ಹಾಸನ ಜಿಲ್ಲೆ ಜೆಡಿಎಸ್ ಮೂಲಸ್ಥಾನ. 90ರ ದಶಕದಿಂದಲೂ ಇಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. ಪ್ರಸ್ತುತ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸದರಾಗಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಆರಂಭಿಸಿದ್ದಾರೆ. ಸ್ಥಳೀಯ ನಾಯಕರ ನಡುವಿನ ಒಳಬೇಗುದಿಯ ನಡುವೆಯೂ ಕಾಂಗ್ರೆಸ್ ಚುನಾವಣೆಗೆ ಸಜ್ಜಾಗುತ್ತಿದೆ.
| ರಮೇಶ್ ಹಂಡ್ರಂಗಿ ಹಾಸನ
ದಕ್ಷಿಣ ಭಾರತದಿಂದ ಪ್ರಧಾನಿ ಹುದ್ದೆಗೇರಿದ ಏಕೈಕ ರಾಜಕಾರಣಿ ಎಚ್.ಡಿ. ದೇವೇಗೌಡರ ತವರು ಜಿಲ್ಲೆ ಹಾಸನ. 90ರ ಇಳಿ ವಯಸ್ಸಿನಲ್ಲೂ 247 ರಾಜಕಾರಣಿಯಾಗಿ ಗೌಡರ ಕೋಟೆಗೆ ಸದ್ಯ ಮೊಮ್ಮಗ ಪ್ರಜ್ವಲ್ ರೇವಣ್ಣ ಅಧಿಪತಿ.
ಈವರೆಗೆ 17 ಲೋಕಸಭಾ ಚುನಾವಣೆ ಕಂಡಿರುವ ಹಾಸನದಲ್ಲಿ ಈವರೆಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ 7 ಬಾರಿ ಗೆದ್ದಿವೆ. ಉಳಿದಂತೆ ಸ್ವತಂತ್ರ ಪಕ್ಷದಿಂದ ಇಬ್ಬರು ಹಾಗೂ ಜನತಾ ಪಕ್ಷದಿಂದ ಒಬ್ಬರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಎಚ್.ಡಿ. ದೇವೇಗೌಡರು ಒಟ್ಟು ಐದು ಬಾರಿ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಆದರೆ, ಪ್ರಜ್ವಲ್ ಅಭ್ಯರ್ಥಿಯಾದರೆ ಬಿಜೆಪಿ ಮುಖಂಡರು ಬೆಂಬಲ ನೀಡುತ್ತಾರೋ, ಇಲ್ಲವೋ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸದ್ಯದ ಮಟ್ಟಿಗೆ ಜಿಲ್ಲಾ ಬಿಜೆಪಿಯಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣವಾದ ಗೌಡರ ಕುಟುಂಬದ ಪರವಾಗಿ ಈಗ ಅವರು ಪ್ರಚಾರ ಮಾಡುತ್ತಾರೆಯೇ ಅಥವಾ ತಟಸ್ಥರಾಗಿ ಉಳಿಯುತ್ತಾರಾ? ಇಲ್ಲವೇ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾರಾ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಇಲ್ಲಿ ಜೆಡಿಎಸ್ ಗೆಲುವಿಗೆ ಬಿಜೆಪಿಯ ಸಂಪೂರ್ಣ ಬೆಂಬಲದ ಅವಶ್ಯಕತೆ ಇದ್ದೇಇದೆ.
ಪ್ರಭಾವ ಬೀರುವ ಅಂಶಗಳು:ಜೆಡಿಎಸ್​ಗೆ ಬಿಜೆಪಿ ಮೈತ್ರಿ ಒಂದು ರೀತಿ ವರವೂ ಹೌದು, ಶಾಪವೂ ಹೌದು. ಪ್ರಧಾನಿ ಮೋದಿ ಅವರ ಪ್ರಭಾವ, ಬಿಜೆಪಿಯ ನಿಷ್ಠಾವಂತ ಮತದಾರರು ಪಕ್ಷದ ಸಿದ್ಧಾಂತಕ್ಕೆ ಬದ್ಧರಾದವರು ಜೆಡಿಎಸ್​ಗೆ ಮತ ಹಾಕಬಹುದು. ಜತೆಗೆ ಎಚ್.ಡಿ. ದೇವೇಗೌಡರ ಮೇಲಿರುವ ಅನುಕಂಪ ಜೆಡಿಎಸ್​ಗೆ ದೊಡ್ಡ ವರವಾಗಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ವರವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಕೈ ವಶಕ್ಕೆ ನಾಯಕರ ಕಸರತ್ತು:ಹೇಗಾದರೂ ಮಾಡಿ ಜಿಲ್ಲೆಯನ್ನು ವಶಪಡಿಸಿಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಶತಾಯಗತಾಯ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದೇ ಕಾರಣದಿಂದ ಸಿಎಂ ಸಿದ್ದರಾಮಯ್ಯ ಒಂದು ವಾರದ ಅಂತರದಲ್ಲಿ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.ಜತೆಗೆ ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇರವಾಗಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಎರಡು ದಿನದ ಹಿಂದೆ ಹಾಸನಕ್ಕೆ ಬಂದಿದ್ದ ಸಂದರ್ಭದಲ್ಲಿ ಜಿಲ್ಲೆಯ ನಾಯಕರೆಲ್ಲ ಒಗ್ಗಟ್ಟಾಗಿದ್ದೇನೆ. ಶೀಘ್ರದಲ್ಲೇ ಅಭ್ಯರ್ಥಿ ಹೆಸರನ್ನು ಘೊಷಿಸುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ಪಕ್ಷದ ಅಭ್ಯರ್ಥಿಗೆ ವರವಾಗಿ ಪರಿಮಣಿಸಬಹುದು. ಜತೆಗೆ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಒಳೇಟು ಬಿದ್ದರೆ ಅದು ಕೂಡ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ನೆರವಾಗಬಹುದು.
