ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಶ್ರಮದ ಫಲವಾಗಿ ‘ಶ್ರವಣದೋಷಮುಕ್ತ ಕರ್ನಾಟಕ’ ಘೋಷವಾಕ್ಯದಡಿ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಯೋಜನೆಗೆ 2022-23ನೇ ಸಾಲಿನಲ್ಲಿ 32 ಕೋಟಿ ರೂ. ಅನುದಾನ ನೀಡಲಾಗಿದ್ದು, ಸಲಕರಣೆ ಮತ್ತು ಸಾಧನ ಸಾಮಗ್ರಿ ಒದಗಿಸಲಾಗುತ್ತಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ, ಇಂದಿರಾ ಗಾಂಧಿ ಇನ್​ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಹುಬ್ಬಳಿಯ ಕಿಮ್್ಸ, ವಿಕ್ಟೋರಿಯಾ, ಅಪೋಲೋ ಆಸ್ಪತ್ರೆ, ಮೈಸೂರಿನ ಕೆ.ಆರ್. ಆಸ್ಪತ್ರೆ, ಜೆಎಸ್​ಎಸ್ ಆಸ್ಪತ್ರೆ, ಚಿಕ್ಕಬಳ್ಳಾಪುರದ ಸತ್ಯಸಾಯಿ ಆಸ್ಪತ್ರೆ, ಬೆಳಗಾವಿಯ ಕೆಎಲ್​ಇ ಸೇರಿ ರಾಜ್ಯದ ಇತರ ಆಸ್ಪತ್ರೆಗಳನ್ನು ಯೋಜನೆಗೆ ನೋಂದಾಯಿಸಲಾಗಿದೆ. ಇತರ ತೃತೀಯ ಆರೈಕೆ ಕೇಂದ್ರಗಳನ್ನು ವಿಭಾಗೀಯ ಮಟ್ಟದಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ನೋಂದಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಆಸ್ಪತ್ರೆಗಳಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ನುರಿತ ತಜ್ಞ ವೈದ್ಯರಿಂದ ನಡೆಸಲಾಗುತ್ತದೆ.
ರಾಜ್ಯಾದ್ಯಂತ 26,959 ತಪಾಸಣೆ ಮಾಡಿರುವ ಮಕ್ಕಳಲ್ಲಿ 2,959 ಮಕ್ಕಳಲ್ಲಿ ತೀವ್ರತರ ಕಿವುಡುತನ ಪತ್ತೆಯಾಗಿದೆ. 2022-23ನೇ ಸಾಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಜೆಟ್​ನಲ್ಲಿ 500 ಗಂಭೀರ ಶ್ರವಣದೋಷವುಳ್ಳ(ಹುಟ್ಟುಕಿವುಡು) ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್​ಗಳನ್ನು ಅಳವಡಿಸಲು ಮತ್ತು ವಾಕ್ ಶ್ರವಣ ಸಮಸ್ಯೆ ಬಗೆಹರಿಸಲು 32 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ 0-6 ವರ್ಷದೊಳಗಿನ ಮಕ್ಕಳಲ್ಲಿ ಶ್ರವಣದೋಷ ಹೊಂದಿರುವ 1,939 (ಶೇ. 0.02) ಮಕ್ಕಳು ಇದ್ದಾರೆ. ಹುಟ್ಟುನಿಂದ ಕಿವುಡುತನ ಬಂದಿರುವ ಸಮಸ್ಯೆ ಇದಾಗಿದೆ. ತಾಯಿಯ ಗರ್ಭಾವ್ಯಸ್ಥೆಯಲ್ಲಿ ಸೋಂಕು ಇದ್ದರೆ ಭ್ರೂಣಕ್ಕೆ ಕಿವುಡುತನ ಉಂಟಾಗುತ್ತದೆ. ವೈರಾಣುಗಳು, ಎಚ್​ಐವಿ, ಔಷಧ ಮತ್ತು ಮಗು ಹುಟ್ಟುವ ಸಮಯದಲ್ಲಿ ಬರುವ ಜಾಂಡೀಸ್, ಸೆಪ್ಸಿಸ್ ಮತ್ತು ಬಾಲ್ಯದಲ್ಲಿ ಉಂಟಾಗುವ ಗಾಯಗಳು, ಸೋಂಕು, ಮೆನಿಂಜೈಟಿಸ್, ಎನ್​ಸೆಫಾಲಿಟಿಸ್​ನಿಂದಲೂ ಕಿವುಡು ಸಮಸ್ಯೆ ಕಾಡುತ್ತದೆ. ಅಲ್ಲದೆ, ರಕ್ತ ಸಂಬಂಧದಲ್ಲಿ ಮದುವೆಯಾಗುವುದು, ರುಬೆಲ್ಲಾದ ಸೋಂಕಿನಿಂದಲೂ ಮಗುವಿಗೆ ಕಿವುಡು ಸಮಸ್ಯೆ ಉಂಟಾಗುತ್ತದೆ.
ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಕೆ ಸೇರಿ ಇತರ ಔಷಧಗಳಿಗೆ ಅಂದಾಜು 6.27 ಲಕ್ಷ ರೂ. ತಗಲುತ್ತದೆ. ಈ ವೆಚ್ಚವನ್ನು ಸರ್ಕಾರ ಭರಿಸಲಿದೆ. ಶಸ್ತ್ರಚಿಕಿತ್ಸೆಯನ್ನು ನಡೆಸುವುದಕ್ಕೆ 32 ರೂ. ಕೋಟಿ ರೂ.ಗಳ ಪೈಕಿ ಈಗಾಗಲೆ 5 ಕೋಟಿ ರೂ.ವೆಚ್ಚವಾಗಿದೆ. ಉಳಿದ ಅನುದಾನದಲ್ಲಿ ಇಂಪ್ಲಾಂಟ್​ಗಳು ಮತ್ತು ಶ್ರವಣ ಸಾಧನ ಖರೀದಿಸಲು ಕ್ರಮವಹಿಸಲಾಗಿದೆ. ಉಳಿದ ಶಸ್ತ್ರಚಿಕಿತ್ಸಾ ಸೇವೆ ಒದಗಿಸಲು 25 ತೃತೀಯ ಸೇವೆಗಳ ಆರೈಕೆ ಕೇಂದ್ರ ನೋಂದಾಯಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 67 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಒದಗಿಸಲಾಗುತ್ತದೆ. ಜತೆಗೆ, 67 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು, ಮಕ್ಕಳು ಶಸ್ತ್ರಚಿಕಿತ್ಸಾ ನಂತರದ ಸೇವೆಗಳನ್ನು ಪಡೆಯುತ್ತಿದ್ದಾರೆ. ಒಟ್ಟಾರೆ ಈವರೆಗೆ 159 ಮಕ್ಕಳಿಗೆ ಯಶಸ್ವಿಯಾಗಿ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಉಳಿದ ಮಕ್ಕಳಿಗೆ ಚಿಕಿತ್ಸಾ ಪೂರ್ವ ತಪಾಸಣೆ ಹಂತದಲ್ಲಿದೆ. ಅನುಮೋದನೆಗೊಂಡ 500 ಶಸ್ತ್ರಚಿಕಿತ್ಸೆಗಳಲ್ಲಿ ಉಳಿದ 408 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಸೇವೆ ಒದಗಿಸಲು ಮಕ್ಕಳ ಪಟ್ಟಿ ತಯಾರಿಸಲಾಗಿದೆ. 28 ಮಕ್ಕಳಿಗೆ ಪ್ರೀ ಆರ್ಥ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 238 ಶಸ್ತ್ರಚಿಕಿತ್ಸಾ ಪೂರ್ವ ತಪಾಸಣಾ ಹಂತದಲ್ಲಿದ್ದರೆ, 142 ಮಕ್ಕಳಿಗೆ ಹಿಯರಿಂಗ್ ಥೆರಪಿ ಹಂತದಲ್ಲಿದೆ. 82 ಮಕ್ಕಳು ಪ್ರಾಥಮಿಕ ಹಂತದ ತಪಾಸಣೆಯಲ್ಲಿ ಇದ್ದಾರೆ.
