|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಸರ್ಕಾರದ ವಿವಿಧ ಇಲಾಖೆಗಳಲ್ಲಿ ರಾಶಿ ರಾಶಿ ಕಡತಗಳು ವಿಲೇವಾರಿಗೆ ಬಾಕಿ ಇರುವ ನಡುವೆಯೇ ಕಡತ ವಿಲೇವಾರಿ ಹಂತಗಳನ್ನು ಕಡಿಮೆ ಮಾಡುವ ಪ್ರಯತ್ನ ಆರಂಭವಾಗಿರುವುದು ಹುದ್ದೆಗಳ ಕಡಿತ ಪ್ರಕ್ರಿಯೆಯ ಮುನ್ನುಡಿಯೇ ಎಂಬ ಆತಂಕ ನೌಕರರನ್ನು ಕಾಡಲಾರಂಭಿಸಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಜಾರಿಗೆ ಸರ್ಕಾರ ತೀರ್ವನಿಸಿರುವುದು ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ, ಬಜೆಟ್​ನಲ್ಲಿ ಘೋಷಿಸಿದ ರೀತಿಯಲ್ಲೇ ಆಡಳಿತ ಸುಧಾರಣಾ ಆಯೋಗದ ಶಿಫಾರಸು ಜಾರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ ಆಡಳಿತ ಸುಧಾರಣಾ ಇಲಾಖೆಗೆ ಮಾ.16 ರಂದು ಪತ್ರ ಬರೆದಿದ್ದರು. ಅದರಂತೆ ವಿಭಾಗದ ಕಾರ್ಯದರ್ಶಿ ಮೌನೀಷ್ ಮೌದ್ಗಿಲ್ ಡಿಪಿಎಆರ್​ನ ಕಾರ್ಯದರ್ಶಿ ಹೇಮಲತಾ ಅವರಿಗೆ ಆದೇಶ ಹೊರಡಿಸಲು ಕ್ರಮ ಕೈಗೊಳ್ಳುವಂತೆ ಮಾ.22 ರಂದು ಸೂಚಿಸಿದ್ದರು.
ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಹುದ್ದೆ ಖಾಲಿ ಇವೆ. ಹೊಸದಾಗಿ ಭರ್ತಿ ಸಹ ಮಾಡುತ್ತಿಲ್ಲ. ಹೀಗಿರುವಾಗ ಆಡಳಿತ ಸುಧಾರಣೆ ಹೆಸರಿನಲ್ಲಿ ಮತ್ತಷ್ಟು ಕಡಿತ ಮಾಡಿದರೆ ಇರುವ ನೌಕರರಿಗೆ ಹೊರೆಯಾಗುತ್ತದೆ. ನಿರುದ್ಯೋಗಿಗಳಿಗೂ ಅನ್ಯಾಯವೂ ಆಗುತ್ತದೆ ಎಂಬ ಅಭಿಪ್ರಾಯವಿದೆ.
ಏನಿದೆ? ಏನಾಗಲಿದೆ?:ಸರ್ಕಾರದ ಮಟ್ಟದಲ್ಲಿ 5-10 ಹಂತಗಳಲ್ಲಿರುವ ಕಡತಗಳ ಚಲನವಲನವನ್ನು 4 ಹಂತಕ್ಕೆ ಇಳಿಸಬೇಕು ಎಂದು ವರದಿ ಹೇಳಿದೆ. ಶಾಖಾಧಿಕಾರಿಯಿಂದ ಅಧೀನ ಕಾರ್ಯದರ್ಶಿ, ಅಲ್ಲಿಂದ ಉಪ ಕಾರ್ಯದರ್ಶಿ ಆನಂತರ ಕಾರ್ಯದರ್ಶಿಗೆ ಸಲ್ಲಿಕೆಯಾಗುವ ಹಂತಗಳು ಸಾಕು ಎಂಬುದು ವರದಿಯ ಶಿಫಾರಸು. ಸಹಾಯಕರು, ಹಿರಿಯ ಸಹಾಯಕರು ಯಾವುದೇ ಟಿಪ್ಪಣಿ ಸಲ್ಲಿಸಬಾರದೆಂದು ಸ್ಪಷ್ಟಪಡಿಸಿದೆ. ಇ-ಆಫೀಸ್​ನಿಂದ ಕಡತಗಳ ಚಲನವಲನ ಶೀಘ್ರವಾಗಿದೆ. ಜಿಲ್ಲೆಗಳಿಂದ ಬರುವ ಕಡತಗಳು ಜಿಲ್ಲಾಧಿಕಾರಿಯಾದ ಐಎಎಸ್ ಅಧಿಕಾರಿಯಿಂದ ಅಥವಾ ಇಲಾಖೆ ಮುಖ್ಯಸ್ಥರಿಂದ ಬಂದಿರುವಾಗ ಸಚಿವಾಲಯದಲ್ಲಿ ಕೆಳಹಂತದ ಸಿಬ್ಬಂದಿ ಮತ್ತೆ ಪರಿಶೀಲನೆ ಮಾಡುವ ಅಗತ್ಯತೆಯ ಬಗ್ಗೆಯೂ ತಿಳಿಸಿದೆ. ಕೆಳಹಂತದ ಸಿಬ್ಬಂದಿ ಮಾಹಿತಿಯನ್ನು ಶಾಖಾಧಿಕಾರಿಗೆ ನೀಡಿದರೆ ಸಾಕು. ಕಡತಗಳನ್ನು ಕಾರ್ಯದರ್ಶಿ ಮಟ್ಟದಲ್ಲಿಯೇ ಸ್ವೀಕರಿಸಬೇಕು. ಅದಕ್ಕೆ ತಕ್ಕಂತೆ ಇ-ಆಫೀಸ್ ಸಾಫ್ಟ್​ವೇರ್ ಹೊಂದಾಣಿಕೆ ಮಾಡಬೇಕು. ಯಾವುದೇ ಅಧಿಕಾರಿ ಅದೇ ವರ್ಗದ ಇನ್ನೊಬ್ಬ ಅಧಿಕಾರಿಗೆ ಕಡತ ಸಲ್ಲಿಸಬೇಕಾಗಿಲ್ಲ. ಇಲಾಖಾ ಮುಖ್ಯಸ್ಥರ ಕಡತವನ್ನು ಆರಂಭದಲ್ಲಿಯೇ ಉನ್ನತ ಮಟ್ಟದ ಅಧಿಕಾರಿ ಪರಿಶೀಲನೆ ಮಾಡುವುದು ಸೂಕ್ತ.
ನೌಕರರ ಖಾಲಿ ಹುದ್ದೆ ಭರ್ತಿಗೆ ಸಾಕಷ್ಟು ಮನವಿ ಮಾಡಿದ್ದೇವೆ. ಈಗ ಮತ್ತಷ್ಟು ಹುದ್ದೆ ಕಡಿತ ಮಾಡುತ್ತದೆಯೇ ಎಂಬ ಅನುಮಾನ ಕಾಡುತ್ತಿದೆ. ಕೆಳಹಂತದ ಹುದ್ದೆಗಳೇ ಇಲ್ಲದಂತಾಗುವವೇ ಎಂಬ ಭಯವೂ ಇದೆ. ಆದ್ದರಿಂದ ಸಭೆ ಕರೆದು ಮುಂದೆ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ.
|ಪಿ. ಗುರುಸ್ವಾಮಿಅಧ್ಯಕ್ಷ, ಸಚಿವಾಲಯ ನೌಕರರ ಸಂಘ
ಕಡತ ವಿಲೇವಾರಿ ಹಂತಗಳನ್ನು ಕಡಿಮೆ ಮಾಡುವುದನ್ನು ಸ್ವಾಗತಿಸುತ್ತೇವೆ. ಆದರೆ ಈ ಪ್ರಕ್ರಿಯೆ ಮೇಲುನೋಟಕ್ಕೆ ಹುದ್ದೆಗಳ ಕಡಿತವಾಗುವ ಆತಂಕವಿದೆ. ಯಾವುದೇ ಕಾರಣಕ್ಕೂ ಹುದ್ದೆ ಕಡಿತ ಮಾಡಬಾರದು. ಆ ಬಗ್ಗೆ ಮುಖ್ಯಮಂತ್ರಿ ಅವರ ಜತೆ ಮಾತನಾಡುತ್ತೇವೆ.
|ಸಿ.ಎಸ್. ಷಡಾಕ್ಷರಿಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ
ಅನುಮಾನವೇಕೆ?:ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಬಗ್ಗೆಯೇ ನೌಕರರಿಗೆ ಅನುಮಾನಗಳಿವೆ. ಶಿಫಾರಸುಗಳು ಕಡತ ವಿಲೇವಾರಿ ಹಂತಗಳನ್ನು ಕಡಿಮೆ ಮಾಡುತ್ತವೆ, ಅದು ಸುಧಾರಣೆ ಎಂದು ಅನ್ನಿಸಿದರೂ ಅದನ್ನು ಒಪ್ಪಲು ನೌಕರರು ಸಿದ್ಧರಿಲ್ಲ. ಸಚಿವಾಲಯದ ಮಟ್ಟದಲ್ಲಿಯೇ ಸಹಾಯಕ ಮತ್ತು ಹಿರಿಯ ಸಹಾಯಕ ಹುದ್ದೆಗಳು ರದ್ದಾಗುವ ಸಾಧ್ಯತೆಗಳಿವೆ. ಸೆಕ್ಷನ್ ಆಫೀಸರ್ ಹಂತದ ಮೇಲಿನ ಹುದ್ದೆಗಳು ಮಾತ್ರ ಉಳಿಯುತ್ತವೆ ಎಂಬ ವಾದ ನೌಕರರ ವಲಯದಲ್ಲಿದೆ.
