|ವಿಲಾಸ ಮೇಲಗಿರಿಬೆಂಗಳೂರು
ಗ್ರಾಮೀಣ ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ಸಾರೆಕೊಪ್ಪ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿಗೆ ತಂದಿದ್ದ ‘ಕೃಪಾಂಕ ನೇಮಕ’ ಪದ್ಧತಿ ಐತಿಹಾಸಿಕ ದಾಖಲೆ. ಆದರೆ, ತದನಂತರದ ವರ್ಷಗಳಲ್ಲಿ ಈ ನೇಮಕದಿಂದ ಉದ್ಭವವಾಗಿದ್ದ ಗೊಂದಲ ಶಿಕ್ಷಕರನ್ನು ಈಗಲೂ ಬೆನ್ನುಬಿಡದ ಭೂತದಂತೆ ಕಾಡುತ್ತಿದೆ!
1998ರಲ್ಲಿ ಗ್ರಾಮೀಣ ಕೃಪಾಂಕ ಸೌಲಭ್ಯದೊಂದಿಗೆ ನೇಮಕಗೊಂಡ ಶಿಕ್ಷಕರ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಬೇಡಿಕೆಗಳ ಈಡೇರಿಕೆಗೆ ಶಿಕ್ಷಕರು ಮಾಡಿಕೊಂಡ ಮನವಿಗಳು ಕಸದಬುಟ್ಟಿ ಸೇರಿವೆ. ಅಧಿಕಾರಿಗಳ ಎಡವಟ್ಟು, ತಾಂತ್ರಿಕ ಸಮಸ್ಯೆ, ಕೋರ್ಟ್​ಗಳ ಹಲವು ಆದೇಶಗಳ ಕಾರಣಕ್ಕೆ ಸೇವಾವಧಿಯಲ್ಲಿ ಮಾತ್ರವಲ್ಲ, ನಿವೃತ್ತಿ ನಂತರವೂ ಶಿಕ್ಷಕರು ತರಹೇವಾರಿ ಸಮಸ್ಯೆ ಎದುರಿಸುವಂತಾಗಿದೆ.
ಏನಿದು ಪ್ರಕರಣ?:1990-1992ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ಗ್ರಾಮೀಣಭಾಗದ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ನೇಮಕಾತಿಯಲ್ಲಿ ಶೇ. 5 ಕೃಪಾಂಕ ನೀಡುವ ಉಪಕ್ರಮ ಆರಂಭಿಸಿದ್ದರು. ಮುಂದೆ ಇದನ್ನು ಶೇ. 10ಕ್ಕೆ, ಬಳಿಕ ಶೇ. 15ಕ್ಕೇ ಏರಿಸಲಾಯಿತು. ಈ ಸಂದರ್ಭದಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ 1997ರಲ್ಲಿ ಗ್ರಾಮೀಣ ಕೃಪಾಂಕ ಸೌಲಭ್ಯದೊಂದಿಗೆ ನೇಮಕಗೊಂಡ ಶಿಕ್ಷಕರನ್ನು ಗ್ರಾಮೀಣ ಕೃಪಾಂಕರಹಿತವಾಗಿ ಪರಿಷ್ಕರಿಸಿ, ಹೊಸ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಈ ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯಲಾಗದ ಅಭ್ಯರ್ಥಿಗಳನ್ನು ಸೇವೆಯಿಂದ ತೆಗೆದುಹಾಕಲಾಯಿತು.
ಪರಿಷ್ಕೃತ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಅಭ್ಯರ್ಥಿಗಳನ್ನು ಸೇವೆಯಿಂದ ತೆಗೆದು ಹಾಕಿದ ಅಭ್ಯರ್ಥಿಗಳ ಸ್ಥಾನದಲ್ಲಿ ಭವಿಷ್ಯವರ್ತಿಯಾಗಿ ಜಾರಿಗೆ ಬರುವಂತೆ ನೇಮಕ ಮಾಡಲಾಯಿತು. ಆದರೆ, ಈ ಪರಿಷ್ಕೃತ ಪಟ್ಟಿ ವಿಚಾರದಲ್ಲಿ ಅಧಿಕಾರಿಗಳು ಗೊಂದಲ ಉಂಟು ಮಾಡಿ ಅನ್ಯಾಯ ಮಾಡಿದ್ದಾರೆ ಎಂಬುದು ಅನೇಕ ಶಿಕ್ಷಕರ ಆರೋಪ.