ಗುರುತಿನ ಚೀಟಿ ವಿತರಣೆ:ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ, ರಾಜ್ಯ ಆರೋಗ್ಯ ಪ್ರಾಧಿಕಾರ ಮತ್ತು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯಗಳ ನಿರಂತರ ಸಹಕಾರ ಮತ್ತು ಸಹಾಯದಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2022ರ ಆಗಸ್ಟ್ ನಾಲ್ಕನೇ ವಾರದಿಂದ ಪ್ರಾರಂಭಿಸಿ ಇದುವರೆಗೆ ಸುಮಾರು 1.38 ಕೋಟಿ ಗುರುತಿನ ಚೀಟಿಗಳನ್ನು ಯಶಸ್ವಿಯಾಗಿ ನೋಂದಣಿ ಮಾಡಿರುತ್ತದೆ. 2023 ಮಾ.27 ರಂದು 22 ಲಕ್ಷ ಎಬಿ- ಪಿಎಂಜೆಎವೈ-ಎಆರ್​ಕೆ ಗುರುತಿನ ಚೀಟಿಗಳ ಕಾರ್ಯ ನಡೆಯಲಿದೆ. ನಂತರ ಉಳಿದ ನೋಂದಾಯಿತ ಕಾರ್ಡ್​ಗಳನ್ನು ಫಲಾನುಭವಿಗಳಿಗೆ ನೀಡುವ ಕಾರ್ಯವನ್ನು 2023-ಏಪ್ರಿಲ್​ರೊಳಗೆ ಪೂರೈಸಲು ಇಲಾಖೆ ಕ್ರಮ ಕೈಗೊಳ್ಳಲಿದೆ. ರಾಜ್ಯದಲ್ಲಿರುವ ಒಟ್ಟು 5.09 ಕೋಟಿ ಫಲಾನುಭವಿಗಳಿಗೆ ಕಾರ್ಡ್ ವಿತರಣಾ ಗುರಿಯನ್ನು 2023 ಆಗಸ್ಟ್​ರೊಳಗೆ ತಲುಪಲು ಇಲಾಖೆ ಸನ್ನದ್ಧವಾಗಿದೆ.
ಮಹಿಳಾ ಸ್ವಾಸ್ಥ್ಯ ಕ್ಲಿನಿಕ್:ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ರ್ಚಚಿಸಲು ರಾಜ್ಯ ಸರ್ಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ 128 ಮಹಿಳಾ ಸ್ವಾಸ್ಥ್ಯ ಆಯುಷ್ಮತಿ ಕ್ಲಿನಿಕ್​ಗಳನ್ನು ಸ್ಥಾಪಿಸಲಾಗಿದೆ. 2023ರ ಮಾ.27ರಂದು ರಾಜ್ಯದಲ್ಲಿ 50 ಆಯುಷ್ಮತಿ ಕ್ಲಿನಿಕ್ ಲೋಕಾರ್ಪಾಣೆಗೊಳ್ಳಲಿವೆ. ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕುರಿತು ಮುಕ್ತವಾಗಿ ರ್ಚಚಿಸಲು ಅವಕಾಶ ಕಲ್ಪಿಸುವುದು, ಹದಿಹರೆಯದವರಿಗೆ ದೈಹಿಕ ಬದಲಾವಣೆ, ವೈಯಕ್ತಿಕ ಶುಚಿತ್ವ ಮತ್ತು ಸಂತೋನಾತ್ಪತ್ತಿ ಕುರಿತು ಅರಿವು ಮೂಡಿಸಲಾಗುತ್ತದೆ. 