ರುದ್ರಣ್ಣ ಹರ್ತಿಕೋಟೆಬೆಂಗಳೂರು:ಕರೊನಾ ಚಿಕಿತ್ಸೆ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ಸಹಕರಿಸದೇ, ಬೆಡ್​ಗಳ ಕೊರತೆ ನೆಪವೊಡ್ಡಿ ರೋಗಿಗಳ ಜೀವದ ಜತೆ ಆಟವಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಾನೂನು ಅಸ್ತ್ರ ಬಳಸಲು ಸರ್ಕಾರ ಮುಂದಾಗಿದೆ. ಮಹಾರಾಷ್ಟ್ರ ಮಾದರಿಯಲ್ಲೇ ಖಾಸಗಿ ಆಸ್ಪತ್ರೆಗಳ ಶೇ. 80 ಹಾಸಿಗೆಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಮುಂದಿನ ದಿನಗಳಲ್ಲಿ ಕರೊನಾ ಇನ್ನಷ್ಟು ವ್ಯಾಪಿಸುವ ಸಾಧ್ಯತೆ ಇದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಾಸಿ ಗೆಗಳ ಅಗತ್ಯವಿದೆ. ಆದರೆ, ಹಾಸಿಗೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುವ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ; ಸರ್ಕಾರದ ಮಾತನ್ನೂ ಕೇಳುತ್ತಿಲ್ಲ. ಈಗ ಆರೋಗ್ಯ ತುರ್ತು ಪರಿಸ್ಥಿತಿ ಇರುವುದರಿಂದ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಎಷ್ಟು ಖಾಸಗಿ ಆಸ್ಪತ್ರೆಗಳಿವೆ?:
ಬೆಂಗಳೂರು ಒಂದರಲ್ಲೇ 308 ಖಾಸಗಿ ನರ್ಸಿಂಗ್ ಹೋಂಗಳಿವೆ. ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ನರ್ಸಿಂಗ್ ಹೋಂಗಳಿವೆ. ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಕಾಪೋರೇಟ್ ಆಸ್ಪತ್ರೆಗಳಿವೆ. 50 ಹಾಸಿಗೆಗಳ ಸಾಮರ್ಥ್ಯಕ್ಕಿಂತ ಕಡಿಮೆ ಇರುವ 40 ಖಾಸಗಿ ನರ್ಸಿಂಗ್ ಹೋಂಗಳಿವೆ.
ಶೇ. 50 ಹಾಸಿಗೆ ಕೇಳಿದ್ದ ಸರ್ಕಾರಖಾಸಗಿ ಆಸ್ಪತ್ರೆಗಳ ಶೇ. 50 ಹಾಸಿಗೆಗಳನ್ನು ತನ್ನ ವಶಕ್ಕೆ ಬಿಟ್ಟುಕೊಡುವಂತೆ ಸರ್ಕಾರ ಕೇಳಿತ್ತು. ಅದರ ಪ್ರಕಾರ ಸುಮಾರು 6000 ಹಾಸಿಗೆಗಳು ಸರ್ಕಾರಕ್ಕೆ ಸಿಗಬೇಕು. ಆದರೆ ಖಾಸಗಿ ಆಸ್ಪತ್ರೆಗಳು ಬೇರೆ ಬೇರೆ ಕಾರಣಗಳನ್ನು ಮುಂದೊಡ್ಡಿ ಹಾಸಿಗೆಗಳನ್ನು ನೀಡುತ್ತಿಲ್ಲ ಎಂಬ ಆರೋಪ ಸರ್ಕಾರದ್ದಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ನೀರು, ವಿದ್ಯುತ್ ಕಡಿತ, ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಗೂ ಬಂಧನದ ಎಚ್ಚರಿಕೆಯನ್ನು ನೀಡಿದರೂ ಮಣಿದಿರಲಿಲ್ಲ. ಆದ್ದರಿಂದ ಮಹಾರಾಷ್ಟ್ರದಲ್ಲಿ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಸರ್ಕಾರ ಅಧ್ಯಯನ ಮಾಡಿದೆ.
ಕಾರಣವೇನು?: ಕರೊನಾ ಚಿಕಿತ್ಸೆಗೆ ಸರ್ಕಾರ ದರ ನಿಗದಿ ಮಾಡಿದೆ. ರೋಗಿಗಳನ್ನು ಸರ್ಕಾರವೇ ಕಳುಹಿಸಿದರೆ ಆ ದರವನ್ನು ಬಿಬಿಎಂಪಿ ಮೂಲಕ ಪಾವತಿಸುತ್ತದೆ. ಆದರೆ ನೇರ ರೋಗಿಗಳು ಬಂದರೆ ದುಪ್ಪಟ್ಟು ದರ ವಸೂಲಿ ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಹಾಸಿಗೆಗಳನ್ನು ನೀಡುತ್ತಿಲ್ಲವೆಂಬುದು ಸರ್ಕಾರದ ಆರೋಪವಾಗಿದೆ.
ಸರ್ಕಾರ ಹೇಳುವುದೇನು?
