲ್ಲಿ ತೊಂದರೆಯಾಗುತ್ತದೆ. ಈ ಸಮಯದಲ್ಲಿ ನೋಂದಣಿ ಪ್ರಕ್ರಿಯೆಗೆ ಸಮಸ್ಯೆಯಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿನ ಕಾರ್ಯನಿರ್ವಹಣೆಗೆ ಆಗುತ್ತಿರುವ ಅಡಚಣೆಯನ್ನು ವಿವರಿಸಿದರು. ಉತ್ತರ ನೀಡಿದ ಸಚಿವರು, ‘ಫ್ರೂಟ್’ ಬಳಕೆಯಿಂದ ರೈತರ ಅಲೆದಾಟ ತಪ್ಪಿಸಲಾಗಿದೆ. ಹಾಗೆಯೇ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಆಗಿದೆ. ಹೀಗಾಗಿ 136 ಕಚೇರಿಗಳಲ್ಲಿ ಏರ್​ಟೆಲ್ ನೆಟ್​ವರ್ಕ್ ಬಳಸಿಕೊಳ್ಳುತ್ತಿದ್ದೇವೆ. ಜತೆಗೆ ನಾನು ವೈಯಕ್ತಿಕ ಕೆಲಸಗಳಿಗೆ ಹೋದಾಗ ಅಲ್ಲಿನ ಪರಿಸ್ಥಿತಿ ಗಮನಿಸಿದ್ದೇನೆ, ಸರ್ಕಾರಕ್ಕೆ ಆದಾಯ ತರುವ ಸಬ್ ರಿಜಿಸ್ಟ್ರಾರ್ ಕಚೇರಿಗಳು ಸುಸ್ಥಿತಿಯಲ್ಲಿರಬೇಕು. ಬಾಡಿಗೆ ಕಟ್ಟಡದಲ್ಲಿರುವವು ಅಲ್ಪಸ್ವಲ್ಪ ಚೆನ್ನಾ ಗಿದೆ. ನಮ್ಮದೇ ಕಟ್ಟಡದಲ್ಲಿ ಇರುವುದು ಅನುಕೂಲ ಕರವಾಗಿಲ್ಲ. ಹೀಗಾಗಿ ಸಮಗ್ರ ವರದಿಗೆ ಸೂಚಿಸಿದ್ದು, ವರದಿ ಬಂದ ಬಳಿಕ ಆಮೂಲಾಗ್ರ ಬದಲಾವಣೆ ಯನ್ನು ಈ ವರ್ಷದಲ್ಲೇ ಮಾಡುತ್ತೇವೆ ಎಂದರು.
ಕೌನ್ಸೆಲಿಂಗ್​ಗೂ ಮುನ್ನ ನಿಯೋಜನೆ ರದ್ದು:ಪದವಿ ಕಾಲೇಜುಗಳ ಪ್ರಾಧ್ಯಾಪಕರ ವರ್ಗಾವಣೆ ಕೌನ್ಸೆಲಿಂಗ್ ನಡೆದ ಮೇಲೆ ಯಾವುದೇ ಕಾರಣಕ್ಕೂ ಮತ್ತೆ ನಿಯೋಜನೆ ಮಾಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು. ವಿಧಾನಸಭೆ ಯಲ್ಲಿ ಗಮನ ಸೆಳೆಯುವ ಸೂಚನೆಯಡಿ ಕಾಂಗ್ರೆಸ್​ನ ಯು.ಟಿ.ಖಾದರ್ ಕೇಳಿದ ಪ್ರಶ್ನೆಗೆ ಸಚಿವರು ಈ ಸ್ಪಷ್ಟನೆ ನೀಡಿದರು. ವಿಷಯ ಪ್ರಸ್ತಾಪಿಸಿದ ಖಾದರ್, ಮಂಗಳೂರಿನ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಧದಷ್ಟು ಸಿಬ್ಬಂದಿ ನಿಯೋಜನೆ ಮೇಲೆ ತೆರಳಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗಿದೆ ಎಂದರು. ಆಗ ಸಚಿವರು, ವರ್ಗಾವಣೆ ಕೌನ್ಸೆಲಿಂಗ್​ಗೂ ಮುನ್ನ ಎಲ್ಲ ನಿಯೋಜನೆಗಳೂ ರದ್ದಾಗುತ್ತವೆ. ಆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಸದನದಲ್ಲಿ 144 ಜಟಾಪಟಿ:ಕಾನೂನು ಸುವ್ಯವಸ್ಥೆ ಕಾಪಾಡಲು 144 ನಿಷೇಧಾಜ್ಞೆ ಜಾರಿಯಲ್ಲಿದ್ದಾಗಲೂ ಮಂತ್ರಿಗಳು ಮೆರವಣಿಗೆ ಮತ್ತು ಕಾಂಗ್ರೆಸ್ ಪಾದಯಾತ್ರೆ ಮಾಡಿದ ವಿಚಾರ ಜಟಾಪಟಿಗೆ ಕಾರಣವಾಯಿತು. ಕಾಂಗ್ರೆಸ್​ನ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ, ಕೆಲ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿದ ಪ್ರಕರಣವನ್ನು ಸರ್ಕಾರ ಸರಿಯಾಗಿ ನಿಭಾಯಿಸಲಿಲ್ಲ. ರಾಜ್ಯದಲ್ಲಿ ಸೌಹಾರ್ದತೆಗೆ ಧಕ್ಕೆ ಬಂದಿರುವುದರಿಂದ ವಿದೇಶಿ ಬಂಡವಾಳ ಹೂಡಿಕೆ ಕಷ್ಟ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಆ ಸ್ಥಿತಿಗೆ ಯಾರು ಎಂದು ರೇಗಿದರು. ಆಗ ಸಿದ್ದರಾಮಯ್ಯ, ಶಿವಮೊಗ್ಗದಲ್ಲಿ ಹರ್ಷ ಪಾರ್ಥೀವ ಶರೀರದ ಮೆರವಣಿಗೆ ಸಂದರ್ಭದಲ್ಲಿ 144 ನಿಷೇಧಾಜ್ಞೆ ಜಾರಿಯಲ್ಲಿದ್ದಾಗಲೂ ಮಂತ್ರಿಗಳೇ ಅದನ್ನು ಉಲ್ಲಂಘಿಸುತ್ತಾರೆ ಎಂದರೆ ಏನು? ಕಾನೂನು ಇದೆಯೆ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಸಿ.ಸಿ.ಪಾಟೀಲ್, ಸೌಹಾರ್ದತೆ ಹಾಳು ಮಾಡಿದ್ದು ನೀವು ಎಂದರು. ಜೆ.ಸಿ.ಮಾಧುಸ್ವಾಮಿ, ಕೋವಿಡ್ ಮಾರ್ಗಸೂಚಿ ಜಾರಿಯಲ್ಲಿರುವಾಗ ಪಾದಯಾತ್ರೆ ಮಾಡಿದ್ದು ಯಾರು ಎಂದು ತರಾಟೆ ತೆಗೆದುಕೊಂಡರು. ಆಗ ದೇಶಪಾಂಡೆ, 144 ಜಾರಿಯಲ್ಲಿರುವಾಗ ಮಂತ್ರಿಯೊಬ್ಬರು ಮೆರಣಿಗೆಯಲ್ಲಿ ಭಾಗವಹಿಸಿದ್ದು ಇದೇ ಮೊದಲು ಎಂದು ಕುಟುಕಿದರು.
ಬಡವರಿಗೆ ಹಕ್ಕುಪತ್ರ ನೀಡಿ ಎಂದ ಯಡಿಯೂರಪ್ಪ:ಬಡವರಿಗೆ 94ಡಿ ಅಡಿ ಹಕ್ಕುಪತ್ರ ಕೊಡದಿದ್ದರೆ ಸಮಸ್ಯೆಗೆ ಸಿಲುಕುತ್ತಾರೆ. ಹಾಗಾಗಿ ನೀವು ಏನು ಮಾಡುತ್ತೀರೋ ಗೊತ್ತಿಲ್ಲ, ಒಟ್ಟಿನಲ್ಲಿ ಹಕ್ಕುಪತ್ರ ಕೊಡಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಸಲಹೆ ನೀಡಿದರು. ವಿಧಾನಸಭೆಯಲ್ಲಿ ಗಮನಸೆಳೆಯುವ ಸೂಚನೆಯಡಿ ಬಿಜೆಪಿಯ ಕೆ.ಬಿ.ಅಶೋಕ್ ನಾಯ್್ಕ ವಿಷಯ ಪ್ರಸ್ತಾಪಿಸಿ ಕಂದಾಯ ಗ್ರಾಮ ಘೋಷಣೆಯಾಗದೇ ಇರುವುದರಿಂದ ಅಲ್ಲಿನ ಜನ ಸೌಲಭ್ಯ ವಂಚಿತರಾಗುತ್ತಾರೆ ಎಂದರು. ಆಗ ಮಧ್ಯ ಪ್ರವೇಶಿಸಿದ ಯಡಿಯೂರಪ್ಪ, ಹಕ್ಕುಪತ್ರ ಕೊಡದೇ ಇದ್ದರೆ ಬಡವರು ಸವಲತ್ತು ವಂಚಿತರಾಗುತ್ತಾರೆ. ಕಂದಾಯ ಸಚಿವರ ಜತೆ ರ್ಚಚಿಸಿ ಕ್ರಮ ತೆಗೆದುಕೊಳ್ಳಿ. ನೀವು ಏನು ಮಾಡುತ್ತೀರೋ ಗೊತ್ತಿಲ್ಲ. ಹಕ್ಕುಪತ್ರ ಕೊಡಿ ಎಂದು ಹೇಳಿದರು. ಇದಕ್ಕೂ ಮುನ್ನ ಕಂದಾಯ ಸಚಿವರ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರಿಸಿ, ದಾಖಲೆ ರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಸಾಕಷ್ಟು ಕಾನೂನು ಸಮಸ್ಯೆಗಳಿವೆ. ಆದಾಗ್ಯೂ ಸದಸ್ಯರ ಒತ್ತಡದ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಆದಾಯ ಮಿತಿ ಹೆಚ್ಚಳಕ್ಕೆ ಒತ್ತಡ:ಆದಾಯ ಮಿತಿ ನಿಗದಿ ವಿಚಾರದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ಸಮಸ್ಯೆಯಾಗಿದೆ, ಕೂಡಲೇ ಸರ್ಕಾರ ಆದಾಯ ಮಿತಿ ಹೆಚ್ಚಿಸಬೇಕೆಂದು ವಿಧಾನಸಭೆಯಲ್ಲಿ ಶಾಸಕ ಸಿ.ಟಿ.ರವಿ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಗ್ರಾಮೀಣ ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆಗೆ 32 ಸಾವಿರ ರೂ. ಆದಾಯ ಮಿತಿ ನಿಗದಿಪಡಿಸಿರುವುದರಿಂದ ಫಲಾನುಭವಿ ಆಯ್ಕೆಯೇ ಕಷ್ಟ. ಮಿತಿ ಹೆಚ್ಚಿಸುವ ವಿಚಾರದಲ್ಲಿ ಪರಿಶೀಲನೆ ಮಾಡುತ್ತೇವೆಂದು ಸರ್ಕಾರ ಉತ್ತರಿಸುವ ಬದಲು ಇನ್ನೊಂದು ವಾರದೊಳಗೆ ಮಿತಿ ಹೆಚ್ಚಳದ ಆದೇಶ ಹೊರಡಿಸಿ ಎಂದು ಸರ್ಕಾರದ ಕಿವಿ ಹಿಂಡಿದರು. ಸಿ.ಟಿ.ರವಿ ಮಾತಿಗೆ ಸ್ಪೀಕರ್, ಕೆ.ಜಿ.ಬೋಪಯ್ಯ ಸೇರಿ ಪ್ರತಿಪಕ್ಷದ ಕೆಲವು ಸದಸ್ಯರೂ ದನಿಗೂಡಿಸಿದರು. ಉತ್ತರ ನೀಡಿದ ವಸತಿ ಸಚಿವ ವಿ.ಸೋಮಣ್ಣ, ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ವಸತಿ ಯೋಜನೆಗೆ ಆದಾಯ ಮಿತಿಯು 32 ಸಾವಿರ ರೂ. ಇದ್ದು, ಇದನ್ನು 1.20 ಲಕ್ಷ ರೂ.ಗೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಬಿಪಿಎಲ್ ಕಾರ್ಡ್ ಅರ್ಹತೆಯೇ ಮಾನದಂಡ ಮಾಡುವ ಕುರಿತು ಮುಖ್ಯಮಂತ್ರಿಯವರ ಬಳಿ ಚರ್ಚೆಯಾಗಿದೆ ಎಂದರು. ನಗರ ಪ್ರದೇಶದ ವಸತಿ ಯೋಜನೆಗಳಿಗೆ 87,600 ರೂ. ಆದಾಯ ಮಿತಿ ಇದೆ. ಬೆಂಗಳೂರು ನಗರ ವಸತಿ ಯೋಜನೆಗೆ 3 ಲಕ್ಷ ರೂ. ಆದಾಯ ಮಿತಿ ಇದ್ದು, ಇದನ್ನು ಉಳಿದ ಪಾಲಿಕೆ, ನಗರಸಭೆ, ಪುರಸಭೆ, ಪಪಂಗೂ ವಿಸ್ತರಿಸುವ ಉದ್ದೇಶವಿದೆ ಎಂದು ವಿವರಿಸಿದರು. ಈ ವಾರದಲ್ಲೇ ಆದೇಶ ಹೊರಡಿಸಬೇಕು ಮತ್ತು ಗ್ರಾಮೀಣ ಪ್ರದೇಶಕ್ಕೂ 3 ಲಕ್ಷ ರೂ.ಮಿತಿ ವಿಸ್ತರಿಸಬೇಕೆಂದು ಸಿ.ಟಿ.ರವಿ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ತಕ್ಷಣವೇ ಸೂಕ್ತಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 14 =
Remember me