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕ್ಯಾನ್ಸರ್​ನಂತ ಸೇರಿ ಗಂಭೀರ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಲಾಗುತ್ತದೆ. ತಜ್ಞರ ವೈದ್ಯರು ಆರೋಗ್ಯ ಸೇವೆ ನೀಡಲಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಅವಶ್ಯವಿದ್ದರೆ ರೆಫರಲ್ ಸೇವೆ ಶಿಫಾರಸು ಮಾಡಲಿದ್ದಾರೆ. ಕ್ಷೇಮ ಚಟುವಟಿಕೆಗಳಾದ ಯೋಗ, ಧ್ಯಾನ, ಆಹಾರ ಪದ್ಧತಿ ಮತ್ತು ಉತ್ತಮ ಜೀವನ ಶೈಲಿ ಪಾಲನೆ ಕುರಿತು ತರಬೇತಿ ನೀಡಲಾಗುತ್ತದೆ. ಹದಿಹರೆಯದವರ ಮತ್ತು ಮಕ್ಕಳ ಆರೋಗ್ಯ ಮಟ್ಟ ಸುಧಾರಣೆ, ಮಹಿಳಾ ಸಂಬಂಧಿತ ಇತರ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗತ್ತದೆ. ಆಯುಷ್ಮತಿ ಕ್ಲಿನಿಕ್​ಗಳಲ್ಲಿ ತಜ್ಞರ ವೈದ್ಯರ ಸೇವೆ, ಆಪ್ತ ಸಮಾಲೋಚನೆ, ಲ್ಯಾಬ್ ಪರೀಕ್ಷೆ, ಉಚಿತ ಔಷಧ, ಕ್ಷೇಮ ಚಟುವಟಿಕೆಗಳು, ಯೋಗ, ಧ್ಯಾನ ಮತ್ತು ರೆಫರಲ್ ಸೇವೆ ಉಚಿತವಾಗಿ ಸಿಗಲಿದೆ.
ನಗರ ಪ್ರದೇಶಗಳಲ್ಲಿ ಬಡ, ದುರ್ಬಲ ಮತ್ತು ಕೊಳಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಆರೋಗ್ಯ ಸೇವೆ ಒದಗಿಸಲು ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ(ನಮ್ಮ ಕ್ಲಿನಿಕ್) ತೆರೆಯಲಾಗಿದೆ. ರಾಜ್ಯದ 438 ಕಡೆಗಳಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಪ್ರಸ್ತುತ 298 ಕಡೆಗಳಲ್ಲಿ ನಮ್ಮ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದೆ. ಸೋಮವಾರ (ಮಾ.27) ಉಳಿದ ಕಡೆಗಳಲ್ಲಿ ನಮ್ಮ ಕ್ಲಿನಿಕ್​ಗಳನ್ನು ಉದ್ಘಾಟಿಸಲಾಗುತ್ತಿದೆ. ಪ್ರತಿ ನಿತ್ಯ ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ವರೆಗೆ ನಮ್ಮ ಕ್ಲಿನಿಕ್ ಕಾರ್ಯನಿರ್ವಹಿಸಲಿವೆ. ಓರ್ವ ವೈದ್ಯ, ನರ್ಸ್, ಲ್ಯಾಬ್ ಟೆಕ್ನೇಷಿಯನ್ ಹಾಗೂ ಡಿ ಗ್ರೂಪ್ ನೌಕರ ಇರುತ್ತಾರೆ. ಉಚಿತ ತಪಾಸಣೆ ಮತ್ತು ಔಷಧ ವಿತರಿಸಲಾಗುತ್ತದೆ. 12 ಬಗೆಯ ರೋಗಗಳ ಆರೋಗ್ಯ ಸೇವೆ, 14 ವಿಧದ ಪರೀಕ್ಷೆ ನಡೆಸಲಾಗುತ್ತದೆ. ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಇ-ಸಂಜೀವಿನಿ ಮತ್ತು ಟೆಲಿ ಕೌನ್ಸಿಲಿಂಗ್ ಕೊಡಿಸವ ವ್ಯವಸ್ಥೆ ಇದೆ.