ಮೂಲ ವೇತನದಲ್ಲೇ ತಾರತಮ್ಯ:ಕೃಪಾಂಕ/ವಿಶೇಷ ನೇಮಕ ನಿಯಮದಡಿ ನೇಮಕಗೊಂಡ ಶಿಕ್ಷಕರಲ್ಲಿ ಒಂದೊಂದು ತಾಲೂಕು/ಜಿಲ್ಲೆಯಲ್ಲಿ ಮೂಲ ವೇತನದಲ್ಲೇ ತಾರತಮ್ಯವಾಗಿದೆ. ಕೆಲವು ತಾಲೂಕುಗಳಲ್ಲಿ 36,950 ರೂ., ಮತ್ತೆ ಕೆಲವು ಕಡೆ 42,000 ರೂ. ಹಾಗೂ ಇನ್ನು ಹಲವೆಡೆ 43,100 ರೂ. ಮೂಲ ವೇತನಗಳಿವೆ! ಈ ರೀತಿ ಮೂಲ ವೇತನದಲ್ಲಿ ವ್ಯತ್ಯಾಸವಾಗಿರುವುದರಿಂದ ಈಗಾಗಲೇ ವಯೋನಿವೃತ್ತಿ ಹೊಂದಿರುವ ಶಿಕ್ಷಕರಿಗೆ ಹೆಚ್ಚುವರಿಯಾಗಿ ತೆಗೆದುಕೊಂಡ ಹಣವನ್ನು ನಿವೃತ್ತಿನಿಧಿಯಿಂದ ಕಡಿತಗೊಳಿಸಲಾಗುತ್ತಿದೆ. ಹೀಗಾಗಿ ನಿವೃತ್ತ ಶಿಕ್ಷಕರು ಬರಿಗೈಲಿ ಮನೆಗೆ ಹೋಗಬೇಕಾದ ಪರಿಸ್ಥಿತಿ ತಲೆದೋರಿದೆ!
ಹಣ ಕಡಿತಕ್ಕೆ ನಿರ್ದೇಶನ:ವಯೋನಿವೃತ್ತಿ ಹೊಂದಿದ ಶಿಕ್ಷಕರಿಂದ ಹೆಚ್ಚುವರಿ ಪಾವತಿಯಾಗಿರುವ ಹಣವನ್ನು ಮಹಾಲೇಖಪಾಲರ ನಿರ್ದೇಶನದಂತೆ ಕಡಿತಗೊಳಿಸುತ್ತಿದ್ದಾರೆ. ಇದರಿಂದ ಶಿಕ್ಷಕರಿಗೆ ದೊಡ್ಡಮಟ್ಟದ ನಷ್ಟವಾಗುತ್ತಿದೆ. ಅಲ್ಲದೆ, ಕೃಪಾಂಕ ಸೌಲಭ್ಯ ಪಡೆದು ಸಲ್ಲಿಸಿರುವ ಸೇವೆಯನ್ನು ಪರಿಗಣಿಸದೆ ಇರುವುದರಿಂದ ನಿವೃತ್ತಿ ವೇತನದಲ್ಲೂ ಅನ್ಯಾಯವಾಗುತ್ತಿದೆ ಎಂಬುದು ಶಿಕ್ಷಕರ ಅಳಲು.
ತೀರ್ಪು ಅನ್ವಯಿಸುವಲ್ಲಿ ಅನ್ಯಾಯ?:1996-97ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಮಾಡಲಾಗಿತ್ತು. ಮುಖ್ಯಪಟ್ಟಿಯನ್ನು 1997ರಲ್ಲೇ ಪ್ರಕಟಿಸಿ ನೇಮಕಗೊಂಡ ಶಿಕ್ಷಕರನ್ನು ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳಲಾಯಿತು. ಅದೇ ಅಧಿಸೂಚನೆಯಲ್ಲಿ ಆಯ್ಕೆಗೊಂಡು ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನು ಪರಿಗಣಿಸಿ ಸುಪ್ರೀಂ ತೀರ್ಪಿನಡಿ ಸಿಲುಕಿಸಿ ಅನ್ಯಾಯ ಎಸಗಲಾಗಿದೆ ಎಂಬುದು ಶಿಕ್ಷಕರ ವಾದ ಸರಣಿ.
