|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಜಾಗತಿಕ ಹವಾಮಾನ ಬದಲಾವಣೆ ಪರಿಣಾಮ ಬಿಸಿ ಗಾಳಿ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಅದರ ನಿರ್ವಹಣೆ ಜತೆಯಲ್ಲೇ ಯಾವುದೇ ಸಾವು ಸಂಭವಿಸದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾರ್ಯಯೋಜನೆ ರೂಪಿಸಿದೆ. ಕಳೆದ 2 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳಲ್ಲಿ ಬಿಸಿ ಗಾಳಿ ಹೆಚ್ಚಾಗುತ್ತಿದೆ. ಬಿಸಿ ಗಾಳಿ ಹೆಚ್ಚಾಗುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಇರುವುದರಿಂದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಜ್ಞರೊಂದಿಗೆ ಸೇರಿ ಕಾರ್ಯಯೋಜನೆ ರೂಪಿಸಿದೆ. ಜಾಗತಿಕ ತಾಪಮಾನ ಕಳೆದ 50 ವರ್ಷಗಳಲ್ಲಿ 1 ಡಿಗ್ರಿ ಹೆಚ್ಚಾಗಿತ್ತು. ಆದರೆ 2020-24ರ ಅವಧಿಯಲ್ಲಿಯೇ 1 ಡಿಗ್ರಿ ಹೆಚ್ಚಾಗುತ್ತದೆ ಎಂಬ ಅಂದಾಜಿದೆ. ಬೇಸಿಗೆಯ 4 ತಿಂಗಳಿನಲ್ಲಿ 2-3 ಡಿಗ್ರಿಯಷ್ಟು ಹೆಚ್ಚಾಗುತ್ತಿದ್ದ ತಾಪಮಾನ, 2-3 ವರ್ಷಗಳಿಂದ 4-6 ಡಿಗ್ರಿ ಸೆಲ್ಸಿಯಸ್​ನಷ್ಟು ಜಾಸ್ತಿಯಾಗುತ್ತಿದೆ. ಬಿಸಿ ಗಾಳಿ ಸಹ ಪ್ರಕೃತಿ ವಿಕೋಪವೇ ಆಗಿದೆ. ಇದನ್ನು ಸೈಲೆಂಟ್ ಡಿಸಾಸ್ಟರ್ ಎಂದೇ ಕರೆಯಲಾಗುತ್ತದೆ.
ಸಾವು ಹೆಚ್ಚಳ:ಬಿಸಿ ಗಾಳಿಯಿಂದ ದೇಶದಲ್ಲಿ ವರ್ಷಕ್ಕೆ 1000 ಸಾವು ಸಂಭವಿಸುತ್ತವೆ ಎಂಬ ಅಂದಾಜಿದೆ. ಇತ್ತೀಚಿನ ವರ್ಷಗಳಲ್ಲಿ ಆಂಧ್ರಪ್ರದೇಶದಲ್ಲಿ 2000ಕ್ಕೂ ಹೆಚ್ಚಿನ ಸಾವುಗಳಾಗಿದ್ದವು. ರಾಜ್ಯದಲ್ಲಿ ಈವರೆಗೆ ಬಿಸಿ ಗಾಳಿಯಿಂದ ಯಾವುದೇ ಸಾವು ಸಂಭವಿಸಿಲ್ಲ.
ಕಾರ್ಯ ಯೋಜನೆ ಏನು?:ಬಿಸಿ ಗಾಳಿ ಪ್ರಕೃತಿ ವಿಕೋಪವೇ ಆಗಿರುವುದರಿಂದ ಕಂದಾಯ ಇಲಾಖೆ ವ್ಯಾಪ್ತಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾರ್ಯಯೋಜನೆ ಸಿದ್ಧಪಡಿಸಿದೆ. ಆದರೆ ಯೋಜನೆಯನ್ನು ವಿವಿಧ ಇಲಾಖೆಗಳ ಮೂಲಕ ಅನುಷ್ಠಾನ ಮಾಡಬೇಕಾಗುತ್ತದೆ. ಯಾವ ಇಲಾಖೆಗೆ ಏನೇನು ಜವಾಬ್ದಾರಿ ಎಂಬುದನ್ನು ಯೋಜನೆಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಅದರಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಗೆ ಕಾರ್ಯ ಯೋಜನೆ ಅನುಷ್ಠಾನದ ಜವಾಬ್ದಾರಿ ನೀಡಲಾಗಿದೆ.