* ಖಾಸಗಿ ಆಸ್ಪತ್ರೆಗಳು ಸಿಎಂ ಕರೆದಿದ್ದ ಸಭೆಯಲ್ಲಿ ಒಪ್ಪಿಕೊಂಡ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ* ರಾಜ್ಯದ ವಿದ್ಯುತ್, ನೀರು, ಭೂಮಿ ಬಳಕೆ ಮಾಡಿಕೊಂಡು, ಸರ್ಕಾರದೊಂದಿಗೆ ಸಂಕಷ್ಟದಲ್ಲಿ ಸ್ಪಂದಿಸುತ್ತಿಲ್ಲ* ಉದ್ಯಮಸ್ನೇಹಿ ರಾಜ್ಯ ಎಂಬ ವಾತಾವರಣ ಹಾಳಾಗುತ್ತಿದೆ, ನೇರವಾಗಿ ಬರುವ ರೋಗಿಗಳಿಗೆ ಹೆಚ್ಚಿನ ದರ ನಿಗದಿ* ಬಿಬಿಎಂಪಿಯಿಂದ ಬರುವ ರೋಗಿಗಳಿಗೆ ಹಾಸಿಗೆ ಇಲ್ಲ, ನೀವು ಕೊಡುವ ಹಣ ಸಾಕಾಗಲ್ಲ ಎಂಬ ಧೋರಣೆಯಲ್ಲಿ ಕೆಲ ಆಸ್ಪತ್ರೆಗಳಿವೆ
ಖಾಸಗಿ ಆಸ್ಪತ್ರೆಗಳ ವಾದವೇನು
* ಎರಡು ತಿಂಗಳು ಆಸ್ಪತ್ರೆಗಳನ್ನು ಮುಚ್ಚಿ ನಷ್ಟವಾಗಿದೆ* ಕರೊನಾ ಹೊರತಾದ ರೋಗಿಗಳಿಗೂ ಚಿಕಿತ್ಸೆ ನೀಡಬೇಕಾಗಿದೆ* ಹಾಸಿಗೆಗಳನ್ನೇ ವಶಕ್ಕೆ ಕೊಡುವಂತೆ ಕೇಳುವುದು ಸರಿಯಲ್ಲ* ಕರೊನಾಕ್ಕೆ ಶೇ. 50 ಹಾಸಿಗೆ ಕೊಟ್ಟರೆ ಅದರಲ್ಲಿ ಅರ್ಧ ನಮಗೆ ನೀಡಲಿ* ಹಾಸಿಗೆಗಳ ಹಂಚಿಕೆಗೆ ಸರಿಯಾದ ವ್ಯವಸ್ಥೆ ಮಾಡದೇ ಸಮಸ್ಯೆ* ನೇರವಾಗಿ ಬರುವ ಕರೊನಾ ರೋಗಿಗಳಿಗೆ ನಾವು ದರ ನಿಗದಿ ಮಾಡಿದರೆ ತಪ್ಪೇನು
ಮಾಹಿತಿ ಸಂಗ್ರಹ:ಖಾಸಗಿ ಆಸ್ಪತ್ರೆಗಳು ಈವರೆಗೆ ಸರಿಯಾದ ಮಾಹಿತಿಗಳನ್ನು ಸರ್ಕಾರಕ್ಕೆ ನೀಡಿರಲಿಲ್ಲ. ಆಗ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರನ್ನು ಸರ್ಕಾರ ನೇಮಕ ಮಾಡಿತು. ಬಿಬಿಎಂಪಿ, ಬೆಸ್ಕಾಂ ಹಾಗೂ ಬೆಂಗಳೂರು ಜಲಮಂಡಳಿಗಳ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳಿವೆ ಎಂಬ ಮಾಹಿತಿ ಪಡೆಯಿತು ಎಂದು ಮೂಲಗಳು ಹೇಳುತ್ತವೆ.ನೋಂದಾಯಿಸದ ಆಸ್ಪತ್ರೆಗಳು: ಸುವರ್ಣ ಸುರಕ್ಷಾ ಟ್ರಸ್ಟ್​ನ ಪೋರ್ಟಲ್​ನಲ್ಲಿ ನೋಂದಾಯಿಸಿಕೊಳ್ಳುವಂತೆ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ತಿಳಿಸಿತ್ತು. ಆದರೆ 46ಆಸ್ಪತ್ರೆಗಳು ನೋಂದಾಯಿಸಿಕೊಂಡಿರಲಿಲ್ಲ. ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ ನಂತರವಷ್ಟೇ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಉಪಯೋಗವಾಗದ ಸಭೆಗಳು: ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರು ಸೇರಿ ಸರ್ಕಾರ ಹಲವು ಬಾರಿ ಖಾಸಗಿ ಆಸ್ಪತ್ರೆ ಮಾಲೀಕರ ಜತೆ ಸಭೆ ನಡೆದಿದೆ. ಆದರೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಏನಿದುಮಹಾಮಾದರಿ?ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಸಾಲದಿದ್ದಾಗ ಖಾಸಗಿ ಆಸ್ಪತ್ರೆಗಳು ಹಾಸಿಗೆ ಕೊಡಲು ನಿರಾಕರಿಸಿದ್ದವು. ಅಲ್ಲಿನ ಸರ್ಕಾರ ತಕ್ಷಣ ಆದೇಶ ಹೊರಡಿಸಿ, ಖಾಸಗಿ ಆಸ್ಪತ್ರೆಗಳ ಶೇ. 80 ಹಾಸಿಗೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ನಾಲ್ಕರಿಂದ ಐದು ಖಾಸಗಿ ಆಸ್ಪತ್ರೆಗಳ ಉಸ್ತುವಾರಿಗೆ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿತ್ತು. ಅಲ್ಲಿನ ಸಿಬ್ಬಂದಿ ಕರೊನಾ ಚಿಕಿತ್ಸೆ ಕೊಡುವಂತೆಯೂ ಕಾನೂನು ಅಸ್ತ್ರದ ಮೂಲಕ ಬಗ್ಗಿಸಿತ್ತು. ಅದೇ ಮಾದರಿ ಅನುಸರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದೆ.
ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಪ್ರತಿನಿಧಿಗಳು ಶೇ. 50 ಹಾಸಿಗೆ ಮತ್ತು ಅಗತ್ಯವಿರುವಷ್ಟು ಸಿಬ್ಬಂದಿಯನ್ನು ಕರೊನಾ ಚಿಕಿತ್ಸೆಗೆ ನೀಡಲು ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ಸಮ್ಮತಿಸಿವೆ. ಆ ಪ್ರಕಾರ ಪ್ರಕ್ರಿಯೆ ಒಂದೆರಡು ದಿನಗಳಲ್ಲಿ ನಡೆಯಲಿದೆ.| ಡಾ. ಕೆ. ಸುಧಾಕರ್ವೈದ್ಯಕೀಯ ಶಿಕ್ಷಣ ಸಚಿವ
ಕರೊನೇತರ ರೋಗಿಗಳಿಗೂ ಚಿಕಿತ್ಸೆ ಕೊಡಬೇಕಾಗಿದೆ. ನಾವು ಹಾಸಿಗೆಗಳನ್ನು ನೀಡಲು ಸಿದ್ದರಿದ್ದೇವೆ. ಆದರೆ ಸರ್ಕಾರ ಹಾಸಿಗೆಗಳ ಹಂಚಿಕೆಗೆ ಸರಿಯಾದ ವ್ಯವಸ್ಥೆ ಮಾಡದೇ ಕ್ರಿಮಿನಲ್ ಕೇಸ್ ಹಾಕುತ್ತೇವೆ, ಮಹಾರಾಷ್ಟ್ರ ರೀತಿ ಶೇ. 80 ಹಾಸಿಗೆ ವಶ ಮಾಡಿಕೊಳ್ಳುತ್ತೇವೆ ಎಂದು ಹೇಳುವುದು ಎಷ್ಟು ಸರಿ?
| ಡಾ. ಆರ್. ರವೀಂದ್ರಅಧ್ಯಕ್ಷ, ಖಾಸಗಿ ನರ್ಸಿಂಗ್ ಹೋಂಗಳ ಸಂಘಟನೆ
ಖಾಸಗಿ ಆಸ್ಪತ್ರೆಯವರು ಹೆಚ್ಚು ದರ ತೆಗೆದುಕೊಳ್ಳುತ್ತಿದ್ದಾರೆ ಅನ್ನುವ ಮಾಹಿತಿ ಇದೆ. ಇದನ್ನ ನಾವು ಸಹಿಸಲ್ಲ. ಸರ್ಕಾರ ಕಳುಹಿಸುವ ಸೋಂಕಿತರಿಗೆ ಹೆಚ್ಚು ದರ ಹಾಕುವಂತಿಲ್ಲ. ಇಷ್ಟು ದಿನ ಹಣ ಮಾಡಿದ್ದು ಸಾಕು. ಇನ್ನು 6 ತಿಂಗಳು ಮಾನವೀಯತೆ ಮೆರೆಯಬೇಕು.| ಆರ್. ಅಶೋಕ್​ಕಂದಾಯ ಸಚಿವ
ಖಾಸಗಿ ಆಸ್ಪತ್ರೆಗಳು ರೋಗಿಗಳನ್ನ ದಾಖಲು ಮಾಡಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಕ್ಕೆ ನೀಡಬೇಕಿರುವ ಶೇ. 50 ಬೆಡ್ ನೀಡಲೇಬೇಕು. ಯಾವ ಆಸ್ಪತ್ರೆ ಬೆಡ್ ನೀಡುವುದಿಲ್ಲವೋ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.| ಡಾ. ಸಿ.ಎನ್. ಅಶ್ವತ್ಥನಾರಾಯಣಉಪ ಮುಖ್ಯಮಂತ್ರಿ
ಹಿರಿಯ ನಟ ಅಮಿತಾಭ್ ಬಚ್ಚನ್​ಗೆ ಕೊವಿಡ್​-19 ಸೋಂಕು; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 14 =
Remember me