ಮತ ಲೆಕ್ಕಾಚಾರ:2019ರ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರು ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಧಾರೆ ಎರೆದು ತುಮಕೂರಿನಿಂದ ಸ್ಪರ್ಧಿಸಿ ಸೋತರು. ಇಲ್ಲಿ ಕಾಂಗ್ರೆಸ್ ಮೈತ್ರಿಯೊಂದಿಗೆ ಜೆಡಿಎಸ್​ನಿಂದ ಸ್ಪರ್ಧೆ ಮಾಡಿದ್ದ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಗಳಿಸಿದರು. ಇನ್ನು ಮೈತ್ರಿ ವಿರೋಧಿಸಿ ಕಾಂಗ್ರೆಸ್​ನಿಂದ ಹೊರಬಂದ ಎ.ಮಂಜು ಬಿಜೆಪಿಯಿಂದ ಸ್ಪರ್ಧೆ ಮಾಡಿ 5,35,282 ಮತ ಪಡೆದು, 1,41,324 ಮತಗಳ ಅಂತರದಿಂದ ಪರಾಭವಗೊಂಡರು.
ಕಾಂಗ್ರೆಸ್ ನಾಯಕರಲ್ಲಿ ಒಳಜಗಳದ ಬೇಗುದಿ:ಕಾಂಗ್ರೆಸ್​ನಿಂದ ಶ್ರೇಯಸ್ ಪಟೇಲ್ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಆದರೆ, ಕಾಂಗ್ರೆಸ್ ಒಳಜಗಳದ ಬೇಗುದಿಯಲ್ಲಿದೆ. ಮಾಜಿ ಸಚಿವ ಬಿ. ಶಿವರಾಂ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡರ ನಡುವಿನ ಬಹಿರಂಗ ವಾಕ್ ಸಮರದಿಂದ ಕಾರ್ಯಕರ್ತರಲ್ಲಿ ಅಸಮಾಧಾನ, ಗುಂಪುಗಾರಿಕೆ ಉಂಟು ಮಾಡಿದೆ. ಬಿ. ಶಿವರಾಂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ವಿರುದ್ಧವೇ ಬಹಿರಂಗವಾಗಿ ಆರೋಪದ ಸುರಿಮಳೆಗೈದಿದ್ದಾರೆ. ಈಚೆಗಷ್ಟೇ ಜೆಡಿಎಸ್ ತೊರೆದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಟಿ.ಆರ್. ಪ್ರಸಾದ್ ಗೌಡ ಹೆಸರು ಕೂಡ ಕೆಪಿಸಿಸಿ ಪಟ್ಟಿಯಲ್ಲಿದೆ.
ರಸ್ತೆ, ಮೇಲ್ಸೇತುವೆಗಳಿಗೆ ಹೆಚ್ಚು ಆದ್ಯತೆ:ಪ್ರಜ್ವಲ್ ರೇವಣ್ಣ ಎಂಪಿ ಲಾಡ್ಸ್​ನಲ್ಲಿ (ಸ್ಥಳೀಯ ಪ್ರದೇಶಾಭಿವೃದ್ಧಿ) ಶೇ.50 ಅನುದಾನ ಬಳಕೆ ಮಾಡಿದ್ದಾರೆ. ಒಟ್ಟು 470 ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, ಅವುಗಳಲ್ಲಿ 151 ಕಾಮಗಾರಿಗಳು ಪೂರ್ಣಗೊಂಡಿವೆ. 153 ಕಾಮಗಾರಿಗಳು ಪ್ರಗತಿಯಲ್ಲಿವೆ. 166 ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಆಲೂರು ರೈಲ್ವೆ ನಿಲ್ದಾಣದಲ್ಲಿ ರೈಲುಗಳ ನಿಲುಗಡೆಗೆ ಇವರ ಪಾತ್ರ ಪ್ರಮುಖವಾಗಿದೆ. ಹಾಸನದಿಂದ ಹಿರೀಸಾವೆವರೆಗೆ ರಾಷ್ಟ್ರೀಯ ಹೆದ್ದಾರಿ-75ರಲ್ಲಿ 600 ಕೋಟಿ ರೂ. ವೆಚ್ಚದಲ್ಲಿ 10 ಕಡೆ ಮೇಲ್ಸೇತುವೆ ನಿರ್ವಣ. ಬೇಲೂರು-ಬಿಳಿಕೆರೆ (ಮೈಸೂರು)ವರೆಗೆ 2,000 ಕೋಟಿ ರೂ.ನಲ್ಲಿ ಮೂರು ಹಂತದಲ್ಲಿ ರಸ್ತೆ ನಿರ್ವಣ, ಈಗ ಒಂದನೇ ಹಂತ ಪೂರ್ಣಗೊಂಡಿದೆ. ಶಾಂತಿಗ್ರಾಮದಿಂದ ಹಿರಿಯೂರಿನವರೆಗೆ 1,800 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಸೇರಿ ಜಿಲ್ಲೆಯ ಹಲವು ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗಿದೆ.
ಸದನದಲ್ಲಿ ಹಾಜರಾತಿ:ಸಂಸದಪ್ರಜ್ವಲ್ ರೇವಣ್ಣ ಕಲಾಪದಲ್ಲಿ ಹಾಜರಾತಿ ಶೇ.55 ಇದೆ. ಒಟ್ಟು 89 ಪ್ರಶ್ನೆಗಳನ್ನು ಕೇಳಿದ್ದಾರೆ. ಎರಡು ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.
ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 2 =
Remember me