ಹೊರೆ ಇಲ್ಲ:ಕಾರ್ಯ ಯೋಜನೆ ಜಾರಿಗೆ ಹೆಚ್ಚಿನ ಹಣಕಾಸಿನ ಅಗತ್ಯವಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಇಲಾಖೆಗಳು ತಮ್ಮ ಅನುದಾನದಲ್ಲಿಯೇ ರೂಪಿಸಬಹುದಾಗಿದೆ.
ಗುಡುಗು ಸಿಡಿಲು ನಿರ್ವಹಣೆ:2011-21ರ ಅವಧಿಯಲ್ಲಿ 812 ಜನ ಸಿಡಿಲಿನಿಂದ ಸಾವನ್ನಪ್ಪಿದ್ದಾರೆ. ಆದ್ದರಿಂದ ಮಳೆಗಾಲದಲ್ಲಿ ಗುಡುಗು-ಸಿಡಿಲು ನಿರ್ವಹಣೆ ಕಾರ್ಯಯೋಜನೆ ಸಿದ್ಧಪಡಿಸಿದೆ. ವಾತಾವರಣದಲ್ಲಿ ಬದಲಾವಣೆ ಗಮನಿಸಿ ಮನೆಯಲ್ಲಿರಬೇಕು. ಸಿಡಿಲು-ಗುಡುಗು ಇದ್ದಾಗ ಬಾಗಿಲು, ಕಿಟಕಿ ಬಳಿ ಇರಬಾರದು, ಛಾವಣಿಯಲ್ಲಿ ಒಣ ಹುಲ್ಲು ಇರಬಾರದು, ಸಿಡಿಲು ಇದ್ದಾಗ ಸ್ನಾನ ಮಾಡುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಕೆಲಸ ಮಾಡಬಾರದು. ಹೊರಗಡೆ ಇದ್ದಾಗ ಎರಡು ಕಾಲುಗಳ ನಡುವೆ ಮುಖವಿರಿಸಿ ಮಂಡಿಯೂರಿ ಕುಳಿತುಕೊಳ್ಳಬೇಕು, ನೆಲದ ಮೇಲೆ ಮಲಗಬಾರದು.
ಎಸ್ಸೆಮ್ಮೆಸ್ ಮಾಹಿತಿ:ಉಷ್ಣಾಂಶ ಎಷ್ಟು ಹೆಚ್ಚಾಗುತ್ತದೆ, ಗುಡುಗು-ಸಿಡಿಲು ಎಲ್ಲಿ ಬರುವ ಸಾಧ್ಯತೆಗಳಿವೆ ಎಂಬ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಎಸ್​ಎಂಎಸ್, ವಾಟ್ಸಾಪ್, ಇ-ಮೇಲ್​ಗಳ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ಬಿಸಿಗಾಳಿ ಮಹಿಳೆಯರು, ಮಕ್ಕಳು, ವೃದ್ಧರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಅಪಾಯ ಆಗಬಾರದೆಂಬ ಕಾರಣಕ್ಕೆ ವಿವಿಧ ಇಲಾಖೆಗಳ ಜವಾಬ್ದಾರಿಯ ಕಾರ್ಯ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುತ್ತದೆ. ಇದರ ಜತೆಗೆ ಗುಡುಗು-ಸಿಡಿಲು ನಿರ್ವಹಣಾ ಕಾರ್ಯಯೋಜನೆ ಸಹ ಸಿದ್ಧವಾಗಿದೆ.
|ಡಾ. ಮನೋಜ್ ರಾಜನ್ಆಯುಕ್ತ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ಲೆಕ್ಕಾಚಾರ ಹೇಗೆ?:ಘಟ್ಟ ಪ್ರದೇಶದಲ್ಲಿ 30 ಡಿಗ್ರಿ ಸೆಲ್ಸಿಯಸ್, ಬಯಲು ಪ್ರದೇಶದಲ್ಲಿ 40 ಡಿಗ್ರಿ ಸೆಲ್ಸಿಯಸ್​ಗಿಂತ ಗರಿಷ್ಠ ಉಷ್ಣಾಂಶ ಹೆಚ್ಚಾದರೆ ಅದನ್ನು ಬಿಸಿ ಗಾಳಿ ಎಂದು ಪರಿಗಣಿಸಲಾಗುತ್ತದೆ.
ಯಾವ ಜಿಲ್ಲೆಗಳಲ್ಲಿ ಹೆಚ್ಚು?:ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚು ಬಿಸಿಗಾಳಿ ಬೀಸುವ ಸಾಧ್ಯತೆ ಗುರುತಿಸಲಾಗಿದೆ. ಈ ಪೈಕಿ ಕೆಲವು ಜಿಲ್ಲೆಗಳಲ್ಲಿ ಹಿಂದಿನ ವರ್ಷಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿದ ಉದಾಹರಣೆಗಳು ಇವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + eight =
Remember me