ಜು.7ರ ಸಭೆಯಲ್ಲಿ ಸಮಸ್ಯೆ ಇತ್ಯರ್ಥವಾಗುವುದೆ?:ಗ್ರಾಮೀಣ ಕೃಪಾಂಕದಡಿ ವಿಶೇಷ ನಿಯಮಗಳನ್ವಯ ನೇಮಕಗೊಂಡ ಶಿಕ್ಷಕರ ವೇತನ ನಿಗದಿಗೆ ಸಂಬಂಧಿಸಿದ ಸಮಸ್ಯೆ ಕುರಿತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಧ್ಯಕ್ಷತೆಯಲ್ಲಿ ಜು.7 ರಂದು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಬೇಡಿಕೆ ಈಡೇರಬಹುದೆಂಬ ಆಶಯ ಶಿಕ್ಷಕರದ್ದಾಗಿದೆ.
ಸೇವೆ ಪರಿಗಣಿಸದೇ ಅನ್ಯಾಯ:ಕೋರ್ಟ್ ಆದೇಶದ ಬಳಿಕ ವಿಶೇಷ ನೇಮಕಾತಿ ನಿಯಮದಡಿ ನೇಮಕ ಮಾಡಲಾಗಿದೆ. ಆದರೆ, ಕೃಪಾಂಕ ಸೌಲಭ್ಯದಡಿ ಆಯ್ಕೆಯಾಗಿ 1998-2003ರ ನಡುವೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿಲ್ಲ. ಇದರಿಂದ ತಮಗೆ ವೇತನ, ಬಡ್ತಿಯಲ್ಲಿ ಅನ್ಯಾಯವಾಗಿದೆ ಎಂಬುದು ಶಿಕ್ಷಕರ ನೋವಿನ ನುಡಿ. ಇನ್ನು, ಅನೇಕ ಇಲಾಖೆಗಳಲ್ಲಿ ನೌಕರರು ವಜಾಗೊಂಡಿಲ್ಲ. ಶಿಕ್ಷಣ ಇಲಾಖೆಯಲ್ಲಿನ ಶೇ.80ರಷ್ಟು ಶಿಕ್ಷಕರು ವಜಾಗೊಳ್ಳುವ ಪೂರ್ವದಲ್ಲಿ ಇದ್ದ ವೇತನವನ್ನೇ ಕೆಸಿಎಸ್​ಆರ್ ನಿಯಮದಡಿಯಲ್ಲಿ ಇನ್ನೂ ಪಡೆಯುತ್ತಿದ್ದಾರೆ. ಕೇವಲ ಶೇ.20ರಷ್ಟು ಶಿಕ್ಷಕರು 2003ರ ವೇತನ ಪಡೆಯುತ್ತಿದ್ದಾರೆ.
ಹಲವೆಡೆ ಪರಿಷ್ಕೃತ ಪಟ್ಟಿಯೇ ಇಲ್ಲ:ಅನೇಕ ತಾಲೂಕು ಮತ್ತು ಜಿಲ್ಲೆಗಳಲ್ಲಿ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸಲೇ ಇಲ್ಲ. ಮತ್ತೆ ಕೆಲವು ಕಡೆ ತೆಗೆದು ಹಾಕಿದಷ್ಟು ಅಭ್ಯರ್ಥಿಗಳನ್ನು ಸೇರ್ಪಡೆ ಮಾಡಿಕೊಂಡಿಲ್ಲ. ಈ ಸಂದರ್ಭದಲ್ಲಿ ನಗರ ಪ್ರದೇಶದ ಅಭ್ಯರ್ಥಿಗಳು ಸಿಗದೇ ಇರುವ ಸ್ಥಾನಗಳಿಗೆ ಗ್ರಾಮೀಣ ಅಭ್ಯರ್ಥಿಗಳನ್ನು ಮುಂದುವರಿಸದೆ ವಂಚಿಸಲಾಗಿದೆ ಎಂಬುದು ಅಭ್ಯರ್ಥಿಗಳ ಅಳಲು.
ಎರಡು ವೇತನ ಬಡ್ತಿ ಇಲ್ಲ:ಶಿಕ್ಷಕರು 20-25 ವರ್ಷ ಸೇವೆ ಸಲ್ಲಿಸಿದ್ದರೆ ನಿವೃತ್ತಿ ವೇಳೆ ಅವರಿಗೆ 2 ವೇತನ ಬಡ್ತಿಗಳನ್ನು (ಇನ್ಕಿ›ಮೆಂಟ್) ಬೋನಸ್ ಆಗಿ ಕೊಡಲಾಗುತ್ತದೆ. ವಿಶೇಷ ನೇಮಕಾತಿಯಾಗಿರುವ ಕಾರಣ ಈ ವೇತನ ಬಡ್ತಿ ಬೋನಸ್ ಕೂಡ ಈ ಶಿಕ್ಷಕರಿಗೆ ಸಿಗುತ್ತಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + nineteen =
Remember me