ಇದನ್ನೂ ಓದಿ:ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಸಾರ್ವತ್ರಿಕ ಆರೋಗ್ಯ ಸಂರಕ್ಷಣೆ ಗುರಿ ತಲುಪಲು ರಾಜ್ಯ ರಾಜ್ಯ ಸರ್ಕಾರ, 2018ರ ಮಾರ್ಚ್​ನಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತಂದಿದೆ. ದೇಶದಲ್ಲಿರುವ 10 ಕೋಟಿ ಬಡ ಮತ್ತು ವಂಚಿತ ಕುಟುಂಬಗಳಿಗೆ ಅನುಕೂಲವಾಗಲೆಂದು ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಬಹು ಆಕಾಂಕ್ಷಿತ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಎಂಬ ಸಾರ್ವತ್ರಿಕ ಆರೋಗ್ಯ ಸಂರಕ್ಷಣಾ ಯೋಜನೆಯನ್ನು 2018ರಲ್ಲಿ ಪ್ರಾರಂಭಿಸಲಾಯಿತು. ಆರೋಗ್ಯ ಕರ್ನಾಟಕ ಯೋಜನೆಯನ್ನು 2018ರ ಅ.30ರಂದು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯೊಂದಿಗೆ ಸಂಯೋಜನೆಗೊಳಿಸಲಾಯಿತು. ಹಾಗಾಗಿ, ಈ ಯೋಜನೆಯನ್ನು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂದು ಕರೆಯಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 3300 ಕ್ಕೂ ಹೆಚ್ಚಿನ ಆರೋಗ್ಯ ಸಂಸ್ಥೆಗಳು ಎಬಿ-ಪಿಎಂಜೆವೈಎ-ಎಆರ್​ಕೆ ಯೋಜನೆಯಲ್ಲಿ ಸೇವೆ ನೀಡಲು ನೋಂದಾಯಿಸಿಕೊಂಡಿರುತ್ತಾರೆ. ನೋಂದಾಯಿತವಾದ ಸಂಸ್ಥೆಗಳ ಸಂಖ್ಯೆ ದೇಶದಲ್ಲಿನ ಯಾವುದೇ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನದಾಗಿರುತ್ತದೆ. ಯೋಜನೆಯಲ್ಲಿ ನಿಗದಿಪಡಿಸಲಾದ 1,650 ಚಿಕಿತ್ಸಾ ಪ್ಯಾಕೇಜ್​ಗಳು ಮತ್ತು ಚಿಕಿತ್ಸಾ ಉಪಕ್ರಮಗಳು ರಾಜ್ಯದ ಎಲ್ಲ ಸಾರ್ವಜನಿಕ ಆಸ್ಪತ್ರೆ ಮತ್ತು ನೋಂದಾಯಿತ 500 ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ. ಇದು 171 ಅತ್ಯಂತ ತುರ್ತು ಚಿಕಿತ್ಸೆಯ ಮತ್ತು ಜೀವ ಉಳಿಸುವ ಪ್ಯಾಕೇಜ್​ಗಳನ್ನು ಒಳಗೊಂಡಿರುತ್ತದೆ. ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳು ವಾರ್ಷಿಕ 5 ಲಕ್ಷ ರೂ. ಮೌಲ್ಯದ ಚಿಕಿತ್ಸೆಯನ್ನು ಕುಟುಂಬದ ಒಬ್ಬರು ಅಥವಾ ಹಲವು ಸದಸ್ಯರ ಆಧಾರದ ಮೇಲೆ ಬಳಸಿಕೊಳ್ಳಬಹುದು. ಎಪಿಎಲ್ ಕುಟುಂಬದವರಿಗೂ ಯೋಜನೆಯಲ್ಲಿ ಅವಕಾಶ ಕಲ್ಪಿಸಿರುವ ಮೊದಲ ರಾಜ್ಯ ಕರ್ನಾಟಕವಾಗಿರುತ್ತದೆ. ಎಪಿಎಲ್ ಕುಟುಂಬ ಸದಸ್ಯರು ಚಿಕಿತ್ಸೆಯ ಶೇ.70 ವೆಚ್ಚವನ್ನು ಸಹ ಪಾವತಿಯ ಆಧಾರದ ಮೇಲೆ ಭರಿಸಿದರೆ ಶೇ.30 ವೆಚ್ಚವನ್ನು ಸರ್ಕಾರದ ವತಿಯಿಂದ ಪಾವತಿಸಲಾಗುವುದು. ಎಪಿಎಲ್ ಕುಟುಂಬಗಳಿಗೆ ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ಮೌಲ್ಯದ ಚಿಕಿತ್ಸೆ ಲಭ್ಯವಿರುತ್ತದೆ.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 + 9 =
Remember me