ಕಡತ ವಿಲೇವಾರಿ ವಿಳಂಬ:ಸರ್ಕಾರದ ಮಟ್ಟದಲ್ಲಿ ವಿಶೇಷ ಕಡತ ಯಜ್ಞವೇನೂ ನಡೆಯದ ಕಾರಣದಿಂದ ರಾಶಿ ರಾಶಿ ಕಡತಗಳು ವಿಲೇವಾರಿಗೆ ಬಾಕಿ ಇವೆ. ಫೆಬ್ರವರಿಯಿಂದ ಮಾರ್ಚ್ ಅವಧಿಯಲ್ಲಿ 87132 ಕಡತಗಳು ಆರಂಭದಲ್ಲಿ ಬಾಕಿ ಇದ್ದವು. ಹೊಸದಾಗಿ 22665 ಕಡತ ಸೃಜನೆಯಾದವು. ಅವುಗಳಲ್ಲಿ ವಿಲೇವಾರಿಯಾಗಿರುವುದು 20012 ಕಡತ ಮಾತ್ರ. ಬಾಕಿ ಕಡತಗಳ ಪಟ್ಟಿ 89785ಕ್ಕೆ ವಿಸ್ತರಣೆಯಾಗಿದೆ. ಇ-ಆಫೀಸ್ ಬಂದರೂ ಸಹ ವಿಲೇವಾರಿ ನಿಧಾನವಾಗುತ್ತಿದೆ. ಅದರಲ್ಲೂ ಇನ್ನೂ ಕೆಳ ಹಂತದ ಸಿಬ್ಬಂದಿ ಕಡತಗಳನ್ನು ನೋಡದೇ ಹೋದರೆ ವಿಲೇವಅರಿಯಾಗಬೇಕಾದ ಕಡತಗಳ ಸಂಖ್ಯೆ ಹೆಚ್ಚಾಗಬಹುದೆಂದು ನೌಕರರು ಹೇಳುತ್ತಾರೆ.
ವರ್ಗಾವಣೆಗೆ ಕೌನ್ಸೆಲಿಂಗ್:ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಗೆ ಜಾರಿಯಲ್ಲಿರುವ ಗಣಕೀಕೃತ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಎಲ್ಲ ಇಲಾಖೆಗಳ ಸಿ ಮತ್ತು ಡಿ ವರ್ಗದ ನೌಕರರ ವರ್ಗಾವಣೆಗೂ ಜಾರಿಗೆ ತರಬೇಕೆಂದು ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ. ಅದರ ಬಗ್ಗೆಯೂ ಆದೇಶ ಹೊರಬೀಳುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳುತ್ತವೆ.
ಸಚಿವರ ಶಾಖೆಗೆ ಇಲ್ಲ ಕಾಲಮಿತಿ:ಸಚಿವರ ಕಚೇರಿಗೆ ಹೋಗುವ ಕಡತಗಳ ವಿಲೇವಾರಿಗೆ ಯಾವುದೇ ಕಾಲಮಿತಿ ಇಲ್ಲದೇ ಇರುವುದು ವಿಲೇವಾರಿ ತಡಕ್ಕೆ ಕಾರಣ. ಅಲ್ಲಿಗೂ ಕಾಲಮಿತಿ ವಿಧಿಸದಿದ್ದಲ್ಲಿ ಕಡತ ವಿಲೇವಾರಿಗೆ ವೇಗ ನೀಡಲು ಸಾಧ್ಯವಾಗುವುದಿಲ್ಲ ಎಂಬುದು ನೌಕರರ ಅಭಿಪ್ರಾಯ.
ಆಸ್ಕರ್​ ಪ್ರಶಸ್ತಿ 2022: ಚೊಚ್ಚಲ ಆಸ್ಕರ್​ ಪ್ರಶಸ್ತಿ ಗೆದ್ದ ನಟ ವಿಲ್​ ಸ್ಮಿತ್, ವಿಜೇತರ​ ಸಂಪೂರ್ಣ ಪಟ್ಟಿ ಇಲ್ಲಿದೆ…

ತೋಟಕ್ಕೇ ಬಂದ ಹುಲಿಗೆ ಯುವಕ ಬಲಿ; ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 13 =
Remember me
