ರುದ್ರಣ್ಣ ಹರ್ತಿಕೋಟೆ ಬೆಂಗಳೂರುಲೋಕಸಭೆ ಚುನಾವಣೆ ಹೊತ್ತಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯ ಸುಳಿವು ಸಿಕ್ಕಿದೆ. ರಾಜ್ಯ ಸರ್ಕಾರಿ ನೌಕರರ 7 ನೇ ವೇತನ ಆಯೋಗದ ವರದಿ ಸಲ್ಲಿಕೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲೇ ಲಕ್ಷಾಂತರ ಸಿಬ್ಬಂದಿ ಶೇ.25ರಷ್ಟು ವೇತನ ಹೆಚ್ಚಳವಾಗುವ ನಿರೀಕ್ಷೆಯಲ್ಲಿದ್ದಾರೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ನೇತೃತ್ವದ ವೇತನ ಆಯೋಗದ ಅವಧಿ ಮಾ.15ಕ್ಕೆ ಅಂತ್ಯವಾಗುತ್ತಿದೆ. ಕಳೆದ ವರ್ಷ ಜೂನ್​ನಲ್ಲಿಯೇ ವೇತನ ಪರಿಷ್ಕರಣೆ ಆಗಬೇಕಾಗಿತ್ತು. ಆದರೆ ಸರ್ಕಾರ ಆಯೋಗದ ಅವಧಿಯನ್ನ ಆರು ತಿಂಗಳು ವಿಸ್ತರಿಸಿತ್ತು. ಇದೀಗ ಆಯೋಗದ ಅವಧಿ ಮುಕ್ತಾಯ ಆಗುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ವರದಿ ಸಲ್ಲಿಕೆಯಾಗಲಿದೆ. ಕೇಂದ್ರ, ರಾಜ್ಯ ಸರ್ಕಾರಿ ನೌಕರರ ನಡುವೆ ಇರುವ ಶೇ.67 ರಷ್ಟು ವ್ಯತ್ಯಾಸವನ್ನು ಸರಿಪಡಿಸುವ ಮೂಲಕ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ರಾಜ್ಯ ಸರ್ಕಾರಿ ನೌಕರರ ಒತ್ತಾಯವಾಗಿದೆ. ಆ ವಿಚಾರದಲ್ಲಿ ನೌಕರರಲ್ಲಿ ತೀವ್ರ ಅಸಮಾಧಾನವಿದೆ. ಆ ಕುದಿಮೌನ ಸ್ಪೋಟವಾಗಲು ಅವಕಾಶ ನೀಡಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ.
ವರದಿ ಅನುಷ್ಠಾನ:ಆಯೋಗ ವರದಿ ಕೊಟ್ಟ ಕೂಡಲೇ ಜಾರಿಗೂ ಸರ್ಕಾರ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಲೋಕಸಭೆ ಚುನಾವಣೆ ಹೊತ್ತಲ್ಲೇ ಸರ್ಕಾರಿ ನೌಕರರು ಜನಾಭಿಪ್ರಾಯ ಮೂಡಿಸಬಲ್ಲರು, ಹಾಗೆಯೇ ತಿರುಗಿ ಬಿದ್ದರೆ ಕಷ್ಟವಾಗುತ್ತದೆ ಎಂಬ ಅರಿವು ಸರ್ಕಾರಕ್ಕಿದೆ. ಆದ್ದರಿಂದಲೇ ವರದಿ ಸಲ್ಲಿಕೆಯಾದ ತಕ್ಷಣವೇ ಅನುಷ್ಠಾನ ಆಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಹಿಂದಿನ ಸರ್ಕಾರ ಎಷ್ಟು ಕೊಟ್ಟಿತ್ತು?:ಬಸವರಾಜ ಬೊಮ್ಮಾಯಿ ಅಧಿಕಾರದಿಂದ ಕೆಳಗೆ ಇಳಿಯುವುದಕ್ಕೆ ಮುನ್ನ ಶೇ.17 ರಷ್ಟು ಮಧ್ಯಂತರ ಹೆಚ್ಚಳ ನೀಡಲಾಗಿತ್ತು. ಆ ಮೂಲಕ ವೇತನ ಆಯೋಗದ ಅವಧಿ ವಿಸ್ತರಿಸಿದ್ದರು.
ನೌಕರರಿಗೆ ನೆರವು:ವೇತನ ಆಯೋಗ ನೌಕರರ ಮೂಲ ವೇತನ ಹೆಚ್ಚಳ, ಮನೆ ಬಾಡಿಗೆ ಭತ್ಯೆ ಹೆಚ್ಚಳದಂತಹ ಕೆಲವೊಂದು ನೌಕರ ಸ್ನೇಹಿ ಶಿಫಾರಸುಗಳನ್ನು ಸಹ ನೀಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಚರ್ಚೆ ಅಗತ್ಯ:ಪ್ರತಿ 5 ವರ್ಷಕ್ಕೊಮ್ಮೆ ನೌಕರರ ವೇತನ ಹೆಚ್ಚಳಕ್ಕೆ ಕಡಿವಾಣ ಹಾಕುವ ಮೂಲಕ ಬದ್ಧ ವೆಚ್ಚ ಕಡಿಮೆ ಮಾಡುವ ಕಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚರ್ಚೆ ಮಾಡುವ ಮೂಲಕ ಸ್ಪಷ್ಟ ನಿರ್ಧಾರವೊಂದಕ್ಕೆ ಬರುವ ಅಗತ್ಯವಿದೆ ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿದೆ.
ಬದ್ಧ ವೆಚ್ಚಗಳೆಷ್ಟು?:ವೇತನ, ಪಿಂಚಣಿ, ಬಡ್ಡಿ ಪಾವತಿಯಂತಹ ಬದ್ಧ ವೆಚ್ಚಗಳಿಗೆ ಮುಂದಿನ ವರ್ಷ 1,12,789 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಿದೆ. ಪ್ರಸಕ್ತ ಸಾಲಿಗೆ ಹೋಲಿಸಿದರೆ ಇದು ಶೇ.25 ಅಂದರೆ -ಠಿ;22,670 ಕೋಟಿ ಹೆಚ್ಚಳವಾಗುತ್ತದೆ.
ವ್ಯತ್ಯಾಸ ಅಜಗಜಾಂತರ:ರಾಜ್ಯ, ಕೇಂದ್ರ ಸರ್ಕಾರಿ ನೌಕರರ ನಡುವೆ ವ್ಯತ್ಯಾಸದ ಪ್ರಮಾಣ ಶೇ. 67.55ರಷ್ಟು ಆಗುವುದರಿಂದ ವ್ಯತ್ಯಾಸ ಅಜಗಜಾಂತರವಿದೆ. ಉದಾಹರಣೆಗೆ ಡಿ ಗ್ರೂಪ್ ನೌಕರರನ್ನೇ ತೆಗೆದುಕೊಂಡರೆ ಕೇಂದ್ರದ ನೌಕರರಿಗೆ ಮೂಲ ವೇತನ 23 ಸಾವಿರ ರೂ.ಗಳಾದರೆ ರಾಜ್ಯ ಸರ್ಕಾರಿ ನೌಕರರರಿಗೆ 10 ಸಾವಿರ ರೂ.ಗಳ ಆಜುಬಾಜಿನಲ್ಲಿದೆ.
ಕೇಂದ್ರ ಮಾದರಿ ಜಾರಿ:ತಮಿಳುನಾಡು, ಮಹಾರಾಷ್ಟ್ರ ಸೇರಿ 23 ರಾಜ್ಯಗಳು ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನೇ ಯಥಾ ವತ್ತಾಗಿ ಜಾರಿ ಮಾಡುತ್ತಿವೆ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಹಿಮಾಚಲಪ್ರದೇಶ, ಕೇರಳ, ಕರ್ನಾಟಕ, ಉತ್ತರಾಖಂಡ ರಾಜ್ಯಗಳು ಮಾತ್ರ ಕೇಂದ್ರದ ವೇತನ ಆಯೋಗದ ಶಿಫಾರಸು ಜಾರಿ ಮಾಡುವುದಿಲ್ಲ.
ಎಷ್ಟು ರೂ. ಹಣ ಮೀಸಲು?:ವೇತನ ಆಯೋಗದ ವರದಿ ಜಾರಿಗೆ ಸಿಎಂ ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ. ತಮ್ಮ15ನೇ ಬಜೆಟ್​ನಲ್ಲಿ 13 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದಾರೆ. 2018 ರಲ್ಲಿ ಶೇ.30ರಷ್ಟು ಹೆಚ್ಚಳವಾದಾಗ 10,500 ಕೋಟಿ ರೂ.ಗಳನ್ನು ನೀಡಲಾಗಿತ್ತು. ಈಗ ಮೂಲ ವೇತನಗಳೆಲ್ಲ ಪರಿಷ್ಕರಣೆ ಆಗಿರುವುದರಿಂದ ಶೇ.30 ರಷ್ಟು ಹೆಚ್ಚಳವಾಗಲು 20 ಸಾವಿರ ಕೋಟಿ ರೂ.ಅಗತ್ಯವಿದೆ. ಆದರೆ 13 ಸಾವಿರ ಕೋಟಿ ರೂ.ಮೀಸಲಿಟ್ಟಿರುವುದರಿಂದ ಶೇ.25 ರಷ್ಟು ಹೆಚ್ಚಳವಾಗಬಹುದೆಂದು ಅಂದಾಜು ಮಾಡಲಾಗುತ್ತಿದೆ.
ಸರ್ಕಾರ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ವೇತನ ಆಯೋಗ ಜಾರಿಯ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನೌಕರರ ಆಕ್ರೋಶಕ್ಕೆ ತುತ್ತಾಗುತ್ತದೆ.
-ಪಿ. ಗುರುಸ್ವಾಮಿ ಮಾಜಿ ಅಧ್ಯಕ್ಷ, ಸಚಿವಾಲಯ ನೌಕರರ ಸಂಘ
ಏಳನೇ ವೇತನ ಆಯೋಗ ವರದಿ ನೀಡಲು ಸಿದ್ಧವಾಗಿದೆ. ರಾಜ್ಯ ಸರ್ಕಾರ ಅದನ್ನು ಯಥಾವತ್ತಾಗಿ ಜಾರಿಗೆ ಕೊಡುತ್ತದೆ ಎಂಬ ವಿಶ್ವಾಸವಿದೆ. ಮತ್ತೆ ಆಯೋಗದ ಅವಧಿ ವಿಸ್ತರಿಸಿದರೆ ನೌಕರರು ತಿರುಗಿ ಬೀಳುತ್ತಾರೆ.
| ಸಿ.ಎಸ್. ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ
ಆಯೋಗ ವರದಿಯನ್ನ ಜುಲೈನಲ್ಲಿಯೇ ನೀಡಬೇಕಾಗಿತ್ತು. ಈ ಸರ್ಕಾರ ಬಜೆಟ್​ನಲ್ಲಿ ಹಣ ಮೀಸಲಿಟ್ಟಿರು ವುದರಿಂದ ಜಾರಿಗೆ ನೀಡಲಿದೆ ಎಂಬ ವಿಶ್ವಾಸವಿದೆ. ಜತೆಗೆ ಎನ್​ಪಿಎಸ್ ರದ್ದಿನ ಬಗ್ಗೆಯೂ ಕೂಡಲೇ ನಿರ್ಧಾರ ಮಾಡಬೇಕು.
| ಶಾಂತರಾಮ ಅಧ್ಯಕ್ಷ, ಎನ್​ಪಿಎಸ್ ನೌಕರರ ಸಂಘ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
